TV9 Kannada News Highlights: ಎರಡು ದಿನ ಮೈಸೂರು ಪ್ರವಾಸ ಕೈಗೊಂಡ ಸಿದ್ದರಾಮಯ್ಯ

Karnataka News Today Highlights Updates:ಜಾಗತಿಕ ಬಿಕ್ಕಟ್ಟಿನ ನಡುವೆಯೂ ಭಾರತಕ್ಕೆ ಹೂಡಿಕೆ ಹರಿದುಬರುತ್ತಿದೆ. ಇತ್ತ ಯಶ್ ನಟನೆಯ ‘ಟಾಕ್ಸಿಕ್’ ಚಿತ್ರದ ‘ತಬಾಹಿ’ ಹಾಡು ಜುಲೈನಲ್ಲಿ ರಿಲೀಸ್ ಆಗಲಿದ್ದು, ಮತ್ತೊಂದೆಡೆ ರಾಜ್ಯದಲ್ಲಿ ಶೇ 41 ರಷ್ಟು ಮಳೆ ಕೊರತೆಯ ಆತಂಕ ಎದುರಾಗಿದೆ. ಇಂದಿನ ಪ್ರಮುಖ ಸುದ್ದಿಗಳು ಇಲ್ಲಿವೆ.

TV9 Kannada News Highlights: ಎರಡು ದಿನ ಮೈಸೂರು ಪ್ರವಾಸ ಕೈಗೊಂಡ ಸಿದ್ದರಾಮಯ್ಯ
ಸಿದ್ದರಾಮಯ್ಯ
Image Credit source: tv9
Edited By:

Updated on: Jun 26, 2026 | 11:01 PM

ಜಾಗತಿಕ ತೈಲ ಬಿಕ್ಕಟ್ಟು ಹಾಗೂ ಪಶ್ಚಿಮ ಏಷ್ಯಾ ಸಂಘರ್ಷದ ಸವಾಲುಗಳ ನಡುವೆಯೂ ವಿಶ್ವದ ಪ್ರಮುಖ ಕಾರ್ಪೊರೇಟ್ ಕಂಪನಿಗಳು ಭಾರತದ ಬಲಿಷ್ಠ ಆರ್ಥಿಕತೆಯನ್ನು ನಂಬಿ ಬೃಹತ್ ಹೂಡಿಕೆ ಮಾಡಲು ಸಾಲುಗಟ್ಟಿ ನಿಂತಿರುವುದು ದೇಶಕ್ಕೆ ಅತ್ಯಂತ ಆಶಾದಾಯಕ ಸಂಗತಿಯಾಗಿದೆ. ಇತ್ತ ಸಿನಿರಂಗದಲ್ಲಿ ಭಾರಿ ಕುತೂಹಲ ಮೂಡಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಹೈ-ಬಜೆಟ್ ಆಕ್ಷನ್ ಸಿನಿಮಾ ‘ಟಾಕ್ಸಿಕ್’ ಚಿತ್ರದ ‘ತಬಾಹಿ’ ವಿಡಿಯೋ ಸಾಂಗ್ ಜುಲೈ ಎರಡನೇ ವಾರದಲ್ಲಿ ಬಿಡುಗಡೆಯಾಗಲಿದ್ದು, ಪ್ಯಾನ್-ಇಂಡಿಯಾ ಸಿನಿಮಾ ಆಗಸ್ಟ್ 26ರಂದು ತೆರೆಕಾಣಲು ಸಜ್ಜಾಗಿದೆ. ಆದರೆ, ಮತ್ತೊಂದೆಡೆ ಹವಾಮಾನ ವೈಪರೀತ್ಯ ಹಾಗೂ ಸೂಪರ್ ಎಲ್ ನಿನೋ ಪ್ರಭಾವದಿಂದಾಗಿ ಕರ್ನಾಟಕದಲ್ಲಿ ಮುಂಗಾರು ಆರಂಭದಲ್ಲೇ ಭಾರಿ ಹಿನ್ನಡೆ ಅನುಭವಿಸಿದ್ದು, ಜೂನ್ ತಿಂಗಳಿನಲ್ಲಿ ಬರೋಬ್ಬರಿ ಶೇ 41 ರಷ್ಟು ಮಳೆ ಕೊರತೆಯಾಗಿರುವುದು ರಾಜ್ಯದಲ್ಲಿ ತೀವ್ರ ಆತಂಕ ಮೂಡಿಸಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

YouTube video player

LIVE NEWS & UPDATES

The liveblog has ended.
  • 26 Jun 2026 10:11 PM (IST)

    ಹರಿಯಾಣ ಕಾಂಗ್ರೆಸ್ ಉಸ್ತುವಾರಿಯಿಂದ ಬಿ.ಕೆ ಹರಿಪ್ರಸಾದ್ ಬಿಡುಗಡೆ

    ಹರಿಯಾಣ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ಬಿ.ಕೆ ಹರಿಪ್ರಸಾದ್ ಅವರನ್ನು ಬಿಡುಗಡೆ ಮಾಡಲಾಗಿದೆ.
    ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿರುವ ಹಿನ್ನೆಲೆಯಲ್ಲಿ ಹರಿಯಾಣ ಕಾಂಗ್ರೆಸ್ ಉಸ್ತುವಾರಿಯಿಂದ ಬಿಡುಗಡೆ ಮಾಡಲಾಗಿದ್ದು, ಹರಿಯಾಣ ಕಾಂಗ್ರೆಸ್ ಉಸ್ತುವಾರಿಯಾಗಿ ಸಂಜಯ್ ದತ್ ಅವರನ್ನು ನೇಮಕ ಮಾಡಲಾಗಿದೆ.

  • 26 Jun 2026 08:49 PM (IST)

    ಎರಡು ದಿನ ಮೈಸೂರು ಪ್ರವಾಸ ಹಮ್ಮಿಕೊಂಡ ಸಿದ್ದರಾಮಯ್ಯ

    ಮಾಜಿ ಮುಖ್ಯಮಂತ್ರಿ, ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಸಿದ್ದರಾಮಯ್ಯನವರು ಎರಡು ದಿನ (ಜೂನ್ 27 ಮತ್ತು 28) ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ನಾಳೆ ಅಂದರೆ ಜೂನ್ 27ರಂದು ಮಧ್ಯಾಹ್ನ ಮೈಸೂರಿಗೆ ಪ್ರಯಾಣ ಬೆಳಸಲಿರುವ ಸಿದ್ದರಾಮಯ್ಯ, ಸಂಜೆ ಕೆಂಪಯ್ಯನಹುಂಡಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಶನಿವಾರ ಮೈಸೂರಿನಲ್ಲೇ ವಾಸ್ತವ್ಯ ಹೂಡಲಿರುವ ಸಿದ್ದರಾಮಯ್ಯ, ಭಾನುವಾರ ಜೂನ್ 28ರಂದು ರಂದು ಎಸ್ಐಆರ್ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ನಂತರ ಸೋಮವಾರ ಬೆಳಗ್ಗೆ ಮೈಸೂರಿನಿಂದ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

  • 26 Jun 2026 08:47 PM (IST)

    ಕಾಂಗ್ರೆಸ್ ಸೇವಾ ದಳದ ಮುಖ್ಯ ಸಂಘಟಕರಾಗಿ ಬಿವಿ ಶ್ರೀನಿವಾಸ್ ನೇಮಕ

    ಕಾಂಗ್ರೆಸ್ ಸೇವಾ ದಳದ ಮುಖ್ಯ ಸಂಘಟಕರಾಗಿ ಬಿವಿ ಶ್ರೀನಿವಾಸ್ ಅವರನ್ನು ನೇಮಕ ಮಾಡಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಆದೇಶದ ಮೇರೆಗೆ ಕಾಂಗ್ರೆಸ್ ಸೇವಾದಳದ ಜವಾಬ್ದಾರಿ ವಹಿಸಲಾಗಿದೆ. ಈ ಹಿಂದೆ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕರ್ನಾಟಕ ಮೂಲದ ಬಿವಿ ಶ್ರೀನಿವಾಸ್ ಅವರನ್ನು ಇದೀಗ ರಾಷ್ಟ್ರೀಯ ಕಾಂಗ್ರೆಸ್ ಸೇವಾದಳದ ಜವಾಬ್ದಾರಿ ನೀಡಲಾಗಿದೆ.

  • 26 Jun 2026 08:37 PM (IST)

  • 26 Jun 2026 04:43 PM (IST)

    ನಾನು ನೀಡಿರುವ ಪ್ರತಿಯೊಂದು ಸೂಚನೆಯೂ ಜಾರಿಯಾಗಿರಬೇಕು

    ಮುಂದಿನ ಸಭೆಯಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಪರಿಶೀಲಿಸುತ್ತೇನೆ. ಒಂದೇ ಒಂದು ಸರಕು ಸಾಗಣೆ ವಾಹನ ಕೂಡ ಸೂಕ್ತ ಲೆಕ್ಕಪತ್ರ, ದಾಖಲೆ ಮತ್ತು ಸಂಪೂರ್ಣ ಅಕೌಂಟೆಬಿಲಿಟಿ ಇಲ್ಲದೆ ಗಡಿ ದಾಟಬಾರದು. ಇದು ನಮ್ಮ ಇಲಾಖೆಯ ಕಾರ್ಯವೈಖರಿಯ ಮೂಲ ತತ್ವವಾಗಬೇಕು. ಎಲ್ಲಾ ಜಂಟಿ ಆಯುಕ್ತರು ತೆರಿಗೆ ಸಂಗ್ರಹಣಾ ಗುರಿಯನ್ನು ಸಾಧಿಸಿ ತೋರಿಸಿ. ನಿಗದಿತ ಸಮಯಕ್ಕೆ ತೆರಿಗೆ ಪಾವತಿಯಾಗಬೇಕು. ಆ ರೀತಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈಗ ಬರ್ತಿರುವ ತೆರಿಗೆಯ ಎರಡರಷ್ಟು ಸಂಗ್ರಹಿಸುವ ಸಾಮರ್ಥ್ಯ ಇದೆ. ಆದರೆ ಕಾನೂನು ಮೀರಿ, ಶೋಷಣೆಮಾಡಿ ಅಂತ ಹೇಳಲ್ಲ ಎಂದರು.

  • 26 Jun 2026 04:43 PM (IST)

    ತೆರಿಗೆ ಪಾವತಿಸುವ ಪ್ರತಿಯೊಬ್ಬರನ್ನೂ ಗೌರವದಿಂದ ನಡೆಸಿಕೊಳ್ಳಬೇಕು

    ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಇಂದು (ಜೂನ್ 26) ವಿಧಾನಸೌಧದಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ಈ ವೇಳೆ ತೆರಿಗೆ ವಿಚಾರವಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ತೆರಿಗೆ ವಂಚನೆಗೆ ಯಾವುದೇ ಅವಕಾಶ ಇರಬಾರದು. ಕಾರ್ಯಾಚರಣೆಗಳ ಮೂಲಕ ತೆರಿಗೆ ಸೋರಿಕೆಯನ್ನು ತಡೆಯಬೇಕು. ನಮ್ಮ ಉದ್ದೇಶ ಯಾರಿಗೂ ಅನಗತ್ಯ ತೊಂದರೆ ನೀಡುವುದಲ್ಲ. ಪ್ರಾಮಾಣಿಕ ತೆರಿಗೆದಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ತೆರಿಗೆ ಪಾವತಿಸುವ ಪ್ರತಿಯೊಬ್ಬರನ್ನೂ ಗೌರವದಿಂದ ನಡೆಸಿಕೊಳ್ಳಬೇಕು. ಜೊತೆಗೆ ಇಲಾಖೆಯ ಸಿಬ್ಬಂದಿಯನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಬುದ್ಧಿವಂತಿಕೆಯಿಂದ ಕಾರ್ಯನಿರ್ವಹಿಸಿದರೆ ಗುರಿ ತಲುಪಲು ಸಾಧ್ಯ ಆದರೆ ತೆರಿಗೆ ವಂಚನೆಗೆ ಮಾತ್ರ ಯಾವುದೇ ಅವಕಾಶ ಇರಬಾರದು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನಿಡಿದ್ದಾರೆ.

  • 26 Jun 2026 03:52 PM (IST)

    ಅಡ್ಡಮತದಾನ ವರದಿ ಬಗ್ಗೆ ವಿಜಯೇಂದ್ರ ಹೇಳಿದ್ದೇನು?

    ಪರಿಷತ್​ ಚುನಾವಣೆಯಲ್ಲಿ ಬಿಜೆಪಿ ಶಾಸಕರಿಂದ ಅಡ್ಡಮತದಾನದ ವರದಿ ಸಂಬಂಧ ಸತ್ಯ ಶೋಧನ ಸಮಿತಿ ಬಗ್ಗೆ ಬಿವೈ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಎಂಎಲ್​ಸಿ ಸಿ.ಟಿ.ರವಿ ಜೊತೆ ಚರ್ಚೆ ಮಾಡಿದ್ದೇನೆ. ನಾಳೆ‌ ಮತ್ತು ನಾಡಿದ್ದು ತಿರುಪತಿಗೆ ಹೊರಟಿದ್ದೇನೆ. ತಿರುಪತಿಯಿಂದ ಬಂದ ಬಳಿಕ ಸಿಗುವುದಾಗಿ ಸಿ.ಟಿ.ರವಿಗೆ ಹೇಳಿದ್ದೇನೆ. ಸಿ.ಟಿ.ರವಿ ವರದಿ ಕೊಟ್ಟ ಬಳಿಕ ದೆಹಲಿ ಕಳುಹಿಸುತ್ತೇನೆ ಎಂದರು.

  • 26 Jun 2026 03:50 PM (IST)

    ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿದ ತುಂಗಭದ್ರಾ ಜಲಾಶಯ

    ಕಲ್ಯಾಣ ಕರ್ನಾಟಕದ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಡೆಡ್ ಸ್ಟೋರೇಜ್ ಹಂತಕ್ಕೆ ತಲುಪಿದೆ. ನಿನ್ನೆ (ಜೂನ್ 26) ಅಷ್ಟೇ ಜಲಾಶಯದ 33 ಹೊಸ ಕ್ರಸ್ಟ್ ಗೇಟ್​​ಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಆದ್ರೆ, ಈ ಬಾರಿ ಜಲಾಶಯದಲ್ಲಿ ನೀರೇ ಇಲ್ಲದಂತಾಗಿದೆ. ಒಟ್ಟು 105 TMC ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ ಕಳೆದ ವರ್ಷ ಈ ದಿನ ಜಲಾಶಯದಲ್ಲಿ ಬರೋಬ್ಬರಿ 45 TMC ನೀರು ಸಂಗ್ರಹವಾಗಿತ್ತು. ಆದ್ರೆ, ಈ ವರ್ಷ ಮಳೆ ಕೊರತೆಯಿಂದ 9TMC ಮಾತ್ರ ನೀರು ಇದೆ. ಹೀಗಾಗಿ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಯ ರೈತರು ಆತಂಕಗೊಂಡಿದ್ದಾರೆ.

  • 26 Jun 2026 02:35 PM (IST)

    ಅಡ್ಡಮತದಾನ:ಸತ್ಯಶೋಧನಾ ಸಮಿತಿಯ ವರದಿ ಸಿದ್ಧ

    ವಿಧಾನಪರಿಷತ್ ಚುನಾವಣೆಯಲ್ಲಿ ಶಾಸಕರ ಅಡ್ಡಮತದಾನ ರಾಜ್ಯ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಅಡ್ಡಮತದಾನ ಯಾರೆಲ್ಲಾ ಮಾಡಿದ್ದಾರೆ ಎನ್ನುವುದನ್ನು ಪತ್ತೆ ಮಾಡಲು ಸಿಟಿ ರವಿ ಅವರ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿ ರಚಿಸಿದ್ದಾರೆ. ಇದೀಗ ಸತ್ಯಶೋಧನಾ ಸಮಿತಿ ಎಲ್ಲಾ ಮಾಹಿತಿ ಕಲೆಹಾಕಿ ಮಧ್ಯಂತರ ವರದಿ ಸಿದ್ಧಪಡಿಸಿದೆ. ಹೀಗಾಗಿ ಸೋಮವಾರ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ಸಿಟಿ ರವಿ ನೇತೃತ್ವದ ಸಮಿತಿ ವರದಿಯನ್ನು ಸಲ್ಲಿಸುವ ಸಾಧ್ಯತೆಗಳಿವೆ. ಬಿಜೆಪಿಯ 4 ರಿಂದ 5 ಶಾಸಕರು ಅಡ್ಡಮತದಾನ ಮಾಡಿರುವ ಅನುಮಾನ ವ್ಯಕ್ತವಾಗಿದ್ದು, ವರದಿಯಲ್ಲಿ ಏನಿದೆ ಎನ್ನುವುದು ಕುತೂಹಲ ಮೂಡಿಸಿದೆ.

  • 26 Jun 2026 01:13 PM (IST)

    ಕಾವೇರಿ ನದಿಯಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ

    ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮುತ್ತತ್ತಿಯಲ್ಲಿ ಇತ್ತೀಚೆಗೆ ಒಂದೇ ಕುಟುಂಬದ ಐವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ಸಚಿವ ರಾಮಲಿಂಗಾರೆಡ್ಡಿ ಅವರು ಜಿಲ್ಲಾಧಿಕಾರಿಗಳಿಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ನದಿಯಲ್ಲಿ ಸಾರ್ವಜನಿಕರ ರಕ್ಷಣೆಗಾಗಿ ‘ಸೇಫ್ ಜೋನ್’ ಬ್ಯಾರಿಕೇಡ್‌ಗಳು, ಜಾಗೃತಿ ಫಲಕಗಳು ಹಾಗೂ ಗೈಡ್‌ಗಳನ್ನು ನಿಯೋಜಿಸಿ, ನಿಗದಿತ ಸ್ಥಳದ ಹೊರಗೆ ಈಜುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸುವಂತೆ ನಿರ್ದೇಶನ ನೀಡಿದ್ದಾರೆ.

  • 26 Jun 2026 12:22 PM (IST)

    ನಟಿ ಕೃಷಿ ತಾಪಂಡ ಸ್ನೇಹಿತನ ಆತ್ಮಹತ್ಯೆ: ಪೊಲೀಸರ ಎದುರು ನಟಿ ಏನಂದ್ರು?

    ನಟಿ ಕೃಷಿ ತಾಪಂಡ ಅವರ ಫ್ಲಾಟ್‌ನಲ್ಲಿ ಸ್ನೇಹಿತ ವೈಶಾಖ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಟಿಯ ಹೇಳಿಕೆ ದಾಖಲಿಸಿದ್ದಾರೆ . ತಾವು ಮೂರು ದಿನ ಹೊರಗಿದ್ದು, ಬುಧವಾರ ರಾತ್ರಿ ಬಂದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಕೃಷಿ ತಿಳಿಸಿದ್ದಾರೆ. ಅವರ ಮೊಬೈಲ್ ಪರಿಶೀಲಿಸಿದ ಆರ್‌ಆರ್ ನಗರ ಪೊಲೀಸರಿಗೆ ಯಾವುದೇ ಅನುಮಾನಾಸ್ಪದ ಅಂಶಗಳು ಕಂಡುಬಂದಿಲ್ಲ.

    YouTube video player

  • 26 Jun 2026 12:19 PM (IST)

    ‘ಸ್ಟಾರ್ಟ್ ರನ್, ಸ್ಟಾಪ್ ಡ್ರಗ್ಸ್’ ಮ್ಯಾರಥಾನ್: 6 ಕಿಮೀ ಓಡಿ ಜಾಗೃತಿ ಮೂಡಿಸಿದ ನಟ ವಿಜಯ್!

    ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ಚೆನ್ನೈನಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಸ್ಟಾರ್ಟ್ ರನ್, ಸ್ಟಾಪ್ ಡ್ರಗ್ಸ್’ ಮ್ಯಾರಥಾನ್‌ನಲ್ಲಿ ನಟ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಮುಖ್ಯಸ್ಥ ದಳಪತಿ ವಿಜಯ್ ಪಾಲ್ಗೊಂಡಿದ್ದಾರೆ. ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದ ಈ ಓಟದಲ್ಲಿ, ಅವರು ಬರೋಬ್ಬರಿ 6 ಕಿಲೋಮೀಟರ್ ಓಡುವ ಮೂಲಕ ಯುವ ಪೀಳಿಗೆಗೆ ಪ್ರೇರಣೆಯಾಗಿ ಎಲ್ಲರ ಗಮನ ಸೆಳೆದಿದ್ದಾರೆ.

    ಈ ವೀಡಿಯೋ ನೋಡಿ

  • 26 Jun 2026 12:16 PM (IST)

    ವಿಶ್ವ ಮಟ್ಟದಲ್ಲಿ ಮಿನುಗಿದ ಹುಬ್ಬಳ್ಳಿ ಹುಡುಗಿ ಐಶ್ವರ್ಯಾ!

    ಜರ್ಮನಿಯ ಸುಲ್‌ನಲ್ಲಿ ನಡೆದ ISSF ವಿಶ್ವ ಜೂನಿಯರ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಹುಬ್ಬಳ್ಳಿಯ ಪ್ರತಿಭೆ ಐಶ್ವರ್ಯಾ ಬಾಲೇಹೊಸೂರ್ ಅದ್ಭುತ ಸಾಧನೆ ಮಾಡಿದ್ದಾರೆ. 50 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಇವರು ದೇಶಕ್ಕೆ ಬೆಳ್ಳಿ ಪದಕ ತಂದುಕೊಟ್ಟಿದ್ದಾರೆ. ಚಿನ್ನದ ಪದಕ ಕೂದಲೆಳೆ ಅಂತರದಲ್ಲಿ ಕೈತಪ್ಪಿದರೂ, ಐಶ್ವರ್ಯಾ ಅವರ ಈ ಅಂತರರಾಷ್ಟ್ರೀಯ ಸಾಧನೆ ರಾಜ್ಯ ಹಾಗೂ ದೇಶಕ್ಕೆ ಭಾರಿ ಹೆಮ್ಮೆ ತಂದಿದೆ. ಇನ್ನು ಈ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡವು ಒಟ್ಟು 25 ಪದಕಗಳನ್ನು ಬಾಚಿಕೊಳ್ಳುವ ಮೂಲಕ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಮತ್ತಷ್ಟು ಓದಿ

  • 26 Jun 2026 12:11 PM (IST)

    ಅಮಾನತುಗೊಂಡಿದ್ದ ಲೇಡಿ ತಹಶೀಲ್ದಾರ್ ಮನೆಯಲ್ಲಿ ಕೋಟಿ ಕೋಟಿ ಸಂಪತ್ತು ಪತ್ತೆ!

    ಹೈದರಾಬಾದ್‌ನಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನಡೆಸಿದ ಭರ್ಜರಿ ದಾಳಿಯಲ್ಲಿ, ಅಮಾನತುಗೊಂಡಿದ್ದ ಲೇಡಿ ತಹಶೀಲ್ದಾರ್ ಸುಚರಿತಾ ಅವರ ಮನೆಯಲ್ಲಿ ಬರೋಬ್ಬರಿ 5.05 ಕೋಟಿ ರೂ. ಮೌಲ್ಯದ ಅಕ್ರಮ ಸಂಪತ್ತು ಪತ್ತೆಯಾಗಿದೆ. ಇತ್ತೀಚೆಗಷ್ಟೇ ಲಂಚ ಪ್ರಕರಣದಲ್ಲಿ ಬಂಧಿತರಾಗಿದ್ದ ಇವರ ನಿವಾಸದಿಂದ ಭಾರಿ ಪ್ರಮಾಣದ ಚಿನ್ನ, ವಜ್ರದ ಆಭರಣಗಳು, ಐಷಾರಾಮಿ ಫ್ಲಾಟ್‌ಗಳು, ಕೃಷಿ ಭೂಮಿ, ಕಾರು ಹಾಗೂ ನಗದು ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸದ್ಯ ಆರೋಪಿ ತಹಶೀಲ್ದಾರ್ ವಿರುದ್ಧ ಬೇನಾಮಿ ಆಸ್ತಿ ಗಳಿಕೆ ಕುರಿತು ತನಿಖೆ ಚುರುಕುಗೊಂಡಿದೆ. ಮತ್ತಷ್ಟು ಓದಿ

  • 26 Jun 2026 11:57 AM (IST)

    ನಿಂತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು

    ಧಾರವಾಡ ತಾಲೂಕಿನ ಬೇಲೂರು ಗ್ರಾಮದ ಬಳಿ ನಿಂತಿದ್ದ ಲಾರಿಗೆ ಕ್ಯಾಂಟರ್ ಡಿಕ್ಕಿಯಾದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಧಾರವಾಡ ತಾಲೂಕಿನ ಹಳೇ ತೇಗೂರಿನ ಷಣ್ಮುಖ ಜೋಗಿ (28) ಹಾಗೂ ಉತ್ತರ ಪ್ರದೇಶ ಮೂಲದ ಸಾಗರ್ (30) ಮೃತಪಟ್ಟ ದುರ್ದೈವಿಗಳು. ಘಟನಾ ಸ್ಥಳಕ್ಕೆ ಗರಗ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

  • 26 Jun 2026 10:23 AM (IST)

    ಡಿ.ಕೆ.ಶಿ ಜೊತೆ ಸಂಬಂಧವಿಲ್ಲ: ಧರ್ಮಸ್ಥಳದಲ್ಲಿ ಬಿ.ವೈ.ವಿಜಯೇಂದ್ರ ಸ್ಪಷ್ಟನೆ

    ಅಡ್ಡಮತದಾನದ ವಿಚಾರವಾಗಿ ನನ್ನ ವಿರುದ್ಧ ಸ್ವಪಕ್ಷದವರೇ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ. ಧರ್ಮಸ್ಥಳದ ಸನ್ನಿಧಿ ಗೆಸ್ಟ್ ಹೌಸ್‌ನಲ್ಲಿ ಸಂಸದರು ಹಾಗೂ ಶಾಸಕರೊಂದಿಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೂ ಡಿ.ಕೆ.ಶಿವಕುಮಾರ್ ಅವರಿಗೂ ಯಾವುದೇ ರಾಜಕೀಯ ಅಥವಾ ವ್ಯವಹಾರಿಕ ಸಂಬಂಧವಿಲ್ಲ. ಅವರೊಂದಿಗೆ ಸೇರಿ ಅಡ್ಡಮತದಾನಕ್ಕೆ ಸಹಕರಿಸಿದ್ದೇನೆ ಎಂಬುದು ಸುಳ್ಳು. ಈ ಅಪಪ್ರಚಾರದಿಂದ ಮನಸ್ಸಿಗೆ ಆಘಾತವಾಗಿದ್ದರಿಂದ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಯಲ್ಲಿ ಸತ್ಯಾಸತ್ಯತೆಯ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತಷ್ಟು ಓದಿ 

  • 26 Jun 2026 09:01 AM (IST)

    ‘ಬಾಹುಬಲಿ 3’ ಬರೋದು ಪಕ್ಕಾ

    ಅಭಿಮಾನಿಗಳ ಬಹುದಿನಗಳ ಕಾಯುವಿಕೆಗೆ ಕೊನೆಗೂ ತೆರೆ ಬಿದ್ದಿದ್ದು, ‘ಬಾಹುಬಲಿ 3’ ಸಿನಿಮಾ ಬರುವುದು ಅಧಿಕೃತವಾಗಿ ಖಚಿತವಾಗಿದೆ. ನಟರಾದ ಪ್ರಭಾಸ್, ರಾಣಾ ದಗ್ಗುಬಾಟಿ ಮತ್ತು ಅನುಷ್ಕಾ ಶೆಟ್ಟಿ ಅವರು ‘ಪರಂಪರೆ ಮುಂದುವರಿಯುತ್ತದೆ’ ಎಂಬ ಸಂದೇಶದೊಂದಿಗೆ ವಿಡಿಯೋ ಹಂಚಿಕೊಳ್ಳುವ ಮೂಲಕ ಈ ಬಿಗ್ ಅಪ್ಡೇಟ್ ನೀಡಿದ್ದಾರೆ. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಚಿತ್ರಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ಆದರೆ, ಸಿನಿಮಾ ಯಾವಾಗ ಸೆಟ್ಟೇರಲಿದೆ ಎಂಬ ಸಂಪೂರ್ಣ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ. ಮತ್ತಷ್ಟು ಓದಿ

  • 26 Jun 2026 08:59 AM (IST)

    ಸುಣ್ಣಘಟ್ಟದಲ್ಲಿ ನಾಡಬಾಂಬ್ ಸ್ಫೋಟ!

    ಹಾರೋಹಳ್ಳಿ ತಾಲೂಕಿನ ಸುಣ್ಣಘಟ್ಟದ ಫಾರ್ಮ್‌ಹೌಸ್ ಗೇಟ್ ತೆರೆಯುವಾಗ ದುಷ್ಕರ್ಮಿಗಳು ಇಟ್ಟಿದ್ದ ನಾಡಬಾಂಬ್ ಸ್ಫೋಟಗೊಂಡು ವಕೀಲ ಎನ್.ಸಿ.ಮೋಹನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುವನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Published On - 8:57 am, Fri, 26 June 26

Follow Us