ಮುಡಾ ಡೈವರ್ಟ್ ಮಾಡಲು ದರ್ಶನ್ ಕೇಸ್ ಮುನ್ನೆಲೆ: ಜೋಶಿ ಆರೋಪಕ್ಕೆ ಡಿಕೆ ಶಿವಕುಮಾರ್ ತಿರುಗೇಟು
ಮುಡಾ ಮತ್ತು ವಾಲ್ಮೀಕಿ ಹಗರಣ ಚರ್ಚೆ ಆಗಬಾರದೆಂದು ನಟ ದರ್ಶನ್ ಫೋಟೋ ಬಿಡುಗಡೆ ಮಾಡಲಾಗಿದೆ ಎಂಬ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪಕ್ಕೆ ಕಾಂಗ್ರೆಸ್ ನಾಯಕರು ವಾಗ್ದಾಳಿ ಮಾಡಿದ್ದಾರೆ. ಪ್ರಲ್ಹಾದ್ ಜೋಶಿಯ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡ ತಿರುಗೇಟು ನೀಡಿದ್ದಾರೆ.
ಬೆಂಗಳೂರು, ಸೆಪ್ಟೆಂಬರ್ 07: ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣವನ್ನ ಮುಚ್ಚಿಹಾಕೋಕೆ ಕಾಂಗ್ರೆಸ್ ಅತಿದೊಡ್ಡ ಷಡ್ಯಂತ್ರವನ್ನೇ ಮಾಡಿದೆ. ಜೈಲಿನಲ್ಲಿ ದರ್ಶನ್ಗೆ ರಾಜ್ಯಾತಿಥ್ಯದ ಫೋಟೋ ಹೊರಬಿಟ್ಟಿದ್ದೇ ರಾಜ್ಯ ಸರ್ಕಾರ ಎಂಬ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿಕೆ ಸದ್ಯ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಈ ಹೇಳಿಕೆಗೆ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಜೋಶಿ ಆರೋಪಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ತಿರುಗೇಟು ನೀಡಿದ್ದು, ದರ್ಶನ್ ವಿಚಾರ ಹಾಗೂ ಮುಡಾ ಆರೋಪದ ವಿಚಾರ ಬಿಡಿ. ಈಗ ಮಹದಾಯಿ ವಿಚಾರದಲ್ಲಿ ಏನು ತೊಂದರೆಯಾಗಿದೆ. ಮಹದಾಯಿ ಯೋಜನೆಗೆ ಅನುಮತಿ ಕೊಡಿಸ್ರಪ್ಪ ಎಂದಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಮಹದಾಯಿ ಯೋಜನೆ ಜಾರಿ ಮಾಡಲು ದುಡ್ಡು ಕೊಡಿಸ್ರಪ್ಪ. ಗಣೇಶ ಚತುರ್ಥಿ ಹಬ್ಬದ ದಿನವೇ ವಿಘ್ನ ನಿವಾರಣೆ ಆಗಲಿ. ಇಲ್ಲಿಂದಲೇ ದೀರ್ಘದಂಡ ನಮಸ್ಕಾರ ಹಾಕುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.
ಸುಮ್ಮನೆ ಈ ರೀತಿ ಮಾತನಾಡುವುದು ಸರಿಯಲ್ಲ: ಎಂ.ಬಿ.ಪಾಟೀಲ್
ಈ ವಿಚಾರವಾಗಿ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದು, ಕೊಲೆ ಆರೋಪಿ ದರ್ಶನ್ ರಾಜಾತಿಥ್ಯ ಗಂಭೀರವಾದದ್ದು. ಅದಕ್ಕಾಗಿ ದರ್ಶನ್ ಮತ್ತು ಟೀಂ ಬೇರೆ ಜೈಲಿಗೆ ಶಿಫ್ಟ್ ಮಾಡಿದ್ದೇವೆ. ಮುಡಾ ಕೇಸ್ ಡೈವರ್ಟ್ ಮಾಡುವುದಕ್ಕೆ ಅದರಲ್ಲಿ ಏನಾಗಿದೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಜೈಲಿನಲ್ಲಿ ದರ್ಶನ್ಗೆ ರಾಜ್ಯಾತಿಥ್ಯ: ಫೋಟೋ ಹೊರಬಿಟ್ಟಿದ್ದೇ ರಾಜ್ಯ ಸರ್ಕಾರ ಎಂದು ಜೋಶಿ
ನಾನು ಗೃಹ ಸಚಿವನಾಗಿದ್ದೆ, ಜೈಲಲ್ಲಿ ಇಂಥ ವ್ಯವಸ್ಥೆ ನೋಡಿದ್ದೇನೆ. ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಜೋಶಿ ತಿಳಿದವರು, ಸುಮ್ಮನೆ ಈ ರೀತಿ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.
ಪ್ರಹ್ಲಾದ್ ಜೋಶಿ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿ
ವಿಷಯ ಡೈವರ್ಟ್ ಮಾಡೋದಿದ್ರೆ ಅವರ ನಾಯಕರ ಸಿಡಿ ಇತ್ತಲ್ಲ? ಇಂಜೆಕ್ಷನ್ ಆರ್ಡರ್ ತೆಗೆದುಕೊಂಡಿದ್ದಾರಲ್ಲಾ, ಯಾರು ಮಾಡಿಸಿದ್ದು? ಜೋಶಿ ರಾಜ್ಯದ ವಿಚಾರವಾಗಿ ಮಾತನಾಡಿದ್ದನ್ನು ನಾನು ನೋಡಿಲ್ಲ. ಮಹದಾಯಿ ವಿಚಾರದಲ್ಲಿ ನಮಗೆ ಇನ್ನೂ ಅನುಮತಿಯೇ ಸಿಕ್ಕಿಲ್ಲ. ಆ ಬಗ್ಗೆ ಯಾವತ್ತಾದ್ರೂ ಕೇಂದ್ರ ಸಚಿವ ಜೋಶಿ ಮಾತನಾಡುತ್ತಾರಾ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಅಧಿಕಾರಿಗಳನ್ನು ‘ಸರ್’ ಎಂದು ಸಂಬೋಧಿಸಿದ ಸಚಿವರು: ಸಿಟ್ಟಾದ ಸಿಎಂ ಸಿದ್ದರಾಮಯ್ಯ!
ಬಾಲಿಶ ಹೇಳಿಕೆ ಕೊಡೋದು ಬಿಟ್ಟು ಕರ್ನಾಟಕದ ಬಗ್ಗೆ ಗಮನ ಕೊಡಿ. ಮೋದಿ ಸರ್ಕಾರ ಬಂದು 10 ವರ್ಷ ಆಯ್ತು ರಾಜ್ಯಕ್ಕೆ ಏನ್ ಸಿಕ್ಕಿದೆ? ಜೋಶಿ ಮಂತ್ರಿಯಾಗಿ 10 ಕೆಲಸ ಮಾಡಿದ್ದೇವೆ ಅಂತಾ ಹೇಳಿದ್ದಾರಾ? ಇಲ್ಲಸಲ್ಲದ ಆರೋಪ ಮಾಡೋದು ಸಚಿವ ಜೋಶಿಗೆ ಹವ್ಯಾಸ ಆಗಿದೆ ಎಂದು ವಾಗ್ದಾಳಿ ಮಾಡಿದ್ದಾರೆ.
ಕೆ.ಹೆಚ್.ಮುನಿಯಪ್ಪ ಹೇಳಿದ್ದಿಷ್ಟು
ಕೆ.ಹೆಚ್.ಮುನಿಯಪ್ಪ ಪ್ರತಿಕ್ರಿಯಿಸಿ, ಅವರ ಅನುಕೂಲವಾಗಿ ಪ್ರಲ್ಹಾದ್ ಜೋಶಿ ಮಾತನಾಡುತ್ತಾರೆ. ಪೊಲೀಸ್ ಅಧಿಕಾರಿಗಳಿಗೆ ವಿಚಾರಣೆ ಮಾಡುವುದಕ್ಕೆ ಹೇಳಿದ್ದೇವೆ. ಸರ್ಕಾರ ದರ್ಶನ್ ಫೋಟೋ ಬಿಡುಗಡೆ ಮಾಡುವುದಿಲ್ಲ. ಈ ವಿಚಾರದಲ್ಲಿ ಸರ್ಕಾರ, ಸಿಎಂ ಸಿದ್ದರಾಮಯ್ಯ ಪಾತ್ರ ಇಲ್ಲ. ಸಿದ್ದರಾಮಯ್ಯ ವಿರುದ್ಧ ಯಾವುದೇ ಆರೋಪ ಇಲ್ಲ. ಬೇಕಂತಲೇ ಆರೋಪ ಸೃಷ್ಟಿ ಮಾಡಿ ಏನೇನೋ ಮಾಡ್ತಿದ್ದಾರೆ ಎಂದಿದ್ದಾರೆ.
ವರದಿ: ಈರಣ್ಣ ಬಸವ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.