SIR ಕರ್ತವ್ಯಕ್ಕೆ ತೆರಳುತ್ತಿದ್ದಾಗ ಅಪಘಾತದಲ್ಲಿ ಅಧಿಕಾರಿ ಸಾವು: ಡಿಸಿ ಕಚೇರಿ ಮುಂದೆ ಅಹೋರಾತ್ರಿ ಧರಣಿ!
ತುಮಕೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಕಂದಾಯ ಇಲಾಖೆ ನೌಕರರ ಅಹೋರಾತ್ರಿ ಧರಣಿ ತೀವ್ರಗೊಂಡಿದೆ. ಮೇಲಧಿಕಾರಿಗಳ ಕಿರುಕುಳ ಮತ್ತು SIR ಕರ್ತವ್ಯದ ಒತ್ತಡದಿಂದಾಗಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಗ್ರಾಮ ಆಡಳಿತ ಅಧಿಕಾರಿ (VAO) ಭುವನಾ ಸಾವಿಗೆ ನ್ಯಾಯ ಸಿಗಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನೌಕರರು ಪಟ್ಟು ಹಿಡಿದಿದ್ದಾರೆ. ಜಿಲ್ಲಾಧಿಕಾರಿಗಳು ನಡೆಸಿದ ತಡರಾತ್ರಿಯ ಸಂಧಾನ ಮಾತುಕತೆ ವಿಫಲವಾಗಿದ್ದು, ಪ್ರತಿಭಟನೆ ಮುಂದುವರಿದಿದೆ.

ಮುಖ್ಯಾಂಶಗಳು
- ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ತುಮಕೂರಿನಲ್ಲಿ ಕಂದಾಯ ನೌಕರರ ತೀವ್ರ ಅಹೋರಾತ್ರಿ ಧರಣಿ.
- SIR ಕರ್ತವ್ಯದ ಒತ್ತಡಕ್ಕೆ ಸಿಲುಕಿ ರಸ್ತೆ ಅಪಘಾತದಲ್ಲಿ ವಿಎಒ ಭುವನಾ ಸಾವು.
- ತಡರಾತ್ರಿ ಡಿಸಿ ನಡೆಸಿದ ಸಂಧಾನ ವಿಫಲ, ಜಿಲ್ಲಾಧಿಕಾರಿಗಳ ವರ್ಗಾವಣೆಗೆ ನೌಕರರ ಪಟ್ಟು.
ತುಮಕೂರು, ಜುಲೈ 05: ಕರ್ತವ್ಯದ ಒತ್ತಡ ಮತ್ತು ಮೇಲಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ತುಮಕೂರು ಜಿಲ್ಲಾಧಿಕಾರಿ (DC) ಕಚೇರಿ ಮುಂದೆ ಕಂದಾಯ ಇಲಾಖೆ ನೌಕರರು ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಇತ್ತೀಚೆಗಷ್ಟೇ ಜಾರಿಗೆ ಬಂದಿರುವ ಎಸ್‌ಐಆರ್ (SIR) ಕರ್ತವ್ಯದ ನಿಮಿತ್ತ ಮುಂಜಾನೆ ಗಡಿಬಿಡಿಯಲ್ಲಿ ತೆರಳುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಗ್ರಾಮ ಆಡಳಿತ ಅಧಿಕಾರಿ (VAO) ಭುವನಾ ಮೃತಪಟ್ಟಿದ್ದರು. ಆಕೆಯ ಸಾವಿಗೆ ನ್ಯಾಯ ಸಿಗಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನೌಕರರು ಪ್ರತಿಭಟನೆ ಮುಂದುವರಿಸಿದ್ದಾರೆ.
ತಡರಾತ್ರಿ ಸಂಧಾನ ವಿಫಲ: ಮುಂದುವರಿದ ಅಹೋರಾತ್ರಿ ಧರಣಿ
ನಿನ್ನೆ ರಾತ್ರಿ ಇಡೀ ಜಿಲ್ಲಾಧಿಕಾರಿ ಕಚೇರಿ ಮುಂದೆ ನೌಕರರು ಅಹೋರಾತ್ರಿ ಧರಣಿ ನಡೆಸಿದ್ದಾರೆ. ತಡರಾತ್ರಿ 11:15 ರ ಸುಮಾರಿಗೆ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಸುಮಾರು ಒಂದೂವರೆ ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದರಾದರೂ, ಸಂಧಾನ ಯಶಸ್ವಿಯಾಗಲಿಲ್ಲ. ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಕಂದಾಯ ನೌಕರರ ಸಂಘ ಪಟ್ಟು ಹಿಡಿದಿದೆ. ಇಂದು ಬೆಳಗ್ಗೆ 9 ಗಂಟೆಯ ನಂತರ ಪ್ರತಿಭಟನೆಯ ಧ್ವನಿ ಮತ್ತಷ್ಟು ತೀವ್ರಗೊಳ್ಳುವ ಮುನ್ಸೂಚನೆ ಸಿಕ್ಕಿದೆ.
ಮೇಲಧಿಕಾರಿಗಳ ಒತ್ತಡವೇ ಸಾವಿಗೆ ಕಾರಣ ಎಂದು ಆರೋಪ
ತುಮಕೂರು ನಾಡಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಭುವನಾ ಅವರಿಗೆ ಮೇಲಧಿಕಾರಿಗಳು ತೀವ್ರ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಸಿಬ್ಬಂದಿ ಗಂಭೀರವಾಗಿ ಆರೋಪಿಸಿದ್ದಾರೆ. ಮುಂಜಾನೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿರಂತರವಾಗಿ ಕೆಲಸ ಮಾಡಿಸಲಾಗುತ್ತಿತ್ತು. ಅಪಘಾತ ಸಂಭವಿಸಿದ ದಿನ ಮುಂಜಾನೆ 6:30ರೊಳಗೆ ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗಬೇಕು ಎಂದು ಮೇಲಧಿಕಾರಿಗಳು ಕಠಿಣ ಸೂಚನೆ ನೀಡಿದ್ದರು. ಮೇಲಧಿಕಾರಿಗಳ ಒತ್ತಡಕ್ಕೆ ಹೆದರಿ ಗಡಿಬಿಡಿಯಲ್ಲಿ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಗೂಳೂರು ಬಳಿ ಭೀಕರ ಅಪಘಾತ ಸಂಭವಿಸಿ ಭುವನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಆರೋಪಿಸಲಾಗಿದೆ.
ಡಿಸಿ, ಎಡಿಸಿ, ಎಸಿ ಹಾಗೂ ತಹಶೀಲ್ದಾರ್ ಅವರುಗಳು ನೀಡುತ್ತಿದ್ದ ಅತಿಯಾದ ಕೆಲಸದ ಒತ್ತಡವೇ ಈ ದುರಂತಕ್ಕೆ ನೇರ ಕಾರಣ ಎಂದು ನೌಕರರು ಆಕ್ರೋಶ ಹೊರಹಾಕಿದ್ದು, ಜಿಲ್ಲಾಧಿಕಾರಿಗಳ ವರ್ಗಾವಣೆಗೂ ಆಗ್ರಹಿಸಿದ್ದಾರೆ.
ಇದನ್ನೂ ಓದಿ SIR ಕರ್ತವ್ಯಕ್ಕೆ ತೆರಳುವಾಗ ಭೀಕರ ಅಪಘಾತ: ಚಿಕಿತ್ಸೆ ಫಲಿಸದೆ ಭುವನಾ ಸಾವು; ಸಿಬ್ಬಂದಿಯಿಂದ ಪ್ರತಿಭಟನೆ
ವರದನಾಯಕನಹಳ್ಳಿಯಲ್ಲಿ ಇಂದು ಅಂತ್ಯಸಂಸ್ಕಾರ
ಇತ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ವರದನಾಯಕನಹಳ್ಳಿಯಲ್ಲಿರುವ ಭುವನಾ ಅವರ ನಿವಾಸದ ಬಳಿ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಪ್ರತಿದಿನ ಮನೆಯಿಂದಲೇ ತುಮಕೂರಿಗೆ ಕೆಲಸಕ್ಕೆ ಓಡಾಡುತ್ತಿದ್ದ ಭುವನಾ, ಎಸ್‌ಐಆರ್ (SIR) ಕರ್ತವ್ಯದ ಒತ್ತಡದಿಂದ ತೀವ್ರ ಕಂಗೆಟ್ಟಿದ್ದರು ಎಂದು ಅವರ ಚಿಕ್ಕಪ್ಪ ರಮೇಶ್ ತಿಳಿಸಿದ್ದಾರೆ. ತಂದೆ ರಮೇಶ್ ಹಾಗೂ ತಾಯಿ ಸರೋಜಾ ಅವರ ಆಸರೆಯಾಗಿದ್ದ ಯುವ ಅಧಿಕಾರಿಯ ಅಗಲಿಕೆ ಇಡೀ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಇಂದು ಬೆಳಗ್ಗೆ 10:30ರ ಸುಮಾರಿಗೆ ವರದನಾಯಕನಹಳ್ಳಿಯ ಸ್ವಗ್ರಾಮದಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಸಕಲ ವಿಧಿವಿಧಾನಗಳನ್ನು ನೆರವೇರಿಸಿ, ಅವರ ತೋಟದಲ್ಲೇ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



