ಜಿಐ ಟ್ಯಾಗ್ ಪರಿಣಾಮ: ವಿಜಯಪುರ ನಿಂಬೆ ಗಿಡಗಳಿಗೆ ಬೇಡಿಕೆಯೋ ಬೇಡಿಕೆ, 5 ಲಕ್ಷ ಸಸಿ ಮಾರಾಟ
ವಿಜಯಪುರ ನಿಂಬೆ ಗಿಡಗಳಿಗೆ ಜಿಐ ಟ್ಯಾಗ್ ದೊರೆತಿರುವುದು ಜಿಲ್ಲೆಯ ರೈತರ ಖುಷಿಗೆ ಕಾರಣವಾಗಿದೆ. ಜಿಲ್ಲೆಯ ನಿಂಬೆ ಗಿಡಗಳಿಗೆ ಈಗ ರಾಜ್ಯ, ಹೊರ ರಾಜ್ಯಗಳಿಂದ ಭಾರಿ ಬೇಡಿಕೆ ಉಂಟಾಗಿದ್ದು, ನಿಂಬೆ ಗಿಡ ಮಾರಾಟ ಮಾಡಿಯೇ ರೈತರು ಭರ್ಜರಿ ಆದಾಯ ಗಳಿಸುತ್ತಿದ್ದಾರೆ. ಈ ವರ್ಷ ನಿಂಬೆ ಗಿಡ ಎಷ್ಟು ದರಕ್ಕೆ ಮಾರಾಟವಾಗಿದೆ, ಜಿಐ ಟ್ಯಾಗ್ ಜಿಲ್ಲೆಯ ರೈತರಿಗೆ ನೆರವಾಗಿದ್ದು ಹೇಗೆಂಬ ಮಾಹಿತಿ ಇಲ್ಲಿದೆ.
ವಿಜಯಪುರ, ಸೆಪ್ಟೆಂಬರ್ 3: ಮೂರು ವರ್ಷಗಳ ಹಿಂದೆ ಜಿಯೋಗ್ರಾಫಿಕಲ್ ಇಂಡಿಕೇಷನ್ (ಜಿಐ) ಟ್ಯಾಗ್ ಪಡೆದ ವಿಜಯಪುರ ನಿಂಬೆ ಸಸಿಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ವಿಜಯಪುರ ಜಿಲ್ಲೆಯ ರೈತರು ಈ ವರ್ಷ ಇಲ್ಲಿಯವರೆಗೆ 5 ಲಕ್ಷ ನಿಂಬೆ ಸಸಿಗಳನ್ನು ಮಾರಾಟ ಮಾಡಿದ್ದಾರೆ ಎಂದು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ವಿಜಯಪುರವು ರಾಜ್ಯದಲ್ಲೇ ಅತಿ ಹೆಚ್ಚು ನಿಂಬೆ ಬೆಳೆಯುವ ಜಿಲ್ಲೆಯಾಗಿದ್ದು, ಜಿಲ್ಲೆಯ ಇಂಡಿ ತಾಲೂಕೊಂದರಲ್ಲೇ ಶೇ 50 ಕ್ಕಿಂತ ಹೆಚ್ಚು ಬೆಳೆಯಲಾಗುತ್ತದೆ.
ಸಾಮಾನ್ಯವಾಗಿ ವಿಜಯಪುರ, ಕಲಬುರಗಿ, ಬಾಗಲಕೋಟೆ, ರಾಯಚೂರು, ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳ ರೈತರು ಸಸಿಗಳನ್ನು ಖರೀದಿಸುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಜಯಪುರ ನಿಂಬೆಗೆ ಜಿಐ ಟ್ಯಾಗ್ ಸಿಕ್ಕಿರುವುದರಿಂದ ಮಹಾರಾಷ್ಟ್ರದ ಉಸ್ಮಾನಾಬಾದ್, ಸೋಲಾಪುರ, ಫಂಡರಪುರ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕೆಲವು ಜಿಲ್ಲೆಗಳಿಂದ ಸಸಿಗಳನ್ನು ಖರೀದಿಸಲು ಬರುತ್ತಿದ್ದಾರೆ. ಹೀಗಾಗಿ ಜಿಲ್ಲೆಯ ಹೆಚ್ಚಿನವರು ನರ್ಸರಿಗಳನ್ನು ಆರಂಭಿಸುತ್ತಿದ್ದಾರೆ.
ಸಸಿಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಜಿಲ್ಲೆಯ ಅದರಲ್ಲೂ ಇಂಡಿ ತಾಲೂಕಿನ ಹಲವಾರು ರೈತರು ತಮ್ಮ ಜಮೀನಿನ ಹೆಚ್ಚಿನ ಭಾಗವನ್ನು ನಿಂಬೆ ನರ್ಸರಿಗೆ ಮೀಸಲಿಟ್ಟಿದ್ದಾರೆ.
ಈಗ ಸಸಿಗಳನ್ನು 13 ರೂ. (ಒಂದು ವರ್ಷ ಹಳೆಯ), 25 ರೂ. (ಎರಡು ವರ್ಷ) ಮತ್ತು ಅದಕ್ಕಿಂತ ದೊಡ್ಡವು 100 ರೂ.ಗೆ ಮಾರಾಟವಾಗುತ್ತಿವೆ.
ಇಂಡಿ ಕೃಷಿ ವಿಜ್ಞಾನ ಕೇಂದ್ರವು ರೈತರಿಗೆ ನಿಂಬೆ ಸಸಿಗಳನ್ನು ಬೆಳೆಸುವ ಮತ್ತು ಮಾರುಕಟ್ಟೆ ಮಾಡುವ ಕುರಿತು ಕಾಲಕಾಲಕ್ಕೆ ಕಾರ್ಯಾಗಾರ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ ಎಂದು ತೋಟಗಾರಿಕೆ ಉಪನಿರ್ದೇಶಕ ರಾಹುಲ್ ಭಾವಿದೊಡ್ಡಿ ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
ಜಿಐ ಟ್ಯಾಗ್ ಎಂದರೇನು?
ವಸ್ತು ಅಥವಾ ಉತ್ಪನ್ನವೊಂದು ನಿರ್ದಿಷ್ಟ ಭೌಗೋಳಿಕ ಪ್ರದೇಶಕ್ಕೆ ಸಂಬಂಧಿಸಿದ್ದು ಅಥವಾ ಅಲ್ಲಿ ಹುಟ್ಟಿಕೊಂಡಿರುವುದು ಎಂಬುದನ್ನು ಸೂಚಿಸುವುದಕ್ಕಾಗಿ ನೀಡುವ ಗುರುತೇ ಜಿಯೋಗ್ರಾಫಿಕಲ್ ಇಂಡಿಕೇಷನ್ ಟ್ಯಾಗ್ ಅಥವಾ ಜಿಐ ಟ್ಯಾಗ್. ನಿರ್ದಿಷ್ಟ ವಸ್ತುವಿನ ಗುಣಮಟ್ಟ, ಖ್ಯಾತಿ ಅಥವಾ ಇತರ ಗುಣಲಕ್ಷಣಗಳನ್ನು ಗುರುತಿಸಲು ಜಿಐ ಟ್ಯಾಗ್ ಮಾನದಂಡವಾಗಿ ನೆರವಾಗುತ್ತದೆ.
ಇದನ್ನೂ ಓದಿ: ಹೈಕೋರ್ಟ್ ಆದೇಶ ನೀಡಿದರೂ ರೈತರಿಗೆ ಪರಿಹಾರ ನೀಡದ ಸರ್ಕಾರ, ಕೋರ್ಟ್ಗೆ ಬೆಲೆ ಇಲ್ವಾ?
ಜಿಐ ಟ್ಯಾಗ್ಗಳು ನಿರ್ದಿಷ್ಟ ಉತ್ಪನ್ನಗಳಿಗೆ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಸ್ಥಾಪಿಸುತ್ತವೆ. ವಸ್ತು ಅಥವಾ ಉತ್ಪನ್ನಗಳ ವಿಚಾರದಲ್ಲಿ ವಂಚನೆಯನ್ನು ತಡೆಯುವುದಕ್ಕಾಗಿ ಈ ಟ್ಯಾಗ್ಗಳನ್ನು ನೀಡಲಾಗುತ್ತಿದೆ. ಮಾನದಂಡಗಳನ್ನು ಪೂರೈಸದೆಯೇ ಮೂಲದ ಹೆಸರು ಹೇಳಿಕೊಂಡು ಮಾರಾಟ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಕ್ಕೂ ಇದು ನೆರವಾಗುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ