ಉಡುಪಿ: ಕಾರ್ಕಳದ ಮಲೆಬೆಟ್ಟು ಬಳಿ ಹಸುವಿನ ದೇಹದ ಭಾಗಗಳು ಪತ್ತೆ
ಕಾರ್ಕಳ ತಾಲೂಕಿನ ಮಲೆಬೆಟ್ಟು ಬಳಿ ಹಸುವಿನ ತಲೆ ಮತ್ತು ಇತರ ದೇಹದ ಭಾಗಗಳು ಪತ್ತೆಯಾಗಿವೆ. ಸ್ವರ್ಣಾ ನದಿಯಲ್ಲಿ ಹಸುವಿನ ಅಂಗಾಂಗಗಳು ತೇಲಿ ಬಂದಿರಬಹುದು ಎಂದು ಅನುಮಾನಿಸಲಾಗಿದೆ. ಹಿಂದೂಪರ ಸಂಘಟನೆಗಳು ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮಾಳ, ಕಡಾರಿ, ಎಸ್.ಕೆ.ಬಾರ್ಡರ್ ಬಳಿ ಅಕ್ರಮ ಕಸಾಯಿಖಾನೆ ಇರುವ ಶಂಕೆ ವ್ಯಕ್ತವಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ, ಜುಲೈ 14: ಇತ್ತೀಚಿಗಷ್ಟೇ ಬ್ರಹ್ಮಾವರ ತಾಲೂಕು ಕುಂಜಾಲುವಿನಲ್ಲಿ ಹಸುವಿನ (Cow) ರುಂಡ ಪತ್ತೆಯಾಗಿತ್ತು. ಈ ಬೆನ್ನಲ್ಲೇ ಉಡುಪಿ (Udupi) ಜಿಲ್ಲೆಯ ಕಾರ್ಕಳ (Karkala) ತಾಲೂಕಿನ ಮಲೆಬೆಟ್ಟು ದುರ್ಗಾ ಗ್ರಾಮ ಪಂಚಾಯತ್ ವ್ಯಪ್ತಿಯ ನಿರ್ಜನ ಪ್ರದೇಶದಲ್ಲಿ ಹಸುವಿನ ತಲೆ ಬರುಡೆ ಮತ್ತು ಇತರ ಭಾಗಗಳು ಪತ್ತೆಯಾಗಿವೆ. ಹಸು ದೇಹದ ಭಾಗಗಳು ಸ್ವರ್ಣಾ ನದಿಯಲ್ಲಿ ತೇಲಿ ಬಂದಿರುವ ಸಾಧ್ಯತೆ ಇದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಹಿಂದೂ ಪರ ಸಂಘಟನೆ ಕಾರ್ಯಕರ್ತರು ದೌಡಾಯಿಸಿದರು. ಕಾರ್ಕಳ ಪೊಲೀಸರು ಸಹಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾಳ, ಕಡಾರಿ, ಎಸ್.ಕೆ.ಬಾರ್ಡರ್ ಬಳಿ ಅಕ್ರಮ ಕಸಾಯಿಖಾನೆ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಮನ ದೇವಸ್ಥಾನದ ಬಳಿ ಹಸುವಿನ ರುಂಡ ಪತ್ತೆ
ಬ್ರಹ್ಮಾವರ ತಾಲೂಕಿನ ಕುಂಜಾಲು ರಾಮ ಮಂದಿರದ ಬಳಿ ಕಳೆದ ತಿಂಗಳು ಗೋವಿನ ರುಂಡ ಪತ್ತೆಯಾಗಿತ್ತು. ಘಟನೆ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆಗೆ ಉಡುಪಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರು ನಾಲ್ಕು ತಂಡಗಳನ್ನು ರಚಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಘಟನೆ ನಡೆದು 24 ಗಂಟೆಯೊಳಗಾಗಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಗರ್ಭ ಧರಿಸಿದ್ದ ಹಸುವಿನ ತಲೆಯನ್ನೇ ಕಡೆಯಲಾಗಿತ್ತು. ಹೊಟ್ಟೆಯೊಳಗಿದ್ದ ಕರುವನ್ನು ಹೊರತೆಗೆದು ಹಸುವಿನ ದೇಹ ಎತ್ತುಕೊಂಡು ಹೋಗಿದ್ದರು. ಇತ್ತೀಚೆಗೆ ಬೆಂಗಳೂರು ದಕ್ಷಿಣ ತಾಲೂಕಿನ ಸೂಲಿವಾರ ಗ್ರಾಮದಲ್ಲಿ ಹಾಲಿನ ಡೈರಿ ಅಧ್ಯಕ್ಷರಿಗೆ ಸೇರಿದ್ದ ಹಸುವಿನ ಕೆಚ್ಚಲು ಕೊಯ್ದು ದುಷ್ಕರ್ಮಿಗಳು ಕ್ರೌರ್ಯ ಮೆರೆದಿರುವಂತಹ ಘಟನೆ ನಡೆದಿತ್ತು. ಇದಕ್ಕೂ ಮುನ್ನ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ಯಲಾಗಿತ್ತು.
ಇದನ್ನೂ ಓದಿ: ಮೇಯಲು ಬಿಟ್ಟಿದ್ದ ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ಕಿಡಿಗೇಡಿಗಳು
ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದಿದ್ದ ಪ್ರಕರಣ ಕರ್ನಾಟಕದಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಪ್ರಕರಣ ಮಾಸುವ ಮುನ್ನವೇ ಬಾಗಲಕೋಟೆ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕೆಲವೆಡೆ ಮೂಕ ಪ್ರಾಣಿ ಮೇಲೆ ದುಷ್ಕರ್ಮಿಗಳು ಕೌರ್ಯ ಎಸಗಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:00 pm, Mon, 14 July 25







