ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್, ಬಿಜೆಪಿ ದೇಶವನ್ನ ಛಿದ್ರ-ಛಿದ್ರ ಮಾಡುತ್ತಿದೆ: ರಾಮಲಿಂಗಾರೆಡ್ಡಿ ಕಿಡಿ
ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ವಿರುದ್ಧ ಬಿಜೆಪಿ ನಾಯಕರ ಲೇವಡಿಗೆ ಕಾಂಗ್ರೆಸ್ ನಾಯಕ ಕಿಡಿಕಾರಿದ್ದಾರೆ.
ವಿಜಯಪುರ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಆದರೆ ಬಿಜೆಪಿ ಈ ದೇಶವನ್ನ ಛಿದ್ರ ಛಿದ್ರವನ್ನಾಗಿ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಮಲಿಂಗಾರೆಡ್ಡಿ ಕಿಡಿಕಾರಿದರು. ನಗರದಲ್ಲಿ ಆಯೋಜಿಸಿದ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಮಾತನಾಡಿದರು. ರಾಹುಲ್ ಗಾಂಧಿ ಒಳ್ಳೆಯ ಕೆಲಸವನ್ನ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ಕೆಲಸವಿಲ್ಲ ಅದಕ್ಕೆ ಆರೋಪಿಸುತ್ತಾರೆ. ಬಿಜೆಪಿಯವರು ಬ್ರಿಟೀಷರ ಜೊತೆಗೆ ಶಾಮೀಲಾಗಿದ್ದರು. ಅವರು ಪೂರ್ವಜರು ಸ್ವಾತಂತ್ರ್ಯ ಹೋರಾಟ ಮಾಡಿದವರಲ್ಲ. ನಾವು ದೇಶ ಭಕ್ತರು ಎಂದು ಅವರೇ ಹೇಳಿಕೊಳ್ಳುತ್ತಾರೆ. ಬಿಜೆಪಿಯವರು ಜನರಿಗೆ ಸುಳ್ಳು ಹೇಳಿ ಆಧಿಕಾರದಲ್ಲಿದ್ದಾರೆ. ಅದಕ್ಕಾಗಿ ಅವರ ಅನ್ಯಾಯ ಹೊರ ಹಾಕಲು ಭಾರತ್ ಜೋಡೋ ಯಾತ್ರೆ ಮಾಡುತ್ತಿದ್ದೇವೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಅದು ಜೋಡೋ ಅಲ್ಲಾ ಅದು ತೋಡೋ ಯಾತ್ರೆ ಎಂಬ ಬಿಜೆಪಿ ಮುಖಂಡರ ಆರೋಪಕ್ಕೆ ರಾಮಲಿಂಗಾರೆಡ್ಡಿ ತಿರುಗೇಟು ನೀಡಿದ್ದು, ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. 1947 ರ ಮುಂಚೆ 547 ಕ್ಕೂ ಹೆಚ್ಚು ಸಣ್ಣ ಪುಟ್ಟ ರಾಜ್ಯಗಳಿದ್ದವು. ಗಾಂಧೀಜಿ ಅವರ ನೇತೃತ್ವದಲ್ಲಿ ಲಕ್ಷಾಂತರ ಜನರು ಭಾಗಿಯಾಗಿದ್ದರು. ಆಗ ಆರ್ಎಸ್ಎಸ್ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿರಲಿಲ್ಲಾ. ಬಿಜೆಪಿಯವರು ಸುಳ್ಳು ಜನ. ಬಿಜೆಪಿ ಅಂದರೆ ಬುರುಡೆ ಜನರ ಪಕ್ಷ ಎಂದು ಹೆಸರು ಬದಲಾಯಿಸಬೇಕೆಂದು ಟಾಂಗ್ ನೀಡಿದರು.
ಬಿಜೆಪಿ ಸರ್ಕಾರದಲ್ಲೇ ಇಂಥ ಅಕ್ರಮಗಳು ನಡೆಯುತ್ತಿವೆ
ಅಕ್ರಮ ಪಿಎಸ್ಐ ನೇಮಕ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಆ ಕುರಿತು ತನಿಖೆಯಾಗುತ್ತಿದೆ. ಇಡೀ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು. ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆದರೆ ಇನ್ನೂ ಅಕ್ರಮಗಳು ಆಚೆ ಬರೋ ಸಾಧ್ಯತೆಯಿದೆ. ಬಿಜೆಪಿ ಸರ್ಕಾರದಲ್ಲೇ ಇಂಥ ಅಕ್ರಮಗಳು ನಡೆಯುತ್ತವೆ. 1947 ರಿಂದ ರಾಜ್ಯದಲ್ಲಿ ಆಡಳಿತ ಮಾಡಿದ ಇತರ ಪಕ್ಷಗಳ ಆಡಳಿತದಲ್ಲಿ ಇಂಥ ಅಕ್ರಮ ನಡೆದಿಲ್ಲ. ಬಿಜೆಪಿ ಪಕ್ಷದ ಆಡಳಿತ ಬಿಗಿ ಇಲ್ಲಾ, ಆಡಳಿತ ಮಾಡೋ ಅಭ್ಯಾಸವೂ ಇಲ್ಲಾ. ಕೇವಲ ಪ್ರಚಾರ ಪ್ರಿಯರು. ಬುರುಡೆ ಮಾತನ್ನಾಡುತ್ತಾರೆ. ಬಣ್ಣ ಬಣ್ಣದ ಮಾತುಗಳಿಂದ ಜನರಿಗೆ ಸುಳ್ಳು ಹೇಳುತ್ತಾರೆ. ಬಿಜೆಪಿಯವರ ಸುಳ್ಳು ಇದೀಗ ಜನರಿಗೆ ಗೊತ್ತಾಗಿದೆ. ಜನರು ಬಿಜೆಪಿಯನ್ನು ತಿರಸ್ಕಾರ ಮಾಡುತ್ತಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ನಾವು ಕರ್ನಾಟಕದವರು ಎಂದು ಖರ್ಗೆ ಪರ
ನಾವು ಕರ್ನಾಟಕದವರು ಖರ್ಗೆ ಪರ. ಮಲ್ಲಿಕಾರ್ಜುನ ಖರ್ಗೆ ಹಾಗೂ ಶಶಿ ತರೂರ್ ಅಖಾಡಲ್ಲಿದ್ದಾರೆ. ಯಾರು ಗೆಲ್ಲುತ್ತಾರೆ ನೊಡೋಣ. ಗಾಂಧಿ ಪರಿವಾರದವರಿಗೆ ಬಿಟ್ಟು ಬೇರೆ ನಾಯಕರಿಗೆ ಅವಕಾಶ ನೀಡಲಾಗುತ್ತಿದೆ. ರಾಹುಲ್ ಗಾಂಧಿ ಅವರ ಆಶಯವೂ ಇದೇ ಆಗಿತ್ತು. ಗಾಂಧಿ ಕುಟುಂಬ ಬಿಟ್ಟು ಬೇರೆ ನಾಯಕರಿಗೆ ಕಾಂಗ್ರೆಸ್ ಸರ್ವೋಚ್ಚ ಸ್ಥಾನ ನೀಡಬೇಕೆಂದು ರಾಹುಲ್ ಹೇಳಿದ್ದರು. ಇದೀಗ ಆ ಕಾಲ ಕೂಡಿ ಬಂದಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:04 pm, Sun, 16 October 22