
ಶಿವಮೊಗ್ಗ, ಅಕ್ಟೋಬರ್ 21: ಮೈಸೂರು ದಸರಾ ಬಳಿಕ ರಾಜ್ಯದಲ್ಲಿ ಶಿವಮೊಗ್ಗ ದಸರಾ ಅತೀ ಹೆಚ್ಚು ಖ್ಯಾತಿ ಪಡೆದುಕೊಂಡಿದೆ. ಶಿವಮೊಗ್ಗ ದಸರಾ ಜಂಬೂಸವಾರಿ ಕಣ್ತುಂಬಿಕೊಳ್ಳಲು ಜನರು ಕಾತರರಾಗಿದ್ದರು. ಆದರೆ ಇದೇ ದಸರಾ ಜಂಬೂಸವಾರಿ ವೇಳೆ ಅಚಾತುರ್ಯವೊಂದು ನಡೆದಿದೆ. ಇದೇ ಮೊದಲ ಬಾರಿ ಬೆಳ್ಳಿ ಅಂಬಾರಿ ಹೊತ್ತು ಸಾಗುತ್ತಿದ್ದ ಸೋಮಣ್ಣ ಎಂಬ ಆನೆ ಏಕಾಏಕಿ ಹೆದರಿ ದಿಕ್ಕಾಪಾಲಾಗಿ ಓಡಿ ಹೋದ ಘಟನೆ ನಡೆದಿದೆ. ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ದಸರಾ ಜಂಬೂಸವಾರಿಯನ್ನ ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.
ಇಂದು ಮಧ್ಯಾಹ್ನ ಕೋಟೆ ಶಿವಪ್ಪನಾಯಕ ಅರಮನೆ ಮುಂಭಾಗದಿಂದ ಅಲ್ಲಮಪ್ರಭು ಮೈದಾನದವರೆಗೆ ಜಂಬೂಸವಾರಿ ಆರಂಭಗೊಂಡಿತ್ತು. ಜನರು ಕೂಡ ಸಾಕಷ್ಟು ಕಾತರದಿಂದ ಜಂಬೂಸವಾರಿ ಕಣ್ತುಂಬಿಕೊಳ್ಳುತ್ತಿದ್ದರು. ಹೀಗಿರುವಾಗ ಬೆಳ್ಳಿ ಅಂಬಾರಿ ಹೊತ್ತು ಸಾಗುತ್ತಿದ್ದ ಸೋಮಣ್ಣ ಎಂಬ ಆನೆ ಹೆದರಿ ಏಕಾಏಕಿ ದಿಕ್ಕಾಪಾಲಾಗಿ ಓಡಿ ಹೋಗಿದೆ.
ಇದನ್ನೂ ಓದಿ: ಪ್ರಶಾಂತನ ಮೇಲೆ ವಿರಾಜಮಾನಾಳಗಿ ಬಂದ ಚಾಮುಂಡೇಶ್ವರಿಗೆ ಡಿಕೆಶಿ ಪುಷ್ಪಾರ್ಚನೆ: ಜಂಬೂಸವಾರಿಗೆ ಅಧಿಕೃತ ಚಾಲನೆ
ಆನೆ ದಿಕ್ಕಾಪಾಲಾಗಿ ಓಡುತ್ತಿದ್ದಂತೆ ನೆರೆದಿದ್ದ ಜನರು ಭಯಭೀತಗೊಂಡರು. ಸದ್ಯ ಶಿವಮೊಗ್ಗ ದಸರಾ ಜಂಬೂಸವಾರಿಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದ್ದು, ಘಟನಾ ಸ್ಥಳಕ್ಕೆ ದೌಡಾಯಿಸಿದ ಶಿವಮೊಗ್ಗ ಡಿಸಿ ಮತ್ತು ಎಸ್ಪಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಬೆಳ್ಳಿ ಅಂಬಾರಿ ಹೊತ್ತು ಸೋಮಣ್ಣ ಆನೆ ದಿಕ್ಕಾಪಾಲಾಗಿ ಓಡಿದ ಭರಸಕ್ಕೆ ಒಂದು ಕಾರು ಸೇರಿದಂತೆ 2 ರಿಂದ 3 ಬೈಕ್ಗಳಿಗೆ ಆನೆ ಹಾನಿ ಮಾಡಿದ್ದು, ಆನೆ ಮೇಲಿದ್ದ ಚಾಮುಂಡೇಶ್ವರಿ ಅಂಬಾರಿ ಕೆಳಗೆ ಬಿದ್ದು ಸಂಪೂರ್ಣ ಹಾನಿಗೊಂಡಿದೆ. ಅಂಬಾರಿ ಆನೆ ನಿಯಂತ್ರಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಪಟ್ಟಿದ್ದು, ಸದ್ಯ ಅರವಳಿಕೆ ನೀಡಿ ನಿಯಂತ್ರಿಸಿದ್ದಾರೆ. ಸ್ವಲ್ಪ ದೂರ ಹೋದ ಸೋಮಣ್ಣ ಆನೆ ಮತ್ತೆ ವಾಪಸ್ಸಾಗಿದೆ.
ಇನ್ನು ಈ ಬಾರಿಯ ದಸರಾ ಜಂಬೂಸವಾರಿ ಮಹತ್ವದ ಬದಲಾವಣೆ ಮಾಡಲಾಗಿತ್ತು. ಹಲವು ವರ್ಷಗಳಿಂದ ಅಂಬಾರಿ ಹೊರತಿದ್ದ ಸಾಗರ ಎಂಬ ಆನೆ ಬದಲಾಗಿ ಸೋಮಣ್ಣ ಎಂಬ ಆನೆಗೆ ಜವಾಬ್ದಾರಿ ವಹಿಸಲಾಗಿತ್ತು. ಆ ಮೂಲಕ ಇದೇ ಮೊದಲ ಬಾರಿಗೆ ಸೋಮಣ್ಣ ಬೆಳ್ಳಿ ಅಂಬಾರಿ ಹೊತ್ತಿದ್ದ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:45 pm, Wed, 21 October 26