ಶಿವಮೊಗ್ಗ ದಸರಾದಲ್ಲೂ `ವಂದೇ ಮಾತರಂ’ ಗೊಂದಲ: ಪೂರ್ಣ ಹಾಡಿದ್ದಕ್ಕೆ ಕೈ ನಾಯಕರು ಕೆಂಡಾಮಂಡಲ

ಶಿವಮೊಗ್ಗ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ವಂದೇ ಮಾತರಂ ಗೊಂದಲ ಉಂಟಾಗಿದೆ. ವಂದೇ ಮಾತರಂ ಪೂರ್ಣ ಹಾಡು ಹಾಡಿದ್ದಕ್ಕೆ ಕಾಂಗ್ರೆಸ್ ಮುಖಂಡರು ಆಕ್ಷೇಪ ವ್ಯಕ್ತಪಡಿಸಿರುವ ಘಟನೆ ನಡೆದಿದೆ. ಸರ್ಕಾರ ಎರಡೇ ಚರಣ ಹಾಡಬೇಕೆಂದು ಆದೇಶಿಸಿದೆ. ಆದ್ರ, ಇಲ್ಲಿ ಪೂರ್ತಿ ಹಾಡಿದ್ದಾರೆಂದು ಆರೋಪಿಸಿ ಕಾರ್ಯಕ್ರಮದಿಂದ ಎದ್ದು ಹೋಗಿದ್ದು, ಇದೀಗ ಈ ಗೊಂದಲ ಸಂಬಂಧ ಶಿವಮೊಗ್ಗ ಪಾಲಿಕೆ ಆಯುಕ್ತ ಮಾಯಣ್ಣಗೌಡ ಸ್ಪಷ್ಟನೆ ನೀಡಿದ್ದಾರೆ.

ಶಿವಮೊಗ್ಗ ದಸರಾದಲ್ಲೂ `ವಂದೇ ಮಾತರಂ’ ಗೊಂದಲ: ಪೂರ್ಣ ಹಾಡಿದ್ದಕ್ಕೆ ಕೈ ನಾಯಕರು ಕೆಂಡಾಮಂಡಲ
Shivamogga Dasara
Edited By:

Updated on: Oct 11, 2026 | 5:43 PM

ಶಿವಮೊಗ್ಗ, (ಆಕ್ಟೋಬರ್ 11): ಶಿವಮೊಗ್ಗ ದಸರಾ ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಡು ಪೂರ್ತಿ ಹಾಡಲಾಗಿದೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದು, ದಸರಾ ನೀವೆ ಮಾಡಿಕೊಳ್ಳಿ, ಚೆನ್ನಾಗಿ ನಡೆಯಲಿ ಎಂದು ಮುನಿಸಿಕೊಂಡು ಅರ್ಧದಲ್ಲೇ ಕಾರ್ಯಕ್ರಮದಿಂದ ಹೊರನಡೆದಿದ್ದಾರೆ. ಈ ಗೊಂದಲ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಶಿವಮೊಗ್ಗ ಪಾಲಿಕೆ ಆಯುಕ್ತ ಮಾಯಣ್ಣಗೌಡ ಸ್ಪಷ್ಟನೆ ನೀಡಿದ್ದು, ​ನಾವು ಸರ್ಕಾರದ ನಿಯಮಾವಳಿಯಂತೆ 2 ಚರಣಗಳನ್ನಷ್ಟೇ ಪ್ಲೇ ಮಾಡಿದ್ದೆವು. ಅಲ್ಲಿ ನೆರೆದಿದ್ದವರು ಹಾಗೂ ಗಣ್ಯರು ಸ್ವಯಂಪ್ರೇರಿತರಾಗಿ 3 ಮತ್ತು 4ನೇ ಚರಣ ಹಾಡಿದ್ದಾರೆ. ​ವೇದಿಕೆ ಮೇಲಿದ್ದವರೇ ಸ್ವಯಂಪ್ರೇರಿತರಾಗಿ ಹಾಡಿದ್ದರಿಂದ ಗೊಂದಲ ಉಂಟಾಗಿದೆ ಎಂದಿದ್ದಾರೆ.

​ವಿವಾದಕ್ಕೆ ಶಿವಮೊಗ್ಗ ಪಾಲಿಕೆ ಆಯುಕ್ತ ಸ್ಪಷ್ಟನೆ

ಸರ್ಕಾರದ ಸುತ್ತೋಲೆ ಪ್ರಕಾರ 2 ಚರಣ ವಂದೇ ಮಾತರಂ, ನಂತರ ನಾಡಗೀತೆ ಪ್ಲೇ ಮಾಡಲಾಗಿತ್ತು.
​ಮುಂದೆ ಈ ರೀತಿಯ ಗೊಂದಲ ಆಗದಂತೆ ಜನಪ್ರತಿನಿಧಿಗಳ ಜೊತೆ ಮಾತುಕತೆ ನಡೆಸಿ ಸರ್ಕಾರ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ಆದೇಶ ಕಡ್ಡಾಯವಾಗಿ ಪಾಲಿಸಲಾಗುವುದು. ​ದಸರಾ ಸಮಿತಿಯ 14 ಕಾರ್ಯದರ್ಶಿಗಳಿಂದ ಜನಪ್ರತಿನಿಧಿಗಳ ಭೇಟಿ, ಸಹಕಾರಕ್ಕೆ ಮನವಿ ಮಾಡಿದ ಶಿವಮೊಗ್ಗ ಪಾಲಿಕೆ ಆಯುಕ್ತ ಮಾಯಣ್ಣಗೌಡ, ಸರ್ಕಾರದ ಆದೇಶ ಕಡ್ಡಾಯ ಪಾಲನೆ ಆಗಬೇಕು ಎಂದು ಹೇಳಿದರು.

ಇದನ್ನೂ ಓದಿ: ಶಿವಮೊಗ್ಗ ಮಹಾನಗರ ಪಾಲಿಕೆ ನೇಮಕಾತಿ: 45 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ಯಾವುದೇ ಲೋಪದೋಷಗಳಿಲ್ಲದೆ ನಿಗದಿತ ಟ್ರ್ಯಾಕ್‌ನಂತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸರ್ಕಾರದ ಆದೇಶಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಬೇಕಾಗುತ್ತದೆ. ಜನದಟ್ಟಣೆಯನ್ನು ನಿಯಂತ್ರಿಸಲು ಮೊದಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಕೆಲವರ ನಿರ್ಲಕ್ಷ್ಯದಿಂದ ಸರ್ಕಾರದ ಆದೇಶಗಳ ಪಾಲನೆಯಲ್ಲಿ ಗೊಂದಲ ಉಂಟಾಗುತ್ತಿದೆ. ದಸರಾ ಸಮಿತಿ ಸದಸ್ಯರು ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಮನವರಿಕೆ ಮಾಡ್ತೇವೆ ಎಂದು ತಿಳಿಸಿದರು.

ಅಸಲಿಗೆ ಆಗಿರುವುದೇನು?

ಶಿವಮೊಗ್ಗದ ಶ್ರೀಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆಯೋಜಿಸಲಾಗಿರುವ ದಸರಾ ಕಾರ್ಯಕ್ರಮದ ಆರಂಭದಲ್ಲಿ ಗಾಯಕರು ಮ್ಯೂಸಿಕ್ ಸಹಿತ ವಂದೇ ಮಾತರಂ-2 ಚರಣ ಹಾಡಿದ್ದರು. 2 ಚರಣ ಮುಗಿಯುತ್ತಿದ್ದಂತೆ ಮ್ಯೂಸಿಕ್ ಕೊನೆಗೊಂಡಿತ್ತು. ಮ್ಯೂಸಿಕ್ ಅಂತ್ಯಗೊಂಡ ಬಳಿಕವೂ ಗಾಯಕರು ವಂದೇ ಮಾತರಂ ಪೂರ್ತಿ ಹಾಡಿದ್ದಾರೆ. ಇದಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ ಯೋಗೀಶ್, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಜೆ.ಮಧುಸೂದನ್, ಜವಳಿ- ಕೈಮಗ್ಗ ನಿಗಮದ ಅಧ್ಯಕ್ಷ ಚೇತನ್ ನೇತೃತ್ವದ ತಂಡ ಹೊರನಡೆದಿದೆ. ಪಾಲಿಕೆ ಮಾಜಿ ಸದಸ್ಯರು ಸೇರಿದಂತೆ ಕಾಂಗ್ರೆಸ್ಸಿಗರಿಂದ ದಸರಾ ಕಾರ್ಯಕ್ರಮ ಬಹಿಷ್ಕಾರಿಸಿದ್ದಾರೆ. ಇನ್ನು ಈ ಕಾರ್ಯಕ್ರಮದಲ್ಲಿ ಹಿರಿಯ ನಟ ಶ್ರೀನಾಥ್, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಚೆನ್ನಬಸಪ್ಪ ಸೇರಿದಂತೆ ಹಲವರು ಭಾಗಿಯಾಗಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Basavaraj Yaraganavi
Loading...
Unable to load recommendations.
Follow Us