ಕೆ.ಎಸ್.ಈಶ್ವರಪ್ಪಗೆ ಜೀವ ಬೆದರಿಕೆ ಕರೆ: ಶಿವಮೊಗ್ಗ ಎಸ್‌ಪಿಗೆ ದೂರು ನೀಡಿದ ಮಾಜಿ ಡಿಸಿಎಂ
ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ಪ್ರಾಣ ಬೆದರಿಕೆ ಕರೆ ಬಂದಿದ್ದು, ರಿಜ್ವಾನ್ ಬೇಗ್ ಮತ್ತು ಫರಾನ್ ರಶೀದ್ ಎಂಬುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಶಿವಮೊಗ್ಗ ಎಸ್‌ಪಿಗೆ ಅವರು ದೂರು ನೀಡಿದ್ದಾರೆ. ಹಿಂದೆಯೂ ಈ ರೀತಿಯ ಬೆದರಿಕೆ ಕರೆಗಳು ತನಗೆ ಬಂದಿತ್ತು. ಆಗಲೂ ಪೊಲೀಸರಿಗೆ ದೂರು ನೀಡಿದ್ದೆ. ಅವೆಲ್ಲವೂ ವಿದೇಶದಿಂದ ಬಂದ ಕರೆಗಳಾಗಿದ್ದವು. ಆದರೆ ಇದನ್ನು ಮಾಡಿದವರು ಭಾರತದಲ್ಲಿ ಇರುವವರೇ ಎಂದು ಅನಿಸುತ್ತಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗ, ಅಕ್ಟೋಬರ್ 19: ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪಗೆ ಜೀವ ಬೆದರಿಕೆ ಕರೆ ಬಂದಿದ್ದು, ಈ ಸಂಬಂಧ ಶಿವಮೊಗ್ಗ ಎಸ್‌ಪಿ ನಿಖಿಲ್‌ಗೆ ಅವರು ದೂರು ನೀಡಿದ್ದಾರೆ. ಅಕ್ಟೋಬರ್ 17ರ ರಾತ್ರಿ 8.49ಕ್ಕೆ ರಿಜ್ವಾನ್ ಬೇಗ್ ಎಂಬುವವನಿಂದ ಈಶ್ವರಪ್ಪಗೆ ಕರೆ ಬಂದಿತ್ತು. ಬಳಿಕ ರಾತ್ರಿ 10.49ಕ್ಕೆ ಫರಾನ್ ರಶೀದ್ ಎಂಬಾತ ಬೆದರಿಕೆ ಕರೆ ಮಾಡಿದ್ದ. ಇಬ್ಬರೂ ಮಾಜಿ ಡಿಸಿಎಂನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಪ್ರಾಣ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಹೀಗಾಗಿ ಘಟನೆಯಿಂದ ತಮಗೂ ಹಾಗೂ ಕುಟುಂಬಕ್ಕೆ ತೀವ್ರ ಆತಂಕ ಎದುರಾಗಿದೆ. ಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಈಶ್ವರಪ್ಪ ಆಗ್ರಹಿಸಿದ್ದಾರೆ. ತಮಗೆ ಮತ್ತು ಕುಟುಂಬಕ್ಕೆ ಸೂಕ್ತ ಪೊಲೀಸ್ ಭದ್ರತೆ ಒದಗಿಸುವಂತೆಯೂ ಅವರು ಮನವಿ ಮಾಡಿದ್ದಾರೆ.
ಘಟನೆ ಬಗ್ಗೆ ಈಶ್ವರಪ್ಪ ಏನಂದ್ರು?
ಇನ್ನು ತಮಗೆ ಬೆದರಿಕೆ ಕರೆ ಬಂದಿರುವ ವಿಚಾರವಾಗಿ ಮಾಜಿ ಡಿಸಿಎಂ ಈಶ್ವರಪ್ಪ ಅವರೇ ಮಾಧ್ಯಮಗಳ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ಮೊದಲನೇ ಸಲ ಕರೆ ಮಾಡಿದವನ ಬಳಿ ತಾನೂ ಸಹ ಸ್ವಲ್ಪ ಗಟ್ಟಿ ಧ್ವನಿಯಲ್ಲಿ ಮಾತನಾಡಿದ್ದೆ. ಹೀಗಾಗಿ ಮತ್ತೆ ಕರೆ ಮಾಡುವೆ ಎಂದು ಹೇಳಿದ್ದ ಆತ ಇನ್ನೂ ಮರಳಿ ಕರೆ ಮಾಡಿಲ್ಲ. ಒಟ್ಟು 2 ಕರೆಗಳು ತಮಗೆ ಬಂದಿದ್ದು, ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಅವರೂ ಸಹ ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿರೋದಾಗಿ ಈಶ್ವರಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: ಘರ್ ವಾಪ್ಸಿ: ಬಿಜೆಪಿಗೆ ವಾಪಸ್ ಆಗೋ ಬಗ್ಗೆ ಸ್ಫೋಟಕ ಸುಳಿವು ಕೊಟ್ಟ ಈಶ್ವರಪ್ಪ
ಫೋನ್ ಕರೆ ಸ್ವೀಕರಿಸಿದ ಕೂಡಲೇ ಮೊದಲನೇ ವ್ಯಕ್ತಿಯಾಗಿರುವ ರಿಜ್ವಾನ್ ಬೇಗ್ ನೀವು ಕೆ.ಎಸ್. ಈಶ್ವರಪ್ಪನಾ ಅಂತಾ ಪ್ರಶ್ನಿಸಿದ್ದಾರೆ. ಅದಕ್ಕೆ ನಾನು ಹೌದಪ್ಪಾ ಅಂದೆ. ಆ ಸಂದರ್ಭ ನಾನು ಕುಟುಂಬದ ಜೊತೆಗೆ ಚಿತ್ರಮಂದಿರದಲ್ಲಿದ್ದೆ. ಆತ ಏನೇನೋ ಮಾತಾಡ್ತಿದ್ದ. ನಾನು ವಿಷಯ ಏನು ಎಂದು ಕೇಳಿದೆ. ಪೊಲೀಸ್ ದೂರು ಕೊಡುತ್ತೇನೆ ಅಂದೆ. ಪರವಾಗಿಲ್ಲ ಕೊಡಿ ಎಂದು ಆತ ಹೇಳಿದ್ದ. ಎರಡನೇಯವನು ಸಚಿವ ಜಮೀರ್ ಅಹ್ಮದ್ ಬಗ್ಗೆ ನಾನು ಮಾತನಾಡಿದ್ದ ಬಗ್ಗೆ ಉಲ್ಲೇಖಿಸಿದ್ದಾನೆ. ಹಿಂದೆಯೂ ಈ ರೀತಿಯ ಬೆದರಿಕೆ ಕರೆಗಳು ತನಗೆ ಬಂದಿತ್ತು. ಆಗಲೂ ಪೊಲೀಸರಿಗೆ ದೂರು ನೀಡಿದ್ದೆ. ಅವೆಲ್ಲವೂ ವಿದೇಶದಿಂದ ಬಂದ ಕರೆಗಳಾಗಿದ್ದವು. ಆದರೆ ಇದನ್ನು ಮಾಡಿದವರು ಭಾರತದಲ್ಲಿ ಇರುವವರೇ ಎಂದು ಅನಿಸುತ್ತಿದೆ ಅಂತಲೂ ಈಶ್ವರಪ್ಪ ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:24 pm, Mon, 19 October 26




