ವಿಜಯಪುರ: ರಾಜ್ಯದಲ್ಲಿ ಬಡ್ಡಿ ದಂಧೆಕೋರರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಸಾವಿರದ ಲೆಕ್ಕದಲ್ಲಿ ದುಡ್ಡು ಕೊಡುವ ಬಡ್ಡಿ ದಂಧೆಕೋರರು, ಕೆಲವೇ ತಿಂಗಳಲ್ಲಿ ಅದನ್ನ ಲಕ್ಷಕ್ಕೆ ಏರಿಸುತ್ತಾರೆ. ಸರಿಯಾದ ಸಮಯಕ್ಕೆ ಅಸಲು-ಬಡ್ಡಿ ಕಟ್ಟದಿದ್ದರೆ ಮುಗಿದೇ ಹೋಯ್ತು. ಅಂದಹಾಗೆ ಇಲ್ಲೊಬ್ಬ ವ್ಯಕ್ತಿ ಸಾಲಗಾರರ ಕಾಟ ತಡೆಯಲಾಗದೆ ಬಾರದ ಲೋಕಕ್ಕೆ ಜಾರಿದ್ದಾರೆ.
ಸಾಲ ಕೊಟ್ಟು ಬೆನ್ನುಬಿದ್ದ ‘ಬಡ್ಡಿ ಬೇತಾಳಗಳು’! ವಿಜಯಪುರ ನಗರದಲ್ಲಿ ಅಕ್ರಮ ಸಾಲ ನೀಡುವವರ ಬಡ್ಡಿ ದಂಧೆಕೋರರ ಹಾವಳಿ ಜೋರಾಗಿದೆ. ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬಡ ಜೀವ ಬಲಿಯಾಗಿದೆ. ಮಲ್ಲಿಕಾರ್ಜುನ ಜೇವೂರಕರ್ ಮತ್ತು ಆತನ ಪತ್ನಿ ಲಕ್ಷ್ಮೀ ಜೇವೂರಕರ್ ವಿಜಯಪುರ ನಗರದಲ್ಲಿ ವಾಸವಿದ್ದರು.
ಈ ಕುಟುಂಬಕ್ಕೆ ಬಡ್ಡಿ ದಂಧೆಕೋರರು ಭಾರಿ ಕಿರುಕುಳ ನೀಡಿದ್ದರಂತೆ. ರಹೀಂ ಅತ್ತಾರ ಹಾಗೂ ಜಾಕೀರ್ ಎಂಬುವವರ ಬಳಿ ಅಡುಗೆ ವ್ಯಾಪಾರಕ್ಕಾಗಿ ಸಾಲ ಪಡೆದುಕೊಂಡಿದ್ದ ಮಲ್ಲಿಕಾರ್ಜುನ ಅವರಿಗೆ, ಯಾಮಾರಿಸಿರುವ ಆರೋಪ ಕೇಳಿಬಂದಿದೆ. ಹೀಗೆ ಬಡ್ಡಿಗೆಬಡ್ಡಿ ಸೇರಿಸಿ ಸಾವಿರದಲ್ಲಿದ್ದ ಸಾಲದ ಮೊತ್ತವನ್ನ ಲಕ್ಷದ ಲೆಕ್ಕಕ್ಕೆ ತೋರಿಸಿದ್ದಾರೆ. ಕಡೆಗೆ ಮಲ್ಲಿಕಾರ್ಜುನ ಅವರ ಮನೆಗೂ ಹೋಗಿ ಗಲಾಟೆ ಮಾಡಿದ್ದಾರೆ.
ಗಲಾಟೆ ಮಾಡಿದ್ದಕ್ಕೆ ಆತ್ಮಹತ್ಯೆಗೆ ಶರಣು! ಇನ್ನು ಸೂಕ್ಷ್ಮ ಸ್ವಭಾವದ ಮಲ್ಲಿಕಾರ್ಜುನ ಅವ್ರು, ರಹೀಂ ಅತ್ತಾರ ಹಾಗೂ ಜಾಕೀರ್ ಗಲಾಟೆ ಮಾಡಿ ಹೋದ ಬಳಿಕ ನೇಣಿಗೆ ಕೊರಳೊಡ್ಡಿದ್ದಾರೆ. ತಮ್ಮ ಮದುವೆ ವಾಷಿಕೋತ್ಸವದ ದಿನವೇ ಇಂತಹ ತಪ್ಪು ನಿರ್ಧಾರಕ್ಕೆ ಮುಂದಾಗಿ ಜೀವ ಕಳೆದುಕೊಂಡಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇನ್ನೂ ಆಳವಾಗಿ ಬೇರೂರಿರುವ ಬಡ್ಡಿ ದಂಧೆ ಕರಾಳ ಮುಖ ರಿವೀಲ್ ಆಗಿದ್ದು, ಮೃತನ ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು.
ಅತ್ತ ವ್ಯವಹಾರ ವೃದ್ಧಿಯಾಗಲಿ ಅಂತಾ ಸಾಲ ಪಡೆದ ಮಲ್ಲಿಕಾರ್ಜುನ ಬಡ್ಡಿ ದಂಧೆಕೋರರ ಮೋಸದ ಜಾಲಕ್ಕೆ ಸಿಲುಕಿದ್ದರು. ಇದ್ರಿಂದ ಹೊರಗೆ ಬರಲು ಸಾಧ್ಯವಾಗದೆ ನರಳಿದ್ದಾರೆ. ಕಡೆಗೆ ಬಡ್ಡಿ ದಂಧೆಯ ಅಟ್ಟಹಾಸಕ್ಕೆ ಪ್ರಾಣವನ್ನೇ ಬಿಟ್ಟಿದ್ದು, ಮಕ್ಕಳನ್ನ ಹಾಗೂ ಪತ್ನಿಯನ್ನ ಅನಾಥರನ್ನಾಗಿ ಬಿಟ್ಟು ಹೋಗಿದ್ದಾರೆ. ಇನ್ನು ಘಟನೆ ನಂತರ ಪರಾರಿಯಾದ ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರಿದಿದೆ.