ಪ್ರವಾಸಿಗರಿಗೆ ನಿರಾಸೆ: ಹವಾಮಾನ ವೈಪರಿತ್ಯ ಹಿನ್ನೆಲೆ ಉತ್ತರ ಕನ್ನಡದಲ್ಲಿ ಜಲಸಾಹಸ ಕ್ರೀಡೆಗೆ ನಿರ್ಬಂಧ
ಹವಾಮಾನ ವೈಪರಿತ್ಯ ಹಾಗೂ ಮಳೆಗಾಲದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಜಲಸಾಹಸ ಕ್ರೀಡೆಗಳನ್ನು ನಿರ್ಬಂಧಿಸಲಾಗಿದೆ. ಮೇ 19 ರಿಂದ ಮಳೆಗಾಲ ಮುಗಿಯುವವರೆಗೂ ಅರಬ್ಬಿ ಸಮುದ್ರ, ಶರಾವತಿ ಹಿನ್ನೀರು ಮತ್ತು ಅಘನಾಶಿನಿ ನದಿಗಳಲ್ಲಿನ ಬೋಟಿಂಗ್, ಸ್ಕೂಬಾ ಡೈವಿಂಗ್ ಸೇರಿದಂತೆ ಎಲ್ಲ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದೆ. ಈ ನಿರ್ಧಾರದಿಂದ ಪ್ರವಾಸಿಗರಿಗೆ ನಿರಾಸೆಯಾಗಿದ್ದು, ಪ್ರೀ-ವೆಡ್ಡಿಂಗ್ ಸೆಟ್‌ಗಳ ಅಳವಡಿಕೆಗೂ ನಿರ್ಬಂಧವಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಕಾರವಾರ, ಮೇ 19: ಹವಾಮಾನ ವೈಪರಿತ್ಯ ಹಿನ್ನೆಲೆ ಅರಬ್ಬಿ ಸಮುದ್ರ, ಶರಾವತಿ ಹಿನ್ನೀರು ಮತ್ತು ಅಘನಾಶಿನಿ ನದಿಯಲ್ಲಿ ಜಲಸಾಹಸ ಕ್ರೀಡೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಇಂದಿನಿಂದ (ಮೇ 19) ಮಳೆಗಾಲ ಮುಕ್ತಾಯವರೆಗೆ ಜಲಸಾಹಸ ಕ್ರೀಡೆಗೆ ನಿರ್ಬಂಧ ವಿಧಿಸಿ ಜಲಾಸಾಹಸ ಕ್ರಿಡೆ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಆದೇಶ ಹೊರಡಿಸಿದೆ. ಈ ಹಿನ್ನೆಲೆ ನೀರಲ್ಲಿ ಮೋಜು ಮಸ್ತಿ ಮಾಡಲೆಂದೇ ಜಿಲ್ಲೆಗೆ ಹೆಚ್ಚಾಗಿ ಆಗಮಿಸುತ್ತಿದ್ದ ಪ್ರವಾಸಿಗರಿಗೆ ಭಾರಿ ನಿರಾಸೆಯಾಗಿದೆ. ಬೀಚ್ನಲ್ಲಿ ಪ್ರೀವೆಡ್ಡಿಂಗ್ ಸೆಟ್ ಅಳವಡಿಕೆಗೂ ಬ್ರೇಕ್ ಹಾಕಲಾಗಿದೆ.
ಮುಖ್ಯಾಂಶಗಳು
- ಹವಾಮಾನ ವೈಪರಿತ್ಯ ಹಿನ್ನೆಲೆ ಜಲಸಾಹಸ ಕ್ರೀಡೆಗಿಲ್ಲ ಅವಕಾಶ
- ಮಳೆಗಾಲ ಮುಕ್ತಾಯವರೆಗೂ ಜಲಸಾಹಸ ಕ್ರೀಡೆಗೆಗಳಿಗೆ ನಿರ್ಬಂಧ
- ಜಲಾಸಾಹಸ ಕ್ರಿಡೆ ನಿರ್ವಹಣೆ & ಮೇಲುಸ್ತುವಾರಿ ಸಮಿತಿ ಆದೇಶ
ಆದೇಶದಲ್ಲಿ ಏನಿದೆ?
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಮುಖ್ಯ ಬೀಚ್, ಓಂ ಬೀಚ್, ಕುಡ್ಲೆ ಬೀಚ್, ಹಾಫ್‌ಮೂನ್ ಬೀಚ್, ಪ್ಯಾರಡೈಸ್ ಬೀಚ್, ಭಟ್ಕಳ ತಾಲ್ಲೂಕಿನ ಮುರುಡೇಶ್ವರ ಬೀಚ್ ಮತ್ತು ಕಾರವಾರ ಬೀಚ್ಗಳಲ್ಲಿ ಪ್ರವಾಸಿ ಬೋಟಿಂಗ್ ಹಾಗೂ ಜಲಸಾಹಸ ಕ್ರೀಡೆ ಚಟುವಟಿಕೆಗೆ ಪ್ರವಾಸೋದ್ಯಮ ಇಲಾಖೆಯಿಂದ ಟೆಂಡರ್ ಕರೆದು ಕಾರ್ಯಾದೇಶ ನೀಡಲಾಗಿತ್ತು. ಮುರ್ಡೇಶ್ವರದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಚಟುವಟಿಕೆ ನಡೆಸಲೂ ಅನುಮತಿ ನೀಡಲಾಗಿತ್ತು. ಹಾಗೆಯೇ ಕುಮಟಾ ತಾಲೂಕಿನ ತದಡಿ ಅಘನಾಶಿನಿ ನದಿ ತೀರ, ಹೊನ್ನಾವರ ಮತ್ತು ಕಾಸರಕೋಡು ಭಾಗದ ಶರಾವತಿ ಹಿನ್ನೀರಿನಲ್ಲಿ ಪ್ರವಾಸಿ ಬೋಟಿಂಗ್ ಚಟುವಟಿಕೆ ಕೈಗೊಳ್ಳಲು ಅವಕಾಶ ನೀಡಲಾಗಿತ್ತು. ಆದರೆ ಇವೆಲ್ಲವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರೋದಾಗಿ ಜಲಾಸಾಹಸ ಕ್ರಿಡೆ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ತಿಳಿಸಿದೆ.
ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ಹೆಚ್ಚಿದ ಗಾಳಿಯ ವೇಗ; ಲಂಗರು ಹಾಕಿದ ನೂರಾರು ಬೋಟ್ಗಳು
ಜೊತೆಗೆ ಹೊನ್ನಾವರದ ಅಪ್ಸರಕೊಂಡ ಕಡಲ ತೀರದಲ್ಲಿ ಪ್ರೀ ವೆಡ್ಡಿಂಗ್ ಸೆಟ್ ಅಳವಡಿಕೆಗೂ ಅವಕಾಶ ಇರುವುದಿಲ್ಲ. ಹವಾಮಾನ ಇಲಾಖೆಯಿಂದ ಚಂಡಮಾರುತ ಹಾಗೂ ಭಾರಿ ಗಾಳಿ ಬೀಸುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಮಳೆಗಾಲಕೂಡ ಪ್ರಾರಂಭವಾಗುತ್ತಿದೆ. ಈ ಹಿನ್ನೆಲೆ ಕಡಲತೀರಗಳಲ್ಲಿ ಹಾಗೂ ನದಿತೀರಗಳಲ್ಲಿ ನಡೆಸುತ್ತಿರುವ ಜಲಸಾಹಸ ಕ್ರೀಡೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
