ಆಯುರ್ವೇದ ಔಷಧಿ ಹೆಸರಲ್ಲಿ ಗೋಧಿ ಹಿಟ್ಟಿನ ಮಾರಾಟ: ದೆಹಲಿ ಮೂಲದ ಆರೋಪಿ ಅರೆಸ್ಟ್
ತುಮಕೂರು ಪೊಲೀಸರು ನಕಲಿ ಆಯುರ್ವೇದ ಔಷಧ ಹಗರಣವನ್ನು ಬಯಲಿಗೆಳೆದಿದ್ದಾರೆ. ಗೋಧಿ ಹಿಟ್ಟನ್ನು ತೂಕ ಇಳಿಕೆ ಪುಡಿ ಎಂದು ಮಾರಾಟ ಮಾಡುತ್ತಿದ್ದ ದೆಹಲಿ ಮೂಲದ ಆರೋಪಿ ಬಂಧನವಾಗಿದ್ದು, ಆನ್‌ಲೈನ್ ಮೂಲಕ ನಕಲಿ ಉತ್ಪನ್ನಗಳನ್ನು ಮಾರಿ ಗ್ರಾಹಕರ ಆರೋಗ್ಯಕ್ಕೆ ಅಪಾಯ ತರುವ ಕೆಲಸವನ್ನು ಮಾಡಲಾಗುತ್ತಿತ್ತು. ಹಲವು ಕಂಪನಿಗಳ ಹೆಸರಲ್ಲಿ ಈ ದಂಧೆ ನಡೆಯುತ್ತಿತ್ತು ಎನ್ನಲಾಗಿದ್ದು, ದೊಡ್ಡ ಪ್ರಮಾಣದ ನಕಲಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ತುಮಕೂರು, ಏಪ್ರಿಲ್ 02: ಡುಪ್ಲಿಕೇಟ್ ಬ್ರ್ಯಾಂಡಿಂಗ್ ಮಾಡಿ ತೂಕ ಇಳಿಕೆ ಪೌಡರ್ ಮತ್ತು ಇತರ ಉತ್ಪನ್ನಗಳ ಹೆಸರಲ್ಲಿ ನಕಲಿ ಆಯುರ್ವೇದ ಔಷಧ ತಯಾರಿಸಿ ಮಾರಾಟ ಮಾಡುತ್ತಿದ್ದ ದೊಡ್ಡ ರಾಕೆಟ್‌ನ್ನು ತುಮಕೂರು ಪೊಲೀಸರು ಬಯಲಿಗೆಳೆದಿದ್ದಾರೆ. ಪ್ರಕರಣ ಸಂಬಂಧ ದೆಹಲಿ ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಸಂಸ್ಥೆಯೊಂದರ ಮಾಲಕರು ತಮ್ಮ ಟ್ರೇಡ್‌ಮಾರ್ಕ್ ದುರುಪಯೋಗವಾಗಿದೆ ಎಂದು 2025ರ ಆಗಸ್ಟ್ 14ರಂದು ನೀಡಿದ್ದ ದೂರಿನ ಅನ್ವಯ ಕಾರ್ಯಾಚರಣೆ ನಡೆಸಲಾಗಿತ್ತು ಎನ್ನಲಾಗಿದೆ.
ಆರೋಪಿಗಳು ‘RK ಟ್ರೇಡರ್ಸ್’ ಹೆಸರಿನಲ್ಲಿ ಆನ್‌ಲೈನ್ ಮೂಲಕ ಗ್ರಾಹಕರ ಆರೋಗ್ಯಕ್ಕೆ, ವಿಶೇಷವಾಗಿ ಯುವಕರಿಗೆ ಅಪಾಯ ಉಂಟುಮಾಡಬಲ್ಲ ನಕಲಿ ತೂಕ ಇಳಿಕೆ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದರು. ಈ ಸಂಬಂಧ ಮಾರ್ಚ್ 27ರಂದು ದೆಹಲಿಯ ಶಾಲಿಮಾರ್ ಬಾಗ್ ಪ್ರದೇಶದಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಿದ ಪೊಲೀಸರು, ದೊಡ್ಡ ಪ್ರಮಾಣದ ನಕಲಿ ಉತ್ಪನ್ನಗಳು, ಆಯುರ್ವೇದ ಟ್ಯಾಬ್ಲೆಟ್‌ಗಳು, ಕಾಸ್ಮೆಟಿಕ್ ಕ್ರೀಮ್‌ಗಳು ಮತ್ತು ಪೌಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಯಾವುದೇ ಅನುಮತಿ ಇಲ್ಲದೆ ಈ ಉತ್ಪನ್ನಗಳನ್ನು ತಯಾರಿಸಲಾಗುತ್ತಿತ್ತು. ಕೆಲವೊಮ್ಮೆ ಸಾಮಾನ್ಯ ಗೋಧಿ ಹಿಟ್ಟನ್ನು ಸ್ಲಿಂ ಪೌಡರ್ ಎಂದು ಪ್ಯಾಕ್ ಮಾಡಿ ಮಾರಾಟ ಮಾಡಲಾಗುತ್ತಿತ್ತು ಎಂಬ ವಿಚಾರವೂ ಈ ವೇಳೆ ಬಯಲಾಗಿದೆ.
ಇದನ್ನೂ ಓದಿ: 3ನೇ ಮದ್ವೆ ಆಸೆಗೆ 2ನೇ ಗಂಡನಿಗೆ ಪರಲೋಕದ ದಾರಿ; ತನಿಖೆಯಲ್ಲಿ ಬಯಲಾಯ್ತು ಖತರ್ನಾಕ್ ಸ್ಟೋರಿ
ಪ್ರಕರಣದಲ್ಲಿ ಪ್ರಮುಖ ಆರೋಪಿಯ ಪುತ್ರರೂ ಶಾಮೀಲಾಗಿದ್ದು, ಸುಮಾರು ಒಂದೂವರೆ ವರ್ಷಗಳಿಂದ RK ಟ್ರೇಡರ್ಸ್, MK ಟ್ರೇಡರ್ಸ್ ಮತ್ತು MHK ಟ್ರೇಡರ್ಸ್ ಎಂಬ ವಿವಿಧ ಕಂಪನಿಗಳ ಹೆಸರಿನಲ್ಲಿ ಈ ದಂಧೆ ನಡೆಸುತ್ತಿದ್ದರು. ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ವಿ. ಅಶೋಕ್ ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿದ ವಿಶೇಷ ತಂಡ, ಮುಖ್ಯ ಆರೋಪಿ 56 ವರ್ಷದ ರಾಜೀವ್ ಖನ್ನಾನನ್ನು ಮಾರ್ಚ್ 28ರಂದು ದೆಹಲಿಯಲ್ಲಿ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿತ್ತು. ಬಳಿಕ ಆತನನ್ನು ಕರ್ನಾಟಕಕ್ಕೆ ಕರೆತಂದು ಶಿರಾ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಪೊಲೀಸ್ ವಶಕ್ಕೆ ಪಡೆಯಲಾಗಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:08 pm, Thu, 2 April 26
