ವಿಜಯಪುರ, ಸೆಪ್ಟೆಂಬರ್ 07: ಸಿಎಂ ಸಿದ್ದರಾಮಯ್ಯರದ್ದು (Siddaramaiah) ಇದೊಂದೇ ಕೇಸ್ ಅಲ್ಲ. ಇನ್ನೂ ಬಹಳ ಇವೆ ಎಂದು ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಹೊಸ ಬಾಂಬ್ ಹಾಕಿದ್ದಾರೆ. ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವ ಕೇಸ್ ಎಂದು ಗೊತ್ತಿಲ್ಲ. ಅವರಿವರು ಕರೆ ಮಾಡಿ ಹೇಳುತ್ತಿದ್ದಾರೆ. ಕೇಸ್ ಆಗುವುದಂತೂ ಸತ್ಯ. ಇದೆಲ್ಲಾ ಬಿಜೆಪಿ ಪ್ಲ್ಯಾನ್ ಅಲ್ಲ. ಅವರ ಜನರೇ ಪ್ಲ್ಯಾನ್ ಹಾಕುತ್ತಾರೆಂದು ಬಾಂಬ್ ಸಿಡಿಸಿದ್ದಾರೆ.
ಇದರಲ್ಲಿ ಬಿಜೆಪಿಯವರ ಪಾತ್ರವಿಲ್ಲ. ಅವರ ಪಾರ್ಟಿಯವರದ್ದೇ ಪಾತ್ರವಿದೆ. ಸಿಎಂ ವಿರುದ್ದದ ಮಾಹಿತಿಯನ್ನು ಕಾಂಗ್ರೆಸ್ನವರೇ ನಮಗೆ ಮಾಹಿತಿ ನೀಡುತ್ತಿದ್ದಾರೆ. ಅವರು ಕೊಡುತ್ತಾರೆಂದು ನಾವು ರಾಜಕೀಯ ಅಸ್ತ್ರವನ್ನಾಗಿ ಬಳಕೆ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಮುಡಾ ಹಗರಣದಲ್ಲಿ ಸಿಎಂ ವಿರುದ್ದ ಕಾಂಗ್ರೆಸ್ ನಾಯಕರು ಹಾಗೂ ಬಿಜೆಪಿಯವರು ಬಳಕೆ ಮಾಡಿಕೊಂಡರು ಎಂಬ ವಿಚಾರವಾಗಿ ಮಾತನಾಡಿದ್ದು, ಮುಡಾದಲ್ಲಿ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದು ನಿಜ. ಹಾಗಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯ ಮಾಡಿದ್ದೇವೆ. ಸಿದ್ದರಾಮಯ್ಯ ಒಳ್ಳೆ ಮನುಷ್ಯ, ಆತನ ಬಗ್ಗೆ ಒಳ್ಳೆಯ ಅಭಿಪ್ರಾಯವಿದೆ ಎಂದಿದ್ದಾರೆ.
ಇದನ್ನೂ ಓದಿ: ಮುಡಾ ಡೈವರ್ಟ್ ಮಾಡಲು ದರ್ಶನ್ ಕೇಸ್ ಮುನ್ನೆಲೆ: ಜೋಶಿ ಆರೋಪಕ್ಕೆ ಡಿಕೆ ಶಿವಕುಮಾರ್ ತಿರುಗೇಟು
ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕ. ಆದರೆ ಈ ವಿಷಯದಲ್ಲಿ ಅವರು ಅಧಿಕಾರಕ್ಕೆ ಬೆನ್ನು ಹತ್ತಿದ್ದಾರೆಂದು ಆರೋಪಿಸಿದ್ದಾರೆ. ಈ ವಿಚಾರದಲ್ಲಿ ನನಗೂ ಬಹಳ ಕೆಡುಕೆನಿಸುತ್ತದೆ. ಹಿಂದೆ ಫೋನ್ ಕದ್ದಾಲಿಕೆ ವಿಚಾರ ಬಂದಾಗ ರಾಮಕೃಷ್ಣ ಹೆಗಡೆ ರಾಜೀನಾಮೆ ನೀಡಿದ್ದರು. ಇಂದಿಗೂ ಅವರ ಹೆಸರಿಗೆ ಮುಂದಿನ 50 ವರ್ಷ ಹೆಗಡೆ ಅವರ ಹೆಸರು ಇರುತ್ತದೆ. ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರೆ ಅವರದ್ದೂ ಹೆಸರು ಇರುತ್ತಿತ್ತು. ಆದರೆ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಲಿಲ್ಲ. ಇವರು ಅಧಿಕಾರಕ್ಕೆ ಬೆನ್ನು ಹತ್ತಿದ್ದಾರೆ. ಯಾವುದೇ ತಪ್ಪಿಲ್ಲಾ ಎಂದು ಸಿಎಂ ಹೇಳುತ್ತಿದ್ದಾರೆ. ನಾಳೆ ಕೋರ್ಟ್ ಹೇಳುತ್ತದೆಯಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ಪೈಪೋಟಿ ವಿಚಾರವಾಗಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಹೆಸರಿದೆ, ಆದರೆ ಅವರನ್ನು ಮೂಲೆಗೆ ಕೂರಿಸಿದ್ದಾರೆ. ಅವರ ಹೆಸರನ್ನು ಯಾರೂ ಪ್ರಸ್ತಾಪಿಸುತ್ತಿಲ್ಲ. ಎಂ.ಬಿ.ಪಾಟೀಲ್ ಅಷ್ಟೇ ಯಾಕೆ ಎಲ್ಲರೂ ಸಿಎಂ ಆಗಬೇಕೆನ್ನುತ್ತಾರೆ. ಇದು ಅವರ ಒಗ್ಗಟ್ಟು ಹೇಗಿದೆ ಎಂದು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದಿದ್ದಾರೆ.
ಸಿಎಂ ಸ್ಥಾನಕ್ಕೆ ಪೈಪೋಟಿ ಅದೆಲ್ಲಾ ನಡೆಯೋದೆ, ಎಲ್ಲರೂ ಸಿಎಂ ಆಗಬೇಕೆಂದು ಹೇಳುತ್ತಾರೆ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕೆಂದು ಪರಮೇಶ್ವರ್ ಟೀಂ ಇದೆ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪರ ಕೂಡ ಒಂದು ತಂಡ ಇದೆ. ಹಿಂದುಳಿದ ವರ್ಗದ ಸತೀಶ್ ಜಾರಕಿಹೊಳಿ ಸಿಎಂ ಆಗಬೇಕೆನ್ನುತ್ತಾರೆ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 9 ರಂದು ಇಂಡಿ ನಗರದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ನಡೆಯಲಿದೆ. 102 ಕಿಲೋ ಮೀಟರ್ ಅಂತರದ ಎನ್ಹೆಚ್ ಹೆದ್ದಾರಿ ಇದು ಇಂಡಿ ತಾಲೂಕಿನ ಮತದಾರರಿಗೆ ಕೇಂದ್ರ ಸರ್ಕಾರದ ಕೊಡುಗೆಯಾಗಿದೆ. 984 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಎರಡು ವರ್ಷಗಳ ಕಾಲಾವಧಿ ಕಾಮಗಾರಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಉಡುಗೊರೆಯಾಗಿ HMT ವಾಚ್ನ್ನೇ ನೀಡಿ: ರಾಜ್ಯದ ಸಂಸದರಿಗೆ ಕುಮಾರಸ್ವಾಮಿ ಕರೆ
ಮಹಾರಾಷ್ಟ್ರದ ಗಡಿ ಭಾಗದಿಂದ ಇಂಡಿ ತಾಲೂಕಿನ ಮಣೂರು ಗ್ರಾಮದ ಮೂಲಕ ಇಂಡಿ ಅಥರ್ಗಾ ನಾಗಠಾಣ ಮಾರ್ಗವಾಗಿ ವಿಜಯಪುರ ಕೂಡುತ್ತದೆ. ಇಂಡಿ ಅಥರ್ಗಾ ನಾಗಠಾಣದಲ್ಲಿ ಬೈ ಪಾಸ್ ಆಗಿ ನಿರ್ಮಾಣ ಆಗಲಿದೆ. ಬಳಿಕ ಸಂಕೇಶ್ವರ ರಾಷ್ಟ್ರೀಯ ಹೆದ್ಧಾರಿಯನ್ನು ಕೂಡುತ್ತದೆ. ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಒತ್ತು ನೀಡಿದೆ. ಕಳೆದ 10 ವರ್ಷದಲ್ಲಿ 1000 ಕಿಲೋ ಮೀಟರ್ ಎನ್ ಎಚ್ ಮಾಡಿದೆ. ಅದಕ್ಕಾಗಿ 5766 ಕೋಟಿ ರೂ. ಕೇಂದ್ರ ನೀಡಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:22 pm, Sat, 7 September 24