ಕೈ ಬಳೆ‌ ಒಡೆದಾವು, ಕಣ್ಣೀರ ಹರಿದಾವು -ಗೂಢಾರ್ಥದ ವಾಣಿ ನುಡಿದ ಬಬಲಾದಿ ಸದಾಶಿವ ಮುತ್ಯಾರ ಮಠದ ಸ್ವಾಮೀಜಿ

ಕೈ ಬಳೆ‌ ಒಡೆದಾವು, ಕಣ್ಣೀರ ಹರಿದಾವು -ಗೂಢಾರ್ಥದ ವಾಣಿ ನುಡಿದ ಬಬಲಾದಿ ಸದಾಶಿವ ಮುತ್ಯಾರ ಮಠದ ಸ್ವಾಮೀಜಿ
ಬಬಲಾದಿ ಸದಾಶಿವ ಮುತ್ಯಾರ ಮಠದ ಸ್ವಾಮೀಜಿ

ತಂತ್ರ ಅತಂತ್ರ, ಜಗತ್ತಿನಲ್ಲಿ ಅಧಿಕ ಪಾಪ. ಕಲಿ ಪುರಷನ ಮುಂದೆ ಆಟ ಕೆಟ್ಟು ಹೋಗಿದೆ. ಪಡವಲು ದಿಕ್ಕಿಗೆ ತ್ರಾಸು, ಕೇಡು. ಜೋಳ, ಕಡೆಲೆ ರಸ ವರ್ಗಗಳು ಕೆಂಡಮಂಡಲ. ಉತ್ತರ ದಿಕ್ಕಿನಿಂದ ಮುಂದೆ ಮುರುಕಾದಿತು. ನೀತಿಯಿಂದ ನಿಜರೂಪ ತೋರುತೈತೆ. ದೇಶದಲ್ಲೆ ಶಾಂತಿ, ಸೌಹಾರ್ದತೆ ಕೊರತೆ ಇದೆ. ಪೀತನಾಶವಾಗುವ ಸೂಚನೆ -ಬಬಲಾದಿ ಸದಾಶಿವ ಮುತ್ಯಾರ ಮಠ

TV9kannada Web Team

| Edited By: Ayesha Banu

Mar 04, 2022 | 7:11 PM

ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಬಬಲಾದಿ ಸದಾಶಿವ ಮುತ್ಯಾರ ಮಠದ (Babaladi Sadashiv Mutya Mutt ) ಪೀಠಾಧಿಪತಿ ಭವಿಷ್ಯವಾಣಿ ನುಡಿದಿದ್ದಾರೆ. ಬಬಲಾದಿ ಮಠದ ಜಾತ್ರಾ ಸಮಯದಲ್ಲಿ ಮಠದ ಪೀಠಾಧಿಪತಿ ಸಿದ್ರಾಮಯ್ಯ ಹೊಳಿಮಠ ಸ್ವಾಮೀಜಿಯಿಂದ ಕಾಲಜ್ಞಾನದ ಭವಿಷ್ಯವಾಣಿ ಹೊರ ಬಿದ್ದಿದೆ. ಮುಂಗಾರಿ ಮಳೆ ಫಲವಾಗಿ ಬೆಳೆ ಜಾಸ್ತಿ. ಹಿಂಗಾರಿ ಮಧ್ಯಮ ಫಲ. ಕಂಪ್ಲಿ ದೇಶಕ್ಕೆ ಬರ, ದೇಶದೊಳಗೆ ಆಹಾಕಾರ, ಕೆಟ್ಟ ಪರಿಣಾಮ. ಕೈ ಬಳೆ‌ ಒಡೆದಾವು, ಕಣ್ಣೀರ ಹರಿದಾವು ಎಂದು ಸ್ವಾಮೀಜಿ ಗೂಢಾರ್ಥದ ವಾಣಿ ನುಡಿದಿದ್ದಾರೆ.

ಇದು ಮಹಾಶಕ್ತಿಯನ್ನು ಹೊಂದಿರೋ ಮಠ. ಚಂದ್ರಗಿರಿಯ ಮೂಲ ಸಂಸ್ಥಾನದ ಶ್ರೀ ಸದಾಶಿವ ಮುತ್ಯಾರ ಮಠ ಪವಾಡದ ಕ್ಷೇತ್ರ. ಇದನ್ನು ಬೆಂಕಿಯ ಬಬಲಾದಿ ಎಂದು ಕರೆಯುತ್ತಾರೆ. ಈ ಜಾಗದಲ್ಲಿ ನಿಂತು ಮಾತನಾಡಿದರೆ ಅದು ಸುಳ್ಳಾಗದು ಎಂಬ ಪ್ರತೀತಿ ಇದೆ. ಬಿಳಿಗೋಡೆಯ ಮೇಲೆ ಕಪ್ಪು ಚುಕ್ಕಿಯಂತೆ ಇಲ್ಲಿ ಮಾತನಾಡಿದ್ದು ಹುಸಿಯಾಗದು ಎಂಬುದು ಕಳೆದ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಬಬಲಾದಿ ಗ್ರಾಮದ ಶ್ರೀ ಸದಾಶಿವ ಮುತ್ಯಾರ ಮಠದ ಜಾತ್ರಾ ಮಹೋತ್ಸವ ಸಡಗರ ಮನೆ ಮಾಡಿದೆ. ಇಂದು ಜಾತ್ರೆಯಲ್ಲಿ ಎರಡು ಲಕ್ಷಕ್ಕೂ ಆಧಿಕ ಭಕ್ತರು ಜಮಾಗೊಂಡಿದ್ದರು. ಕಾರಣ ಜಾತ್ರೆಯಲ್ಲಿ ಹಿಂದಿನ ಸಂಪ್ರದಾಯದಂತೆ ಶಿವರಾತ್ರಿಯ ಮೂರನೇ ದಿನ ಕಾಲಜ್ಞಾನ ಭವಿಷ್ಯ ಹೇಳಲಾಗುತ್ತದೆ. ಸದಾಶಿವ ಮುತ್ಯಾರ ಮಠದ ಪೀಠಾಧಿಪತಿ ಶ್ರೀ ಸಿದ್ದರಾಮಯ್ಯ ಹೊಳಿಮಠ ಮಠದ ರೀತಿ ರಿವಾಜುಗಳ ಪಾಲನೆ ಮಾಡುವುದರೊಂದಿಗೆ ಕಾಲಜ್ಞಾನ ಹೇಳುತ್ತಾರೆ. ಕಾಲಜ್ಞಾನ ಕೇಳಲು ಜಿಲ್ಲೆಯ ಅಷ್ಟೇಯಲ್ಲಾ ಸುತ್ತಮುತ್ತಲ ಜಿಲ್ಲೆಗಳ ಹಾಗೂ ಅನ್ಯ ರಾಜ್ಯಗಳ ಭಕ್ತರೂ ಹಾಜರಾಗಿದ್ದರು. ಕಳೆದ ಬಾರಿ 2021 ರ ಜಾತ್ರಾ ಸಂದರ್ಭದಲ್ಲಿ ಹಾಗೂ ಅದಕ್ಕಿಂತ ಹಿಂದಿನ ಜಾತ್ರೆಗಳಲ್ಲಿ ನುಡಿದಿದ್ದ ಕಾಲಜ್ಞಾನ ಭವಿಷ್ಯ ಇಂದಿಗೂ ಸುಳ್ಳಾಗಿಲ್ಲಾ, ಮುಂದೆಯೂ ಸುಳ್ಳಾಗದು ಎಂಬುದು ಭಕ್ತರ ನಂಬಿಕೆಯಾಗಿದೆ.

ಕಳೆದ ಬಾರಿ 2021 ರ ಜಾತ್ರೆಯಲ್ಲಿ ರಾಜಕೀಯ ಏರಿಳಿತ, ಕೊರೊನಾ ಮಹಾಮಾರಿ ಕಾಟ, ಗಣ್ಯ ವ್ಯಕ್ತಿಗಳ ಅಗಲುವಿಕೆ, ಅತೀವೃಷ್ಟಿ, ಪ್ರವಾಹ, ಯುದ್ದ, ದೇಶ ದೇಶಗಳ ನಡುವೆ ನಡೆಯೋ ಯುದ್ದ, ರಾಜಕಾರಣ ಸೇರಿದಂತೆ ಇನ್ನೂ ಹತ್ತಾರು ವಿಚಾರಗಳ ಕುರಿತು ಕಾಲಜ್ಞಾನ ಭವಿಷ್ಯ ನುಡಿಯಲಾಗಿತ್ತು. ಸ್ವಾಮೀಜಿಗಳು ನುಡಿದಿದ್ದ ಭವಿಷ್ಯವೆಲ್ಲಾ ನಿಜವಾಗಿತ್ತು. ಆ ಕಾರಣ ಈ ವರ್ಷದ ಕಾಲಜ್ಞಾನ ಕೇಳಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಮಠದ ಗದ್ದುಗೆಗಳನ್ನು ದರ್ಶನ ಮಾಡಲು ನೂಕು ನುಗ್ಗಲು ಮಾಡಿದರು. ಕಣ್ಣಿಗೆ ಕಾಣುವಷ್ಟು ಜನ ಸಾಗರ ಬಬಲಾದಿಯ ಮಠದ ಸುತ್ತಮುತ್ತ ನೆರೆದಿತ್ತು. ಭಕ್ತರು ಮಾತ್ರ ಬಬಲಾದಿ ಮಠದ ಕಾಲಜ್ಞಾನ ಹಿಂದೂ ಸುಳ್ಳಾಗಿಲ್ಲಾ, ಇಂದೂ ಹಾಗೂ ಮುಂದೂ ಎಂದಿಗೂ ಸುಳ್ಳಾಗಲ್ಲಾ ಎಂಬ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಸದಾಶಿವ ಮುತ್ಯಾರ ಜಾತ್ರೆಯ ವೇಳೆ ನುಡಿಯೋ ಕಾಲಜ್ಞಾನ ತನ್ನದೇಯಾದ ಹಿರಿಮೆಯನ್ನು ಹೊಂದಿದೆ. ಮಠದ ಸಂಪ್ರದಾಯದಂತೆ ಮಠದ ಪೀಠಾಧಿಪತಿ ನದಿಯಲ್ಲಿ ಮಡಿಸ್ನಾನ ಮಾಡಿ ಅಲ್ಲಿಯೇ ಸಾಂಪ್ರದಾಯಿಕ ಪೂಜೆ ನೆರವೇರಿಸಿ ಪದ್ದತಿಯಂತೆ ಕೆಲ ಸ್ವಾಮೀಗಳ ಮುಂದೆ ಮಾತ್ರ ಕಾಲಜ್ಞಾನ ಹೇಳುತ್ತಾರೆ. ಬಳಿಕ ದೇವಸ್ಥಾನಕ್ಕೆ ಆಗಮಿಸಿ ಅಲ್ಲಿನ ಆಚರಣೆಗಳನ್ನು ಮಾಡಿ ಗದ್ದುಗೆಯ ದರ್ಶನ ಮಾಡುತ್ತಾರೆ. ಬಳಿಕ ಸಾರ್ವಜನಿಕವಾಗಿ ಕಾಲಜ್ಞಾನವನ್ನು ಹೇಳುತ್ತಾರೆ. ಇಂದು 2022 ರ ಕಾಲಜ್ಞಾನವನ್ನು ಮಠಧ ಪೀಠಾಧಿಪತಿ ಶ್ರೀ ಸಿದ್ದರಾಮಯ್ಯ ಹೊಳಿಮಠ ಹೇಳಿದ್ದಾರೆ. ವಿಜಯಪುರದ ಬಬಲಾದಿ ಸದಾಶಿವ ಮುತ್ಯಾರ ಮಠದ ಮುಂಗಾರು ಮಳೆ ಫಲವಾಗಿ ಬೆಳೆ ಜಾಸ್ತಿ, ಹಿಂಗಾರಿ ಮದ್ಯಮ ಫಲ. ಕಂಪ್ಲಿ ದೇಶಕ್ಕೆ ಬರ, ದೇಶದೊಳಗೆ ಆಹಾಕಾರ, ಕೆಟ್ಟ ಪರಿಣಾಮ. ಕೈ ಬಳೆ‌ ಒಡೆದಾವು, ಕಣ್ಣೀರ ಹರಿದಾವು ಎಂದು ಅನಾಹುತ ಕಾದಿದೆ ಎಂದು ಮುನ್ಸೂಚನೆ ನೀಡಿದ್ದಾರೆ. ತಂತ್ರ ಅತಂತ್ರ, ಜಗತ್ತಿನಲ್ಲಿ ಅಧಿಕ ಪಾಪ. ಕಲಿ ಪುರಷನ ಮುಂದೆ ಆಟ ಕೆಟ್ಟು ಹೋಗಿದೆ. ಪಡವಲು ದಿಕ್ಕಿಗೆ ತ್ರಾಸು, ಕೇಡು ಎಂದು ಪಶ್ಚಿಮ ಭಾಗಕ್ಕೆ ಕೆಟ್ಟದ್ದು ಆಗುತ್ತದೆ.

ಕೆಟ್ಟ ಕೆಲಸಗಳನ್ನು ಮಾಡುತ್ತರೆ ಎಂದು ಮಾರ್ಮಿಕ ನುಡಿ ಹೇಳಿದ್ದಾರೆ. ಜೋಳ, ಕಡೆಲೆ ರಸ ವರ್ಗಗಳು ಕಂಡಮಂಡಲ ಎಂದರೆ ಒಂದು ಕಡೆ ಬೆಳೆದರೆ ಮತ್ತೊಂದು ಕಡೆ ಬೆಳೆ ಬರಲ್ಲಾ ಎಂದಿದ್ದಾರೆ. ಉತ್ತರ ದಿಕ್ಕಿನಿಂದ ಮುಂದೆ ಮುರುಕಾದಿತು ಎಂದ ಸ್ವಾಮೀಜಿ ಉತ್ತರ ಭಾಗದಲ್ಲಿ ನಡೆಯಬಾರದ ಘಟನೆ ನಡೆಯುತ್ತದೆ ಎಂದು ಕಾಲಜ್ಞಾನದಲ್ಲಿ ಹೇಳಿದ್ದಾರೆ. ನೀತಿಯಿಂದ ನಿಜರೂಪ ತೋರುತೈತೆ ಎಂದರೆ ಒಳ್ಳೆಯದನ್ನು ಎಲ್ಲರೂ ಮಾಡಬೇಕೆಂದಿದ್ದಾರೆ. ದೇಶದಲ್ಲೆ ಶಾಂತಿ, ಸೌಹಾರ್ದತೆ ಕೊರತೆ ಇದೆ, ಪೀತ ನಾಶವಾಗುವ ಸೂಚನೆ, ಭೂಕಾಂತಿ ನಡುಗೀತ. ಗಾಳಿ‌ ಸುನಾಮಿ‌ ಜಾಸ್ತಿ ಎನ್ನುವ ಮೂಲಕ ಭೂಕಂಪ ಸುನಾಮಿ ಆಗೋ ಎಚ್ಚರಿಕೆ ನೀಡಿದ್ದಾರೆ. ಏಪ್ರೀಲ್‌ನಿಂದ ಅಗಸ್ಟ್ ವರೆಗೆ ಪಾಪ ಕೈಮೀರಿ ಹೋದಿತು ಎಂದರೆ ಮುಂದಿನ ಐದು ತಿಂಗಳ ಕಾಲದಲ್ಲಿ ಪಾಪದ ಕೃತ್ಯಗಳು ನಡೆಯುತ್ತವೆ ಎಂದು ಭವಿಷ್ಯದಲ್ಲಿ ಹೇಳಿದ್ಧಾರೆ. ಸೃಷ್ಠಿಮುಂದ ದುಃಖ, ನಷ್ಟ, ಲೋಕಕ್ಕೆ ಕಷ್ಟ. ಯುರೋಪ , ಅಮೇರಿಕಾ, ಇರಾಕ್ ಇರಾನ್, ರಷ್ಯಾ, ನಾ ಮುಂದು ತಾ ಮುಂದು ಎಂದು ಸಾಗೀತು ಎಂದು ಹೇಳಿದ್ದು ಯುದ್ದದ ಮುನ್ಸೂಚನೆ ಕೊಟ್ಟಿದ್ದಾರೆ. ಅಸೂಹೆ ಕಲಹ ತಾರಕಕ್ಕೇರಿತು ಏಳಾಣೆ ಮಳೆ, ಎಂಟಾಣೆ ಬೆಳೆ ಎಂದು ಕೃಷಿಕರಿಗೆ ಒಳ್ಳೆಯ ಫಸಲು ಬರುತ್ತದೆ ಎಂದು ಹೇಳಿದರು.

ಕಳೆದ 500 ವರ್ಷಗಳ ಹಿಂದೆ ಆಗಿನ ಮಠದ ಪೀಠಾಧಿಪತಿಯಾಗಿದ್ದ ಶ್ರೀ ಸದಾಶಿವ ಅಜ್ಜನವರು ನುಡಿದ ಕಾಲಜ್ಞಾನವನ್ನ ಚಿಕ್ಕಯ್ಯಪ್ಪನವರು ಬರೆದಿಟ್ಟಿದ್ದಾರೆ. ಅದೇ ಕಾಲಜ್ಞಾನವನ್ನ ಪ್ರತಿವರ್ಷ ಶಿವರಾತ್ರಿಯ ಮೂರನೇ ದಿನ ಓದಿ ಹೇಳಲಾಗುತ್ತದೆ. ಅಂದಿನಿಂದ ಹಿಡಿದು ಇಂದಿನವರೆಗೂ ಕಾಲಜ್ಞಾನ ಭವಿಷ್ಯ ಹೇಳಲಾಗಿದ್ದು ಯಾವುದೂ ಸುಳ್ಳಾಗಿಲ್ಲಾ. ಕೊರೊನಾ ಆರ್ಭಟ, ಪ್ರವಾಹ, ಜಲಪ್ರಳಯ, ಯುದ್ಧ ಭಯ, ಗಣ್ಯ ವ್ಯಕ್ತಿಗಳ ಅಗಲುವಿಕೆ, ರಾಜಕೀಯ ಏರಿಳಿತ, ಮಳೆ ಬೆಳೆ, ಇತ್ಯಾದಿ ಭವಿಷ್ಯಗಳು ನಿಜವಾಗಿದೆ. ಸ್ವಾಮೀಜಿಗಳ ಪ್ರಕಾರ ಭವಿಷ್ಯದಲ್ಲಿ ಭಯಾನಕತೆಯ ದಿನಗಳು ಬರಲಿವೆ ಎಂದಿದ್ದಾರೆ. ಧರ್ಮದ ತಳಹದಿಯ ಮೇಲೆ ಪುಣ್ಯ ಕಾರ್ಯಗಳನ್ನು ಮಾಡುತ್ತಾ ದಾನ ಮಾಡುತ್ತಾ ಎಲ್ಲರಿಗೂ ಒಳಿತನ್ನೂ ಬಯಸುವವರು ಮಾತ್ರ ಉಳಿಯುತ್ತಾರೆ. ಅವರೆಲ್ಲಾ ನೆಮ್ಮದಿಯಿಂದ ಸುಖದಿಂದ ಇರುತ್ತಾರೆ, ಇಲ್ಲವಾದರೆ ನೆಲೆಯಿಲ್ಲಾ ಎಂಬುದು ಸ್ವಾಮೀಜಿಗಳ ಮಾತಾಗಿದೆ.

ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಭಕ್ತ ಸಮೂಹ ನೆರೆದಿತ್ತು. ಹೋದ ವರ್ಷ ಮಹಾಮಾರಿ ಕೊರೊನಾ ತೊಲಗಲು ಅಂಬಲಿ ನೈವೇಧ್ಯ ಮಾಡಬೇಕೆಂದು ಮಠದ ಸ್ವಾಮೀಜಿಗಳು ಹೇಳಿದ್ದರು. ಅಂಬಲಿ ಸೇವೆ ಮಾಡಿದ ಬಳಿಕ ಕೊರೊನಾ ತೀವ್ರಗತಿಯಲ್ಲಿ ಕಡಿಮೆಯಾಗಿತ್ತು. ಈ ಕಾರಣದಿಂದ ಕಾಲಜ್ಞಾನ ಭವಿಷ್ಯ ಕೇಳಲು ಹೆಚ್ಚಿನ ಜನರು ಆಗಮಿಸಿದ್ದರು. ರಸ್ತೆಗಳಲ್ಲಿ ಸಂಚಾರ ಮಾಡಲು ಸಾಧ್ಯವಾಗದಷ್ಟು ಜಾಮ್ ಉಂಟಾಗಿತ್ತು. ಮೂರು ಕಿಲೋ ಮೀಟರ್ ಗೂ ಆಧಿಕ ಧುರ ಟ್ರಾಫಿಕ್ ಜಾಮ್ ಆಗಿತ್ತು. ಪೊಲೀಸರು ಸಹ ಕೆಲ ಕಾಲ ನಿಸ್ಸಹಾಯಕರಾಗಬೇಕಾಗಿತ್ತು. ಒಟ್ಟಾರೆ ಬಬಲಾದಿಯ ಕಾಲಜ್ಞಾನ ಭವಿಷ್ಯ ಎಲ್ಲವೂ ನಿಜವಾಗುತ್ತಾ ಬಂದಿವೆ. ಇನ್ನೂ ಎರಡು ದಿನಗಳ ಕಾಲ ಜಾತ್ರೆ ನಡೆಯಲಿದೆ. ಕೊರೊನಾ ಕಾರಣದಿಂದ ಹಲವಾರು ಕಾರ್ಯಕ್ರಮಗಳನ್ನು ರದ್ದು ಮಾಡಿ ಸಾಂಪ್ರದಾಯಿಕ ಆಚರಣೆ ಮಾಡಲಾಗುತ್ತಿದೆ ಎಂದು ಮಠಧ ಪೀಠಾಧಿತಿ ಹೇಳಿದ್ದಾರೆ.

ವರದಿ: ಅಶೋಕ ಯಡಳ್ಳಿ, ಟಿವಿ9 ವಿಜಯಪುರ

ಇದನ್ನೂ ಓದಿ: ಆ ದುರ್ಘಟನೆ ನಡೆಯದೆ ಹೋಗಿದ್ದರೆ ನವೀನ್ ಶುಕ್ರವಾರ ಈ ವಿದ್ಯಾರ್ಥಿಗಳೊಂದಿಗೆ  ಸ್ವದೇಶಕ್ಕೆ ವಾಪಸ್ಸಾಗಿರುತ್ತಿದ್ದರು

ಬೆಂಗಳೂರಿನಲ್ಲಿ ಮೆಗಾ ಜ್ಯುವೆಲ್ಲರಿ ಪಾರ್ಕ್ ಸ್ಥಾಪನೆ; ರಾಜ್ಯದ ಬೇರೆ ಭಾಗಗಳಲ್ಲಿಯೂ ‘ಗ್ರಾಮ ಒನ್’ ಯೋಜನೆ ವಿಸ್ತರಣೆ

Follow us on

Related Stories

Most Read Stories

Click on your DTH Provider to Add TV9 Kannada