‘ಪ್ರಾಣ ಕೊಟ್ಟೇವು, ಆದರೆ ಜಮೀನು ಬಿಡಲ್ಲ’: ಹೆಚ್ಎಎಲ್ಗಾಗಿ 600 ಎಕರೆ ಭೂಸ್ವಾಧೀನಕ್ಕೆ ರೈತರ ವಿರೋಧ
ತುಮಕೂರಿನ ಗುಬ್ಬಿ ತಾಲೂಕಿನಲ್ಲಿ ಹೆಚ್‌ಎಎಲ್ ವಿಸ್ತರಣೆಗಾಗಿ 600 ಎಕರೆ ಫಲವತ್ತಾದ ಜಮೀನು ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವನೆಗೆ ಐದು ಗ್ರಾಮಗಳ ರೈತರು ತೀವ್ರ ವಿರೋಧ ವ್ಯಕ್ತಪಡಿಸಿ, ಕೆಐಎಡಿಬಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ಐದು ಗ್ರಾಮಗಳ ರೈತರು ಭೂಸ್ವಾಧೀನಕ್ಕೆ ತೀವ್ರ ವಿರೋಧ ಕೇಳಿಬಂದಿದ್ದು, ಫಲವತ್ತಾದ ಜಮೀನಿನ ಬದಲು ಸಾಮಾಜಿಕ ಅರಣ್ಯ, ಗೋಮಾಳ ಹಾಗೂ ಹುಲ್ಲುಬಂದಿ ಭೂಮಿಯನ್ನು ಬಳಸಿಕೊಳ್ಳುವಂತೆ ರೈತರು ಒತ್ತಾಯಿಸಿದ್ದಾರೆ.

ಮುಖ್ಯಾಂಶಗಳು
- ಹೆಚ್‌ಎಎಲ್ ವಿಸ್ತರಣೆಗೆ 600 ಎಕರೆ ಜಮೀನು ಸ್ವಾಧೀನಕ್ಕೆ ವಿರೋಧ
- ಫಲವತ್ತಾದ ಕೃಷಿ ಭೂಮಿಯನ್ನು ನೀಡಲ್ಲ ಎಂದಿರುವ ಅನ್ನದಾತರು
- ಕೆಐಎಡಿಬಿ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ ರೈತರು
ತುಮಕೂರು, ಜುಲೈ 22: ಬಿಡದಿ ಟೌನ್ಶಿಪ್ಗಾಗಿ ಭೂಸ್ವಾಧೀನ ವಿಚಾರ ಭಾರಿ ಹೋರಾಟಕ್ಕೆ ನಾಂದಿ ಹಾಡಿರುವ ನಡುವೆಯೇ ಇತ್ತ ತುಮಕೂರಲ್ಲೂ (Tumakuru) ತಮ್ಮ ಜಾಗಕ್ಕಾಗಿ ರೈತರು ಬೀದಿಗಿಳಿದಿರುವ ಘಟನೆ ನಡೆದಿದೆ. ಗುಬ್ಬಿ ತಾಲೂಕಿನಲ್ಲಿರು ಹೆಚ್‌ಎಎಲ್ ಘಟಕದ ವಿಸ್ತರಣೆಗೆ 600 ಎಕರೆ ಜಮೀನು ನೀಡುವ ಪ್ರಸ್ತಾವನೆಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಕೆಐಎಡಿಬಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಪ್ರಾಣ ಕೊಟ್ಟೇವು, ಆದರೆ ಜಮೀನು ಬಿಡಲ್ಲ ಎಂದು ಐದು ಗ್ರಾಮಗಳ ರೈತರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಫಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ ಆಕ್ಷೇಪ
ಗುಬ್ಬಿ ತಾಲೂಕಿನ ಬಿದರೆಹಳ್ಳಿ ಕಾವಲ್‌ನಲ್ಲಿ ಇರುವ ಹೆಚ್‌ಎಎಲ್ ವಿಸ್ತರಣೆಗೆ ಮತ್ತೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿರುವ ಬೆನ್ನಲ್ಲೇ ರೈತರ ಆಕ್ರೋಶ ಭುಗಿಲೆದ್ದಿದೆ. ಈಗಾಗಲೇ ಸುಮಾರು ಸಾವಿರ ಎಕರೆ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೆಚ್‌ಎಎಲ್, ಈಗ ಮತ್ತೂ 600 ಎಕರೆ ಭೂಮಿಗಾಗಿ ಸರ್ಕಾರದ ಮೊರೆ ಹೋಗಿದೆ. ಆದರೆ ತಮ್ಮ ಫಲವತ್ತಾದ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ರೈತರು ಸ್ಪಷ್ಟಪಡಿಸಿದ್ದಾರೆ. ಕೆಐಎಡಿಬಿ ಗುರುತಿಸಿರುವ ಜಾಗದಲ್ಲಿ ತೆಂಗು, ಅಡಿಕೆ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ರೈತರು ಜೀವನ ಸಾಗಿಸುತ್ತಿದ್ದಾರೆ. ನಮ್ಮ ಮುಂದಿನ ಪೀಳಿಗೆಯ ಭವಿಷ್ಯವೇ ಈ ಭೂಮಿ ಎಂಬುದು ಅನ್ನದಾತ ಮಾತು.
ಇದನ್ನೂ ಓದಿ: ಸೋಮಣ್ಣ ಹೇಳಿಕೆಗೆ ದನಿಗೂಡಿಸಿದ ಡಿಸಿಎಂ ಪರಮೇಶ್ವರ್; ತುಮಕೂರಲ್ಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಆಗ್ರಹ
ಭರವಸೆ ಉಲ್ಲಂಘಿಸಿರುವ ಆರೋಪ
ಸೋಪನಹಳ್ಳಿ, ಯಲ್ಲಾಪುರ, ತಿಮ್ಲಪಾಳ್ಯ, ಬಿದರೆಹಳ್ಳಿ ಕಾವಲ್ ಸೇರಿದಂತೆ ಐದು ಗ್ರಾಮಗಳ ರೈತರಿಂದ ಭೂಸ್ವಾಧೀನಕ್ಕೆ ತೀವ್ರ ವಿರೋಧ ಕೇಳಿಬಂದಿದ್ದು, ಫಲವತ್ತಾದ ಜಮೀನಿನ ಬದಲು ಸಾಮಾಜಿಕ ಅರಣ್ಯ, ಗೋಮಾಳ ಹಾಗೂ ಹುಲ್ಲುಬಂದಿ ಭೂಮಿಯನ್ನು ಬಳಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ. ಮೊದಲ ಹಂತದಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಶಾಶ್ವತ ಉದ್ಯೋಗ ನೀಡದೆ, ಗುತ್ತಿಗೆ ಆಧಾರದಲ್ಲಿ ಮಾತ್ರ ಡಿ ದರ್ಜೆ ಕೆಲಸ ನೀಡಿ ಭರವಸೆ ಉಲ್ಲಂಘಿಸಲಾಗಿದೆ ಎಂದೂ ಪ್ರತಿಭಟನಾಕಾರರು ದೂರಿದ್ದಾರೆ. ಕಾಂಗ್ರೆಸ್ ಮುಖಂಡ ಮುರಳೀಧರ ಹಾಲಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಶಾಸಕ ಎಸ್.ಆರ್. ಶ್ರೀನಿವಾಸ್ ಅವರ ಪತ್ನಿ ಆರತಿ ಕೂಡ ರೈತರ ಪರವಾಗಿ ಧ್ವನಿ ಎತ್ತಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:40 pm, Wed, 22 July 26



