ಕರಾವಳಿ ಕಂಬಳ ಆಯೋಜಕರಿಗೆ ಸರ್ಕಾರ ಗುಡ್ನ್ಯೂಸ್! 1.15 ಕೋಟಿ ರೂ ಅನುದಾನ ಘೋಷಣೆ
1.15 crore grant for Kambala: ವಿವಾದಗಳ ನಡುವೆಯೇ ಕಂಬಳಕ್ಕೆ ರಾಜ್ಯ ಸರ್ಕಾರದಿಂದ ಗುಡ್ನ್ಯೂಸ್ ಸಿಕ್ಕಿದೆ. ಪ್ರವಾಸೋದ್ಯಮ ಇಲಾಖೆಯ ವತಿಯಿಂದ 2025-26ನೇ ಸಾಲಿನ ಒಟ್ಟು 23 ಕಂಬಳಗಳಿಗೆ ತಲಾ 5 ಲಕ್ಷ ರೂಪಾಯಿಯಂತೆ ಒಟ್ಟು 1 ಕೋಟಿ 15 ಲಕ್ಷ ರೂಪಾಯಿ ಅನುದಾನವನ್ನು ಘೋಷಿಸಲಾಗಿದೆ.

ಮುಖ್ಯಾಂಶಗಳು
- ವಿವಾದದ ಮಧ್ಯೆ ಕಂಬಳಕ್ಕೆ ರಾಜ್ಯ ಸರ್ಕಾರದಿಂದ ಗುಡ್ನ್ಯೂಸ್
- ಕರಾವಳಿಯಲ್ಲಿ ನಡೆಯುವ ಕಂಬಳಕ್ಕೆ ಅನುದಾನ ಘೋಷಣೆ
- ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ ಕಂಬಳ ಸಂಘಟಕರು
ಉಡುಪಿ, ಜುಲೈ 17: ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ (Kambala) ಆಚರಣೆ ಕುರಿತು ಪರ-ವಿರೋಧ ಚರ್ಚೆಗಳು ಜೋರಾಗಿರುವ ಸಂದರ್ಭದಲ್ಲೇ ರಾಜ್ಯ ಸರ್ಕಾರ ಕಂಬಳ ಆಯೋಜಕರಿಗೆ ಸಿಹಿ ಸುದ್ದಿ ನೀಡಿದೆ. 2025-26ನೇ ಸಾಲಿನ ಕರಾವಳಿಯಲ್ಲಿ ನಡೆಯುವ 23 ಕಂಬಳಗಳಿಗೆ ತಲಾ 5 ಲಕ್ಷ ರೂ ಅಂತೆ ಒಟ್ಟು 1 ಕೋಟಿ 15 ಲಕ್ಷ ರೂ ಅನುದಾನ (Grant) ಘೋಷಣೆ ಮಾಡಿದೆ. ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಲಾಗಿದ್ದು, ಸರ್ಕಾರದ ಈ ನಿರ್ಧಾರವನ್ನು ಕಂಬಳ ಸಂಘಟಕರು ಸ್ವಾಗತಿಸಿದ್ದಾರೆ.
ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ ಎಂದ ಡಾ. ದೇವಿಪ್ರಸಾದ್ ಶೆಟ್ಟಿ
ಈ ಕುರಿತು ಪ್ರತಿಕ್ರಿಯಿಸಿರುವ ರಾಜ್ಯ ಕಂಬಳ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ, ‘‘ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ಸಿಎಂ ಡಿಕೆ ಶಿವಕುಮಾರ್ ಕಂಬಳ ಆಯೋಜಕರಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಪ್ರತಿ ಕಂಬಳಕ್ಕೂ 5 ಲಕ್ಷ ರೂ ಅನುದಾನ ಕೊಟ್ಟಿದ್ದಾರೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ 23 ಕಂಬಳಗಳಿಗೆ ಇದರಿಂದ ಅನುಕೂಲವಾಗಲಿದೆ. ಕಂಬಳ ಆಯೋಜನೆ ದೊಡ್ಡ ಹೊರೆ. ಸಂಪ್ರದಾಯ ಸಂಸ್ಕೃತಿ ತುಳುನಾಡಿನ ಕೀರ್ತಿಯನ್ನು ಎತ್ತರಕ್ಕೆ ತೆಗೆದುಕೊಂಡು ಹೋಗಲು ಇದರಿಂದ ಅನುಕೂಲವಾಗಿದೆ’’ ಎಂದಿದ್ದಾರೆ.
ಇದನ್ನೂ ಓದಿ: ‘ಮೈಸೂರು ದಸರಾದಲ್ಲಿ ಕಂಬಳ ಬೇಡ’: ಯಾಕೆಂಬ ಕಾರಣ ನೀಡಿದ ಡಾ. ಶೆಲ್ವಪಿಳ್ಳೈ ಅಯ್ಯಂಗಾರ್!
‘‘ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಪ್ರವಾಸೋದ್ಯಮ ಮತ್ತು ಕ್ರೀಡಾ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿದ್ದರು. ಸದಾನಂದ ಗೌಡರು ಸಿಎಂ ಆಗಿದ್ದಾಗ 1 ಕೋಟಿ ರೂ ಅನುದಾನ ಕೊಟ್ಟಿದ್ದರು. ರಾಜಕೀಯ ಭೇದವಿಲ್ಲದೆ ಎಲ್ಲಾ ಸರ್ಕಾರಗಳು ಕಂಬಳವನ್ನು ಪೋಷಿಸಿವೆ. ಇದು ಕಂಬಳಕ್ಕೆ ಸರ್ಕಾರಗಳು ಕೊಟ್ಟ ಗೌರವ. ಮುಂದಿನ ಬಜೆಟ್ನಲ್ಲಿ ಕಂಬಳಕ್ಕೆ 5 ಕೋಟಿ ರೂ ಅನುದಾನ ಮೀಸಲಿರಿಸುವಂತೆ ಬೇಡಿಕೆ ಇಟ್ಟಿದ್ದಾರೆ.’’
ಮೈಸೂರಿನಲ್ಲಿ ಏಕೆ ಕಂಬಳ ಆಗಬಾರದು? ಡಾ. ದೇವಿಪ್ರಸಾದ್ ಶೆಟ್ಟಿ ಪ್ರಶ್ನೆ
ಇನ್ನು ಮೈಸೂರು ದಸರಾ ಕಂಬಳ ವಿವಾದ ವಿಚಾರವಾಗಿ ಮಾತನಾಡಿದ ಅವರು, ‘‘ಕಂಬಳದಲ್ಲಿ ರಾಜಕೀಯ ಇಲ್ಲ. ರಾಜಕೀಯ ಧರ್ಮ ಮೀರಿ ನಡೆಯುವ ಕ್ರೀಡೆ. ಎಲ್ಲಾ ರಾಜಕೀಯ ಪಕ್ಷದವರು ಕಂಬಳ ನಡೆಸುತ್ತಾರೆ. ಮೈಸೂರು ಸಂಸದರು ವಿರೋಧ ಮಾಡುತ್ತಾರೆ ಎಂಬ ಕಾರಣಕ್ಕೆ ಅವರ ಪಕ್ಷದ ಕರಾವಳಿಯ ಶಾಸಕರು ವಿರೋಧ ಮಾಡುವುದು ಸರಿಯಲ್ಲ. ಒಂದು ಪಕ್ಷದ ಪರವಾಗಿ ನಿಲ್ಲುವು ತೆಗೆದುಕೊಂಡಿದ್ದೀರಿ, ಕಂಬಳ ನಿಮಗೆ ಗೌರವ ಕೊಟ್ಟಿದೆ, ನೀವೇನು ಕಂಬಳಕ್ಕೆ ಗೌರವ ತಂದಿಲ್ಲ. ಕಂಬಳದ ಗೌರವವನ್ನು ರಾಜ್ಯಾದ್ಯಂತ ಎತ್ತಿಹಿಡಿರಿ. ಕಂಬಳ ನಮ್ಮ ಜಿಲ್ಲೆಗೆ ಮಾತ್ರ ಸೀಮಿತವೇ, ಮೈಸೂರಿನಲ್ಲಿ ಏಕೆ ಕಂಬಳ ಆಗಬಾರದು’’ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಮೈಸೂರು ದಸರಾ ಕಂಬಳ ವಿವಾದ: ಅನುಮತಿ ಇಲ್ಲದೆ ಮರ ಕಡಿದ ಆರೋಪ; ಎಫ್‌ಐಆರ್ ದಾಖಲು
‘‘ಕಂಬಳದ ಬಗ್ಗೆ ಮೈಸೂರಿನಲ್ಲಿ ಅನಗತ್ಯ ಅಪಪ್ರಚಾರವಾಗುತ್ತಿದೆ. ಕೆಳ ವರ್ಗದವರ ದಬ್ಬಾಳಿಕೆ ಎಂದು ಬಿಂಬಿಸಲಾಗುತ್ತಿದೆ. ಹಿಂದುಳಿದ ವರ್ಗದ ಕೋಟೆ ಚೆನ್ನಯ್ಯರ ಹೆಸರಲ್ಲಿ, ಸೂರ್ಯ ಚಂದ್ರರ ಹೆಸರಲ್ಲಿ, ಕಾಂತ ಬಾರೆ ಬೂದ ಬಾರೆ ಹೆಸರಲ್ಲಿ ಕಂಬಳ ಮಾಡುತ್ತೇವೆ. ಇದು ದೇಶಕ್ಕೆ ಮಾದರಿ ವ್ಯವಸ್ಥೆ. ನಮ್ಮ ಕಂಬಳವನ್ನು ವೈಭವೀಕರಿಸುವ ಕೆಲಸವನ್ನು ಕರಾವಳಿಯ ಜನಪ್ರತಿನಿಧಿಗಳು ಧೈರ್ಯದಿಂದ ಮಾಡಿ. ಆದ್ದರಿಂದ ಕರಾವಳಿಯ ಜನಪ್ರತಿನಿಧಿಗಳು ಯಾವುದೇ ಪಕ್ಷದ ಕೈಗೊಂಬೆಗಳಾಗದೆ ಕಂಬಳದ ವೈಭವವನ್ನು ರಾಜ್ಯಾದ್ಯಂತ ಎತ್ತಿಹಿಡಿಯಲು ಧೈರ್ಯದಿಂದ ಕೆಲಸ ಮಾಡಬೇಕು’’ ಎಂದು ಅವರು ಒತ್ತಾಯಿಸಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:52 pm, Fri, 17 July 26




