
ಶಿವಮೊಗ್ಗ, ಸೆಪ್ಟೆಂಬರ್ 04: ಅಕ್ಷರ ಕಲಿಸಿ, ತಿದ್ದಿ ತೀಡಿ ಸನ್ಮಾರ್ಗ ತೋರಬೇಕಾದ ಶಿಕ್ಷಕಿಯೊಬ್ಬರು ಮಕ್ಕಳ ಮೇಲೆ ರಾಕ್ಷಸೀ ಪ್ರವೃತ್ತಿ ಮೆರೆದ ಅತ್ಯಂತ ಅಮಾನವೀಯ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದರೆಂಬ ಕ್ಷುಲ್ಲಕ ಕಾರಣಕ್ಕೆ, ಅತಿಥಿ ಶಿಕ್ಷಕಿ ಮಕ್ಕಳ ಬೆನ್ನಿನ ಮೇಲೆ ಬಾಸುಂಡೆ ಎದ್ದು ರಕ್ತ ಬರುವಂತೆ ಮನಬಂದಂತೆ ಥಳಿಸಿದ್ದು, ಈ ಘಟನೆ ಇಡೀ ನಾಗರಿಕ ಸಮಾಜವನ್ನೇ ಬೆಚ್ಚಿಬೀಳಿಸಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶರಾವತಿ ಹಿನ್ನೀರಿನ ಪ್ರದೇಶವಾಗಿರುವ ತುಮರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಿರುವಾಸೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅತಿಥಿ ಶಿಕ್ಷಕಿ ರಕ್ಷಿತಾ, ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಾರೆಂಬ ಸಿಟ್ಟಿಗೆ 2, 3 ಹಾಗೂ 4ನೇ ತರಗತಿಯ ಮೂವರು ಮಕ್ಕಳಿಗೆ ಕೋಲಿನಿಂದ ಅಮಾನುಷವಾಗಿ ಥಳಿಸಿದ್ದಾರೆ. ಶಾಲೆ ಬಿಟ್ಟು ಮನೆಗೆ ಬಂದ ಮಕ್ಕಳ ಬೆನ್ನಿನ ಮೇಲಿದ್ದ ರಕ್ತದ ಕಲೆಗಳು ಹಾಗೂ ಬಾಸುಂಡೆಗಳನ್ನು ಕಂಡು ಪೋಷಕರು ದಿಗ್ಭ್ರಮೆಗೊಂಡಿದ್ದಾರೆ.
ಪುಟ್ಟ ಮಕ್ಕಳ ಮೇಲಿನ ಈ ಕೃತ್ಯ ತಿಳಿಯುತ್ತಿದ್ದಂತೆ ಶಾಲೆ ಬಳಿ ಜಮಾಯಿಸಿದ ಪೋಷಕರು ಹಾಗೂ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಶಾಲೆಯ ಆವರಣದಲ್ಲಿ ಜಮಾಯಿಸಿದ ಗ್ರಾಮಸ್ಥರು, ಅಮಾನವೀಯವಾಗಿ ನಡೆದುಕೊಂಡ ಅತಿಥಿ ಶಿಕ್ಷಕಿ ರಕ್ಷಿತಾ ವಿರುದ್ಧ ತಕ್ಷಣ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಪಟ್ಟು ಹಿಡಿದು ಪ್ರತಿಭಟಿಸಿದರು. ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆ ವಿರುದ್ಧವೂ ಸಾರ್ವಜನಿಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಇನ್ನು ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಶಿವಮೊಗ್ಗ ಡಿಡಿಪಿಐ ಎಸ್.ಆರ್. ಮಂಜುನಾಥ್, ಅಮಾನವೀಯವಾಗಿ ಮಕ್ಕಳ ಮೇಲೆ ಹಲ್ಲೆ ನಡೆಸಿದ ಅತಿಥಿ ಶಿಕ್ಷಕಿ ರಕ್ಷಿತಾಳನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಿ ಆದೇಶಿಸಿದ್ದಾರೆ. ಗಾಯವಾಗಿರುವ ಮಕ್ಕಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.
ಇದನ್ನೂ ಓದಿ: 15 ಸಾವಿರ ಶಿಕ್ಷಕರ ನೇಮಕಾತಿ: ಸರ್ವರ್ ಸಮಸ್ಯೆಯಿಂದ ಅರ್ಜಿ ಹಾಕಲಾಗದೆ ಆಕಾಂಕ್ಷಿಗಳ ಪರದಾಟ
ಶಾಲೆಗಳಲ್ಲಿ ಯಾವುದೇ ಕಾರಣಕ್ಕೂ ಮಕ್ಕಳಿಗೆ ದೈಹಿಕ ದಂಡನೆ ಹಾಗೂ ಮಾನಸಿಕ ಹಿಂಸೆ ನೀಡಬಾರದು ಎಂದು ಕಟ್ಟುನಿಟ್ಟಿನ ನಿಯಮವಿದ್ದರೂ ಇಂತಹ ಕೃತ್ಯ ಎಸಗಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಡಿಡಿಪಿಐ ಎಲ್ಲಾ ಶಿಕ್ಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಸದ್ಯ ಈ ಆಘಾತಕಾರಿ ಘಟನೆಯನ್ನು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.