ಯಾದಗಿರಿ ನಗರಸಭೆ ಭ್ರಷ್ಟ ಅಧಿಕಾರಿಗಳಿಗೆ ಕೊನೆಗೂ ಅಮಾನತು ಶಿಕ್ಷೆ, 8 ಅಧಿಕಾರಿಗಳು ಮನೆಗೆ
ಈ ಎಂಟು ಜನ ಅಧಿಕಾರಿಗಳು ಸುಮಾರು 4 ಕೋಟಿ ಮೌಲ್ಯದ ಸರ್ಕಾರಿ ಆಸ್ತಿಯನ್ನ 22 ಲಕ್ಷ ರೂಪಾಯಿಯನ್ನು ಲಂಚದ ರೂಪದಲ್ಲಿ ಪಡೆದು ಆರು ಜನ ಖಾಸಗಿ ವ್ಯಕ್ತಿಗಳ ಹೆಸರಿಗೆ ಪರಭಾರೆ ಮಾಡಿಕೊಟ್ಟಿದ್ರು. ಈ ಅಕ್ರಮದ ಬಗ್ಗೆ ಕಳೆದ ನಾಲ್ಕು ತಿಂಗಳ ಹಿಂದೆ ಹಿಂದಿನ ಪೌರಾಯುಕ್ತ ಸಂಗಪ್ಪ ಉಪಾಸೆ ಬಯಲು ಮಾಡಿ ಹಿರಿಯ ಅಧಿಕಾರಿಗಳಿಗೆ ದಾಖಲೆಗಳ ಸಮೇತವಾಗಿ ದೂರು ನೀಡಿದ್ರು.

ಆ ನಗರಸಭೆ ಅಧಿಕಾರಿಗಳು ತಮ್ಮ ಜೇಬು ತುಂಬಿಸಿಕೊಳ್ಳಲು ಕೋಟ್ಯಾಂತರ ರೂ. ಬೆಲೆ ಬಾಳುವ ಸರ್ಕಾರಿ ಜಾಗವನ್ನ ಖಾಸಗಿ ವ್ಯಕ್ತಿಗಳ ಹೆಸರಿಗೆ ವರ್ಗಾವಣೆ ಮಾಡಿದ್ರು. ಲಕ್ಷ ಲಕ್ಷ ಲಂಚವನ್ನ ಪಡೆದಿದ್ದು 8 ಜನ ಅಧಿಕಾರಿಗಳು ಆರು ಜನ ಖಾಸಗಿ ವ್ಯಕ್ತಿಗಳ ಹೆಸರಿಗೆ ಕೋಟ್ಯಾಂತರ ರೂ. ಜಾಗವನ್ನ ವರ್ಗಾವಣೆ ಮಾಡಿಕೊಟ್ಟಿದ್ರು. ಅಧಿಕಾರಿಗಳು ಭ್ರಷ್ಟಾಚಾರವನ್ನ ಟಿವಿ9 ಬಯಲು ಮಾಡ್ತಾಯಿದ್ದ ಹಾಗೆ ತನಿಖೆ ನಡೆದು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಮಾಡಿದ್ದುಣ್ಣೋ ಮಾರಾಯ ಎನ್ನುವ ಹಾಗೆ ಅಧಿಕಾರಿಗಳು ಅಮಾನತಾಗಿ ಮನೆಯಲ್ಲಿ ಕುಳಿತಿದ್ದಾರೆ. ಸರ್ಕಾರಿ ಆಸ್ತಿಯನ್ನ ಮಾರಾಟ ಮಾಡಿದ ಅಧಿಕಾರಿಗಳ ತಲೆ ದಂಡ.. ಲಕ್ಷ ಲಕ್ಷ ಲಂಚ (corruption) ಪಡೆವರಿಗೆ ಅಮಾನತು ಶಿಕ್ಷೆ (suspend) ನೀಡಿದ ಪೌರಾಡಳಿತ ನಿರ್ದೇಶನಾಲಯ ಶಿಸ್ತು ಪ್ರಾಧಿಕಾರ.. ಟಿವಿ9 ವರದಿ ಬಳಿಕ ತನಿಖೆ ನಡೆಸಿದ್ದ ಅಧಿಕಾರಿಗಳು.. ಯಸ್ ಈ ವಿದ್ಯಮಾನಗಳು ಕಂಡು ಬಂದಿರುವುದು ಯಾದಗಿರಿ ನಗರದಲ್ಲಿ (Yadagiri municipal council).
ಹೌದು ಯಾದಗಿರಿ ನಗರಸಭೆ ಭ್ರಷ್ಟ ಅಧಿಕಾರಿಗಳಿಗೆ ಕೊನೆಗೂ ಅಮಾನತು ಶಿಕ್ಷೆಯಾಗಿದೆ. ಯಾದಗಿರಿ ನಗರಸಭೆಯಲ್ಲಿ ಹಿಂದೆ ಕರ್ತವ್ಯ ನಿರ್ವಹಿಸಿದ 8 ಜನ ಭ್ರಷ್ಟ ಅಧಿಕಾರಿಗಳಿಗೆ ಸುದೀರ್ಘ ತನಿಖೆ ನಡೆಸಿದ ವರದಿ ಸಲ್ಲಿಸಿದ ಬಳಿಕ ರಾಜ್ಯ ಪೌರಾಡಳಿತ ನಿರ್ದೇಶನಾಲಯದ ಶಿಸ್ತು ಪ್ರಾಧಿಕಾರ ಅಮಾನತು ಮಾಡಿ ಆದೇಶ ನೀಡಿದೆ. ಯಾದಗಿರಿ ನಗರಸಭೆಯಲ್ಲಿ ಹಿಂದೆ ಪೌರಾಯುಕ್ತರಾಗಿ ಸೇವೆ ಸಲ್ಲಿಸಿದ ಶರಣಪ್ಪ, ಹಿಂದಿನ ಕಂದಾಯ ಅಧಿಕಾರಿ ವಿಶ್ವಪ್ರತಾಪ್ ಅಲೆಕ್ಜಂಡರ್,ಕಂದಾಯ ನಿರೀಕ್ಷಕ ರಿಯಾಜುದ್ದೀನ್,ಕಿರಿಯ ಇಂಜಿನೀಯರ್ ರಾಕೇಶ್ ರೆಡ್ಡಿ,ಕಂದಾಯ ಅಧಿಕಾರಿ ನರಸಿಂಹರೆಡ್ಡಿ,ಕಂದಾಯ ನಿರೀಕ್ಷಕ ಸುರೇಶ್ ವಿಭೂತಿ,ಕಿರಿಯ ಇಂಜಿನೀಯರ ಲಿಂಗಾರೆಡ್ಡಿ ಹಾಗೂ ಪ್ರಥಮ ದರ್ಜೆ ಸಹಾಯಕಿ ಪುಷ್ಪವತಿಯನ್ನ ಅಮಾನತು ಮಾಡಲಾಗಿದೆ.
ಈ ಎಂಟು ಜನ ಅಧಿಕಾರಿಗಳು ಸುಮಾರು 4 ಕೋಟಿ ಮೌಲ್ಯದ ಸರ್ಕಾರಿ ಆಸ್ತಿಯನ್ನ 22 ಲಕ್ಷ ರೂಪಾಯಿಯನ್ನು ಲಂಚದ ರೂಪದಲ್ಲಿ ಪಡೆದು ಆರು ಜನ ಖಾಸಗಿ ವ್ಯಕ್ತಿಗಳ ಹೆಸರಿಗೆ ಪರಭಾರೆ ಮಾಡಿಕೊಟ್ಟಿದ್ರು. ಈ ಅಕ್ರಮದ ಬಗ್ಗೆ ಕಳೆದ ನಾಲ್ಕು ತಿಂಗಳ ಹಿಂದೆ ಹಿಂದಿನ ಪೌರಾಯುಕ್ತ ಸಂಗಪ್ಪ ಉಪಾಸೆ ಬಯಲು ಮಾಡಿ ಹಿರಿಯ ಅಧಿಕಾರಿಗಳಿಗೆ ದಾಖಲೆಗಳ ಸಮೇತವಾಗಿ ದೂರು ನೀಡಿದ್ರು.
ಈ ಬಗ್ಗೆ ಟಿವಿ9 ನಲ್ಲಿ ವಿಸ್ತೃತವಾಗಿ ವರದಿ ಪ್ರಸಾರ ಮಾಡಿದ ಬಳಿಕ ಯಾದಗಿರಿ ಜಿಲ್ಲಾಡಳಿತ ನಗರಾಭಿವೃದ್ಧಿ ಕೋಶದ ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚನೆ ಮಾಡಿ ತನಿಖೆಗೆ ಆದೇಶ ನೀಡಿತ್ತು. ಎರಡು ತನಿಖಾ ತಂಡಗಳು ಸುದೀರ್ಘವಾಗಿ ನಾಲ್ಕು ತಿಂಗಳುಗಳ ಕಾಲ ನಡೆಸಿದ ಬಳಿಕ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿತ್ತು. ಬಳಿಕ ವರದಿಯಲ್ಲಿ ಈ ಎಂಟು ಜನ ಅಧಿಕಾರಿಗಳು ಸರ್ಕಾರಕ್ಕೆ ಮೋಸ ಮಾಡಿ ಕೋಟ್ಯಾಂತರ ರೂ. ಆಸ್ತಿಯನ್ನ ಹಣದ ಆಸೆಗಾಗಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಮಾಡಿಕೊಟ್ಟಿದ್ರು ಅಂತ ಸಾಬೀತಾಗಿದ್ದರಿಂದ ಅಮಾನತು ಮಾಡಲಾಗಿದೆ.
ಅಷ್ಟಕ್ಕೂ ಈ ಎಂಟು ಜನ ಅಧಿಕಾರಿಗಳು ಯಾವ ಸರ್ಕಾರಿ ಆಸ್ತಿಯನ್ನ ಖಾಸಗಿ ವ್ಯಕ್ತಿಗಳ ಹೆಸರಿಗೆ ಮಾಡಿಕೊಟ್ಟಿದ್ರು ಅಂದ್ರೆ ಯಾದಗಿರಿ ನಗರದ ಚಿತ್ತಾಪುರ ರಸ್ತೆಯಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮಕ್ಕೆ ಸೇರಿದ 100 X 140 ಅಡಿ ವಿಸ್ತೀರ್ಣದ ಮೂರು ಗೋದಾಮುಗಳಿರುವ ಜಾಗವನ್ನ. ಈ ಮೂರು ಗೋದಾಮಿನ 42 ಸಾವಿರ ಚದರ ಅಡಿ ಜಾಗವನ್ನು 2011ರಲ್ಲಿ ಅಂದಿನ ಜಿಲ್ಲಾಧಿಕಾರಿ ಆಹಾರ, ನಾಗರಿಕ ಸರಬರಾಜು ಇಲಾಖೆಗೆ ಹಸ್ತಾಂತರಿಸಿದ್ರು.
Also Read: ಯಾದಗಿರಿ ನಗರಸಭೆ ಅಕ್ರಮ ಬಯಲಿಗೆಳೆದ ಪೌರಾಯುಕ್ತರಿಗೆ ಜೀವ ಬೆದರಿಕೆ
ಇದೇ ಜಾಗದ ಸರ್ವೆ ನಂ.391/1, 2 ಸರ್ಕಾರಿ ಆಸ್ತಿಗೆ ಖೊಟ್ಟಿ ದಾಖಲೆ ಸೃಷ್ಟಿಸಿ ನಗರಸಭೆಯ ಈ ಎಂಟು ಜನ ಭ್ರಷ್ಟ ಅಧಿಕಾರಿಗಳು ಬೈ ನಂಬರ್ ನೀಡಿದ್ರು. ಸರ್ಕಾರಿ ಆಸ್ತಿಯನ್ನು ರಕ್ಷಿಸಬೇಕಾದ ಅಧಿಕಾರಿ, ಸಿಬ್ಬಂದಿ 22 ಲಕ್ಷ ಲಂಚ ಪಡೆದು 4 ಕೋಟಿ ಮೌಲ್ಯದ ಆಸ್ತಿಯನ್ನ ಖಾಸಗಿಯವರಿಗೆ ಮಾರಾಟ ಮಾಡಿದ್ರು.ನಗರಸಭೆಯ ಅಧಿಕಾರಿಗಳು ಮನೆ ನಂ. 5-1-408/23ಎ ಹಾಗೂ 24ಎ, 25ಎ, 26ಎ, 27ಎ ಎಂದು ನಮೂದಿಸಿದ್ದಾರೆ. 5 ಖಾತಾ ನಕಲು, ಪಿಐಡಿ ಸೃಷ್ಟಿಸಿ ಹಾಗೂ ಮತ್ತೊಂದು ಖಾತಾ ನಕಲು 3 ಜನರ ಹೆಸರಿನಲ್ಲಿ ಪಿಐಡಿ ಸೃಷ್ಟಿಸಿ 2022ರ ಮೇ 24ರಂದು ಕಾನೂನು ಬಾಹಿರವಾಗಿ ಮಾರಾಟ ಮಾಡಿದ್ರು. ಇದೆ ಅಕ್ರಮದ ಬಗ್ಗೆ ತನಿಖೆ ನಡಿಸಿ ಭ್ರಷ್ಟರನ್ನ ಅಮಾನತು ಮಾಡಲಾಗಿದೆ.
ಇನ್ನು ಇದೊಂದೆ ಅಕ್ರಮ ಅಲ್ಲದೆ ಪೌರಾಯುಕ್ತರಾಗಿದ್ದ ಶರಣಪ್ಪರಿಗಿಂತ ಹಿಂದೆ ಸೇವೆ ಸಲ್ಲಿಸಿದ್ದ ಇನ್ನು ಇಬ್ಬರು ಪೌರಾಯುಕ್ತರಾದ ಭೀಮಣ್ಣ ನಾಯಕ ಹಾಗೂ ಬಕ್ಕಪ್ಪ ನಕಲಿ ದಾಖಲೆಗಳನ್ನ ಸೃಷ್ಟಿ ಮಾಡಿ ರಿಯಲ್ ಎಸ್ಟೇಟ್ ದಂದೆಕೋರರಿಗೆ ಸಾಥ್ ನೀಡಿದ್ರು. ನಕಲಿ ದಾಖಲೆಗಳನ್ನ ಸೃಷ್ಟಿ ಮಾಡಿ ಇ-ಖಾತಾ ನೀಡಿ ಸರ್ಕಾರ ಸೇರಬೇಕಿದ್ದು ಕೋಟ್ಯಾಂತರ ರೂ. ಹಣವನ್ನ ಸೇರದಂತೆ ನೋಡಿಕೊಂಡಿದ್ರು. ಸದ್ಯ ಒಬ್ಬ ಪೌರಾಯುಕ್ತ ಸಸ್ಪೆಂಡ್ ಆಗಿದ್ದು ಇನ್ನಿಬ್ಬರ ಮೇಲೆ ಕತ್ತಿ ನೇತಾಡುತ್ತಿದೆ.
ಒಟ್ನಲ್ಲಿ ಭ್ರಷ್ಟಚಾರ ನಡೆಸಿ ಸರ್ಕಾರ ಕೋಟ್ಯಾಂತರ ರೂ. ನಷ್ಟ ಮಾಡಿ ತಮ್ಮ ಜೇಬು ತುಂಬಿಸಿಕೊಂಡಿದ್ದ ಅಧಿಕಾರಿಗಳಿಗೆ ಅಮಾನತು ಶಿಕ್ಷೆಯಾಗಿದೆ. ಆದ್ರೆ ಇನ್ನಷ್ಟು ತನಿಖೆ ನಡೆಸಿ ಅಕ್ರಮ ಎಸಗಿದ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಿ ಸರ್ಕಾರಕ್ಕೆ ಆದ ನಷ್ಟವನ್ನ ತುಂಬಿಸುವ ಕೆಲಸ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ