ಸರ್ವಋತು ಮೀನುಗಾರಿಕಾ ಬಂದರಿನಲ್ಲಿ ಬೋಟುಗಳ ಸಂಚಾರಕ್ಕೆ ಅಡ್ಡಿ; ಹೂಳು ತೆಗೆಯುವಂತೆ ಸ್ಥಳೀಯರಿಂದ ಒತ್ತಾಯ
ಪ್ರಕೃತಿಯ ವರದಾನ ದಂತಿರುವ ಇಲ್ಲಿನ ಹಿನ್ನೀರಿನಲ್ಲಿ, ನಾಲ್ಕಾರು ಅಡಿ ಹೂಳು ತುಂಬಿದ್ದು, ನೀರಿಗೆ ಬಿದ್ದವರು ಮೇಲೇಳಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಇದು ಸಹಜವಾಗಿಯೇ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಏಷ್ಯಾದ ಅತಿದೊಡ್ಡ ಸರ್ವಋತು ಮೀನುಗಾರಿಕಾ ಬಂದರು ಎಂದರೆ ಅದು ಉಡುಪಿ ಜಿಲ್ಲೆಯ ಮಲ್ಪೆ ಬಂದರು. ಇಲ್ಲಿನ ಬಂದರಿಗೆ ಉತ್ಕೃಷ್ಟ ಮೀನುಗಾರಿಕಾ ಬಂದರು ಎಂಬ ಖ್ಯಾತಿ ಇದೆ. ಅಷ್ಟೇ ಅಲ್ಲ ಹತ್ತಲ್ಲ, ನೂರಲ್ಲ ಏಕಕಾಲದಲ್ಲಿ ಎರಡು ಸಾವಿರಕ್ಕೂ ಅಧಿಕ ಬೋಟುಗಳು ಲಂಗರು ಹಾಕಬಹುದಾದ ಸುಂದರ ಮೀನುಗಾರಿಕಾ ಬಂದರು (fishing harbor) ಇದಾಗಿದೆ. ಅಕ್ಕಪಕ್ಕದಲ್ಲಿ ಬೋಟುಗಳು ನಿಂತಾಗ ವಿಹಂಗಮವಾಗಿ ಕಾಣುವ ಈ ಬಂದರು, ಅದೆಂಥ ಅಪಾಯಕಾರಿ ಸ್ಥಿತಿ ತಲುಪಿದೆ ಗೊತ್ತಾ? ಕಾಲುಜಾರಿ ಬೋಟಿನಿಂದ ನೀರಿಗೆ ಬಿದ್ದರೆ, ಬದುಕುವ ಸಾಧ್ಯತೆ ಇಲ್ಲವೇ ಇಲ್ಲ. ಪ್ರಕೃತಿಯ ವರದಾನ ದಂತಿರುವ ಇಲ್ಲಿನ ಹಿನ್ನೀರಿನಲ್ಲಿ, ನಾಲ್ಕಾರು ಅಡಿ ಹೂಳು ತುಂಬಿದ್ದು, ನೀರಿಗೆ ಬಿದ್ದವರು ಮೇಲೇಳಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ. ಇದು ಸಹಜವಾಗಿಯೇ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಆಳಸಮುದ್ರ ಬೋಟುಗಳ ಈ ತಂಗುದಾಣ ಸದ್ಯ ಮೃತ್ಯುಕೂಪವಾಗಿದೆ. ಪ್ರತಿವರ್ಷ ಹತ್ತು-ಹದಿನೈದು ಮಂದಿ ಮೀನುಗಾರಿಕಾ ಕಾರ್ಮಿಕರು ಇಲ್ಲಿ ಕಾಲು ಜಾರಿ ಬಿದ್ದು ಸಾಯುತ್ತಿದ್ದಾರೆ. ಅದ್ಯಾವುದೋ ರಾಜ್ಯದಿಂದ ಬಂದ ಈ ಕಾರ್ಮಿಕರ ಸಾವಿನ ಲೆಕ್ಕ ಇಟ್ಟವರಿಲ್ಲ. ಬಡಜನರ ಸಾವಿಗೆ ಬೆಲೆ ಇಲ್ಲ ಎನ್ನುವಂತಾಗಿದೆ. ಈ ಬಂದರಿನ ಹೂಳು ತೆಗೆಯದಿರುವುದೇ ಇದಕ್ಕೆ ಕಾರಣ. ಇದರಿಂದ ಕೇವಲ ಜೀವಾಪಾಯ ಮಾತ್ರವಲ್ಲ, ಆಳಸಮುದ್ರ ಬೋಟುಗಳ ಸಂಚಾರಕ್ಕೂ ಹೂಳು ತುಂಬಿ ಅಡ್ಡಿಯಾಗಿದೆ ಎಂದು ಸ್ಥಳೀಯರಾದ ಈಶ್ವರ್ ಹೇಳಿದ್ದಾರೆ.
ಮಲ್ಪೆ ಮೀನುಗಾರಿಕಾ ಬಂದರು ಪ್ರದೇಶದಲ್ಲಿ ಡ್ರಜ್ಜಿಂಗ್ ಮಾಡಿ ಆರು ವರ್ಷ ಕಳೆದಿದೆ. ಕೆಲವು ವರ್ಷಗಳ ಹಿಂದೆ ಮುಂಬೈನ ಕಂಪನಿಯೊಂದಕ್ಕೆ ಇಲ್ಲಿ ಡ್ರಜ್ಜಿಂಗ್ ಮಾಡಲು ಅವಕಾಶ ನೀಡಲಾಗಿತ್ತು. 90,000 ಕ್ಯೂಬಿಕ್ ಮೀಟರ್ನಷ್ಟು ಡ್ರೆಜ್ಜಿಂಗ್ ಮಾಡಬೇಕಾಗಿದ್ದರೂ, ಈ ಏಜೆನ್ಸಿಯವರು ಕೇವಲ 28 ಸಾವಿರ ಕ್ಯೂಬಿಕ್ ಮೀಟರ್ನಷ್ಟು ಹೂಳು ತೆಗೆದು ವಾಪಸಾಗಿದ್ದಾರೆ. ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ಈ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಆದರೆ ಈಗ ಇಲ್ಲಿ ಹೂಳು ಹೆಚ್ಚಾಗಿದ್ದು, ಹೂಳು ತುಂಬಿದ ಬಂದರಿನಲ್ಲಿ ನೀರಿನೊಳಗೆ ಬಿದ್ದರೆ ಸದ್ಯ ಹೆಣವೂ ಸಿಕ್ಕುವುದಿಲ್ಲ.
ಮುಂಜಾನೆ ನಾಲ್ಕು ಗಂಟೆಗೆ ಈ ಬಂದರು ಪ್ರದೇಶದಲ್ಲಿ ಕೆಲಸ ಪ್ರಾರಂಭವಾಗುತ್ತದೆ. ಕೆಲವೊಮ್ಮೆ ರಾತ್ರಿಯಿಡೀ ಬೋಟಿನಲ್ಲಿ ಬಂದ ಮೀನುಗಳನ್ನು ಖಾಲಿ ಮಾಡುವ ಕೆಲಸ ನಡೆಯುತ್ತಿರುತ್ತದೆ. ಈ ವೇಳೆ ಕಾರ್ಮಿಕರು ಅಚಾನಕ್ಕಾಗಿ ನೀರಿಗೆ ಬೀಳುವ ಅಪಾಯ ಹೆಚ್ಚು. ಆಪತ್ಬಾಂಧವ ರಾಗಿ ಈಶ್ವರ್ ಎಂಬ ಈಜುಪಟು ಇಲ್ಲಿಯೇ ಇರುತ್ತಾರೆ. ಬಂದರಿನಲ್ಲಿ ಇವರು ಹಾಜರಿದ್ದ ವೇಳೆ ನೀರಿಗೆ ಯಾರಾದರೂ ಬಿದ್ದರೆ ರಕ್ಷಿಸುತ್ತಾರೆ. ಉಳಿದ ವೇಳೆಯಲ್ಲಿ ನೀರುಪಾಲಾದವರನ್ನು ದೇವರೇ ಕಾಪಾಡಬೇಕು ಎನ್ನುವಂತಾಗಿದೆ.
ಸದ್ಯ ಮಲ್ಪೆಯಲ್ಲಿ ದೊಡ್ಡಗಾತ್ರದ ಬೋಟುಗಳ ಸಂಖ್ಯೆ ಹೆಚ್ಚುತ್ತಿದೆ. ಆಳವಾದ ಜಾಗದಲ್ಲಿ ಮಾತ್ರ ಈ ಬೋಟುಗಳನ್ನು ಇರಿಸಲು ಅಥವಾ ಸಂಚಾರ ನಡೆಸಲು ಸಾಧ್ಯ. ಸಾಮಾನ್ಯವಾಗಿ ಬೋಟುಗಳ ಕೆಳಭಾಗ ಸುಮಾರು ಮೂರು ಮೀಟರ್ಗಳಷ್ಟು ಆಳವಿರುತ್ತದೆ. ಹಾಗಾಗಿ ಐದಾರು ಮೀಟರ್ಗಳಷ್ಟು ಹೂಳು ತೆಗೆದರೆ ಮಾತ್ರ ಸುಗಮವಾಗಿ ಸಂಚಾರ ನಡೆಸಬಹುದು ಎಂದು ಪ್ರಮೋದ್ ಹೇಳಿದ್ದಾರೆ.
ಉಡುಪಿಯ ಮಲ್ಪೆ ಮೀನುಗಾರಿಕಾ ಬಂದರು ಕರ್ನಾಟಕ ಕರಾವಳಿಗೆ ಪ್ರಕೃತಿ ಕೊಟ್ಟ ವರ. ಅವೈಜ್ಞಾನಿಕ ಕಾಮಗಾರಿಯಿಂದ ದೇವರು ಕೊಟ್ಟ ಈ ವರ ಸ್ಥಳೀಯ ಮೀನುಗಾರರಿಗೆ ಶಾಪವಾಗಿ ಪರಿಣಮಿಸದಿದ್ದರೆ ಸಾಕು ಎನ್ನುವುದು ಇಲ್ಲಿನ ಸ್ಥಳೀಯರ ಮಾತಾಗಿದೆ.
ವರದಿ: ಹರೀಶ್ ಪಾಲೆಚ್ಚಾರ್
ಇದನ್ನೂ ಓದಿ: ಬಂದರು ವಿಸ್ತರಣೆಗೆ ಮಿನುಗಾರರಿಂದ ವಿರೋಧ; ಸ್ಥಳೀಯವಾಗಿ ಮತ್ತೊಮ್ಮೆ ಪರಿಶೀಲನೆಗೆ ಮುಂದಾದ ಪರಿಸರ ಇಲಾಖೆ
ಗಡಿ ಮೀರಿ ಮೀನುಗಾರಿಕೆ: ತಪಾಸಣೆಗೆ ಬಂದ ಪೊಲೀಸರನ್ನೇ ಬಂಧಿಸಿ ಬಂದರಿಗೆ ಕರೆತಂದ ಮೀನುಗಾರರು, ಯಾವೂರಲ್ಲಿ?