ಲಕ್ಷ್ಮೀ ಹೆಬ್ಬಾಳ್ಕರ್ಗೆ ನಿಂದನೆ ಆರೋಪ: ಸಿಟಿ ರವಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು
ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅವಮಾನಿಸಿದ ಆರೋಪದ ಮೇಲೆ ಬಿಜೆಪಿ ಶಾಸಕ ಸಿ.ಟಿ. ರವಿಯನ್ನು ಬಂಧಿಸಲಾಗಿದೆ. ಈ ಮಧ್ಯೆ ಕರ್ನಾಟಕ ಕಾಂಗ್ರೆಸ್ ಸಮಿತಿ ಮಹಿಳಾ ಆಯೋಗಕ್ಕೆ ದೂರು ನೀಡಿದೆ. ಸಿಟಿ ರವಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಬೆಂಗಳೂರು, ಡಿಸೆಂಬರ್ 20: ಶಾಂತಿಯುವತಾಗಿ ನಡೆಯುತ್ತಿದ್ದ ಬೆಳಗಾವಿ ಅಧಿವೇಶದಲ್ಲಿ ನಿನ್ನೆ ಕೋಲಾಹಲವೇ ಸೃಷ್ಟಿಯಾಗಿತ್ತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (lakshmi hebbalkar) ಬಗ್ಗೆ ಬಿಜೆಪಿ ಎಂಎಲ್ಸಿ ಸಿಟಿ ರವಿ ಆಡಿದ ಅದೊಂದು ಮಾತು ಸಂಘರ್ಷಕ್ಕೆ ಕಾರಣವಾಗಿತ್ತು. ಮಾತಿನಿಂದಲೇ ಆಪತ್ತು ತಂದುಕೊಂಡಿರುವ ಸಿಟಿ ರವಿ ಸದ್ಯ ಅರೆಸ್ಟ್ ಕೂಡ ಆಗಿದ್ದಾರೆ. ಬೆಂಗಳೂರು ನ್ಯಾಯಾಲಯಕ್ಕೆ ವರ್ಗಾವಣೆ ಮಾಡುತ್ತಿದ್ದಾರೆ. ಈ ಮಧ್ಯೆ ಸಿಟಿ ರವಿ ವಿರುದ್ಧ ಮಹಿಳಾ ಆಯೋಗಕ್ಕೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ದೂರು ನೀಡಲಾಗಿದೆ.
ದೂರಿನಲ್ಲೇನಿದೆ?
ಬೆಳಗಾವಿ ಅಧಿವೇಶನ ನಡೆಯುತ್ತಿದ್ದ ಸುವರ್ಣ ಸೌಧದ ವಿಧಾನ ಪರಿಷತ್ ಕಲಾಪದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಕ್ಟರ್ ಅವರಿಗೆ ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ. ರವಿ ಅವರು ಅಸಭ್ಯ ಮತ್ತು ಅಸಂವಿಧಾನಿಕ ಪದ ಬಳಕೆ ಮಾಡಿ ಅಪಮಾನಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ.
ಇದನ್ನೂ ಓದಿ: ಬೆಳಗಾವಿ ಕೋರ್ಟ್ ಮಹತ್ವದ ಆದೇಶ: ಸಿಟಿ ರವಿ ಬೆಂಗಳೂರಿಗೆ ಶಿಫ್ಟ್!
ಮಾಜಿ ಮಂತ್ರಿಯಾಗಿದ್ದು, ಹೆಣ್ಣು ಮಕ್ಕಳ ಬಗ್ಗೆ ಅಪಾರ ಕಾಳಜಿ, ಗೌರವ ಹೊಂದಿರಬೇಕಾದ ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಯೇ ಘನತವತ್ತ ಸದನದಲ್ಲಿ ಮಹಿಳಾ ಮಂತ್ರಿಯೊಬ್ಬರನ್ನು ಅತೀ ಕೀಳು ಮಟ್ಟದ ಅಸಾಂವಿಧಾನಿಕ ಪದ ಪ್ರಯೋಗ ಮಾಡಿದ್ದರೆ ಅದು ನಾಡಿನ ಇಡೀ ಹೆಣ್ಣು ಕುಲಕ್ಕೇ, ಅವರ ಭಾವನೆಗಳಿಗೆ, ಅವರ ಘನತೆಗೆ ಉಂಟು ಮಾಡಿರುವ ಅಪಮಾನ. ಹಾಗಾಗಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಬೇಕೆಂದು ಕೋರಲಾಗಿದೆ.
ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಹೇಳಿದ್ದಿಷ್ಟು
ಕೆ.ಜಿ.ರಸ್ತೆಯ ರಾಜ್ಯ ಮಹಿಳಾ ಆಯೋಗದ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶ ನಡೆಯಿತು. ಕಲಾಪ ನಡೆಯಬೇಕಾದರೆ ಸಭಾಪತಿಗಳು ಕಲಾಪ ಮುಂದೂಡಿಕೆ ಮಾಡಿರುತ್ತಾರೆ. ಆ ದೃಶ್ಯಾವಳಿಗಳನ್ನ ಮಾಧ್ಯಮಗಳ ಮೂಲಕ ಗಮನಿಸಿದ್ದೇವೆ. ಸಭಾಪತಿಗಳಿಗೆ ಲಕ್ಷ್ಮೀ ಹೆಬ್ಬಾಳ್ಕರ್ ದೂರನ್ನ ಮಾಡುತ್ತಾರೆ.
ಅವಾಚ್ಯ ಪದಗಳಿಂದ ನನ್ನನ್ನ ಮಾತನಾಡಿಸಿದ್ದಾರೆ ಅಂತ ದೂರನ್ನ ಕೊಡುತ್ತಾರೆ. ವಿಧಾನ ಪರಿಷತ್ ಸದಸ್ಯರು ಸಹ ದೂರನ್ನ ಕೊಡುತ್ತಾರೆ. ಸಭಾಪತಿಗಳ ಜೊತೆಯೂ ನಾನು ಮಾತನಾಡಿದೆ. ಪರಸ್ಪರ ಇಬ್ಬರೂ ಮಾತುಗಳನ್ನ ಆಡಿದ್ದಾರೆ, ಸದನದ ಮುಂದೂಡಿಕೆ ಆದ ಮೇಲೆ ವಾಕ್ಸಮರ ನಡೆದಿದೆ. ಸಭಾಪತಿಗಳಿಗೆ ಪತ್ರ ಬರೆದಿದ್ದೇನೆ, ಉನ್ನತ ಮಟ್ಟತ ತನಿಖಾ ತಂಡ ರಚಿಸಬೇಕಿದೆ. ಏನಾಗಿದೆ ಅನ್ನೋದನ್ನ ಪರಿಶೀಲನೆ ನಡೆಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧ ಸಿ. ಮಂಜುಳಾ ವಾಗ್ದಾಳಿ
ಬಿಜೆಪಿ ಮಹಿಳಾ ಮೋರ್ಛಾ ರಾಜ್ಯಾಧ್ಯಕ್ಷೆ ಸಿ. ಮಂಜುಳಾ ಪ್ರತಿಕ್ರಿಯಿಸಿದ್ದು, ರಾಜ್ಯ ಮಹಿಳಾ ಆಯೋಗ ಸಿ.ಟಿ. ರವಿ ಅವರ ಮೇಲೆ ಕ್ರಮಕ್ಕೆ ಸಭಾಪತಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ. ಮಹಿಳೆಯರ ವಿರುದ್ಧ ಹೇಳಿಕೆ ಬಂದಾಗ ಒಪ್ಪಲು ಸಾಧ್ಯವಿಲ್ಲ. ಮಹಿಳಾ ಆಯೋಗ ರಾಜ್ಯದ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಬಾಣಂತಿಯರ ಸಾವಿನ ಬಗ್ಗೆ ಧ್ವನಿ ಎತ್ತಿಲ್ಲ. ಆದರೆ ಪಕ್ಷದ ವಿಚಾರ ಬಂದಾಗ ಮಹಿಳಾ ಆಯೋಗದ ಅಧ್ಯಕ್ಷರು ಧ್ವನಿ ಎತ್ತಿದ್ದಾರೆ ಎಂದರು.
ಇದನ್ನೂ ಓದಿ: CT Ravi: ನಿನ್ನ ಹೆಣ ಚಿಕ್ಕಮಗಳೂರಿಗೆ ಹೋಗುತ್ತೆ ಎಂದು ಧಮಕಿ ಹಾಕಿದ್ದರು: ಕೋರ್ಟ್ನಲ್ಲಿ ಸಿಟಿ ರವಿ ಆರೋಪ
ಕುಮಾರಸ್ವಾಮಿ ಅವರು ಗ್ಯಾರಂಟಿ ಬಗ್ಗೆ ಮಾತನಾಡಿದಾಗ ಸುಮೋಟೋ ದಾಖಲಿಸಿಕೊಂಡಿದ್ದಾರೆ. ನೇಹಾ ಪ್ರಕರಣದಲ್ಲಿ ಸುಮೋಟೋ ಹಾಕಿಕೊಂಡಿಲ್ಲ. ಆದರೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ನಿಂದನೆ ಮಾಡಿದರು ಎಂಬ ವಿಚಾರದಲ್ಲಿ ಕ್ರಮ ಆಗಬೇಕು ಅಂತಿದ್ದಾರೆ. ಅಲ್ಲಿರುವ ಆಡಿಯೋ, ವಿಡಿಯೋ ದಾಖಲೆ ಪರಿಶೀಲಿಸಿದಾಗ ಯಾವುದೇ ಹೇಳಿಕೆ ಸಭಾಪತಿಗಳಿಗೆ ಸಿಕ್ಕಿಲ್ಲ. ಆ ಹೇಳಿಕೆಯನ್ನು ಸಾಕ್ಷಿ ಸಮೇತ ಸಾಬೀತುಪಡಿಸಲು ಹೆಬ್ಬಾಳ್ಕರ್ ವಿಫಲವಾಗಿದ್ದಾರೆ ಎಂದು ಹೇಳಿದ್ದಾರೆ.
ಸಿ.ಟಿ. ರವಿ ಅವರನ್ನು ಇಡೀ ರಾತ್ರಿ ಸುತ್ತಾಡಿಸಿದ್ದಾರೆ. ಕಾಂಗ್ರೆಸ್ ನಾಯಕರೇ ಗೂಂಡಾಗಳ ರೀತಿ ವರ್ತಿಸಿದ್ದಾರೆ. ಹಿಂದೂ ನಾಯಕನ ಧ್ವನಿ ಮತ್ತು ಬಿಜೆಪಿ ಧ್ವನಿ ಅಡಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸಭಾಪತಿಗಳು ರವಿ ಮೇಲೆ ಹಲ್ಲೆ ಮಾಡಿದವರ ಮೇಲೆ ಕ್ರಮಕೈಗೊಳ್ಳಬೇಕು. ಸಿಎಂಗೆ ಇರುವ ಸೇಡು ತೀರಿಸಿಕೊಂಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.