ಆಶಾ ಕಾರ್ಯಕರ್ತೆಯರು ಎಂದರೆ ಯಾರು? ಇವರ ಕೆಲಸವೇನು? ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ವೇತನ? ಇಲ್ಲಿದೆ ಡಿಟೇಲ್ಸ್

ರಾಜ್ಯದ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿರುವ ಆಶಾ ಕಾರ್ಯಕರ್ತೆಯರು ತಮ್ಮ ಬದುಕಿನ ಭದ್ರತೆಗಾಗಿ ಮತ್ತೆ ಬೀದಿಗಿಳಿದಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ಸಾವಿರಾರು ಆಶಾ ಕಾರ್ಯಕರ್ತೆಯರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ತಿಂಗಳಿಗೆ ಕನಿಷ್ಠ 15 ಸಾವಿರ ರೂ. ನಿಗದಿತ ಗೌರವಧನ, ಹೆರಿಗೆ ರಜೆ, ಮೊಬೈಲ್ ಭತ್ಯೆ, ನಿವೃತ್ತಿ ಸೌಲಭ್ಯ ಹಾಗೂ ಬಾಕಿ ಪ್ರೋತ್ಸಾಹಧನ ಬಿಡುಗಡೆ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಕಳೆದ 17 ವರ್ಷಗಳಿಂದ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಉದ್ಯೋಗ ಭದ್ರತೆ ಸಿಗದಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾದ್ರೆ, ಯಾರು ಈ ಆಶಾ ಕಾರ್ಯಕರ್ತೆಯರು? ಇವರ ಕರ್ತವ್ಯಗಳೇನು? ಇವರಿಗೆ ವೇತನ ನೀಡುವವರು ಯಾರು? ಮತ್ತು ಎಷ್ಟು? ಎನ್ನುವ ಡಿಟೇಲ್ಸ್ ಇಲ್ಲಿದೆ.

ಆಶಾ ಕಾರ್ಯಕರ್ತೆಯರು ಎಂದರೆ ಯಾರು? ಇವರ ಕೆಲಸವೇನು? ಯಾವ್ಯಾವ ರಾಜ್ಯಗಳಲ್ಲಿ ಎಷ್ಟು ವೇತನ? ಇಲ್ಲಿದೆ ಡಿಟೇಲ್ಸ್
Asha Workers
Edited By:

Updated on: Nov 23, 2026 | 6:02 PM

ಬೆಂಗಳೂರು, (ನವೆಂಬರ್ 23): ಬೆಂಗಳೂರಿನ ಫ್ರೀಡಂ ಪಾರ್ಕ್​​ನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಪ್ರತಿಭಟನೆ 7ನೇ ದಿನಕ್ಕೆ ಕಾಲಿಟ್ಟಿದೆ. ಬೇರೆ ರಾಜ್ಯಗಳಂತೆ ಕರ್ನಾಟಕದಲ್ಲೂ ಕನಿಷ್ಠ 15 ಸಾವಿರ ರೂ. ನಿಗದಿತ ಗೌರವಧನ ನೀಡಬೇಕು ಎಂಬುದು ಕಾರ್ಯಕರ್ತೆಯರ ಪ್ರಮುಖ ಬೇಡಿಕೆಯಾಗಿದೆ. ಆಶಾ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಕಾರ್ಯಕ್ರಮಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಚಳಿ, ಮಳೆ, ಬಿಸಿಲು ಎನ್ನದೇ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಹಲವು ವಿಷಯಗಳನ್ನು ಜನರ ಮನೆಮನೆಗೆ ತಲುಪಿಸುವ ಇವರ ಸೇವೆ ನಿಜಕ್ಕೂ ಪ್ರಶಂಸನೀಯವಾಗಿದೆ. ಇವರು ಏನೆಲ್ಲಾ ಕೆಲಸ ಮಾಡುತ್ತಾರೆ? ಎಷ್ಟು ಸಂಬಳ? ಬೇರೆ ರಾಜ್ಯಗಳಲ್ಲಿ ಆಶಾ ಕಾರ್ಯಕರ್ತೆಯರಿಗೆ ಎಷ್ಟು ವೇತನ ನೀಡಲಾಗುತ್ತಿದೆ ಎನ್ನುವ ಎಲ್ಲಾ ಮಾಹಿತಿ ಈ ಕೆಳಗಿನಂತಿದೆ.

ಆಶಾ ಕಾರ್ಯಕರ್ತೆ ಅಂದ್ರೆ ಯಾರು?

ರಾಷ್ಟ್ರೀಯ ಆರೋಗ್ಯ ಅಭಿಯಾನದ (NHM) ಅಡಿಯಲ್ಲಿ ಸಮುದಾಯ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುವ ಸ್ಥಳೀಯ ಮಹಿಳಾ ಆರೋಗ್ಯ ಸ್ವಯಂಸೇವಕಿಯೇ ಆಶಾ ಕಾರ್ಯಕರ್ತೆ. ಸಮುದಾಯ ಆರೋಗ್ಯ ಸ್ವಯಂಸೇವಕರನ್ನು ಅಂದರೆ ಆಶಾ ಕಾರ್ಯಕರ್ತೆಯರನ್ನು 2005ರಲ್ಲಿ ನೇಮಕ ಮಾಡಿಕೊಳ್ಳಲಾಯಿತು. ಸಮುದಾಯ ಮತ್ತು ಆರೋಗ್ಯ ವ್ಯವಸ್ಥೆಯ ನಡುವೆ ಕಾರ್ಯನಿರ್ವಹಿಸುವ ದೃಷ್ಟಿಯಿಂದ ಆಶಾ ಕಾರ್ಯಕರ್ತೆಯನ್ನು ಸಮುದಾಯದಿಂದ ಗುರುತಿಸಿ ಆಯ್ಕೆ ಮಾಡಲಾಗಿದೆ.

Loading...

ಇದನ್ನೂ ಓದಿ: 7ನೇ ದಿನಕ್ಕೆ ಕಾಲಿಟ್ಟ ಆಶಾ ಕಾರ್ಯಕರ್ತೆಯರ ಹೋರಾಟ; ಒಂದೇ ವಾರದಲ್ಲಿ 17 ಮಂದಿ ಆಸ್ಪತ್ರೆಗೆ ದಾಖಲು!

ಆಶಾ ಕಾರ್ಯಕರ್ತೆಯರೇ ಸಂಪರ್ಕ ಕೊಂಡಿ

ಹಳ್ಳಿಯಿಂದ ನಗರದವರೆಗೆ ಜನರಿಗೆ ಆರೋಗ್ಯ ಸೇವೆಗಳನ್ನು ತಲುಪಿಸುವಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಬಹಳ ದೊಡ್ಡದು. ಆಸ್ಪತ್ರೆಗಳಿಗೆ ಹೋಗಲು ಸಾಧ್ಯವಾಗದವರು, ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಕುಟುಂಬಗಳು ಹಾಗೂ ಗರ್ಭಿಣಿಯರಿಗೆ ಆಶಾ ಕಾರ್ಯಕರ್ತೆಯರೇ ಮೊದಲ ಸಂಪರ್ಕ ಕೊಂಡಿಯಾಗಿರುತ್ತಾರೆ. ಆರೋಗ್ಯ ಸೇವೆಗಳ ಸೇವಾ ಪೂರೈಕೆಗಾಗಿ, ಸಮುದಾಯ ಸಹಭಾಗಿತ್ವಕ್ಕೆ ಸಂಘಟಕಳಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ನಾವು, ನೀವೆಲ್ಲಾ ನಮ್ಮನಮ್ಮ ಊರುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಆಶಾ ಕಾರ್ಯಕರ್ತೆಯರನ್ನು ಗುರುತಿಸಿರುತ್ತೇವೆ.

ಗರ್ಭಿಣಿಯರ ಆರೋಗ್ಯದ ಬಗ್ಗೆ ನಿಗಾ ವಹಿಸುವುದು, ಸುರಕ್ಷಿತ ಹೆರಿಗೆಗೆ ಮಾರ್ಗದರ್ಶನ ನೀಡುವುದು, ನವಜಾತ ಶಿಶುಗಳ ಆರೈಕೆ, ಮಕ್ಕಳಿಗೆ ಕಾಲಕಾಲಕ್ಕೆ ಲಸಿಕೆ ಹಾಕಿಸುವುದು ಸೇರಿದಂತೆ ಹಲವು ಮಹತ್ವದ ಕೆಲಸಗಳನ್ನು ಇವರು ನಿರ್ವಹಿಸುತ್ತಾರೆ. ಅಷ್ಟೇ ಅಲ್ಲ, ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದರಿಂದ ಹಿಡಿದು ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳ ಮಾಹಿತಿ ಜನರಿಗೆ ತಲುಪಿಸುವವರೆಗೂ ಇವರ ಸೇವೆ ವಿಸ್ತರಿಸಿದೆ.

ಸಾಮಾನ್ಯವಾಗಿ ಒಬ್ಬ ಆಶಾ ಕಾರ್ಯಕರ್ತೆಯು ಸುಮಾರು 250ರಿಂದ 300 ಕುಟುಂಬಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಆರೋಗ್ಯದ ಅಗತ್ಯಗಳನ್ನು ಗಮನಿಸುತ್ತಾರೆ. ಮನೆಮನೆಗೆ ಭೇಟಿ ನೀಡಿ ಆರೋಗ್ಯ ಸಮಸ್ಯೆಗಳನ್ನು ಗುರುತಿಸುವುದು, ಅಗತ್ಯವಿದ್ದವರಿಗೆ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರಗಳಿಗೆ ತೆರಳಲು ನೆರವಾಗುವುದು ಇವರ ದಿನನಿತ್ಯದ ಕೆಲಸದ ಭಾಗವಾಗಿದೆ.

ಗ್ರಾಮೀಣ ಭಾಗದಲ್ಲಿ 1000 ಜನಸಂಖ್ಯೆಗೆ ಒಬ್ಬರು ಆಶಾ ಕಾರ್ಯಕರ್ತೆ

ಮೂಲಭೂತ ಆರೋಗ್ಯ ಸೇವೆಗಳನ್ನು ಒದಗಿಸಲು 2005 ರಲ್ಲಿ ಆಶಾ ಕಾರ್ಯಕರ್ತೆಯನ್ನು ನೇಮಕ ಮಾಡಲಾಗಿದೆ. ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಸುಮಾರು 1,000 ಜನಸಂಖ್ಯೆಗೆ ಒಬ್ಬರು ಮತ್ತು ನಗರ ಕೊಳಗೇರಿ ಅಥವಾ ಹಿಂದುಳಿದ ಪ್ರದೇಶಗಳಲ್ಲಿ ಸುಮಾರು 2,500 ಜನಸಂಖ್ಯೆಗೆ ಒಬ್ಬ ಆಶಾ ಕಾರ್ಯಕರ್ತೆ ಇರುತ್ತಾರೆ. ಸಮುದಾಯ ಮತ್ತು ಆರೋಗ್ಯ ವ್ಯವಸ್ಥೆಯ ನಡುವೆ ಕಾರ್ಯನಿರ್ವಹಿಸುವ ದೃಷ್ಠಿಯಿಂದ ಆಶಾ ಕಾರ್ಯಕರ್ತೆಯನ್ನು ಸಮುದಾಯದಿಂದ ಗುರುತಿಸಿ ಆಯ್ಕೆ ಮಾಡಲಾಗಿದೆ. ಆದ್ರೆ, ಆಶಾ ಕಾರ್ಯಕರ್ತೆಯರು ಖಾಯಂ ಸರ್ಕಾರಿ ನೌಕರರಲ್ಲದೆ, ಗೌರವಧನ ಮತ್ತು ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನದ ಮೇಲೆ ಕಾರ್ಯನಿರ್ವಹಿಸುತ್ತಾರೆ.

ಆಶಾ ಕಾರ್ಯಕರ್ತೆಯರ ಕರ್ತವ್ಯಗಳೇನು?

  • ಮನೆಭೇಟಿ: ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯಲ್ಲಿರುವ ಮನೆಗಳಿಗೆ ಭೇಟಿ ನೀಡಿ ಕುಟುಂಬಗಳ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುವುದು ಹಾಗೂ ಅಗತ್ಯ ಆರೋಗ್ಯ ಸೇವೆಗಳ ಬಗ್ಗೆ ಮಾಹಿತಿ ನೀಡುವುದು.
  • ಆರೋಗ್ಯ ಸಂಸ್ಥೆಗಳಿಗೆ ಭೇಟಿ: ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ವಿವಿಧ ಆರೋಗ್ಯ ಸಂಸ್ಥೆಗಳಿಗೆ ಭೇಟಿ ನೀಡಿ ಆರೋಗ್ಯ ಸೇವೆಗಳ ಸಮನ್ವಯದಲ್ಲಿ ಪಾಲ್ಗೊಳ್ಳುವುದು.
  • ಆರೋಗ್ಯ ಜಾಗೃತಿ ಸಭೆ: ತಮ್ಮ ಕಾರ್ಯಕ್ಷೇತ್ರದಲ್ಲಿ ಆರೋಗ್ಯ ಜಾಗೃತಿ ಸಭೆಗಳನ್ನು ಆಯೋಜಿಸಿ ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು.
  •  ಆರೋಗ್ಯ ದಾಖಲೆಗಳ ನಿರ್ವಹಣೆ: ಕುಟುಂಬಗಳ ಆರೋಗ್ಯ ಮಾಹಿತಿ, ಗರ್ಭಿಣಿಯರು, ಮಕ್ಕಳು ಹಾಗೂ ಇತರ ಫಲಾನುಭವಿಗಳ ವಿವರಗಳನ್ನು ಸರಿಯಾಗಿ ದಾಖಲಿಸಿ ನಿರ್ವಹಿಸುವುದು.
  •  ಆರೋಗ್ಯ ಸಮಾಲೋಚನೆ ಮತ್ತು ಮಾಹಿತಿ: ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ, ಶಿಕ್ಷಣ ಹಾಗೂ ಸಂವಹನ ಚಟುವಟಿಕೆಗಳನ್ನು ಕೈಗೊಳ್ಳುವುದು.
  • ಮಹಿಳೆಯರು ಮತ್ತು ಕುಟುಂಬಗಳಿಗೆ ಆಪ್ತ ಸಮಾಲೋಚನೆ: ಮಹಿಳೆಯರು ಹಾಗೂ ಕುಟುಂಬದವರಿಗೆ ಈ ಕೆಳಗಿನ ವಿಷಯಗಳ ಕುರಿತು ಮಾರ್ಗದರ್ಶನ ನೀಡುವುದು.
  • ಗರ್ಭಿಣಿಯರು ಮತ್ತು ಮಕ್ಕಳ ಮಾಹಿತಿ ಅಪ್‌ಡೇಟ್: ತಮ್ಮ ವ್ಯಾಪ್ತಿಯಲ್ಲಿರುವ ಪ್ರತಿಯೊಬ್ಬ ಗರ್ಭಿಣಿ ಹಾಗೂ 24 ತಿಂಗಳೊಳಗಿನ ಮಕ್ಕಳ ವಿವರಗಳನ್ನು ಆರ್‌ಸಿಎಚ್ (RCH) ಪೋರ್ಟಲ್‌ನಲ್ಲಿ ದಾಖಲಿಸಲು ಅಗತ್ಯ ಮಾಹಿತಿಯನ್ನು ಚಟುವಟಿಕೆ ನಡೆದ 48 ಗಂಟೆಗಳೊಳಗೆ ಆಶಾ ಸುಗಮಕಾರರಿಗೆ ಸಲ್ಲಿಸಬೇಕು. ಇದರಲ್ಲಿ 12 ವಾರಗಳೊಳಗಿನ ಗರ್ಭಿಣಿಯರ ನೋಂದಣಿ, ನಾಲ್ಕು ಪ್ರಸವಪೂರ್ವ ತಪಾಸಣೆಗಳು, ಟಿಟಿ ಲಸಿಕೆ ಹಾಗೂ ಕಬ್ಬಿಣಾಂಶ ಮತ್ತು ಕ್ಯಾಲ್ಸಿಯಂ ಮಾತ್ರೆಗಳ ವಿತರಣೆ.
  • ತೊಡಕಿನ ಗರ್ಭಧಾರಣೆಗಳ ಮಾಹಿತಿ: ತಮ್ಮ ಕಾರ್ಯಕ್ಷೇತ್ರದಲ್ಲಿರುವ ತೊಡಕಿನ ಗರ್ಭಧಾರಣೆಗಳನ್ನು ಗುರುತಿಸಿ, ಗರ್ಭಿಣಿಯರ ಅರ್ಹತೆ ಮತ್ತು ಹೆರಿಗೆಗೆ ಸಂಬಂಧಿಸಿದ ವಿವರಗಳನ್ನು ಆರ್‌ಸಿಎಚ್ ಪೋರ್ಟಲ್‌ನಲ್ಲಿ ದಾಖಲಿಸಲು ಆಶಾ ಸುಗಮಕಾರರಿಗೆ ಸಲ್ಲಿಸುವುದು.
  •  ಖಾಸಗಿ ಆಸ್ಪತ್ರೆಗಳ ಹೆರಿಗೆ ನೋಂದಣಿ: ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ನಡೆಯುವ ಹೆರಿಗೆಗಳನ್ನೂ ಆರ್‌ಸಿಎಚ್ ಪೋರ್ಟಲ್‌ನಲ್ಲಿ ನೋಂದಾಯಿಸುವುದು.
  •  ಕಡಿಮೆ ತೂಕದ ಮಕ್ಕಳ ಆರೈಕೆ: ಜನನದ ಸಮಯದಲ್ಲಿ ಕಡಿಮೆ ತೂಕ ಹೊಂದಿರುವ ಹಾಗೂ ಎಸ್‌ಎನ್‌ಸಿಯು (SNCU)ನಿಂದ ಬಿಡುಗಡೆಯಾದ ಮಕ್ಕಳ ಮನೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಭೇಟಿ ನೀಡಿ ತೂಕ ಪರೀಕ್ಷಿಸುವುದು ಮತ್ತು ತಾಯಿಯ ಎದೆಹಾಲುಣಿಸುವಿಕೆಯನ್ನು ಖಚಿತಪಡಿಸಿಕೊಳ್ಳುವುದು.
  • ಆರೋಗ್ಯ ಸಭೆಗಳಲ್ಲಿ ಭಾಗವಹಿಸುವುದು: ಪ್ರಾಥಮಿಕ ಆರೋಗ್ಯ ಕೇಂದ್ರದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸುವುದು. ಪ್ರತಿ ತಿಂಗಳ ಮೂರನೇ ಶನಿವಾರ ಗ್ರಾಮ ಆರೋಗ್ಯ ಮತ್ತು ಪೋಷಣಾ ದಿನಾಚರಣೆ ಹಾಗೂ ತಿಂಗಳ ಮೊದಲ ಸೋಮವಾರ ಗ್ರಾಮ ಆರೋಗ್ಯ, ನೈರ್ಮಲ್ಯ ಮತ್ತು ಪೋಷಣಾ ಸಮಿತಿ ಸಭೆ ನಡೆಸುವುದು.
  • ಕುಟುಂಬ ಆರೋಗ್ಯ ದಾಖಲೆಗಳ ನಿರ್ವಹಣೆ: ಗ್ರಾಮ ಆರೋಗ್ಯ ಪುಸ್ತಕ, ಗರ್ಭಿಣಿಯರ ಪಟ್ಟಿ, ಲಸಿಕೆ ಪಡೆಯಬೇಕಾದ ಮಕ್ಕಳ ಪಟ್ಟಿ, ಅರ್ಹ ದಂಪತಿಗಳ ಪಟ್ಟಿ ಹಾಗೂ ಮನೆಮನೆ ಸಮೀಕ್ಷೆಯ ಮೂಲಕ ಕುಟುಂಬದ ದಾಖಲೆಗಳನ್ನು ನಿರ್ವಹಿಸಬೇಕು. ಪ್ರತಿ ಆರು ತಿಂಗಳಿಗೊಮ್ಮೆ ಈ ದಾಖಲೆಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಗೆ ಸಲ್ಲಿಸಬೇಕು.
  • ಲಸಿಕಾ ಕಾರ್ಯಕ್ರಮಕ್ಕೆ ಫಲಾನುಭವಿಗಳನ್ನು ಕರೆತರುವುದು: ಚುಚ್ಚುಮದ್ದು ಮತ್ತು ಲಸಿಕೆ ಸೇವೆಗಳನ್ನು ಪಡೆಯಲು ಅರ್ಹ ಫಲಾನುಭವಿಗಳನ್ನು ಆರೋಗ್ಯ ಕೇಂದ್ರಗಳಿಗೆ ಕರೆತರುವುದು.
  • ಹದಿಹರೆಯದ ಹೆಣ್ಣುಮಕ್ಕಳ ಆರೋಗ್ಯ: ಹದಿಹರೆಯದ ಹೆಣ್ಣುಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸಿ ಅಗತ್ಯ ಅನುಸರಣೆ ಮತ್ತು ಮಾರ್ಗದರ್ಶನ ನೀಡುವುದು.
  • ಹೆರಿಗೆ ನಂತರ ಪಿಪಿಐಯುಸಿಡಿ ಅಳವಡಿಕೆಗೆ ಪ್ರೋತ್ಸಾಹ: ಮೊದಲ ಮತ್ತು ಎರಡನೇ ಹೆರಿಗೆಯಾದ ಬಾಣಂತಿಯರಿಗೆ ಹೆರಿಗೆಯಾದ 48 ಗಂಟೆಗಳೊಳಗೆ ಪಿಪಿಐಯುಸಿಡಿ (PPIUCD) ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವುದು.
  • ಸಾರ್ವತ್ರಿಕ ಆರೋಗ್ಯ ಪಾಲನೆ: ಸಾರ್ವತ್ರಿಕ ಆರೋಗ್ಯ ಪಾಲನೆ (UHC) ಕಾರ್ಯಕ್ರಮಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು.
  •  ಮಹಿಳೆಯರ ಮರಣದ ವರದಿ: ತಮ್ಮ ಕಾರ್ಯಕ್ಷೇತ್ರದಲ್ಲಿ 15ರಿಂದ 49 ವರ್ಷ ವಯಸ್ಸಿನ ಮಹಿಳೆಯರ ಮರಣ ಪ್ರಕರಣಗಳನ್ನು ದಾಖಲಿಸಬೇಕು. ಮರಣ ಸಂಭವಿಸಿದ 24 ಗಂಟೆಗಳೊಳಗೆ ನಿಗದಿತ ನಮೂನೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕು.
  •  ಶಿಶು ಮರಣ ವರದಿ: ತಮ್ಮ ವ್ಯಾಪ್ತಿಯಲ್ಲಿ ಸಂಭವಿಸುವ ಶಿಶು ಮರಣ ಪ್ರಕರಣಗಳ ಮಾಹಿತಿಯನ್ನು ದಾಖಲಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ವರದಿ ಮಾಡುವುದು.
  •  ಅಸಾಂಕ್ರಾಮಿಕ ರೋಗಗಳ ನಿಯಂತ್ರಣ: ಎನ್‌ಸಿಡಿ (NCD) ಚಟುವಟಿಕೆಗಳಲ್ಲಿ ಪಾಲ್ಗೊಂಡು ಅಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದ ಆರೋಗ್ಯ ಸೇವೆಗಳಿಗೆ ಸಹಕರಿಸುವುದು.
  • ಸಾಂಕ್ರಾಮಿಕ ರೋಗಗಳ ನಿಯಂತ್ರಣ: ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಅವುಗಳ ನಿಯಂತ್ರಣಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಕೈಗೊಳ್ಳುವುದು.
  • ಕ್ಷಯರೋಗಿಗಳ ಗುರುತಿಸುವಿಕೆ ಮತ್ತು ಆರೈಕೆ: ಕ್ಷಯರೋಗದ ಲಕ್ಷಣಗಳಿರುವವರನ್ನು ಗುರುತಿಸಿ, ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯಲು ನೆರವಾಗುವುದು.
  •  ಕುಷ್ಠರೋಗಿಗಳ ಗುರುತಿಸುವಿಕೆ ಮತ್ತು ಆರೈಕೆ: ಕುಷ್ಠರೋಗಿಗಳನ್ನು ಗುರುತಿಸಿ ಸೂಕ್ತ ಚಿಕಿತ್ಸೆ ಹಾಗೂ ಆರೋಗ್ಯ ಸೇವೆ ಪಡೆಯಲು ಸಹಕರಿಸುವುದು.
  •  ಸರ್ಕಾರ ವಹಿಸುವ ಇತರ ಜವಾಬ್ದಾರಿಗಳು: ಕಾಲಕಾಲಕ್ಕೆ ಸರ್ಕಾರವು ವಹಿಸುವ ಸಾಮಾಜಿಕ ಆರೋಗ್ಯ ಸೂಚಕಗಳಿಗೆ ಸಂಬಂಧಿಸಿದ ಇತರ ಚಟುವಟಿಕೆಗಳನ್ನು ಕಡ್ಡಾಯವಾಗಿ ನಿರ್ವಹಿಸುವುದು.

ಕರ್ನಾಟಕದಲ್ಲಿ ಆಶಾಗಳಿಗೆ ಎಷ್ಟು ಗೌರವಧನ?

ಆಶಾ ಕಾರ್ಯಕರ್ತೆಯರ ಸಂಘದ ಪ್ರಕಾರ, ಕರ್ನಾಟಕದಲ್ಲಿ ರಾಜ್ಯ ಸರ್ಕಾರದಿಂದ ತಿಂಗಳಿಗೆ 5 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಆರೋಗ್ಯ ಚಟುವಟಿಕೆಗಳಿಗಾಗಿ ಸುಮಾರು 3 ಸಾವಿರದಿಂದ 3,500 ರೂ.ವರೆಗೆ ಪ್ರೋತ್ಸಾಹಧನ ಸಿಗುತ್ತದೆ. ಹೆರಿಗೆ, ಲಸಿಕಾ ಕಾರ್ಯಕ್ರಮ, ಕ್ಷಯರೋಗ ನಿಯಂತ್ರಣ ಸೇರಿದಂತೆ ನಿರ್ದಿಷ್ಟ ಕೆಲಸಗಳಿಗೆ ಹೆಚ್ಚುವರಿ ಪ್ರೋತ್ಸಾಹಧನವೂ ದೊರೆಯುತ್ತದೆ.

ಇತರೆ ರಾಜ್ಯಗಳಲ್ಲಿ ಎಷ್ಟು ಪ್ರೋತ್ಸಾಹಧನ?

ಕರ್ನಾಟಕ ಸರ್ಕಾರ 5 ಸಾವಿರ, ಕೇಂದ್ರ ಸರ್ಕಾರ 3 ಸಾವಿರ ಒಟ್ಟು 8 ಸಾವಿರ ಗೌರವಧನವನ್ನು ನೀಡುತ್ತಿದೆ. ಆದ್ರೆ, ನಮ್ಮ ಅಕ್ಕಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸೇರಿ 10 ಸಾವಿರ ರೂ, ಕೇರಳದಲ್ಲಿ ರಾಜ್ಯ ಸರ್ಕಾರವೇ 12 ಸಾವಿರ ಗೌರವಧನ ಇದರ ಜೊತೆಯಲ್ಲಿ ಕೆಲಸಕ್ಕೆ ಪ್ರೋತ್ಸಾಹಧನ ನೀಡುತ್ತಿದೆ. ಹರಿಯಾಣದಲ್ಲಿ ಕೇಂದ್ರ ಮತ್ತು ‌ರಾಜ್ಯ ಸೇರಿ 15 ಸಾವಿರ ರೂ., ಪಶ್ಚಿಮ ಬಂಗಾಳ ರಾಜ್ಯ ಸರ್ಕಾರವೇ 11250 ಗೌರವಧನ ಇದರ ಜೊತೆ ಕೆಲಸಕ್ಕೆ ತಕ್ಕ ಪ್ರೋತ್ಸಾಹಧನ ನೀಡುತ್ತಿದೆ.

ಹೀಗಾಗಿ ಕರ್ನಾಟಕದಲ್ಲೂ ಸಹ 15 ಸಾವಿರ ರೂ. ನೀಡುವಂತೆ ಆಶಾ ಕಾರ್ಯಕರ್ತೆಯರ ಬೇಡಿಕೆಯಾಗಿದೆ. ಅಲ್ಲದೇ  2023ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಿಸುವ ಬಗ್ಗೆಯೂ ಆಶ್ವಾಸನೆ ನೀಡಿತ್ತು. ಅದರಂತೆ ಇದೀಗ ತಮ್ಮ ಬೇಡಿಕೆ ಈಡೇರಿಸುವಂತೆ ಪಟ್ಟು ಹಿಡಿದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:51 pm, Mon, 23 November 26

ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
Loading...
Unable to load recommendations.
Follow Us