ಶಿವಮೊಗ್ಗದಲ್ಲಿ ಸ್ಥಾಪನೆಯಾಗಲಿದೆ ಕರ್ನಾಟಕದ ಮೊದಲ ವಿಮಾನ ತರಬೇತಿ ಸಂಸ್ಥೆ: ರಾಜ್ಯದವರಿಗೆ ಶೇ 25 ಸೀಟುಗಳು ಮೀಸಲು

ಕರ್ನಾಟಕದ ಮೊದಲ ವಿಮಾನ ತರಬೇತಿ ಸಂಸ್ಥೆ (FTO) ಶಿವಮೊಗ್ಗದ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣದಲ್ಲಿ ಆರಂಭವಾಗಲಿದೆ. ಆರಂಭಿಕ ಹಂತದಲ್ಲಿ 100 ಕೆಡೆಟ್‌ಗಳಿಗೆ ತರಬೇತಿ ನೀಡಲಾಗುವುದು. ರಾಜ್ಯದ ವಿದ್ಯಾರ್ಥಿಗಳಿಗೆ ಶೇ 25 ಸೀಟುಗಳನ್ನು ಮೀಸಲಿಡಲಾಗಿದೆ ಮತ್ತು ರಿಯಾಯಿತಿ ದರದಲ್ಲಿ ಶುಲ್ಕ ವಿಧಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಶಿವಮೊಗ್ಗದಲ್ಲಿ ಸ್ಥಾಪನೆಯಾಗಲಿದೆ ಕರ್ನಾಟಕದ ಮೊದಲ ವಿಮಾನ ತರಬೇತಿ ಸಂಸ್ಥೆ: ರಾಜ್ಯದವರಿಗೆ ಶೇ 25 ಸೀಟುಗಳು ಮೀಸಲು
ಸಾಂದರ್ಭಿಕ ಚಿತ್ರ
Image Credit source: Twitter

Updated on: Jun 01, 2025 | 2:51 PM

ಶಿವಮೊಗ್ಗ, ಜೂನ್ 1: ಕರ್ನಾಟಕದ ಮೊದಲ ವಿಮಾನ ತರಬೇತಿ ಸಂಸ್ಥೆಯನ್ನು (FTO) ಶಿವಮೊಗ್ಗದ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣದಲ್ಲಿ (RKA) ಸ್ಥಾಪಿಸಲಾಗುವುದು ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಘೋಷಣೆ ಮಾಡಿದ್ದಾರೆ. ವಿಮಾನಯಾನ ಕ್ಷೇತ್ರದಲ್ಲಿ ರಾಜ್ಯದ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದೊಂದಿಗೆ ಈ ಸಂಸ್ಥೆಯನ್ನು ಆರಂಭಿಸಲಾಗುತ್ತದೆ. ರಾಜ್ಯ ಸರ್ಕಾರವು ನಿರ್ವಹಿಸುತ್ತಿರುವ ಮೊದಲ ಮತ್ತು ಏಕೈಕ ವಿಮಾನ ನಿಲ್ದಾಣ ಇದಾಗಿದೆ. ವಿಮಾನ ತರಬೇತಿ ಸಂಸ್ಥೆಯ ಕಾರ್ಯಾಚರಣೆಗೆ ಬೇಕಾದ ವ್ಯವಸ್ಥೆ ಮತ್ತು ಮೂಲಸೌಕರ್ಯವನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ (KSIIDC) ಒದಗಿಸಿಕೊಡಲಿದೆ.

ವಿಮಾನ ತರಬೇತಿ ಸಂಸ್ಥೆಯಲ್ಲಿ ಆರಂಭಿಕ ಹಂತದಲ್ಲಿ 100 ಕೆಡೆಟ್‌ಗಳಿಗೆ ತರಬೇತಿ ನೀಡಲು ಯೋಜಿಸಿದ್ದು, ಮೊದಲ ವರ್ಷದಲ್ಲಿ 50 ವಿದ್ಯಾರ್ಥಿಗಳು ತರಬೇತಿಗೆ ಸೇರ್ಪಡೆಯಾಗಲಿದ್ದಾರೆ. ರಾಜ್ಯದ ಅಭ್ಯರ್ಥಿಗಳಿಗೆ ಉತ್ತೇಜನ ನೀಡುವುದಕ್ಕಾಗಿ ಶೇ 25 ಸೀಟುಗಳನ್ನು ಕರ್ನಾಟಕದ ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗೆ ಮೀಸಲಿಡಲಾಗುವುದು. ಅವರಿಗೆ ರಿಯಾಯಿತಿ ದರದಲ್ಲಿ ಶುಲ್ಕ ವಿಧಿಸಲಾಗುವುದು ಎಂದೂ ಮೂಲಗಳು ತಿಳಿಸಿವೆ.

ಇದನ್ನೂ ಓದಿ
ಅಂಧರು ಬಟನ್ ಪ್ರೆಸ್ ಮಾಡಿದ್ರೆ ಸಾಕು, ಇದ್ದಲ್ಲಿಗೆ ಬರುತ್ತೆ ಬಿಎಂಟಿಸಿ ಬಸ್
ಮಲ್ಲಸಂದ್ರ ಬಳಿ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ, ಕ್ಯಾಮರಾ ಅಳವಡಿಕೆ
ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಕೆಲವೆಡೆ ಮುಂದಿನ ಐದು ದಿನ ಮಳೆ
ವಿದ್ಯಾರ್ಥಿಗಳು KSRTC ಬಸ್ ಪಾಸ್ ವಿತರಣೆ ಆರಂಭ: ಅರ್ಜಿ ಸಲ್ಲಿಕೆ ಹೇಗೆ?

ವಿಮಾನ ತರಬೇತಿ ಸಂಸ್ಥೆಯಲ್ಲಿ ಏನೇನು ತರಬೇತಿ?

ಈ ಸಂಸ್ಥೆಯು ಫ್ಲೈಟ್ ಹ್ಯಾಂಗರ್ಸ್, ಸಿಮ್ಯುಲೇಟರ್ಸ್, ಗ್ರಂಥಾಲಯ ಮತ್ತು ರೇಡಿಯೋ ಟೆಲಿಫೋನಿ ತರಬೇತಿ ಕೇಂದ್ರವನ್ನು ಒಳಗೊಂಡಿರಲಿದೆ. 3,500 ಚದರ ಮೀಟರ್‌ಗಳಷ್ಟು ವಿಸ್ತೀರ್ಣದಲ್ಲಿರಲಿದೆ. ಈ ಯೋಜನೆಗೆ ಟೆಂಡರ್ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.

ಎಫ್​ಟಿಒ ಹ್ಯಾಂಗರ್‌ಗಳು, ಸಿಮ್ಯುಲೇಟರ್‌ಗಳು, ತರಗತಿ ಕೊಠಡಿಗಳು ಮತ್ತು ಬ್ರೀಫಿಂಗ್ ಸೌಲಭ್ಯಗಳನ್ನು ಸಂಸ್ಥೆಯು ಒಳಗೊಂಡಿರುತ್ತದೆ. ಎಲ್ಲವೂ ನಾಗರಿಕ ವಿಮಾನಯಾನ ನಿರ್ದೇಶನಾಲಯ, MoCA ಮತ್ತು BCAS ಮಾನದಂಡಗಳಿಗೆ ಅನುಗುಣವಾಗಿರುತ್ತವೆ ಎಂದು ಪಾಟೀಲ್ ಎಕ್ಸ್​ ಸಂದೇಶದ ಮೂಲಕ ಮಾಹಿತಿ ನೀಡಿದ್ದಾರೆ.

ಎಂಬಿ ಪಾಟೀಲ್ ಎಕ್ಸ್ ಸಂದೇಶ


ಮೂರು ತಿಂಗಳೊಳಗೆ ಸಂಸ್ಥೆ ಆರಂಭವಾಗುವ ನಿರೀಕ್ಷೆಯಿದ್ದು, ಒಪ್ಪಂದಕ್ಕೆ ಸಹಿ ಹಾಕಿದ ಒಂಬತ್ತು ತಿಂಗಳೊಳಗೆ ಪೂರ್ಣ ಕಾರ್ಯಾಚರಣೆ ಆರಂಭವಾಗುವ ನಿರೀಕ್ಷೆಯಿದೆ. ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣ ಎಂಬ ಹೆಸರಿನ ಶಿವಮೊಗ್ಗ ವಿಮಾನ ನಿಲ್ದಾಣವನ್ನು, 2023 ರ ಫೆಬ್ರವರಿ 27 ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.

ಇದನ್ನೂ ಓದಿ: ಡಿಕೆಶಿ ಕನಸಿನ ಯೋಜನೆಗೆ ವಿರೋಧ ಏಕೆ? ಏನಿದು ಹೇಮಾವತಿ ಎಕ್ಸ್‌ಪ್ರೆಸ್‌ ಲಿಂಕ್ ಕೆನಾಲ್?

ನಗರ ಕೇಂದ್ರದಿಂದ ಸರಿಸುಮಾರು 15 ಕಿಲೋಮೀಟರ್ ದೂರದಲ್ಲಿರುವ ಸೋಗಾನೆಯಲ್ಲಿ ನೆಲೆಗೊಂಡಿರುವ ಇದು, 3,200 ಮೀಟರ್ ರನ್‌ವೇಯನ್ನು ಹೊಂದಿದೆ. ಇದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಂತರ ಕರ್ನಾಟಕದ ಎರಡನೇ ಅತಿ ಉದ್ದದ ರನ್‌ವೇ ಆಗಿದೆ ಮತ್ತು ATR 72 ನಿಂದ ತೊಡಗಿ ಏರ್‌ಬಸ್ A320 ವರೆಗಿನ ವಿಮಾನಗಳ ಲ್ಯಾಂಡಿಂಗ್, ಟೇಕಾಫ್​​ಗೆ ಅವಕಾಶ ಒದಗಿಸಬಲ್ಲದ್ದಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ