ಕಾರವಾರದಲ್ಲಿ ರಾಜಕೀಯ ಸಂಚಲನ: ಗೋವಾ ಲಿಕ್ಕರ್ ವಶಪಡಿಸಿಕೊಂಡ ಅಬ್ಕಾರಿ ಇಲಾಖೆ -ಅಕ್ರಮ ಬೆಂಬಲಿಸಿದ ಶಾಸಕ ಸೈಲ್, ಮಾಜಿ ಶಾಸಕಿ ಫುಲ್ ಗರಂ!
ಒಟ್ಟಿನಲ್ಲಿ ಅಕ್ರಮ ಮದ್ಯಸಾರವನ್ನು ಹಿಡಿದು ಅಬಕಾರಿ ಇಲಾಖೆ ಭರ್ಜರಿ ಬೇಟೆಯಾಡಿದೆಯಾದ್ರೂ, ಶಾಸಕರ ಮಧ್ಯ ಪ್ರವೇಶ ಇದೀಗ ಬಿಜೆಪಿಗೆ ದೊಡ್ಡ ಅಸ್ತ್ರವಾಗಿದೆ. ಮಾಜಿ ಶಾಸಕಿ ರೂಪಾಲಿ ನಾಯ್ಕ್, ಶಾಸಕ ಸತೀಶ್ ಸೈಲ್ ಹಾಗೂ ಅವರ ಬೆಂಬಲಿಗರ ವಿರುದ್ಧ ಯುದ್ಧ ಸಾರಿದ್ದು, ಪ್ರಕರಣ ಯಾವ ಮಟ್ಟಕ್ಕೆ ತಲುಪಲಿದೆ ಅನ್ನೋದು ಕಾದು ನೋಡಬೇಕಿದೆ.
ರಾಜ್ಯದ ಬೀದರ್‌ನಿಂದ ಗೋವಾಕ್ಕೆ ಸಾಗಾಟವಾಗುತ್ತಿದ್ದ ಸಾವಿರಾರು ಲೀಟರ್ ಅಕ್ರಮ ಮದ್ಯ ಸಾರವನ್ನು ಹಿಡಿಯುವ ಮೂಲಕ ಕಾರವಾರದ ಅಬಕಾರಿ ಅಧಿಕಾರಿಗಳು ದೊಡ್ಡ ಬೇಟೆಯಾಡಿದ್ದಾರೆ. ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಮದ್ಯ ಉತ್ಪಾದಿಸಬಹುದಾದ ಈ ಮದ್ಯಸಾರವನ್ನು ಹಿಡಿದ ಬೆನ್ನಿಗೇ ಕಾರವಾರದಲ್ಲಿ ರಾಜಕೀಯ ಸಂಚಲನವೇ ಪ್ರಾರಂಭವಾಗಿದೆ. ಮದ್ಯಸಾರ ಹಿಡಿದ ವಿಚಾರದಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದ್ದ ಕಾರವಾರ ಶಾಸಕ ಸತೀಶ್ ಸೈಲ್ ವಿರುದ್ಧ ಇದೀಗ ಬಿಜೆಪಿ ಭ್ರಷ್ಟಾಚಾರದ ಆರೋಪ ಮಾಡಿದೆ. ಈ ಕುರಿತಾದ ಒಂದು ಸ್ಟೋರಿ ಇಲ್ಲಿದೆ ನೋಡಿ.
ಹೌದು, ರಾಜ್ಯದ ಬೀದರ್‌ನಿಂದ ಗೋವಾದ ಕಾಣಕೋಣದತ್ತ ನವೆಂಬರ್ 4ರಂದು ಬೆಳಗ್ಗೆ 7ಕ್ಕೆ 18 ಲಕ್ಷ ರೂ. ಮೌಲ್ಯದ 30,000 ಲೀಟರ್ ENA ಮದ್ಯಸಾರವನ್ನು ಹೊತ್ತೊಯ್ಯುತ್ತಿದ್ದ ಟ್ಯಾಂಕರನ್ನು ಕಾರವಾರದ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ಕಾರವಾರದ ಅಬಕಾರಿ ಅಧಿಕಾರಿಗಳು ಮಾಹಿತಿ ಮೇರೆಗೆ ವಶಕ್ಕೆ ಪಡೆದುಕೊಂಡಿದ್ದರು. ಈ ಮದ್ಯಸಾರದ ಅಸಲೀಯತ್ತನ್ನು ತಿಳಿದುಕೊಳ್ಳಲು ಇದರ ಸ್ಯಾಂಪಲನ್ನು ಧಾರವಾಡ ಹಾಗೂ ಹಳಿಯಾಳಕ್ಕೆ ಕಳುಹಿಸಲಾಗಿತ್ತು.
ಆದರೆ, ನಿನ್ನೆ ಏಕಾಏಕಿ ಮಾಜಾಳಿ ಚೆಕ್‌ಪೋಸ್ಟ್‌ನತ್ತ ತೆರಳಿದ ಕಾರವಾರ ಶಾಸಕ ಸತೀಶ್ ಸೈಲ್, ಟ್ಯಾಂಕರನ್ನು ಇರಿಸಿಕೊಂಡದ್ದು ಯಾಕೆ…? ಕೂಡಲೇ ಬಿಡುವಂತೆ ಒತ್ತಾಯಿಸಿದ್ದರು ಎನ್ನಲಾಗಿದೆ. ಆದರೆ, ಇದಕ್ಕೆ ಅಧಿಕಾರಿ ಒಲ್ಲದ ಕಾರಣ ಶಾಸಕ ಸತೀಶ್ ಸೈಲ್ ಹಾಗೂ ಅಬಕಾರಿ ಇಲಾಖೆ ಅಧಿಕಾರಿಯ ನಡುವೆ ಮಾತಿನ ಚಕಮಕಿಯೇ ನಡೆದಿದೆ. ಪ್ರಕರಣ ದಾಖಲಿಸದೇ ಇರಿಸಿಕೊಂಡಿದ್ದ ಟ್ಯಾಂಕರ್ ಮೇಲೆ ಪ್ರಕರಣ ಯಾಕೆ ದಾಖಲಿಸಿಲ್ಲ ಎಂದು ಶಾಸಕರು ಮರು ಪ್ರಶ್ನಿಸಿದಾಗ ವರದಿ ಬರುವ ಮುನ್ನ ಲಾರಿ ಬಿಡಲು ಸಾಧ್ಯವಿಲ್ಲ ಎಂದ ಅಧಿಕಾರಿಯ ವಿರುದ್ಧ ಶಾಸಕ ಸೈಲ್ ಗರಂ ಆಗಿದ್ದರು.
ಇದೇ ವಿಚಾರ ಸಂಬಂಧಿಸಿ ಕಾರವಾರದಲ್ಲಿ ರಾಜಕೀಯ ಸಂಚಲನವಾಗಿದ್ದು, ಅಬಕಾರಿ ಅಧಿಕಾರಿಗಳನ್ನು ಪ್ರಶ್ನಿಸಿದ್ದ ಶಾಸಕ ಸತೀಶ್ ಸೈಲ್ ವಿರುದ್ಧ ಬಿಜೆಪಿಗರು ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಇಂದು ಜಂಟಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಶಾಸಕಿ ರೂಪಾಲಿ ನಾಯ್ಕ್, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ್ ನಾಯ್ಕ್ ಹಾಗೂ ಮಾಧ್ಯಮ ವಕ್ತಾರ ನಾಗರಾಜ ನಾಯ್ಕ್, ಕಾರವಾರದ ಲಿಕ್ಕರ್ ಹಗರಣದಲ್ಲಿ ಶಾಸಕರು ಹಾಗೂ ಆಪ್ತರು ಭಾಗಿಯಾಗಿದ್ದಾರೆ. ಬಾರ್ಡರ್‌ನಲ್ಲಿ ಸ್ಪಿರಿಟ್ ಅನ್ನು ಗೋವಾಕ್ಕೆ ದಾಟಿಸಲು ಅಬಕಾರಿ ಅಧಿಕಾರಿ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ, ಸತೀಶ್ ಸೈಲ್ ಹಾಗೂ ಮದ್ಯಸಾರದ ವಾಹನಕ್ಕೆ ಏನು ಸಂಬಂಧ ಎಂದು ಅಧಿಕಾರಿಗಳು ತೀವ್ರ ತನಿಖೆ ಕೈಗೊಳ್ಳಬೇಕು. ಅಲ್ಲದೇ, ಶಾಸಕ ಸತೀಶ್ ಸೈಲ್ ತನ್ನ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದ್ದಾರೆ.
ಹುಬ್ಬಳ್ಳಿಯಿಂದ ಯಲ್ಲಾಪುರ ಮಾರ್ಗವಾಗಿ ಕಾರವಾರಕ್ಕೆ ಬಂದಿದ್ದ ಮದ್ಯಸಾರದ ವಾಹನವನ್ನು ವಶಕ್ಕೆ ಪಡೆದುಕೊಂಡ ಅಬಕಾರಿ ಅಧಿಕಾರಿಗಳು ಸ್ಯಾಂಪಲನ್ನು ಪರೀಕ್ಷೆಗಾಗಿ ಧಾರವಾಡ, ಹಳಿಯಾಳ ಹಾಗೂ ಬೆಂಗಳೂರಿಗೆ ಕಳುಹಿಸಿದ್ದರು. ಅಲ್ಲದೇ, ಪ್ರಕರಣ ಸಂಬಂಧಿಸಿ ತನಿಖೆ ಪ್ರಾರಂಭಿಸಿದ ಅಬಕಾರಿ ಅಧಿಕಾರಿಗಳು, ಬೀದರ್ ರವೀಂದ್ರ ಡಿಸ್ಟಿಲರೀಸ್‌ನಿಂದ ಈ ಸ್ಪಿರಿಟ್ ಬಂದಿದ್ದು, ಗ್ಲೋಬಲ್ ಕೆಮಿಕಲ್ಸ್ ಹೆಸರಿನಲ್ಲಿ ಗೋವಾದ ಕಾಣಕೋಣಕ್ಕೆ ತೆರಳುವ ಮಾಹಿತಿ ಪಡೆದುಕೊಂಡಿದ್ದಾರೆ.
ಅಲ್ಲದೇ, ಗೋವಾದಲ್ಲಿ ಗೋವಾದಲ್ಲಿ ಯಾವುದೇ ಗ್ಲೋಬಲ್ ಕೆಮಿಕಲ್ ಯೂನಿಟ್ ಇಲ್ಲವೆಂದು ಖಾತರಿ ಪಡಿಸಿಕೊಂಡು ಅಧಿಕಾರಿಗಳು, ಖಾಲಿ ಶೆಡ್ ಇರುವ ಸ್ಥಳದ ಫೋಟೊ ಕೂಡಾ ತೆಗೆದುಕೊಂಡು ಬಂದಿದ್ದರು. ಶಾಸಕರ ಜತೆಗಿನ ಘಟನೆಯ ಬಳಿಕ ಧಾರವಾಡ, ಹಳಿಯಾಳದಿಂದ ದೊರೆತ ಪರೀಕ್ಷಣಾ ವರದಿಯಲ್ಲಿ ಹೈಗ್ರೇಡ್ ENA ಎಂದು ಫಲಿತಾಂಶ ಬಂದ ಹಿನ್ನೆಲೆಯಲ್ಲಿ 18,24,923 ರೂ. ಮೌಲ್ಯದ 30,000 ಲೀಟರ್ ಮದ್ಯಸಾರದ ಜತೆ 35 ಲಕ್ಷ ರೂ. ಮೌಲ್ಯದ ಎಂಪಿ ನೋಂದಣಿಯ ಟ್ಯಾಂಕರ್ ಅನ್ನು ವಶಪಡಿಸಿಕೊಂಡಿದ್ದಾರೆ.
ಇಲ್ಲಿರುವ ಪ್ರಮುಖ ವಿಚಾರವೆಂದರೆ ಈ ಮದ್ಯಸಾರವನ್ನು ಬಳಸಿ ನ್ಯೂಟ್ರಲ್ ಸ್ಪಿರಿಟ್‌ನೊಂದಿಗೆ 90,000ಲೀ ಮದ್ಯ ತಯಾರಿಕೆ ಮಾಡಬಹುದಾಗಿದ್ದು, ಅಂದ್ರೆ ಕಡಿಮೆಯೆಂದರೂ 3.66 ಕೋಟಿ ರೂ. ಮೌಲ್ಯದ ಅಕ್ರಮ ಮದ್ಯಗಳನ್ನು ತಯಾರಿಸಬಹುದಾಗಿದೆ. ಈ ಪ್ರಕರಣ ಸಂಬಂಧಿಸಿ ಮಧ್ಯಪ್ರದೇಶ ಇಂದೋರದ ಮಗ್ಗರ್ ಸಿಂಗ್ (52) ಬಂಧಿಸಿದ್ದು, ಬೀದರ್ ಮಿರ್ಜಾಪುರದ M/s ರವೀಂದ್ರ ಆ್ಯಂಡ್ ಕಂಪೆನಿ ಲಿಮಿಟೆಡ್ ಹಾಗೂ ಗೋವಾದ ಗ್ಲೋಬಲ್ ಕೆಮಿಕಲ್ಸ್ ಮಾರ್‌ಗಾವ್ ಕಂಪೆನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ, ಟ್ಯಾಂಕರ್ ಮಾಲಕನನ್ನು ಬಂಧಿಸಲು ನಿರ್ಧರಿಸಲಾಗಿದೆ.
ಒಟ್ಟಿನಲ್ಲಿ ಅಕ್ರಮ ಮದ್ಯಸಾರವನ್ನು ಹಿಡಿದು ಅಬಕಾರಿ ಇಲಾಖೆ ಭರ್ಜರಿ ಬೇಟೆಯಾಡಿದೆಯಾದ್ರೂ, ಶಾಸಕರ ಮಧ್ಯ ಪ್ರವೇಶ ಇದೀಗ ಬಿಜೆಪಿ ಪಾಲಿಗೆ ದೊಡ್ಡ ಅಸ್ತ್ರ ದೊರೆತಂತಾಗಿದೆ. ಇಷ್ಟು ದಿನಗಳ ಕಾಲ ಸೈಲೆಂಟ್ ಇದ್ದ ಮಾಜಿ ಶಾಸಕಿ ರೂಪಾಲಿ ನಾಯ್ಕ್, ಶಾಸಕ ಸತೀಶ್ ಸೈಲ್ ಹಾಗೂ ಅವರ ಬೆಂಬಲಿಗರ ವಿರುದ್ಧ ಯುದ್ಧ ಸಾರಿದ್ದು, ಪ್ರಕರಣ ಯಾವ ಮಟ್ಟಕ್ಕೆ ತಲುಪಲಿದೆ ಅನ್ನೋದು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ