ತವರಲ್ಲಿ 35 ಕೋಟಿ ರೂ. ವೆಚ್ಚದ ಸಂಕೀರ್ಣ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದ ಶಿವಶಂಕರಪ್ಪ ಸಾಹುಕಾರ್: ಹಲವು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ ಇ.ಡಿ
ಕೆಪಿಎಸ್‌ಸಿ ನೇಮಕಾತಿ ಹಗರಣದ ಆರೋಪಿ ಶಿವಶಂಕರಪ್ಪ ಸಾಹುಕಾರ್ ತಮ್ಮ ತವರಲ್ಲಿ 35 ಕೋಟಿ ವೆಚ್ಚದ ಸಂಕೀರ್ಣ ನಿರ್ಮಾಣಕ್ಕೆ ಸಿದ್ಧತೆ ನಡೆಸಿದ್ದಾಗಿ ಇ.ಡಿ. ನ್ಯಾಯಾಲಯಕ್ಕೆ ಸ್ಫೋಟಕ ಮಾಹಿತಿ ನೀಡಿದೆ. ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸಾಹುಕಾರ್ ಪತ್ನಿಗೆ ಸೇರಿದ ಜಮೀನಿನಲ್ಲಿ ಈ ಕನಸಿನ ಯೋಜನೆ ನಿರ್ಮಿಸಲು ವಾಸ್ತುಶಿಲ್ಪದ ವಿನ್ಯಾಸಗಳನ್ನು ಸಿದ್ಧಪಡಿಸಲಾಗಿತ್ತು ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಬೆಂಗಳೂರು, ನವೆಂಬರ್ 03: ನೇಮಕಾತಿ ಹಗರಣ ಪ್ರಕರಣದಲ್ಲಿ ಬಂಧಿತರಾಗಿರುವ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ತಮ್ಮ ತವರೂರಿನಲ್ಲಿ 35 ಕೋಟಿ ರೂಪಾಯಿ ವೆಚ್ಚದಲ್ಲಿ ಶಾಲೆ, ಹಾಸ್ಟೆಲ್, ಆಟದ ಮೈದಾನ, ಮಾಲ್ ಮತ್ತು ಸಮಾವೇಶ ಭವನ ಒಳಗೊಂಡ ಸಂಕೀರ್ಣ ನಿರ್ಮಿಸಲು ಯೋಜನೆ ರೂಪಿಸಿದ್ದರು ಎಂದು ಜಾರಿ ನಿರ್ದೇಶನಾಲಯ (ಇ.ಡಿ) ತಿಳಿಸಿದೆ. ಸಾಹುಕಾರ್ ಮತ್ತು ಸಹ ಆರೋಪಿಯಾಗಿರುವ ಕೆಪಿಎಸ್‌ಸಿ ಸದಸ್ಯೆ ಬಿ.ವಿ. ಗೀತಾ ಅವರ ಜಾಮೀನು ಅರ್ಜಿಗಳ ವಿಚಾರಣೆ ವೇಳೆ ವಿಶೇಷ ನ್ಯಾಯಾಲಯಕ್ಕೆ ಇ.ಡಿ. ಈ ಮಾಹಿತಿ ನೀಡಿದೆ.
ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸಾಹುಕಾರ್ ಪತ್ನಿಗೆ ಸೇರಿದ ಜಮೀನಿನಲ್ಲಿ ಈ ಕನಸಿನ ಯೋಜನೆ ನಿರ್ಮಿಸಲು ವಾಸ್ತುಶಿಲ್ಪದ ವಿನ್ಯಾಸಗಳನ್ನು ಸಿದ್ಧಪಡಿಸಲಾಗಿತ್ತು ಎಂದು ತನಿಖಾ ಸಂಸ್ಥೆ ತಿಳಿಸಿದೆ. ಜನವರಿಯಲ್ಲಿ ನಡೆದ ಪಶುವೈದ್ಯಾಧಿಕಾರಿಗಳ ಪರೀಕ್ಷೆಯ ಪ್ರಶ್ನೆಗಳಿಗೆ ಸಂಬಂಧಿಸಿದ ಉತ್ತರ ಕೀಗಳನ್ನು ಸೋರಿಕೆ ಮಾಡಿಸಿಕೊಳ್ಳಲು ಲಂಚ ನೀಡಿದ ಆರೋಪ ಎದುರಿಸುತ್ತಿರುವ ಅಭ್ಯರ್ಥಿಯ ಪೋಷಕರೊಬ್ಬರನ್ನು ಪ್ರಸ್ತಾವಿತ ಶಾಲೆಯ ಉಸ್ತುವಾರಿಯಾಗಿ ನೇಮಿಸಲು ನಿರ್ಧರಿಸಲಾಗಿತ್ತು ಎಂದೂ ಇ.ಡಿ ಹೇಳಿದೆ.
ಇದನ್ನೂ ಓದಿ: ಕೆಪಿಎಸ್‌ಸಿ ಹಗರಣದಲ್ಲಿ ಶಿವಶಂಕರಪ್ಪ ಸಾಹುಕಾರ್, ಬಿ.ವಿ.ಗೀತಾ ಪಾತ್ರವೇನು? ಇಲ್ಲಿದೆ ಮಾಹಿತಿ
ಅಭ್ಯರ್ಥಿಗಳಿಂದ ತಲಾ 10- 40 ಲಕ್ಷ ರೂಪಾಯಿವರೆಗೆ ಲಂಚ!
ಜನವರಿ 9ರಂದು ನಡೆದ ಪಶುವೈದ್ಯಾಧಿಕಾರಿಗಳ ಪರೀಕ್ಷೆಗೆ ಹಾಜರಾಗಿದ್ದ ಒಂಬತ್ತು ಅಭ್ಯರ್ಥಿಗಳಿಗೆ ಉತ್ತರ ಸೋರಿಕೆ ಮಾಡಿದ ಆರೋಪ ಸಾಹುಕಾರ್ ಮತ್ತು ಗೀತಾ ಮೇಲಿದೆ. ಅಭ್ಯರ್ಥಿಗಳಿಂದ ತಲಾ 10 ಲಕ್ಷದಿಂದ 40 ಲಕ್ಷ ರೂಪಾಯಿವರೆಗೆ ಲಂಚ ಪಡೆಯಲಾಗಿತ್ತು ಎಂದು ತನಿಖಾ ಸಂಸ್ಥೆ ಆರೋಪಿಸಿದೆ. ಮೂರನೇ ರ‍್ಯಾಂಕ್ ಪಡೆದ ಅಭ್ಯರ್ಥಿಯ ಪೋಷಕರೊಂದಿಗೆ 20 ಲಕ್ಷ ರೂಪಾಯಿ ಮೊತ್ತದ ವ್ಯವಹಾರ ನಡೆದಿದ್ದು, ಅದರಲ್ಲಿ ಸಾಹುಕಾರ್ 10 ಲಕ್ಷ ರೂಪಾಯಿ ಪಡೆದಿದ್ದರು ಎಂದು ಇ.ಡಿ. ಆರೋಪಿಸಿದೆ. ಅದೇ ರೀತಿ, ಮೊದಲ ರ‍್ಯಾಂಕ್ ಪಡೆದ ಅಭ್ಯರ್ಥಿಯೊಂದಿಗೆ 40 ಲಕ್ಷ ರೂಪಾಯಿ ವ್ಯವಹಾರ ನಡೆದಿದ್ದು, ಅದರಲ್ಲಿ ಗೀತಾ ಪರೀಕ್ಷೆಯ ಹಿಂದಿನ ದಿನ 20 ಲಕ್ಷ ರೂಪಾಯಿ ಪಡೆದಿದ್ದರು ಎಂದು ತನಿಖಾ ಸಂಸ್ಥೆ ತಿಳಿಸಿದೆ.
ವಕೀಲರ ವಾದ-ಪ್ರತಿವಾದ
ಸಾಹುಕಾರ್ ಪರ ವಕೀಲ ಸಿ.ಎಚ್. ಹನುಮಂತರಾಯ ಅವರು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಜಾಮೀನು ಪಡೆಯಲು ತಮ್ಮ ಕಕ್ಷಿದಾರರು ಅರ್ಹರಾಗಿದ್ದಾರೆ ಎಂದು ವಾದಿಸಿದ್ದರು. ಅಪರಾಧದಿಂದ ಗಳಿಸಿದ ಒಂದು ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಸಾಹುಕಾರ್ ವೈಯಕ್ತಿಕವಾಗಿ ಸ್ವೀಕರಿಸಿದ್ದಾರೆ ಎಂಬ ಆರೋಪವಿಲ್ಲ ಎಂದು ಅವರು ಹೇಳಿದ್ದರು. ಆದರೆ, ಇ.ಡಿ. ಪರ ವಕೀಲರಾದ ಮಹೇಶ್ವರಿ ಡಿ.ಎಂ. ಅವರು, ಕಾನೂನಿನಡಿ ನಿಗದಿಪಡಿಸಿರುವ ಮೊತ್ತದ ಮಿತಿಯನ್ನು ಪ್ರಾಸಿಕ್ಯೂಷನ್ ದೂರು ಸಲ್ಲಿಸಿದ ಬಳಿಕವಷ್ಟೇ ನಿರ್ಧರಿಸಬಹುದು ಎಂದು ವಾದಿಸಿದ್ದರು. ಅಲ್ಲದೆ, ಈ ಮೊತ್ತವನ್ನು ಒಬ್ಬ ಅಭ್ಯರ್ಥಿಗೆ ಸಂಬಂಧಿಸಿದ ವ್ಯವಹಾರಕ್ಕೆ ಮಾತ್ರ ಸೀಮಿತಗೊಳಿಸದೆ, ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿನ ಸಂಪೂರ್ಣ ಭ್ರಷ್ಟಾಚಾರದ ಪ್ರಕರಣದ ಹಿನ್ನೆಲೆಯಲ್ಲಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದರು.
ಕೆಪಿಎಸ್‌ಸಿ ಸದಸ್ಯೆ ಬಿ.ವಿ. ಗೀತಾ ಪರ ವಕೀಲರು, ಮಹಿಳೆ ಎಂಬ ಕಾರಣಕ್ಕೆ ಪಿಎಂಎಲ್‌ಎ ಅಡಿಯಲ್ಲಿ ಅವರಿಗೆ ವಿಶೇಷ ಪರಿಗಣನೆ ನೀಡಿ ಜಾಮೀನು ನೀಡಬೇಕು ಎಂದು ವಾದಿಸಿದ್ದರು. ಇದಕ್ಕೆ ಇ.ಡಿ., ಗೀತಾ ಅವರನ್ನು ಬಲಿಪಶುವನ್ನಾಗಿ ಮಾಡಲಾಗಿಲ್ಲ ಎಂದು ಹೇಳಿತ್ತು. ರಾಜ್ಯ ಲೋಕಾಯುಕ್ತದಲ್ಲಿ ಪ್ರಾಸಿಕ್ಯೂಟರ್ ಆಗಿ ಕಾರ್ಯನಿರ್ವಹಿಸಿದ್ದ ಅವರಿಗೆ ತಮ್ಮ ಕೃತ್ಯಗಳ ಬಗ್ಗೆ ಸಂಪೂರ್ಣ ಅರಿವಿತ್ತು ಎಂದು ತನಿಖಾ ಸಂಸ್ಥೆ ವಾದಿಸಿದೆ. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ತೀರ್ಪು ಕಾಯ್ದಿರಿಸಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




