ಕಾರವಾರ ನೌಕಾಪಡೆಯ ಸೂಕ್ಷ್ಮ ಮಾಹಿತಿ ಪಾಕ್ಗೆ ನೀಡುತ್ತಿದ್ದ ಮತ್ತೋರ್ವ ಅರೆಸ್ಟ್: ಬಂಧಿತರ ಸಂಖ್ಯೆ 8ಕ್ಕೆ ಏರಿಕೆ
ಭಾರತೀಯ ನೌಕಾಪಡೆಯ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳಿಗೆ ಹಂಚಿಕೊಂಡ ಆರೋಪದ ಮೇಲೆ ಕಾರವಾರದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ. ಇದರಿಂದ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕಿಸ್ತಾನದ ಪಿಐಒಗಳ ಜೊತೆ ಸಂಪರ್ಕ ಹೊಂದಿದ್ದರು ಎಂದು ಎನ್‌ಐಎ ತನಿಖೆಯಿಂದ ತಿಳಿದು ಬಂದಿದೆ.

ಉತ್ತರ ಕನ್ನಡ, ಫೆಬ್ರವರಿ 19: ನೌಕಾಪಡೆಯ ಸೂಕ್ಷ್ಮ ಮಾಹಿತಿ ಹಂಚಿಕೊಳ್ಳುತ್ತಿದ್ದ ಮತ್ತೋರ್ವನನ್ನು ಎನ್ಐಎ ಪೊಲೀಸರು (NIA Police) ಬಂಧಿಸಿದ್ದಾರೆ. ಕೇರಳದ ಕೊಚ್ಚಿಯಲ್ಲಿ ಅಭಿಲಾಷ್ ಪಿ.ಎ ಬಂಧಿತ ಆರೋಪಿ. ಪಾಕ್ ಐಎಸ್‌ಐ-ಸಂಬಂಧಿತ ವಿಶಾಖಪಟ್ಟಣಂ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಕಾರವಾರದಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು. ಇಂದು ಮತ್ತೊಬ್ಬನನ್ನು ಬಂಧಿಸುವ ಮೂಲಕ ಒಟ್ಟು ಬಂಧಿತರ ಸಂಖ್ಯೆ ಎಂಟಕ್ಕೆ ಏರಿಕೆ ಆಗಿದೆ. ಈ ಕುರಿತು ಎನ್ಐಎ ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ನಿನ್ನೆ ವೆಥನ್ ಲಕ್ಷ್ಮಣ್ ತಾಂಡೇಲ್ ಮತ್ತು ಅಕ್ಷಯ್ ರವಿ ನಾಯ್ಕ್ ಎಂಬುವವರನ್ನು ಅಧಿಕಾರಿಗಳು ಬಂಧಿಸಿದ್ದರು. ಬಂಧಿತರಾಗಿರುವ ಎಲ್ಲಾ ಮೂವರು ಆರೋಪಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಪಾಕಿಸ್ತಾನದ ಗುಪ್ತಚರ ಆಪರೇಟಿವ್‌ಗಳೊಂದಿಗೆ (ಪಿಐಒ) ಸಂಪರ್ಕದಲ್ಲಿದ್ದರು. ಕಾರವಾರ ನೌಕಾನೆಲೆ ಮತ್ತು ಕೊಚ್ಚಿ ನೌಕಾನೆಲೆಯಲ್ಲಿ ಭಾರತೀಯ ರಕ್ಷಣಾ ಸಂಸ್ಥೆಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು.
ಇದನ್ನೂ ಓದಿ: ಕಾರವಾರ ನೌಕಾನೆಲೆಯ ಮಾಹಿತಿ ಸೋರಿಕೆ: ಹೈದರಾಬಾದ್ ಎನ್ಐಎ ಪೊಲೀಸರಿಂದ ಉತ್ತರ ಕನ್ನಡದ ಇಬ್ಬರ ಬಂಧನ
ಎನ್ಐಎ ತನಿಖೆ ಪ್ರಕಾರ, ಮಾಹಿತಿಯ ವಿನಿಮಯವಾಗಿ ಪಿಐಒಗಳಿಂದ ಹಣವನ್ನು ಪಡೆಯುತ್ತಿದ್ದರು. ಐಪಿಸಿಯ ಸೆಕ್ಷನ್ 120 ಬಿ ಮತ್ತು 121 ಎ, ಯುಎ (ಪಿ) ಕಾಯ್ದೆ ಸೆಕ್ಷನ್ 17 ಮತ್ತು 18 ಮತ್ತು ಸೆಕ್ಷನ್ 3 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆದಿದೆ.
ಆಂಧ್ರಪ್ರದೇಶದ ಕೌಂಟರ್ ಗುಪ್ತಚರ ದಾಖಲಿಸಿದ ಪ್ರಕರಣದಲ್ಲಿ ಎನ್‌ಐಎ ಇದುವರೆಗೆ ಇಬ್ಬರು ಪಾಕಿಸ್ತಾನಿ ಆಪರೇಟಿವ್ ಸೇರಿದಂತೆ ಐವರ ವಿರುದ್ಧ ಆರೋಪಪಟ್ಟಿ ಸಲ್ಲಿಸಿದೆ. ಭಾರತೀಯ ನೌಕಾಪಡೆ ಸೂಕ್ಷ್ಮ ಪ್ರಮುಖ ಮಾಹಿತಿ ಸೋರಿಕೆಗೆ ಸಂಬಂಧಿಸಿದ ಬೇಹುಗಾರಿಕೆ ದಂಧೆ ನಡೆಸಿದ ಆರೋಪ ಮಾಡಲಾಗಿದೆ. ಪಾಕಿಸ್ತಾನಿ ಪ್ರಜೆ ಮೀರ್ ಬಾಲಾಜ್ ಖಾನ್ ಮತ್ತು ಬಂಧಿತ ಆರೋಪಿ ಆಕಾಶ್ ಸೋಲಂಕಿ ಭಾಗಿಯಾಗಿರುವ ಬಗ್ಗೆ ಎನ್‌ಐಎ ತನಿಖೆಯಿಂದ ಬಯಲಾಗಿದೆ.
ಇದನ್ನೂ ಓದಿ: ಕಾರವಾರ: ಸೀಬರ್ಡ್ ನೌಕಾನೆಲೆ ಫೋಟೋ, ಮಾಹಿತಿ ಪಾಕಿಸ್ತಾನಕ್ಕೆ ರವಾನೆ: ಮೂವರು ಎನ್ಐಎ ವಶಕ್ಕೆ
ಜೂನ್ 2023ರ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮತ್ತೊಬ್ಬ ಪಿಐಒ ಅಲ್ವೆನ್, ಮನಮೋಹನ್ ಸುರೇಂದ್ರ ಪಾಂಡ ಮತ್ತು ಅಮಾನ್ ಸಲೀಂ ಶೇಖ್ ಎಂದು ಗುರುತಿಸಲಾಗಿದ್ದು, ಪಾಕ್ ಮೂಲದ ಮತ್ತು ಇತರ ದೇಶವಿರೋಧಿ ಬೇಹುಗಾರಿಕೆ ಪಿತೂರಿಯನ್ನು ಬಯಲಿಗೆಳೆಯಲು ಎನ್ಐಎ ತನಿಖೆ ಮುಂದುವರೆಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.