
ಶಿವಮೊಗ್ಗ, ನವೆಂಬರ್ 03: ಶಿವಮೊಗ್ಗ ದಸರಾ ಜಂಬೂ ಸವಾರಿ ವೇಳೆ ನಡೆದ ಸೋಮಣ್ಣ ಆನೆ ಅವಘಡ ರಾಜ್ಯಾದ್ಯಂತ ದೊಡ್ಡ ಸಂಚಲನ ಮೂಡಿಸಿತ್ತು. ಅವಾಂತರ ಕುರಿತು ಆಂತರಿಕ ತನಿಖೆ ಕೂಡ ನಡೆದಿದೆ. ಇದೆಲ್ಲದರ ಮಧ್ಯೆ ಇದೀಗ ಶಿವಮೊಗ್ಗದ ಅರ್ಚಕರು ಧಾರ್ಮಿಕ ವಿಧಿ ವಿಧಾನಗಳ ಮೊರೆ ಹೋಗಿದ್ದಾರೆ. ಗುರು-ಹಿರಿಯರ ಮಾರ್ಗದರ್ಶನದಂತೆ ಪ್ರಾಯಶ್ಚಿತ್ತ ಹೋಮಕ್ಕೆ ಅರ್ಚಕರು ಮುಂದಾಗಿದ್ದಾರೆ.
ಶಿವಮೊಗ್ಗ ದಸರಾ ಮಹೋತ್ಸವದಲ್ಲಿ ನಡೆದ ಆತಂಕಕಾರಿ ಘಟನೆ ಸಾಕಷ್ಟು ವಿಘ್ನಗಳಿಗೆ ಕಾರಣವಾಗಿತ್ತು. ಹೀಗಾಗಿ ಶಿವಮೊಗ್ಗದ ಅರ್ಚಕರು ಗುರು-ಹಿರಿಯರ ಮಾರ್ಗದರ್ಶನದಂತೆ ಪ್ರಾಯಶ್ಚಿತ್ತ ಹೋಮ ಮಾಡಲು ಮುಂದಾಗಿದ್ದಾರೆ. ಯಾವುದೇ ಅನಾಹುತಗಳು ಉಂಟಾಗದಂತೆ ವಿಶೇಷ ಪೂಜೆ ಆಯೋಜನೆ ಮಾಡಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ ದಸರಾ ಜಂಬೂಸವಾರಿ ವೇಳೆ ಅಚಾತುರ್ಯ: ದಿಕ್ಕಾಪಾಲಾಗಿ ಓಡಿದ ಅಂಬಾರಿ ಹೊತ್ತಿದ್ದ ಆನೆ
ಶೃಂಗೇರಿ ಶ್ರೀಗಳ ಮಾರ್ಗದರ್ಶನದಂತೆ ಕೋಟೆ ಶ್ರೀ ಸೀತಾರಾಮಾಂಜನೇಯ ದೇವಾಲಯದಲ್ಲಿ ಪ್ರಾಯಶ್ಚಿತ್ತ ಹೋಮ ಆಯೋಜನೆ ಮಾಡಲಾಗಿದೆ. ಇಂದು ಮುಂಜಾನೆಯಿಂದ ಪ್ರಾಯಶ್ಚಿತ್ತಾದಿ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿವೆ. ಶ್ರೀ ವಿಶ್ವಕ್ಸೇನ ಪೂಜೆ, ನವಗ್ರಹ ಪೂಜೆ ಹಾಗೂ ಹೋಮ, ಪೂರ್ಣಾಹುತಿ, ಸಂಪ್ರೋಕ್ಷಣೆ ಪೂಜೆ ಮಾಡಲಾಗುತ್ತಿದೆ. ಒಟ್ಟು 5 ದಿನಗಳ ಕಾಲ ವಿಶೇಷ ಪೂಜೆ ಪುನಸ್ಕಾರ ನಡೆಯುತ್ತಿದೆ. ಕೊನೆಯ ದಿನ ಹಿತ್ತಾಳೆಯ ಗಜವಾಹನೋತ್ಸವ ಹಾಗೂ ಅಮ್ಮನವರ ತ್ರಿಶೂಲ ಇಟ್ಟು ಆನೆಯು ಚಲಿಸಿದ ರಸ್ತೆಯಲ್ಲಿ ಉತ್ಸವ ಮಾಡಲಾಗುತ್ತದೆ.
ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಿಂದ ಮೂರು ಪಳಗಿದ ಆನೆಗಳನ್ನು ಶಿವಮೊಗ್ಗ ನಗರಕ್ಕೆ ಕರೆತರಲಾಗಿತ್ತು. ಸಾಗರ, ಬಹದ್ದೂರು ಹಾಗೂ ಸೋಮಣ್ಣ ಆನೆಗಳು. ಕಳೆದ ಐದಾರು ವರ್ಷಗಳಿಂದ ಸಾಗರ ಆನೆ ಶಿವಮೊಗ್ಗದಲ್ಲಿ ಅಂಬಾರಿಯನ್ನು ಹೊರುತ್ತಿದ್ದ. ಆದರೆ ಸಾಗರ ಆನೆ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆ ಸೋಮಣ್ಣ ಆನೆಗೆ ಕೊನೆ ಕ್ಷಣದಲ್ಲಿ ಬೆಳ್ಳಿಯ ಅಂಬಾರಿಯನ್ನು ಹೊರುವುದಕ್ಕೆ ಅರಣ್ಯ ಅಧಿಕಾರಿಗಳು ನಿರ್ಧರಿಸಿದ್ದರು.
ಇದನ್ನೂ ಓದಿ: ಶಿವಮೊಗ್ಗ ದಸರಾ ಅಂಬಾರಿ ಆನೆ ಸೋಮಣ್ಣ ಭಯಗೊಂಡು ಓಡಿದ್ದೇಕೆ? ತನಿಖಾ ವರದಿಯಲ್ಲಿ ಅಚ್ಚರಿಯ ಸಂಗತಿಗಳು ಬಹಿರಂಗ
ಸೋಮಣ್ಣಗೆ ಕೇವಲ ನಗರದಲ್ಲಿ ಸುತ್ತಾಟದ ತಾಲೀಮು ಮಾತ್ರವಿತ್ತು. ಆದರೆ ಅಂಬಾರಿ ಹೊತ್ತು ಸಾಗುವ ತಾಲೀಮು ನೀಡಿರಲಿಲ್ಲ. ಹೀಗಾಗಿ ಸೋಮಣ್ಣ ಆನೆ ಕೋಟೆ ಆಂಜನೇಯ ದೇಗುಲದಿಂದ ಕೇವಲ 500 ಮೀಟರ್ ಮುಂದೆ ಹೋಗಿ ಮತ್ತು ಅಲ್ಲಿಯ ಜನಜಂಗುಳಿ ನೋಡಿ ವಾಪಸ್ ಓಡಿ ಬಂದಿತ್ತು. ವಾಪಸ್ ಬರುವಾಗ ಆನೆಯು ದೊಡ್ಡ ಅವಾಂತರಗಳನ್ನು ಸೃಷ್ಟಿ ಮಾಡಿತ್ತು. ಅದೇ ಮಾರ್ಗವಾಗಿ ವಾಪಸ್ ಬಂದು ಸ್ವದೇಶಿ ಕಾಲೇಜ್ ಮುಂಭಾಗದ ಜಾಗಕ್ಕೆ ನುಗ್ಗಿದೆ. ನಂತರ ಅಲ್ಲಿಂದ ಮುಂದೆ ಕಿರಿದಾದ ಜಾಗದ ಮೂಲಕ ಕೋಟೆ ರಸ್ತೆಯ ಮೊದಲ ತಿರುವಿಗೆ ನುಗ್ಗಿ ಅವಾಂತರ ಸೃಷ್ಟಿಸಿತ್ತು. ಆನೆಯ ಆವೇಶ ಡಿಸಿ ಕ್ಯಾಮೆರಾದಲ್ಲಿ ಸೆರೆ ಆಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.