ಮಾಧ್ಯಮಗಳು ಸಮಾಜಕ್ಕೆ ಉತ್ತರದಾಯಿ ಆಗಬೇಕು: ಎಚ್​ಡಿ ಕುಮಾರಸ್ವಾಮಿ ಒತ್ತಾಯ

ಮಾಧ್ಯಮಗಳು ಸಮಾಜಕ್ಕೆ ಉತ್ತರದಾಯಿ ಆಗಬೇಕು: ಎಚ್​ಡಿ ಕುಮಾರಸ್ವಾಮಿ ಒತ್ತಾಯ
ಹೆಚ್​ಡಿ ಕುಮಾರಸ್ವಾಮಿ

ಹಲಾಲ್ ಎನ್ನುವುದು ವಿವಾದ ಎಂದೇಕೆ ಬಿಂಬಿತವಾಗಬೇಕು ಎಂದು ಪ್ರಶ್ನಿಸಿದರು. ಮಾಧ್ಯಮಗಳು ಇಂಥ ಸುದ್ದಿ ತೋರಿಸಬಾರದು ಎಂದು ತಾಕೀತು ಮಾಡಿದ ಅವರು, ರಾಜ್ಯದ ಸ್ವಾಸ್ಥ್ಯ ಕಾಪಾಡುವ ವಿಷಯದಲ್ಲಿ ಮಾಧ್ಯಮಗಳು ಸಮಾಜಕ್ಕೆ ಉತ್ತರದಾಯಿಗಳಾಗಬೇಕಾಗುತ್ತದೆ ಎಂದು ಎಚ್​ಡಿಕೆ ಹೇಳಿದರು.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Mar 30, 2022 | 3:09 PM

ಬೆಂಗಳೂರು: ವಿಧಾನಸಭೆಯಲ್ಲಿ ಬುಧವಾರ (ಮಾರ್ಚ್ 30) ಚುನಾವಣಾ ಸುಧಾರಣೆ ಕುರಿತು ಮಹತ್ವದ ಚರ್ಚೆ ನಡೆಯಿತು. ಚರ್ಚೆಯ ವೇಳೆ ಹಲಾಲ್ ವಿವಾದವನ್ನು ಪ್ರಸ್ತಾಪಿಸಿದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕ ಎಚ್​.ಡಿ.ಕುಮಾರಸ್ವಾಮಿ, ಹಿಜಾಬ್ ವಿವಾದ, ಜಾತ್ರೆಗಳಲ್ಲಿ ಅನ್ಯಧರ್ಮೀಯರ ವ್ಯಾಪಾರ ವಿಷಯಗಳ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಇದೀಗ ಹಲಾಲ್ ಬಗ್ಗೆ ಚರ್ಚೆ ನಡೆಯುತ್ತಿದೆ. ನಾವೂ ಮಾಂಸಾಹಾರಿಗಳು. ಆದರೆ ಹಲಾಲ್, ಹರಾಮ್ ಮಾಂಸ ಅಂತೆಲ್ಲಾ ನೋಡುವುದಿಲ್ಲ. ನಾವು ಮಾಂಸವನ್ನು ತಂದು ಪೂಜೆಗೆ ಇಡುವುದಿಲ್ಲ. ವರ್ಷದ ತೊಡಕಿಗೆ ಗುಡ್ಡೆ ಮಾಂಸ ಮಾರುತ್ತಾರೆ. ಇದು ವಿವಾದ ಎಂದೇಕೆ ಬಿಂಬಿತವಾಗಬೇಕು ಎಂದು ಪ್ರಶ್ನಿಸಿದರು. ಮಾಧ್ಯಮಗಳು ಇಂಥ ಸುದ್ದಿ ತೋರಿಸಬಾರದು ಎಂದು ತಾಕೀತು ಮಾಡಿದ ಅವರು, ರಾಜ್ಯದ ಸ್ವಾಸ್ಥ್ಯ ಕಾಪಾಡುವ ವಿಷಯದಲ್ಲಿ ಮಾಧ್ಯಮಗಳು ಸಮಾಜಕ್ಕೆ ಉತ್ತರದಾಯಿಗಳಾಗಬೇಕಾಗುತ್ತದೆ. ವಾಟ್ಸಾಪ್​ಗಳಲ್ಲಿ ಪ್ರಚೋದನಾತ್ಮಕ ಪೋಸ್ಟ್​ಗಳು ಸಾಕಷ್ಟು ಪ್ರಮಾಣದಲ್ಲಿ ಬರುತ್ತಿವೆ ಎಂದ ಅವರು, ವಾಟ್ಸಾಪ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆಗುತ್ತಿರುವ ಪೋಸ್ಟ್​ಗಳನ್ನು ಸದನದಲ್ಲಿ ಓದಿದರು.

ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಅಶೋಕ್, ಕುಮಾರಸ್ವಾಮಿ ಮಾತುಗಳಿಗೆ ನಮ್ಮ ವಿರೋಧ ಇಲ್ಲ. ಯಾರು ಯಾರ ಬಳಿ ಖರೀದಿಸಬೇಕು ಅನ್ನೋದು ‌ಅವರ ಹಕ್ಕು. ಇಲ್ಲೇ ತಗೊಳ್ಳಿ, ಅಲ್ಲೇ ತಗೊಳ್ಳಿ‌ ಅನ್ನೋದು ತಪ್ಪು ಎಂದು ಸರ್ಕಾರದ ನಿಲುವು ಸ್ಪಷ್ಟಪಡಿಸಿದರು. ಈ ವೇಳೆ ಮಾತನಾಡಿದ ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ, ನಾವು ಹಲಾಲ್ ಮಾಡಲ್ಲ ನೀವ್ಯಾಕೆ ಹಲಾಲ್ ಖರೀದಿಸಿ ಎಂದು ಒತ್ತಾಯಿಸುತ್ತೀರಿ ಎಂದು ಎರಡೂ ಸಮುದಾಯಗಳಿಗೂ ಬುದ್ಧಿ ಹೇಳಬೇಕು ಎಂದು ಒತ್ತಾಯಿಸಿದರು. ಒಂದೇ ಬದಿಗೆ ಹೋಗಬಾರದು ಎಂದು ಅಶೋಕ್ ಮತ್ತೊಮ್ಮೆ ದನಿಯೆತ್ತಿದರು. ಮೇಲೆದ್ದು ನಿಂತ ಬಸನಗೌಡ ಯತ್ನಾಳ್, ‘ಕುಮಾರಸ್ವಾಮಿಯವರೇ ಎರಡೂ ಸಮುದಾಯಕ್ಕೂ ಬುದ್ಧಿ ಹೇಳಬೇಕು. ಕೇವಲ ಹಿಂದೂಗಳಿಗೆ ಮಾತ್ರ ಬುದ್ಧಿ ಹೇಳುವುದು ಯಾವ ಸೀಮೆ ಜಾತ್ಯತೀತತೆ’ ಎಂದು ಪ್ರಶ್ನಿಸಿದರು.

ಮಾತು ಮುಂದುವರಿಸಿದ ಕುಮಾರಸ್ವಾಮಿ, ಮಾಧ್ಯಮಗಳು ತೋರಿಸುವ ವರದಿಗಳಿಂದ ಸಮಾಜದಲ್ಲಿ ಅಶಾಂತಿ ಉಂಟಾಗುತ್ತಿದೆ. ಸಮಾಜದಲ್ಲಿ ಕಲುಷಿತ ವಾತಾವರಣ ನಿರ್ಮಾಣ ಆಗಲು ಮಾಧ್ಯಮಗಳೇ ಕಾರಣ. ಕರ್ನಾಟಕದಲ್ಲಿ ಇಂಥ ಕಲುಷಿತ ವಾತಾವರಣ ನಿರ್ಮಾಣವಾಗಬಹುದು ಎಂದು ನಾನು ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಟಿಆರ್​ಪಿ ಹೆಚ್ಚಿಸಿಕೊಳ್ಳುವ ಭರದಲ್ಲಿ ಸಮಾಜ ಒಡೆಯುವ ಕೆಲಸ ಮಾಡಬೇಡಿ ಎಂದು ಕುಮಾರಸ್ವಾಮಿ ಆಕ್ಷೇಪಪಿಸಿದರು. ಈ ಮಾತಿಗೆ ಸಹಮತ ವ್ಯಕ್ತಪಡಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಬಹಳ ಗಂಭೀರವಾದ ವಿಚಾರವನ್ನು ‌ನೀವು ಪ್ರಸ್ತಾಪ ಮಾಡಿದ್ದೀರಿ. ಉಳಿದವರು ಇಷ್ಟು ಧೈರ್ಯವಾಗಿ ಪ್ರಸ್ತಾಪ ಮಾಡಲು ಮುಂದಾಗಿರಲಿಲ್ಲ. ತಮಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಮಾಧ್ಯಮದಲ್ಲಿ ಕುಮಾರಸ್ವಾಮಿಗೆ ಉರುಳು ಎಂದು ತೋರಿಸಿದರು ಎಂದು ಎಚ್​ಡಿಕೆ ನೆನಪಿಸಿಕೊಂಡಾಗ, ಅವರು ಎಷ್ಟು ಉರುಳು ಹಾಕಿದರೂ ನೀವು ಇನ್ನೂ ಗಟ್ಟಿಯಾಗಿಯೇ ಇದ್ದೀರಲ್ಲಾ ಎಂದು ಶಾಸಕ ರಮೇಶ್ ಕುಮಾರ್ ಕಾಲೆಳೆದರು.

ಸಮಾಜವು ಶಾಸಕಾಂಗವನ್ನು ಉತ್ತರದಾಯಿ ಎಂದು ಪರಿಗಣಿಸಿದೆ. ಉಳಿದ ಮೂರು ರಂಗಗಳು ಉತ್ತರದಾಯಿತ್ವ ಆಗುತ್ತಿಲ್ಲ. ಎಲೆಕ್ಟ್ರಾನಿಕ್ ಮತಯಂತ್ರಗಳು ಕಳುವಾದಾಗ ಉತ್ತರದಾಯಿಗಳಾದವರು ಯಾರು? ಅಭ್ಯರ್ಥಿಗಳು ಚುನಾವಣಾ ಫಲಿತಾಂಶ ಬಂದಾಗ ಅನುಮಾನ ವ್ಯಕ್ತಪಡಿಸುವ ರೀತಿ ಇವಿಎಂ ಮೂಲಕ ಮತದಾನ ಮಾಡುವುದರ ಬಗ್ಗೆಯೇ ಅನುಮಾನಗಳನ್ನು ಹುಟ್ಟು ಹಾಕಿದೆ. ನಾವು ಯಾರನ್ನೂ ಬೊಟ್ಟುಮಾಡಿ ತೋರಿಸಲು ಆಗುತ್ತಿಲ್ಲ. ಚುನಾವಣೆಗಳನ್ನು ಈ ಹಿಂದೆ ಹಬ್ಬದ ರೀತಿಯಲ್ಲಿ ನೋಡುತ್ತಿದ್ದೆವು. 1972-73 ಚುನಾವಣೆಯಲ್ಲಿ ಹಳ್ಳಿಗಳಲ್ಲಿ ಅಭ್ಯರ್ಥಿಗಳು ಆದಾಗ ಜನರೇ ಹಣ ಕೊಟ್ಟು ಚುನಾವಣೆ ನಡೆಸುತ್ತಿದ್ದರು. ಚುನಾವಣೆಯ ಎರಡು ದಿನ ಮೊದಲು ಅಭ್ಯರ್ಥಿಗಳು ಆಮಿಷ ಒಡ್ಡಬಾರದು ಅಂತ ರಸ್ತೆಗೆ ಅಡ್ಡವಾಗಿ ಕಲ್ಲು, ಮರ ಇಡುತ್ತಿದ್ದರು.. ಗ್ರಾಮೀಣ ಪ್ರದೇಶಗಳಲ್ಲಿ ಚುನಾವಣೆಯನ್ನು ಹಬ್ಬದ ವಾತಾವರಣದಲ್ಲಿ ಆಚರಿಸೋದು ರೈತರು ಮತ್ತು ಕೂಲಿಯ ವರ್ಗ ಮಾತ್ರ. ಸೌಲಭ್ಯ ಪಡೆಯಲು, ಧ್ವನಿ ಎತ್ತುವ ಜನರ ಸಂಖ್ಯೆ ಕಡಿಮೆ. ಲಘುವಾಗಿ ಮಾತನಾಡುವ ವರ್ಗ ಚುನಾವಣೆಗೆ ಬಂದು ಚಲಾಯಿಸುವುದು ಕಡಿಮೆಯಾಗುತ್ತಿದೆ ಎಂದರು.

ಅಂದಿನ ಹಾಗೂ ಇಂದಿನ ಚುನಾವಣೆ ಎಲ್ಲಿಗೆ ಬಂದಿದೆ ಅಂತ ನೋಡಿದ್ದೇವೆ. ಶೇಷನ್ ಚುನಾವಣೆಯ ವ್ಯವಸ್ಥೆ ಸಂಪೂರ್ಣ ಸರಿಪಡಿಸಲಾಗದಿದ್ರೂ, ಭಯದಿಂದ ನಡೆಸುವ ಕೆಲಸ ಮಾಡಿದ್ದರು. ಶಾಸಕಾಂಗವನ್ನು ಎಲ್ಲ ವಿಷಯಕ್ಕೂ ಹೊಣೆಯಾಗಿಸುವ ಸಮಾಜ, ನ್ಯಾಯಾಧೀಶರು, ಸಮಾಜವಾದಿಗಳು, ಪತ್ರಕರ್ತರ ಬಗ್ಗೆ ಪ್ರಶ್ನಿಸುತ್ತಿಲ್ಲ. ಮಾದ್ಯಮ ಒಂದೇ ಅಲ್ಲ, ಎಲ್ಲರೂ ಈ ವಿಚಾರಗಳನ್ನು ಸರಿಪಡಿಸಿಕೊಳ್ಳಬೇಕಿದೆ. ವ್ಯವಸ್ಥೆ ಸರಿಪಡಿಸುವ ಹೊಣೆಗಾರಿಕೆಯು ನಾಡಿನ ಆರೂವರೆ ಕೋಟಿ ಜನರ ಜವಾಬ್ದಾರಿಯಾಗಿದೆ. ಅಭ್ಯರ್ಥಿಗಳು ಪೂರ್ವ ಚರಿತ್ರೆ ನೀಡಬೇಕೆಂದು ಸುಪ್ರೀಂಕೋರ್ಟ್ ಸೂಚಿಸಿದೆ. ಬೆಟ್ಟಿಂಗ್ ನಡೆಸುವ ವಿಚಾರಕ್ಕೆ ಬ್ರೇಕ್ ಬೀಳಬೇಕಿದೆ. ಇದಕ್ಕಾಗಿ ನಾನು ಮುಖ್ಯಮಂತ್ರಿಯಾಗಿದ್ದಾಗ ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಿದ್ದೆ. ಕ್ರಿಕೆಟ್ ಬೆಟ್ಟಿಂಗ್ ಮಾಡುತ್ತಿದ್ದವರನನ್ನು ಹಿಡಿಯಲು ಹೋದಾಗ ಒಬ್ಬ ಶ್ರೀಲಂಕಾಗೆ ಓಡಿಹೋದ. ಅವನೇ ಮೈತ್ರಿ ಸರ್ಕಾರ ಬೀಳಿಸಲು ಎಲ್ಲಾ ರೀತಿಯ ಕೆಲಸ ಮಾಡಿದ. ಅದರ ಲಾಭ ಯಾರೆಲ್ಲಾ ಪಡೆದುಕೊಂಡರು ಅಂತ ನಾನು ಈಗ ಚರ್ಚೆ ಮಾಡುವುದಿಲ್ಲ ಎಂದು ಹೇಳಿದರು.

ಕೋಲಾರದ ಶಿವಾರ ಪಟ್ಟಣದಲ್ಲಿ 30 ವರ್ಷಗಳಿಂದ ಮುಸ್ಲಿಂ ಕುಟುಂಬವೇ ಮೂರ್ತಿ ಕೆತ್ತನೆ ಮಾಡುತ್ತಿದೆ. 15 ಕುಟುಂಬಗಳು ಸುಮಾರು 30 ವರ್ಷಗಳಿಂದ ಸೇವೆ ಮಾಡುತ್ತಿವೆ. ಇವರನ್ನ ಯಾವಾಗ ಬಹಿಷ್ಕಾರ ಮಾಡ್ತೀರಾ ಎಂದು ಪ್ರಶ್ನಿಸಿದರು. ನಮ್ಮ ಸ್ಪೀಕರ್ ಸದನದ ಪೀಠದಲ್ಲಿ ಕುಳಿತಿದ್ದಾಗ, ನಾವೆಲ್ಲರೂ ಆರ್‌ಎಸ್‌ಎಸ್‌ ಒಪ್ಪುತ್ತೇವೆ ಎಂದು ಹೇಳಿದ್ದರು. ಪೀಠದಲ್ಲಿ ಕುಳಿತು ಹೀಗೆ ಹೇಳಲು ನಾಚಿಕೆ ಆಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಏಕೆ ಯಾರೂ ಅದನ್ನು ಪ್ರತಿಭಟಿಸಲಿಲ್ಲ. ನಾನೂ ಅಂದು ಸದನದಲ್ಲಿ ಇರಲಿಲ್ಲ ಎಂದರು.

ಚುನಾವಣೆಯಲ್ಲಿ ಮತದಾರರಿಗೆ ಆಮಿಷ ಒಡ್ಡುವ ಕೆಲಸ ಆಗುತ್ತಿದೆ. ಧರ್ಮ‌ಧರ್ಮದ ನಡುವೆ ಸಂಘರ್ಷ ತರುವ ಕೆಲಸವಾಗುತ್ತಿದೆ. ನನ್ನ ತಂದೆ ಚುನಾವಣೆ ನಡೆಸುವಾಗ 5 ಸಾವಿರ ರೂಪಾಯಿ ಕೊಟ್ಟರೂ ಅಭ್ಯರ್ಥಿಗಳು ಕಣ್ಣಿಗೆ ಒತ್ತಿಕೊಂಡು ಸ್ವೀಕರಿಸುತ್ತಿದ್ದರು. ಆದರೆ ಈಗ ಐದು ಕೋಟಿ ರೂಪಾಯಿ ಕೊಟ್ಟರೂ ಸಾಲುತ್ತಿಲ್ಲ. ಸದನದಲ್ಲಿರುವ 224 ಶಾಸಕರು ತಮ್ಮ ಆತ್ಮಸಾಕ್ಷಿಯಿಂದ ನಯಾ ಪೈಸೆ ಖರ್ಚುಮಾಡದೇ ಚುನಾವಣೆ ಮಾಡುತ್ತೇವೆಂದು ಹೇಳಲಿ ಎಂದು ಸವಾಲು ಹಾಕಿದರು. ಚುನಾವಣಾ ಆಯೋಗವು ಘೋಷಿಸಿರುವ ₹ 40 ಲಕ್ಷದ ಮಿತಿಯಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಆಗುತ್ತಿಲ್ಲ. ಚುನಾವಣೆಯಲ್ಲಿ ನೂರಾರು ವಾಹನಗಳನ್ನು ಬಳಕೆ ಮಾಡುತ್ತೇವೆ. ಆದರೆ ಒಂದೆರಡು ವಾಹನ ಬಳಕೆ ಮಾಡಿರುವ ಲೆಕ್ಕ ಕೊಡುತ್ತೇವೆ. ಚುನಾವಣಾಧಿಕಾರಿ ಪ್ರಾಮಾಣಿಕವಾಗಿ ಶಿಕ್ಷೆ ಕೊಡಿಸಲು ಆಗುವುದಿಲ್ಲ. ಕಾನೂನಿನಲ್ಲಿ ತಿದ್ದುಪಡಿ ತಂದರೂ ಈ ವ್ಯವಸ್ಥೆ ಸುಧಾರಿಸುವುದಿಲ್ಲ ಎಂದರು. ವೋಟಿಗಾಗಿ ಅಲ್ಪಸಂಖ್ಯಾತರನ್ನು ದುರ್ಬಳಕೆ ಮಾಡಿದ್ದೇವೆ. ಈಗ ಅಲ್ಪಸಂಖ್ಯಾತರನ್ನು ಬೀದಿಗೆ ತಂದಿದ್ದೇವೆ. ಅಲ್ಪಸಂಖ್ಯಾತರ‌ ಪರ ಯಾರೂ ದನಿ ಎತ್ತದಂತಹ ಪರಿಸ್ಥಿತಿ ಇದೆ ಎಂದು ಅಳಲು ತೋಡಿಕೊಂಡರು.

ಎಂಎಲ್​ಎ ಆದರೆ ಪರವಾಗಿಲ್ಲ ಒಂದಿಷ್ಟು ಹಣ ಬರುತ್ತದೆ. ಆದರೆ ಎಂಎಲ್​ಸಿ ಆಗುವವರೂ 25-30 ಕೋಟಿ ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಪಂಚಾಯತಿ ಅಧ್ಯಕ್ಷ ಆಗೋಕೆ ಕೋಟಿಗಟ್ಟಲೆ ಖರ್ಚು ಮಾಡುವವರಿದ್ದಾರೆ. ಅವರೇ ಅಷ್ಟು ಖರ್ಚು ಮಾಡುವಾಗ, ನಮ್ಮ ಚುನಾವಣೆ ಹೇಗೆ ಮಾಡಬೇಕು? ಇನ್ನು ಎಲ್ಲಾ ಚುನಾವಣೆ ನಾವೇ ನಡೆಸಬೇಕು. ಎಲ್ಲದಕ್ಕೂ ಹಣ ಕೊಡಿ ಅಂತ ಕೇಳುತ್ತಿದ್ದಾರೆ. ಹಿಂದೆ ಹಣ ಹಂಚೋಕೆ ಬರುತ್ತಾರೆ ಅಂತ ಕಟ್ಟಿಗೆ ಹಿಡಿದು ಕಾಯುತ್ತಿದ್ದರು. ಆದರೆ ಈಗ ಮೂರೂ ಪಕ್ಷದವರಿಂದಲೂ ಹಣ ಪಡೆಯುತ್ತಿದ್ದಾರೆ. ಹಣ ಪಡೆಯೋಕೆ ಯಾವುದೇ ಧರ್ಮ ಅಡ್ಡ ಬರುವುದಿಲ್ಲ ಎಂದರು. ಚುನಾವಣೆ ಗೆಲ್ಲುವವರೆಗೂ ಒಂದು ಹಂತ ಅಷ್ಟೇ. ನಂತರ ಐದು ವರ್ಷ ಉಳಿಯಬೇಕಲ್ಲ ಅದು ಭಾರೀ ಕಷ್ಟ. ದೇವಸ್ಥಾನ, ಮದುವೆ, ಸ್ಕೂಲ್ ಫೀಸ್ ಎಲ್ಲದಕ್ಕೂ ಬರುತ್ತಾರೆ. ಜಾಹೀರಾತು ವಿಚಾರ ಕೂಡ ದೊಡ್ಡ ಸಮಸ್ಯೆ ಆಗಿದೆ ಎಂದು ಅಳಲು ತೋಡಿಕೊಂಡರು.

ಚುನಾವಣೆಗೆ ಸಿದ್ಧ

ಕರ್ನಾಟಕದಲ್ಲಿ ಚುನಾವಣಾ ವರ್ಷ ಪ್ರಾರಂಭವಾಗಿದೆ. ರಾಷ್ಟ್ರೀಯ ಪಕ್ಷಗಳ ನಾಯಕರು ಕರ್ನಾಟಕಕ್ಕೆ ಬರುತ್ತಾರೆ. ರಾಜ್ಯದ ನದಿ ನೀರಿನ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕು. ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯವನ್ನ ನಗಣ್ಯವಾಗಿ ಪರಿಗಣಿಸಿವೆ. ನಮ್ಮನ್ನ ನಿರ್ಲಕ್ಷ್ಯ ಭಾವನೆಯಿಂದ ಕಂಡಿದ್ದಾರೆ. ಈ ವಿಚಾರ ಇಟ್ಟುಕೊಂಡು ನಾವು ಜನರ ಬಳಿ ಹೋಗುತ್ತೇವೆ. ಗುಜರಾತ್ ಜತೆಯೇ ರಾಜ್ಯದ ಚುನಾವಣೆ ನಡೆಯಬಹುದು. ಚುನಾವಣೆ ಯಾವಾಗ ನಡೆದರೂ ನಾವು ರೆಡಿ ಇದ್ದೇವೆ ಎಂದು ಈ ಮೊದಲು ರಾಮನಗರದಲ್ಲಿ ಹೇಳಿದ್ದರು.

ಐಟಿಯಿಂದ ಆಗಾಗ ನೋಟಿಸ್ ಬರುತ್ತಿರುತ್ತದೆ. ಅದಕ್ಕೆ ಆತಂಕಕ್ಕೆ ಒಳಗಾಗಬೇಕಿಲ್ಲ. ನಾವು ಅಪಮಾರ್ಗದಲ್ಲಿ ಆಸ್ತಿ ಮಾಡುವುದಾಗಲಿ, ಹಣ ಸಂಪಾದನೆ ಮಾಡಿಲ್ಲ. ಯಾವುದೂ ಮಾಡದೇ ಇದ್ದಾಗ ಈ ರೀತಿಯ ನೋಟಿಸ್​ಗೆ ಯಾಕೆ ಆತಂಕಕ್ಕೆ ಒಳಗಾಗಬೇಕು. ಇಡಿ, ಐಟಿ, ಸಿಬಿಐ ಬಿಜೆಪಿಯ ಅಂಗಪಕ್ಷಗಳು. ಆ ಅಂಗಪಕ್ಷಗಳಿಂದ ನಮ್ಮನ್ನ ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಇದನ್ನೂ ಓದಿ: ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೇರಿ ಎಂಬ ಸಂದೇಶ ಹರಡಿದ ಕಿಡಿಗೇಡಿಗಳನ್ನು ಮಟ್ಟ ಹಾಕಿ: ಹೆಚ್​ಡಿ ಕುಮಾರಸ್ವಾಮಿ ಆಗ್ರಹ

ಇದನ್ನೂ ಓದಿ: ವಿಧಾನಸಭೆ: ಶಾಂತಿಯ ತೋಟವನ್ನು ಹಾಳು ಮಾಡಬೇಡಿ, ಕನ್ನಡಿಗರೇ ದಾರಿ ತಪ್ಪಬೇಡಿ: ಹೆಚ್​ಡಿ ಕುಮಾರಸ್ವಾಮಿ ಮನವಿ

Follow us on

Related Stories

Most Read Stories

Click on your DTH Provider to Add TV9 Kannada