ಪ್ರತಿದಿನ 1 ಲಕ್ಷ ಜನರಿಗೆ ಕೊವಿಡ್ ಟೆಸ್ಟ್ ಮಾಡುತ್ತೇವೆ; ಆರೋಗ್ಯ ಸಚಿವ ಡಾ ಸುಧಾಕರ್
ಸರ್ಕಾರದಿಂದ ಬರುವ ರೋಗಿಗಳಿಗೆ ಎಷ್ಟು ಮೀಸಲಿಡಬೇಕು. ವೈಯಕ್ತಿಕವಾಗಿ ನೇರವಾಗಿ ಆಸ್ಪತ್ರೆಗೆ ಬರುವವರಿಗೆ ಎಷ್ಟು ಬೆಡ್ ನೀಡಬೇಕು ಎಂಬುದನ್ನು ನಿರ್ಧರಿಸಬೇಕಿದೆ. ಮಾರ್ಷಲ್ ಮತ್ತು ಹೋಂ ಗಾರ್ಡ್ಸ್ಗಳಿಗೆ 2 ಸಾವಿರ ಬೆಡ್ ಮೀಸಲಿಡುತ್ತೇವೆ: ಡಾ.ಕೆ.ಸುಧಾಕರ್
ಬೆಂಗಳೂರು: ನಗರದ ಪ್ರತಿ ವಾರ್ಡ್‌ಗೂ ಒಂದು ಆ್ಯಂಬುಲೆನ್ಸ್ ಸೌಲಭ್ಯ ಕಲ್ಪಿಸುತ್ತೇವೆ. ಜನಸಂದಣಿ ಹೆಚ್ಚಾಗಿರುವ ಪ್ರದೇಶಗಳಿಗೆ ತೆರಳಿ ತಪಾಸಣೆ ಮಾಡುತ್ತೇವೆ. ಪ್ರತಿದಿನ 1 ಲಕ್ಷ ಜನರಿಗೆ ಕೊವಿಡ್ ಟೆಸ್ಟ್‌ಗೆ ಸೂಚಿಸಿದ್ದೇವೆ. ಕೊವಿಡ್ ಟೆಸ್ಟ್‌ಗೆ ಜನರು ಸಹಕಾರ ನೀಡಬೇಕು ಎಂದು ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮನವಿ ಮಾಡಿದರು. ಬೆಂಗಳೂರಿನಲ್ಲಿ 1 ಸಾವಿರ ಹಾಸಿಗೆಯ ವ್ಯವಸ್ಥೆಯನ್ನು ಸರ್ಕಾರ ಒದಗಿಸಲಿದೆ. 3 ರಿಂದ 4 ಸಾವಿರ ಹಾಸಿಗೆ ಬೇಕು ಎಂದು ಹೇಳಿದ್ದಾರೆ. ಈ ಕುರಿತು ತಾಂತ್ರಿಕ ಸಲಹಾ ಸಮಿತಿಯ ಸಲಹೆಗಾಗಿ ಕಾಯುತ್ತೇವೆ ಎಂದು ಅವರು ತಿಳಿಸಿದರು.
ಬೆಂಗಳೂರು ನಗರದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಬಿಬಿಎಂಪಿ ವ್ಯಾಪ್ತಿಯಲ್ಲಿ 8500 ಬೂತ್ ಹಂತದಲ್ಲಿ ತಂಡಗಳನ್ನು ಮಾಡುತ್ತೇವೆ. ನಗರ ವ್ಯಾಪ್ತಿಯ ಮನೆ ಮನೆಗೆ ತೆರಳಿ ಈ ತಂಡದ ಸದಸ್ಯರು ಪ್ರತಿಯೊಬ್ಬರನ್ನೂ ಮಾನಿಟಿರಿಂಗ್ ಮಾಡಲಿದ್ದಾರೆ. ಜತೆಗೆ, ರೋಗಿಯ ಸ್ಥಿತಿಗತಿ ತಪಾಸಣೆ ಮಾಡಲಿದ್ದಾರೆ. ಕಳೆದ ಬಾರಿ ನೂರಕ್ಕೆ ನೂರು ಆಗಿರಲಿಲ್ಲ. ಈ ಬಾರಿ ಪರಿಣಾಮಕಾರಿಯಾಗಿ ಮಾಡುತ್ತೇವೆ. ಜನಸಂದಣಿಯಾಗಿರುವ ಪಬ್, ಪಾರ್ಟಿಹಾಲ್, ಮಾಲ್, ಮಾರುಕಟ್ಟೆಗಳಿಗೆ ಹೋಗಿ ತಪಾಸಣೆ ಮಾಡಲಾಗುತ್ತದೆ. ಜನರು ಅನಗತ್ಯವಾಗಿ ಹೊರಗಡೆ ಓಡಾಡಬಾರದು ಎಂದು ಅವರು ಮನವಿ ಮಾಡಿದರು.
ಖಾಸಗಿ ವೈದ್ಯಕೀಯ ಕಾಲೇಜುಗಳ ಜೊತೆ ಸಭೆ ನಡೆಸುತ್ತೇನೆ. ಖಾಸಗಿ ಆಸ್ಪತ್ರೆಗಳ ಮಾಲೀಕರ ಜೊತೆ ಮಾತನಾಡುತ್ತೇನೆ. ಆಸ್ಪತ್ರೆಗಳಲ್ಲಿ ಕೊವಿಡ್ ಪ್ರಕರಣಗಳಿಗೆ ಶೇ 50ರಷ್ಟು ಮೀಸಲಿಡಲು ತಿಳಿಸುತ್ತೇವೆ. ಸರ್ಕಾರದಿಂದ ಬರುವ ರೋಗಿಗಳಿಗೆ ಎಷ್ಟು ಮೀಸಲಿಡಬೇಕು. ವೈಯಕ್ತಿಕವಾಗಿ ನೇರವಾಗಿ ಆಸ್ಪತ್ರೆಗೆ ಬರುವವರಿಗೆ ಎಷ್ಟು ಬೆಡ್ ನೀಡಬೇಕು ಎಂಬುದನ್ನು ನಿರ್ಧರಿಸಬೇಕಿದೆ. ಮಾರ್ಷಲ್ ಮತ್ತು ಹೋಂ ಗಾರ್ಡ್ಸ್ಗಳಿಗೆ 2 ಸಾವಿರ ಬೆಡ್ ಮೀಸಲಿಡುತ್ತೇವೆ ಎಂದು ಅವರು ತಿಳಿಸಿದರು.
ಬೆಂಗಳೂರಿನಿಂದ ಗ್ರಾಮೀಣ ಭಾಗಕ್ಕೆ ತೆರಳುವವರು ಎಚ್ಚರಿಕೆಯಿಂದ ಇರಬೇಕು ಇನ್ನೇನು ಯುಗಾದಿ ಹಬ್ಬ ಬರುತ್ತಿದೆ ಎಂದು ಕೊರೊನಾ ಸುಮ್ಮನಾಗಲ್ಲ. ಬೆಂಗಳೂರಿನಿಂದ ಗ್ರಾಮೀಣ ಭಾಗಕ್ಕೆ ತೆರಳುವವರು ಎಚ್ಚರಿಕೆಯಿಂದ ಇರಬೇಕು. ಹಳ್ಳಿಗಳಲ್ಲಿ ಕೊರೊನಾ ಸೋಂಕು ಹರಡದಂತೆ ನೋಡಿಕೊಳ್ಳಬೇಕು. ನಗರದಲ್ಲಿ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. 5 ಸಾವಿರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ಪ್ರತಿಯೊಬ್ಬರೂ ಜಾಗರೂಕರಾಗಿರಿ ಎಂದು ಆರೋಗ್ಯ ಸಚಿವ ಸುಧಾಕರ್ ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ನಿನ್ನೆ ಒಂದೇ ದಿನ 7,000 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು ನಗರದಲ್ಲಿ 5,000 ಪಾಸಿಟಿವ್ ಕೇಸ್‌ಗಳು ದಾಖಲಾಗಿವೆ. ಕೊರೊನಾ ನಿಯಂತ್ರಣಕ್ಕೆ ಅಧಿಕಾರಿಗಳ ಜತೆ ಸಭೆ ನಡೆಸಿ ಆಡಳಿತಾತ್ಮಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಎಲ್ಲ ಹಬ್ಬಗಳಿಗೂ ನಿಯಮ ಜಾರಿಯಲ್ಲಿರುತ್ತದೆ. ಇದರಲ್ಲಿ ಯಾವುದೇ ವಿನಾಯಿತಿ ಇರುವುದಿಲ್ಲ ಎಂದು ಅವರು ಹೇಳಿದರು.
ಕೊರೊನಾ ನಿಯಂತ್ರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಜತೆ ವಿಡಿಯೊ ಸಂವಾದ ಸಭೆ ನಡೆಯಲಿದೆ. ಕೊವಿಡ್ ಎರಡನೇ ಅಲೆ ನಿಯಂತ್ರಣದ ಬಗ್ಗೆ ಹಾಗೂ ಮಾರ್ಗಸೂಚಿ ಅನುಷ್ಠಾನದ ಬಗ್ಗೆ ಚರ್ಚೆ ನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ರಾಜ್ಯದ ಸ್ಥಿತಿ ಗತಿಯ ಬಗ್ಗೆ ಪ್ರಧಾನಿ ಮೋದಿ ಅವರಿಗೆ ತಿಳಿಸುತ್ತಾರೆ ಎಂದು ಮಾಹಿತಿ ಹಂಚಿಕೊಂಡರು.
ಇದನ್ನೂ ಓದಿ: ಭಾರತದಲ್ಲಿ ಕೊರೊನಾವೈರಸ್ 2ನೇ ಅಲೆ: ಮಾರ್ಚ್ ತಿಂಗಳಲ್ಲಿ 79,000 ಕ್ಕಿಂತಲೂ ಹೆಚ್ಚು ಮಕ್ಕಳಿಗೆ ಕೊವಿಡ್
(Will conduct 1 lakh people covid test daily in Bengaluru says Health Minister Dr K Sudhakar)