ಆಗಸ್ಟ್ 1ರಿಂದ ದಕ್ಷಿಣ ಭಾರತದಾದ್ಯಂತ ಲಾರಿ ಮುಷ್ಕರ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಗಡುವು ನೀಡಿದ ಲಾರಿ ಮಾಲೀಕರ ಸಂಘ

South India Lorry Strike: ವಾಣಿಜ್ಯ ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಕಡ್ಡಾಯ ನಿಯಮ ವಿರೋಧಿಸಿ ಹಾಗೂ ಗಡಿ ಚೆಕ್‌ಪೋಸ್ಟ್‌ಗಳ ತೆರವುಗೊಳಿಸುವಿಕೆಗೆ ಆಗ್ರಹಿಸಿ ಆಗಸ್ಟ್ 1ರಿಂದ ದಕ್ಷಿಣ ಭಾರತದಾದ್ಯಂತ ಲಾರಿ ಮುಷ್ಕರ ನಡೆಸಲು ಲಾರಿ ಮಾಲೀಕರ ಸಂಘ ನಿರ್ಧರಿಸಿದೆ. ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಗಡಿ ಚೆಕ್‌ಪೋಸ್ಟ್‌ಗಳ ತೆರವಿಗೆ ಸಂಘ ಆಗ್ರಹಿಸಿದೆ.

ಆಗಸ್ಟ್ 1ರಿಂದ ದಕ್ಷಿಣ ಭಾರತದಾದ್ಯಂತ ಲಾರಿ ಮುಷ್ಕರ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಗಡುವು ನೀಡಿದ ಲಾರಿ ಮಾಲೀಕರ ಸಂಘ
ಸಾಂದರ್ಭಿಕ ಚಿತ್ರ
Image Credit source: TV9 Network
Edited By:

Updated on: Jul 07, 2026 | 1:57 PM

ಮುಖ್ಯಾಂಶಗಳು

  • ಆಗಸ್ಟ್ 1ರಿಂದ ದಕ್ಷಿಣ ಭಾರತ ಲಾರಿ ಮುಷ್ಕರ
  • ಜಿಪಿಎಸ್, ಪ್ಯಾನಿಕ್ ಬಟನ್ ಕಡ್ಡಾಯಕ್ಕೆ ತೀವ್ರ ವಿರೋಧ
  • ಗಡಿ ಚೆಕ್‌ಪೋಸ್ಟ್ ತೆರವುಗೊಳಿಸಲು ಲಾರಿ ಮಾಲೀಕರ ಆಗ್ರಹ

ಬೆಂಗಳೂರು, ಜುಲೈ 7: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಗಸ್ಟ್ 1ರಿಂದ ದಕ್ಷಿಣ ಭಾರತದಾದ್ಯಂತ ಲಾರಿಗಳ ಮುಷ್ಕರ (Lorry Strike) ನಡೆಸಲು ಲಾರಿ ಮಾಲೀಕರು ಮುಂದಾಗಿದ್ದಾರೆ. ಈ ಬಗ್ಗೆ ದಕ್ಷಿಣ ಭಾರತ ಲಾರಿ ಮಾಲೀಕರ ಸಂಘದ (SIMA) ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ಮಾಹಿತಿ ನೀಡಿದ್ದಾರೆ. ಜುಲೈ 30ರ ಒಳಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸಲು ಮುಂದಾಗದಿದ್ದರೆ, ಆಗಸ್ಟ್ 1ರಿಂದ ದಕ್ಷಿಣ ಭಾರತದ ಎಲ್ಲಾ ಲಾರಿಗಳು ನಿಂತಲ್ಲೇ ನಿಲ್ಲಲಿವೆ ಎಂದು ಅವರು ಗಂಭೀರ ಎಚ್ಚರಿಕೆ ನೀಡಿದ್ದಾರೆ. ಈ ಮುಷ್ಕರದಿಂದಾಗಿ ದಕ್ಷಿಣ ಭಾರತದ ಸುಮಾರು 24 ಲಕ್ಷ ಹಾಗೂ ಕರ್ನಾಟಕ ರಾಜ್ಯದ 7 ಲಕ್ಷ ಲಾರಿಗಳು ರಸ್ತೆಗಿಳಿಯದೆ ಸಂಚಾರ ಸ್ಥಗಿತಗೊಳಿಸಲಿವೆ.

ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಕೆಯಲ್ಲಿ ಸಾವಿರಾರು ಕೋಟಿ ಹಗರಣ ಆರೋಪ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಆರ್ ಷಣ್ಮುಗಪ್ಪ, ‘2012ರ ನಿರ್ಭಯಾ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ವಾಣಿಜ್ಯ ವಾಹನಗಳಿಗೂ ಜಿಪಿಎಸ್ (GPS) ಹಾಗೂ ಪ್ಯಾನಿಕ್ ಬಟನ್ ಕಡ್ಡಾಯಗೊಳಿಸಿತ್ತು. ಆದರೆ, ಇದರಲ್ಲಿ ಸಾವಿರಾರು ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ದರ ನಿಗದಿ ಮಾಡಲಾಗಿದ್ದು, ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಅಳವಡಿಕೆಗೆ ಒಂದು ರಾಜ್ಯದಲ್ಲಿ 3 ಸಾವಿರ ರೂಪಾಯಿ ಇದ್ದರೆ, ಮತ್ತೊಂದು ರಾಜ್ಯದಲ್ಲಿ 15 ಸಾವಿರ ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಸಾರಿಗೆ (ಪ್ಯಾಸೆಂಜರ್) ವಾಹನಗಳಲ್ಲಿ ಇದನ್ನು ಅಳವಡಿಸಲಾಗಿದೆಯಾದರೂ ಇಲ್ಲಿಯವರೆಗೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಹೀಗಿರುವಾಗ ಸರಕು ಸಾಗಣೆ (ಗೂಡ್ಸ್) ವಾಹನಗಳಿಗೆ ಇದರ ಅವಶ್ಯಕತೆ ಏನಿದೆ’ ಎಂದು ಪ್ರಶ್ನಿಸಿದ್ದಾರೆ. ಈ ಅಕ್ರಮವನ್ನು ಪತ್ತೆಹಚ್ಚಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

ಕರ್ನಾಟಕ, ತಮಿಳುನಾಡಿನಲ್ಲಿ ಚೆಕ್‌ಪೋಸ್ಟ್ ತೆರವಿಗೆ ಆಗ್ರಹ

ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಬಾರ್ಡರ್ ಚೆಕ್‌ಪೋಸ್ಟ್‌ಗಳನ್ನು (ಗಡಿ ತಪಾಸಣಾ ಕೇಂದ್ರ) ಈಗಾಗಲೇ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ತೆಲಂಗಾಣದಲ್ಲಿ ಕೂಡ 6 ತಿಂಗಳ ಹಿಂದೆ ಹಾಗೂ ಆಂಧ್ರಪ್ರದೇಶದಲ್ಲಿ ಒಂದೂವರೆ ವರ್ಷದ ಹಿಂದೆಯೇ ಚೆಕ್‌ಪೋಸ್ಟ್‌ಗಳನ್ನು ಮುಚ್ಚಲಾಗಿದೆ. ಆದರೆ ಕಾಂಗ್ರೆಸ್ ಹಾಗೂ ಟಿವಿಕೆ ಅಧಿಕಾರದಲ್ಲಿರುವ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಮಾತ್ರ ಇನ್ನೂ ಬಾರ್ಡರ್ ಚೆಕ್‌ಪೋಸ್ಟ್‌ಗಳನ್ನು ಉಳಿಸಿಕೊಳ್ಳಲಾಗಿದೆ. ಇದನ್ನು ಕೂಡಲೇ ತೆರವುಗೊಳಿಸಬೇಕು ಎಂದು ಷಣ್ಮುಗಪ್ಪ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಸಾಗಾಟ ಲಾರಿಗಳ ಮುಷ್ಕರ ವಾಪಸ್: ಬಾಕಿ ಹಣ ಬಿಡುಗಡೆ ಘೋಷಣೆ ಬೆನ್ನಲ್ಲೇ ಕ್ರಮ

ಕರ್ನಾಟಕದ ನೂತನ ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ತಕ್ಷಣವೇ ಈ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us