ರಾಜಣ್ಣ ನಿವಾಸದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭೋಜನಕೂಟ: ಮತ್ತೆ ಅಹಿಂದ ಸಂಘಟನೆಯ ಸುಳಿವು!
ತುಮಕೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾಜಿ ಸಚಿವ ರಾಜಣ್ಣ ನಿವಾಸದಲ್ಲಿ ಭೋಜನ ಕೂಟದಲ್ಲಿ ಪಾಲ್ಗೊಂಡಿರುವುದು ಈಗ ರಾಜಕೀಯ ವಲಯದಲ್ಲಿ ಗುಸುಗುಸು ಹರಡಲು ಕಾರಣವಾಗಿದೆ. ಈ ಸಂದರ್ಭದಲ್ಲಿ ಅಹಿಂದ ಸಂಘಟನೆ, ರಾಜಣ್ಣನವರ ಸಚಿವ ಸ್ಥಾನ ಹಾಗೂ ಅಪೆಕ್ಸ್ ಅಧ್ಯಕ್ಷ ಸ್ಥಾನ ಕುರಿತು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಗಹನ ಚರ್ಚೆ ನಡೆದಿದೆ ಎಂಬುದು ಮೂಲಗಳಿಂದ ತಿಳಿದುಬಂದಿದೆ.

ತುಮಕೂರು, ಸೆಪ್ಟೆಂಬರ್ 19: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ವಿವಿಧ ಕಾರ್ಯಕ್ರಮಗಳ ನಿಮಿತ್ತ ತುಮಕೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಜಿ ಸಚಿವ ಕೆಎನ್ ರಾಜಣ್ಣ ಅವರ ಕ್ಯಾತಸಂದ್ರ ನಿವಾಸದಲ್ಲಿ ಔತಣಕೂಟದಲ್ಲಿ ಭಾಗವಹಿಸಿದರು. ಈ ಭೋಜನಕೂಟವು ಕೇವಲ ಸೌಜನ್ಯದ ಭೇಟಿ ಎಂದು ಹೇಳಲಾಗಿದ್ದರೂ, ಅಷ್ಟಕ್ಕೇ ಸೀಮಿತವಾಗಿರದೆ ರಾಜಕೀಯ ವಲಯದಲ್ಲಿ ಹಲವು ಚರ್ಚೆಗಳಿಗೆ ವೇದಿಕೆ ಕಲ್ಪಿಸಿದೆ. ರಾಜಣ್ಣ ಅವರೊಂದಿಗೆ ಮತ್ತು ಅಲ್ಲಿ ಉಪಸ್ಥಿತರಿದ್ದ ಇತರ ಪ್ರಮುಖ ನಾಯಕರೊಂದಿಗೆ ಸಿದ್ದರಾಮಯ್ಯ ಅವರು ರಾಜ್ಯದ ಪ್ರಸ್ತುತ ರಾಜಕೀಯ ವಿದ್ಯಮಾನಗಳು ಹಾಗೂ ಭವಿಷ್ಯದ ರಾಜಕೀಯ ತಂತ್ರಗಾರಿಕೆಗಳ ಕುರಿತು ಗಹನ ಚರ್ಚೆ ನಡೆಸಿದ್ದಾರೆ ಎಂಬುದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಅಹಿಂದ ನಾಯಕರ ಜತೆ ಸಿದ್ದರಾಮಯ್ಯ, ರಾಜಣ್ಣ ಚರ್ಚೆ
ಭೋಜನದ ನಂತರ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ಈ ಮಾತುಕತೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಚರ್ಚೆಯ ಪ್ರಮುಖ ಅಂಶಗಳಲ್ಲಿ, ರಾಜಣ್ಣನವರಿಗೆ ಇತ್ತೀಚೆಗೆ ತಪ್ಪಿಹೋದ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಕುರಿತು ಪ್ರಸ್ತಾಪವಾಗಿದೆ. ಸಿದ್ದರಾಮಯ್ಯ ಅವರು ಈ ಹಿಂದೆ ಈ ವಿಚಾರದಲ್ಲಿ ರಾಜಣ್ಣನವರಿಗೆ ಬೆಂಬಲ ನೀಡಿದ್ದ ಬಗ್ಗೆಯೂ ಚರ್ಚೆ ನಡೆದಿದೆ. ಇದರೊಂದಿಗೆ, ರಾಜಣ್ಣನವರಿಗೆ ಸಚಿವ ಸ್ಥಾನ ನೀಡುವಂತೆ ಅಲ್ಲಿದ್ದ ಇತರ ಮುಖಂಡರು ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ. ಪಾವಗಡ ಶಾಸಕ ವೆಂಕಟೇಶ್ ಸೇರಿದಂತೆ ಹಲವು ನಾಯಕರು ಈ ಸಭೆಯಲ್ಲಿ ಭಾಗಿಯಾಗಿದ್ದರು.
ಆದರೆ, ಚರ್ಚೆ ವೇಳೆ ಪ್ರಮುಖವಾಗಿ ಪ್ರಸ್ತಾಪವಾಗಿದ್ದು ಅಹಿಂದ ಸಂಘಟನೆಯ ಮರುಸ್ಥಾಪನೆಯ ಬಗ್ಗೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅಹಿಂದ ವರ್ಗಗಳ ಪರವಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರು. ಇದೀಗ ಮತ್ತೆ ಅಹಿಂದ ಸಂಘಟನೆಯನ್ನು ಪುನರುಜ್ಜೀವನಗೊಳಿಸುವ ಕುರಿತು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಅಹಿಂದ ಮರು ಸಂಘಟನೆ ಚರ್ಚೆ ವೇಳೆ ಏನಂದರು ಸಿದ್ದರಾಮಯ್ಯ?
ಈ ಬಗ್ಗೆ ಸಿದ್ದರಾಮಯ್ಯ ಅವರು ನೇರವಾಗಿ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ. ಆದರೆ, ‘ಸಮಯ ಬಂದಾಗ ಜನಾಭಿಪ್ರಾಯವನ್ನು ನೋಡಿ ಅಹಿಂದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಸೂಚ್ಯವಾಗಿ ಹೇಳಿದ್ದಾರೆ. ಇಡೀ ಚರ್ಚೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಹೆಚ್ಚು ಮಾತನಾಡದೆ, ಇತರರ ಮಾತುಗಳನ್ನು ಆಲಿಸುತ್ತಾ ಮೌನವಾಗಿದ್ದರು ಎಂದು ಮೂಲಗಳು ತಿಳಿಸಿವೆ. ಸಚಿವ ಸ್ಥಾನದ ಬೇಡಿಕೆ ಮತ್ತು ಇತರ ರಾಜಕೀಯ ವಿಷಯಗಳಿಗೆ ‘ನೋಡೋಣ’ ಎಂಬ ಏಕೈಕ ಪ್ರತಿಕ್ರಿಯೆ ನೀಡಿದ್ದಾರೆ. ಇದು, ಸಿದ್ದರಾಮಯ್ಯ ಅವರು ಮುಂದಿನ ದಿನಗಳಲ್ಲಿ ಯಾವ ರಾಜಕೀಯ ಹೆಜ್ಜೆ ಇಡಲಿದ್ದಾರೆ ಎಂಬ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ: ಕ್ಷೇತ್ರ ಮರುವಿಂಗಡಣೆಯಾದ್ರೆ ಮಧುಗಿರಿಯಿಂದ ಲೋಕಸಭೆಗೆ ಸ್ಪರ್ಧೆ ಪಕ್ಕಾ, ಮಹಿಳಾ ಮೀಸಲಾತಿಗೆ ಬೆಂಬಲ: ರಾಜಣ್ಣ ಖಡಕ್ ಮಾತು
ತುಮಕೂರಿನಲ್ಲಿ ನಡೆದ ಈ ಭೇಟಿ, ಭೋಜನದ ನೆಪದಲ್ಲಿ ರಾಜಕೀಯ ಕಾರ್ಯಸೂಚಿಯೊಂದನ್ನು ರೂಪಿಸುವ ಪ್ರಯತ್ನವಾಗಿ ಕಂಡುಬರುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




