ನನ್ನ ಹೆಂಡತಿಯನ್ನ ಯಾಕೆ ಆಸ್ಪತ್ರೆಗೆ ದಾಖಲಿಸಿದೆ: ಪತ್ನಿ ಸ್ನೇಹಿತೆ ಮೇಲೆ ಹಲ್ಲೆ ಮಾಡಿದ ಗಂಡ
ಶಿವಮೊಗ್ಗದಲ್ಲಿ ಪತ್ನಿಯ ಸ್ನೇಹಿತೆಯ ಮೇಲೆ ಪತಿ ಆಸ್ಪತ್ರೆಯಲ್ಲಿಯೇ ಹಲ್ಲೆ ಮಾಡಿರುವಂತಹ ಘಟನೆ ನಡೆದಿದೆ. ಪತ್ನಿ ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಆಕೆಯ ಸ್ನೇಹಿತೆ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ವಿಚಾರವಾಗಿ ಹಲ್ಲೆ ಮಾಡಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿವಮೊಗ್ಗ, ಫೆಬ್ರವರಿ 22: ಗಂಡ ಹೆಂಡತಿಯರ ಜಗಳದಲ್ಲಿ ಹಲ್ಲೆಗೊಳಗಾಗಿದ್ದ ಸ್ನೇಹಿತೆಯನ್ನು (friend) ಆಸ್ಪತ್ರೆಗೆ ದಾಖಲು ಮಾಡಿದ ಮಹಿಳೆಗೆ ಹಿಗ್ಗಾಮುಗ್ಗಾ ಥಳಿಸಿರುವಂತಹ ಘಟನೆ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ. ನನ್ನ ಹೆಂಡತಿಯನ್ನು ಯಾಕೆ ಆಸ್ಪತ್ರೆಗೆ ದಾಖಲಿಸಿದೆ ಎಂದು ಪತ್ನಿಯ ಸ್ನೇಹಿತೆ ಮೇಲೆ ಗಂಡ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ವ್ಯಕ್ತಿಯನ್ನು ಸದ್ಯ ಪೊಲೀಸರು ಎಳೆದುಕೊಂಡು ಹೋಗಿದ್ದಾರೆ.
ಪತ್ನಿಗೆ ಕಿರುಕುಳ
ವಿನೋಬ ನಗರ ನಿವಾಸಿಗಳಾಗಿರುವ ಲಲಿತಮ್ಮ ಮತ್ತು ಪ್ರಕಾಶ್ ದಂಪತಿ ಮದುವೆಯಾಗಿ 12 ವರ್ಷ ಆಗಿದೆ. ಇಬ್ಬರು ಮಕ್ಕಳಿದ್ದಾರೆ. ಹೀಗಿರುವಾಗ ಪತಿ ಕುಡಿದು ಪದೇ ಪದೇ ಗಲಾಟೆ ಮಾಡಿ ಪತ್ನಿಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತು ಪತ್ನಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ವಿಷ ಸೇವಿಸಿ ಅಸ್ವಸ್ಥರಾಗಿದ್ದ ಲಲಿತಮ್ಮಳನ್ನು ಸ್ನೇಹಿತೆ ಆಶಾ, ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಸೇರಿಸಿದ್ದಾರೆ.
ಇದನ್ನೂ ಓದಿ: ವೈದ್ಯನ ಎಡವಟ್ಟಿನಿಂದ ಯುವಕ ಸಾವು: ಬಾಳಿ ಬದುಕಬೇಕಿದ್ದವನನ್ನು ಬಲಿ ಪಡೆತಾ ಆ ಒಂದು ಇಂಜೆಕ್ಷನ್?
ಪತ್ನಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಕುರಿತು ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ನಡುವೆ ಪತಿಯು ಪತ್ನಿಯನ್ನು ನೋಡಲು ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಆದರೆ ಪತ್ನಿ ಆರೋಗ್ಯ ವಿಚಾರಿಸುವುದನ್ನು ಬಿಟ್ಟು ಈ ಘಟನೆಗೆ ಪತ್ನಿಯ ಸ್ನೇಹಿತೆ ಆಶಾಳೇ ಕಾರಣವೆಂದು ಹತ್ತಾರು ಜನರ ಮುಂದೆ ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪತ್ನಿಯ ಸ್ನೇಹಿತೆಯನ್ನು ಥಳಿಸುವ ವಿಡಿಯೋ ಸದ್ಯ ವೈರಲ್ ಆಗಿದೆ.
ಮೆಗ್ಗಾನ್ ಜಿಲ್ಲಾಸ್ಪತ್ರೆಗೆಯಲ್ಲಿ ಮಹಿಳೆ ಎನ್ನುವುದು ಲೆಕ್ಕಿಸದೇ ಪತ್ನಿಯ ಸ್ನೇಹಿತೆಯನ್ನು ಪತಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಪತ್ನಿಯು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಅದರ ಬಗ್ಗೆ ಕಿಂಚಿತ್ತೂ ಮಮಕಾರ, ಪ್ರೀತಿ, ಕರುಣೆ ಇಲ್ಲದೇ ಅಮಾನುಷವಾಗಿ ಪತಿ ಅಲ್ಲಿ ವರ್ತಿಸಿದ್ದಾರೆ.
ಕುಡಿದ ಅಮಲಿನಲ್ಲಿ ಹಲ್ಲೆ
ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿರುವ ಪ್ರಕಾಶ್ಗೆ ಕುಡಿತ ಚಟ. ಕುಡಿದು ಪದೇ ಪದೇ ಪತ್ನಿಯ ಮೇಲೆ ಹಲ್ಲೆ ಮಾಡುತ್ತಿದ್ದರು. ಇದರಿಂದ ಬೇಸತ್ತ ಪತ್ನಿಯೂ ಆತ್ಮಹತ್ಯೆಗೆ ಮುಂದಾಗಿದ್ದರು. ಪತ್ನಿಯ ಜೀವ ಉಳಿಸಿದ ಸ್ನೇಹಿತೆ ಆಶಾ ಮೇಲೆ ಪತಿಗೆ ಎಲ್ಲಿಲ್ಲದ ಕೋಪ. ಅವಳ ಆತ್ಮಹತ್ಯೆಗೆ ಪತ್ನಿಯ ಸ್ನೇಹಿತೆಯೇ ಕಾರಣವೆಂದು ಪತಿ ಕುಡಿದ ಅಮಲಿನಲ್ಲಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿದೆ.
ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ ಗಲಾಟೆ: ರಸ್ತೆ ಜಗಳ ಕೊಲೆಯಲ್ಲಿ ಅಂತ್ಯ, ಇಬ್ಬರ ಬಂಧನ
ಪತ್ನಿಯ ಸ್ನೇಹಿತೆ ಮೇಲೆ ಪತಿ ತೋರಿದ ಪುಂಡಾಟಿಕೆಯ ವೈರಲ್ ವಿಡಿಯೋ ಕುರಿತು ಎಲ್ಲಡೆ ಚರ್ಚೆ ಆಗುತ್ತಿದೆ. ಮಹಿಳೆ ಮೇಲೆ ಹಲ್ಲೆ ಮತ್ತು ಪತ್ನಿಗೆ ಮಾನಸಿಕ, ದೈಹಿಕವಾಗಿ ನಿರಂತರ ಕಿರುಕುಳ ನೀಡುತ್ತಿರುವ ಪತಿಗೆ ತಕ್ಕ ಶಿಕ್ಷೆಯಾಗಬೇಕಿದೆ. ಈ ನಿಟ್ಟಿನಲ್ಲಿ ದೊಡ್ಡಪೇಟೆ ಮತ್ತು ವಿನೋಬ ನಗರ ಪೊಲೀಸರು ಗಮನ ಹರಿಸಬೇಕಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.