ವಿಜಯಪುರ ವಕ್ಫ್ ಆಸ್ತಿ ವಿವಾದ: ವಿಶೇಷ ಹೋರಾಟಕ್ಕೆ ಸಿದ್ಧವಾದ ರೈತ ಸಂಘಟನೆಗಳು
ವಿಜಯಪುರದಲ್ಲಿ ವಕ್ಫ್ ಬೋರ್ಡ್ ಭೂಮಿ ನೋಂದಣಿಯಿಂದ ರೈತರು ಆಕ್ರೋಶಗೊಂಡಿದ್ದಾರೆ. ಹೀಗಾಗಿ ಇಂದು ಅಖಂಡ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆಯಿಂದ ಹೋರಾಟ ಮಾಡಲಾಗುತ್ತಿದೆ. ಡಿಸಿ ಕಚೇರಿ ಆವರಣದಲ್ಲೇ ದೀಪಾವಳಿ ಆಚರಣೆಗೆ ನಿರ್ಧರಿಸಿದ್ದು, ಅಹೋರಾತ್ರಿ ಹೋರಾಟ ಮಾಡಲಿದ್ದಾರೆ.
ವಿಜಯಪುರ, ಅಕ್ಟೋಬರ್ 29: ವಿಜಯಪುರದಲ್ಲಿ ಹೊತ್ತಿಕೊಂಡ ವಕ್ಫ್ (Waqf) ಬೆಂಕಿ ಆರುವ ಲಕ್ಷಣಗಳು ಕಾಣುತ್ತಿಲ್ಲ. ಇತ್ತ ಅನ್ನದಾತರಿಗೆ ಆಧಾರವಾಗಿರುವ ಭೂಮಿ ಕೈತಪ್ಪಿ ಹೋಗುತ್ತೆ ಎನ್ನುವ ಆತಂಕ ಮನೆ ಮಾಡಿದೆ. ಹೀಗಾಗಿ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ನಮೂದು ಹಿನ್ನೆಲೆ ಆಕ್ರೋಶ ವ್ಯಕ್ತವಾಗಿದ್ದು, ಅಖಂಡ ಕರ್ನಾಟಕ ರೈತ ಸಂಘ, ಹಸಿರು ಸೇನೆಯಿಂದ ಅಹೋರಾತ್ರಿ ಹೋರಾಟ ಮಾಡಲು ನಿರ್ಧರಿಸಿದೆ.
ಡಿಸಿ ಕಚೇರಿ ಆವರಣದಲ್ಲೇ ದೀಪಾವಳಿ ಆಚರಣೆಗೆ ನಿರ್ಧಾರ
ಕರಾಳ ಕತ್ತಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ದೀಪಾವಳಿ ಆಚರಣೆಗೆ ರೈತ ಸಂಘದ ನಿರ್ಧಾರ ಮಾಡಿದ್ದು, ಇದೀಗ ವಿಜಯಪುರ ಸಿದ್ದೇಶ್ವರ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಲಾಗಿದೆ. ಬಸವೇಶ್ವರ ಸರ್ಕಲ್, ಅಂಬೇಡ್ಕರ್ ಸರ್ಕಲ್ ಮೂಲಕ ಡಿಸಿ ಕಚೇರಿವರೆಗೂ ರೈತರ ಪ್ರತಭಟನಾ ಮೆರವಣಿಗೆ ಸಾಗಲಿದೆ.
ಇದನ್ನೂ ಓದಿ: ವಕ್ಫ್ ವಿವಾದ: ಬಿಜೆಪಿ ತಂಡದ ಮುಂದೆ ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ವಿಜಯಪುರ ಜಿಲ್ಲಾಧಿಕಾರಿ
ಮೆರವಣಿಗೆಯಲ್ಲಿ ಸರ್ಕಾರದ ವಿರುದ್ಧ, ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಭಾವಚಿತ್ರ ಪ್ರದರ್ಶನ ಮಾಡಿ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಇನ್ನು ವಿಜಯಪುರ-ಅಥಣಿ ರಸ್ತೆ ಕೆಲಕಾಲ ಬಂದ್ ಮಾಡಿ ಪ್ರತಿಭಟನೆ ಮಾಡಿದ್ದು, ಪೊಲೀಸರ ಮನವೊಲಿಕೆಗೆ ಬಗ್ಗದೇ ಪ್ರತಿಭಟಿಸಿದ್ದಾರೆ.
ಸರ್ಕಾರದ ಹುನ್ನಾರದಿಂದ ರೈತರಿಗೆ ದೀಪಾವಳಿ ಕರಾಳವಾಗಿದೆ. ರೈತರು ದೀಪಾವಳಿ ಆಚರಣೆ ಮಾಡಲ್ಲ. ರೈತ ಕುಟುಂಬಗಳು ಬೀದಿಗೆ ಬಿದ್ದಿವೆ. ವಕ್ಫ್ ಬೋರ್ಡ್ ನಮೂದು ಮಾಡಿದ್ದನ್ನು ತೆಗೆಯಬೇಕು. ಭವಿಷ್ಯದಲ್ಲಿ ರೈತರಿಗೆ ಯಾವುದೇ ಸಮಸ್ಯೆಯಾಗಬಾರದು ಎಂದು ಆಗ್ರಹಿಸಿದ್ದಾರೆ.
ಪ್ರತಿಭಟನೆ ವೇಳೆ ಅವಾಚ್ಯವಾಗಿ ನಿಂದಿಸಿದ ವ್ಯಕ್ತಿಗೆ ಪ್ರತಿಭಟನಾನಿರತ ರೈತರಿಂದ ಥಳಿತ
ಇನ್ನು ನಗರದಲ್ಲಿ ರೈತರಿಂದ ಪ್ರತಿಭಟನಾ ಮೆರವಣಿಗೆ ಬಗ್ಗೆ ಮದ್ಯ ಸೇವಿಸಿದ್ದ ವ್ಯಕ್ತಿಯಿಂದ ನಿಂದಿಸಿ, ಅವಾಚ್ಯವಾಗಿ ಬೈಯ್ದ ವ್ಯಕ್ತಿಗೆ ಪ್ರತಿಭಟನಾನಿರತ ರೈತರಿಂದ ಥಳಿಸಿದ್ದಾರೆ. ರೈತರ ಪ್ರತಿಭಟನೆ ಕುರಿತು ವ್ಯಕ್ತಿ ಅವಾಚ್ಯವಾಗಿ ಮಾತನಾಡಿದ್ದ. ಹೀಗಾಗಿ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ರೈತರು ಒಪ್ಪಿಸಿದ್ದಾರೆ. ಬಳಿಕ ರೈತರಿಂದ ಪ್ರತಿಭಟನೆ ಮುಂದುವರೆಯಿತು.
ವಿಜಯಪುರದಲ್ಲಿ ಹೊತ್ತಿದ್ದ ಕಿಚ್ಚು ಇದೀಗ, ಧಾರವಾಡ, ಯಾದಗಿರಿ, ರಾಯಚೂರು, ಕೋಲಾರ ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ವ್ಯಾಪಿಸುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:02 pm, Tue, 29 October 24