ವಿಜಯಪುರದಿಂದ ಕೊಟ್ಟಾಯಂವರಿಗೆ ಹೊಸ ರೈಲು: ಅಯ್ಯಪ್ಪ ಸ್ವಾಮಿ ಭಕ್ತರ ಮನವಿಗೆ ಸ್ಪಂದಿಸಿದ ಪ್ರಲ್ಹಾದ್ ಜೋಶಿ
ಹುಬ್ಬಳ್ಳಿ ಧಾರವಾಡ ಹಾಗೂ ಉತ್ತರ ಕರ್ನಾಟಕ ಭಾಗದ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಅನುಕೂಲ ಕಲ್ಪಿಸಲು ಹೊಸ ರೈಲು ಸೇವೆ ಸೋಮವಾರದಿಂದ ಆರಂಭವಾಗಲಿದೆ.
ವಿಜಯಪುರ: ಹುಬ್ಬಳ್ಳಿ ಧಾರವಾಡ ಹಾಗೂ ಉತ್ತರ ಕರ್ನಾಟಕ ಭಾಗದ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಅನುಕೂಲ ಕಲ್ಪಿಸಲು ಹೊಸ ರೈಲು ಸೇವೆ (New train) ಸೋಮವಾರದಿಂದ ಆರಂಭವಾಗಲಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಈ ವಿಷಯ ತಿಳಿಸಿದ್ದಾರೆ. ಹುಬ್ಬಳ್ಳಿಯಿಂದ ಶಬರಿ ಮಲೈಗೆ ಪ್ರಯಾಣಿಸಲು ರೈಲು ವ್ಯವಸ್ಥೆ ಕಲ್ಪಿಸುವಂತೆ ಅಯ್ಯಪ್ಪ ಸ್ವಾಮಿ ಭಕ್ತರು, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರನ್ನ ಭೇಟಿ ಮಾಡಿ ಮನವಿ ಮಾಡಿದ್ದರು. ಅಯ್ಯಪ್ಪ ಸ್ವಾಮಿ ಭಕ್ತರ ಕೋರಿಕೆಗೆ ಸ್ಪಂದಿಸಿದ ಪ್ರಲ್ಹಾದ್ ಜೋಶಿ, ಕೇಂದ್ರ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್ ಅವರ ಗಮನಕ್ಕೆ ಈ ವಿಷಯ ತಂದು, ಸೂಕ್ತ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದ್ದರು. ಪ್ರತಿ ವರ್ಷ ಲಕ್ಷಾಂತರ ಭಕ್ತರು ಉತ್ತರ ಕರ್ನಾಟಕದ ಭಾಗದಿಂದ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ತೆರಳುತ್ತಾರೆ. ಕೇವಲ ಹುಬ್ಬಳ್ಳಿ-ಧಾರವಾಡ ಅಷ್ಟೇ ಅಲ್ಲದೆ ಉತ್ತರ ಕರ್ನಾಟಕ ಭಾಗದ ಎಲ್ಲ ಭಕ್ತರಿಗೂ ರೈಲಿನ ಅನುಕೂಲ ದೊರೆಯಲಿ ಎಂದು ಯೋಚಿಸಿ ವಿಜಯಪುರದಿಂದ ಹುಬ್ಬಳ್ಳಿ ಮಾರ್ಗವಾಗಿ ಶಬರಿ ಮಲೈಗೆ ಹೊಸ ರೈಲು ಕಲ್ಪಿಸುವಂತೆ ಪ್ರಲ್ಹಾದ್ ಜೋಶಿ ಕೇಂದ್ರ ರೈಲು ಸಚಿವರನ್ನ ಕೋರಿದ್ದರು.
ಅದರಂತೆ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ವಿಜಯಪುರದಿಂದ ಹುಬ್ಬಳ್ಳಿ ಮಾರ್ಗವಾಗಿ ಕೊಟ್ಟಾಯಂವರೆಗೆ ರೈಲನ್ನು ಆರಂಭಿಸುವಂತೆ ಆದೇಶಿಸಿದ್ದಾರೆ. 07385 ಸಂಖ್ಯೆಯ ಸಾಪ್ತಾಹಿಕ ರೈಲು ಸೋಮವಾರ ರಾತ್ರಿ 11 ಗಂಟೆಗೆ ವಿಜಯಪುರದಿಂದ ಹೊರಡಲಿದ್ದು, ಬುಧವಾರ ಬೆಳಗಿನ ಜಾವ 2 ಗಂಟೆಗೆ ಕೊಟ್ಟಾಯಂ ತಲುಪಲಿದೆ.
ವಿಜಯಪುರ, ಬಸವನ ಬಾಗೇವಾಡಿ, ಬಾಗಲಕೋಟೆ, ಬಾದಾಮಿ, ಹೊಳೆ ಆಲೂರು, ಆಲಮಟ್ಟಿ, ಗದಗ, ಹುಬ್ಬಳ್ಳಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಬಿರೂರು, ಅರಸಿಕೇರೆ, ತುಮಕೂರು, ಯಲಹಂಕ, ಕೃಷ್ಣರಾಜಪುರಂ, ಬಂಗಾರಪೇಟೆ, ಸೇಲಂ, ಇರೋಡ್, ತಿರುಪ್ಪೂರು, ಕೊಯಂಬತ್ತೂರು, ಪಾಲಕ್ಕಾಡ್, ತ್ರಿಸ್ಸೂರು ಹಾಗೂ ಎರ್ನಾಕುಲಂ ಮಾರ್ಗವಾಗಿ ರೈಲು ಕೊಟ್ಟಾಯಂ ತಲುಪಲಿದೆ.
ಕೋರಿಕೆಗೆ ಸ್ಪಂದಿಸಿ, ರೈಲು ಆರಂಭಿಸಲು ಆದೇಶಿಸಿರುವ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಧನ್ಯವಾದಗಳನ್ನ ತಿಳಿಸಿದ್ದಾರೆ. ಭಕ್ತಾದಿಗಳು ಈ ವರ್ಷದ ಮಾಲಧಾರಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಹೊಸ ರೈಲು ಅವರಿಗೆ ಅನುಕೂಲವಾಗಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.