Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾದಗಿರಿ: ಬರದ ಮಧ್ಯೆಯೂ ಭತ್ತ ಬೆಳೆದ ಅನ್ನದಾತರಿಗೆ ಡಬಲ್ ಹೊಡೆತ; ಹೈರಾಣಗೊಂಡ ರೈತರಿಗೆ ಮುಂದಿನ ದಾರಿಯೇನು?

ನಾಟಿ ಮಾಡಿದ ಭತ್ತ ಹಾಳಾಗಿ‌ ಹೋಗುತ್ತೆ ಅಂತ ಅನ್ನದಾತರು ಅಂದುಕೊಂಡಿದ್ರು. ಆದ್ರೆ ಕೆಲ ದಿನಗಳ ಬಳಿಕ ಬಂದ ಮಳೆಯಿಂದಾಗಿ ಜಿಲ್ಲೆಯ ನದಿಗಳು ಭರ್ತಿಯಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ವು. ಇದೇ ಕಾರಣಕ್ಕೆ ನದಿ ನೀರು ಬಳಕೆ ಮಾಡಿಕೊಂಡು ಸಾವಿರಾರು ರೂ‌. ಖರ್ಚು ಮಾಡಿ ಭತ್ತವನ್ನ ಬೆಳೆದಿದ್ದಾರೆ. ಬೆಳೆ ಈಗ ಕಟಾವ್ ಗೆ ಬಂದಿದೆ. ಆದರೆ...

ಯಾದಗಿರಿ: ಬರದ ಮಧ್ಯೆಯೂ ಭತ್ತ ಬೆಳೆದ ಅನ್ನದಾತರಿಗೆ ಡಬಲ್ ಹೊಡೆತ; ಹೈರಾಣಗೊಂಡ ರೈತರಿಗೆ ಮುಂದಿನ ದಾರಿಯೇನು?
ಯಾದಗಿರಿ: ಬರದ ಮಧ್ಯೆಯೂ ಭತ್ತ ಬೆಳೆದ ಅನ್ನದಾತರಿಗೆ ಡಬಲ್ ಹೊಡೆತ; ಹೈರಾಣಗೊಂಡ ರೈತರಿಗೆ ಮುಂಧಿನ ದಾರಿಯೇನು?
Follow us
ಅಮೀನ್​ ಸಾಬ್​
| Updated By: ಸಾಧು ಶ್ರೀನಾಥ್​

Updated on: Nov 21, 2023 | 11:11 AM

ಬರದ ನಡೆವೆಯು ಆ ಜಿಲ್ಲೆಯ ರೈತರು ಬಂಗಾರದಂತ ಭತ್ತದ ಬೆಳೆಯನ್ನ ಬೆಳೆದಿದ್ದಾರೆ. ಮಳೆ ಕೊರತೆ ಇದ್ರು ನದಿ ನೀರು ಬಳಸಿಕೊಂಡು ಭತ್ತ ಬೆಳೆದಿದ್ದಾರೆ. ಸಾವಿರಾರು ರೂ. ಖರ್ಚು ಮಾಡಿ ಭತ್ತ ಬೆಳೆದು ಈಗ ಕಟಾವ್ ಮಾಡುತ್ತಿದ್ದಾರೆ. ಆದ್ರೆ ಬರಗಾಲದ ಮಧ್ಯೆಯೂ ಭತ್ತ ಕಟಾವ್ ಮಾಡುವ ಮಷೀನ್ ಗಳ ಬೆಲೆ ಏರಿಕೆಯಾಗಿದೆ. ಭತ್ತ ಕಟಾವ್ ಮಾಡಲು ರೈತರು ಎಕರೆಗೆ ಸಾವಿರಾರು ರೂ. ಖರ್ಚು ಮಾಡುವಂತಾಗಿದೆ. ಬರಗಾಲದಲ್ಲೂ ಬಂಗಾರದಂತ ಭತ್ತ ಬೆಳೆದ ರೈತರು.‌. ಮೋಡ ಕವಿದ ವಾತಾವರಣ, ಆತುರದಿಂದ ಭತ್ತದ ಕಟಾವ್ ಮಾಡಿಸುತ್ತಿರುವ ರೈತರು‌‌. ಭತ್ತ ಕಟಾವ್ ಮಾಡುವ ಮಷೀನ್ ಗಳ ಬೆಲೆ ಏರಿಕೆ ರೈತರ ಎಫೆಕ್ಟ್. ಯಸ್, ಈ ದೃಶ್ಯಗಳು ಕಂಡು ಬಂದಿದ್ದು ಯಾದಗಿರಿ ಜಿಲ್ಲೆಯಲ್ಲಿ.

ಹೌದು ಯಾದಗಿರಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಭೀಕರ ಬರಗಾಲ ಆವರಿಸಿಕೊಂಡಿದೆ. ಬರದ ಮಧ್ಯೆಯೂ ಯಾದಗಿರಿ ಜಿಲ್ಲೆಯ ಅನ್ನದಾತರು ಬಂಗಾರದಂತ ಭತ್ತದ ಬೆಳೆಯನ್ನ ಬೆಳೆದಿದ್ದಾರೆ. ಕಳೆದ ಜೂನ್ ಮತ್ತು ಜುಲೈ ನಲ್ಲಿ ಜಿಲ್ಲೆಯ ಸಾವಿರಾರು ರೈತರು ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನ ನಾಟಿ ಮಾಡಿದ್ದಾರೆ. ಆರಂಭದಲ್ಲಿ ಮಳೆ ಬಾರದಕ್ಕೆ ನದಿಗಳು ಸಂಪೂರ್ಣವಾಗಿ ಬತ್ತಿ ಹೋಗಿದ್ವು.

ನಾಟಿ ಮಾಡಿದ ಭತ್ತ ಹಾಳಾಗಿ‌ ಹೋಗುತ್ತೆ ಅಂತ ಅನ್ನದಾತರು ಅಂದುಕೊಂಡಿದ್ರು. ಆದ್ರೆ ಕೆಲ ದಿನಗಳ ಬಳಿಕ ಬಂದ ಮಳೆಯಿಂದಾಗಿ ಜಿಲ್ಲೆಯ ಭೀಮಾ ಮತ್ತು ಕೃಷ್ಣ ನದಿಗಳು ಸಂಪೂರ್ಣವಾಗಿ ಭರ್ತಿಯಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ್ವು. ಇದೇ ಕಾರಣಕ್ಕೆ ರೈತರು ನದಿ ನೀರು ಬಳಕೆ ಮಾಡಿಕೊಂಡು ಸಾವಿರಾರು ರೂ‌. ಖರ್ಚು ಮಾಡಿ ಭತ್ತವನ್ನ ಬೆಳೆದಿದ್ದಾರೆ.

ಮೂರು ನಾಲ್ಕು ತಿಂಗಳ ಭತ್ತದ ಬೆಳೆ ಈಗ ಕಟಾವ್ ಗೆ ಬಂದಿದೆ. ಹೀಗಾಗಿ ಕಳೆದ 15 ದಿನಗಳಿಂದ ರೈತರು ಭರ್ಜರಿಯಾಗಿ ಭತ್ತವನ್ನ ಕಟಾವ್ ಮಾಡಿಸುತ್ತಿದ್ದಾರೆ. ಇನ್ನು ಭತ್ತ ಕಟಾವ್ ಮಾಡುವುದಕ್ಕಾಗಿಯೇ ರಾಯಚೂರಿನ ಸಿಂದನೂರ್, ಲಿಂಗಸೂಗುರ, ಮಸ್ಕಿ ಸೇರಿದಂತೆ ನಾನಾ ಕಡೆಯಿಂದ ಮಷೀನ್ ಗಳು ಬಂದಿವೆ. ಎಲ್ಲಿ ನೋಡಿದ್ರು ಭತ್ತದ ಗದ್ದೆಗಳಲ್ಲಿ ಮಷೀನ್ ಗಳು ಭತ್ತ ಕಟಾವ್ ಮಾಡುವ ದೃಶ್ಯಗಳು ಕಾಣಲು ಸಿಗುತ್ತಿವೆ.

ಆದ್ರೆ ಈ ಮಷೀನ್ ಗಳ ಬೆಲೆ ಈ ಬಾರಿ ಏರಿಕೆಯಾಗಿದೆ. ಭತ್ತ ಕಟಾವ್ ಮಾಡಲು ಪ್ರತಿ ಗಂಟೆಗೆ ಸುಮಾರು 2,500 ರಿಂದ 3,000‌ ಸಾವಿರ ರೂ. ಬಾಡಿಗೆ ತೆಗೆದುಕೊಳ್ಳಲಾಗುತ್ತಿದೆ. ಒಂದುವರೆ ಗಂಟೆಗೆ ಒಂದು ಎಕರೆ ಮಾತ್ರ ಮಷೀನ್ ಗಳು ಭತ್ತ ಕಟಾವ್ ಮಾಡುತ್ತವೆ. ಹೀಗಾಗಿ ರೈತರು ಪ್ರತಿ ಒಂದು ಎಕರೆ ಭತ್ತ ಕಟಾವ್ ಮಾಡಲು ಬರೋಬರಿ 4 ಸಾವಿರ ರೂ. ಖರ್ಚು ಮಾಡಬೇಕಾಗಿದೆ. ಮಷೀನ್ ಗಳ ಬಾಡಿಗೆ ಹೆಚ್ಚಾಗಿದ್ದರಿಂದ ರೈತರಿಗೆ ಪೆಟ್ಟು ಬಿದ್ದಂತಾಗಿದೆ.

ಇನ್ನು ಕಳೆದ ವರ್ಷ ಗಂಟೆಗೆ ಸುಮಾರು 2 ಸಾವಿರದಿಂದ 2,100 ರೂ. ಮಾತ್ರ ಬಾಡಿಗೆಯನ್ನ ರೈತರು ಕೊಡ್ತಾಯಿದ್ರು. ಅಷ್ಟು ದುಡ್ಡು ಕೊಟ್ರು ಸಹ ಪ್ರತಿ ವರ್ಷ ಇಳುವರಿ ಚೆನ್ನಾಗಿ ಬರ್ತಾಯಿತ್ತು. ಆದ್ರೆ ಈ ವರ್ಷ ಭೀಕರ ಬರಗಾಲ ಆವರಿಸಿದ್ದರಿಂದ ರೈತರ ಬೆಳೆ ಇಳುವರಿ ಬರ್ತಾಯಿಲ್ಲ. ಇದರ ಮಧ್ಯೆ ಭತ್ತ ಕಟಾವ್ ಮಾಡುವ ಮಷೀನ್ ಗಳ‌ ಬಾಡಿಗೆ ಹೆಚ್ಚಾಗಿದ್ದರಿಂದ ರೈತರಿಗೆ ಡಬಲ್ ಹೊಡೆತ ಬಿದ್ದಂತಾಗಿದೆ.

ಇದನ್ನೂ ಓದಿ: ಸಾರ್ವಜನಿಕರಿಗೆ ಮತ್ತೊಂದು ಬೆಲೆ ಏರಿಕೆ ಶಾಕ್: ಕರ್ನಾಟಕದಲ್ಲಿ 15% ರಷ್ಟು ಅಕ್ಕಿ ದರ ಏರಿಕೆ, ಕಾರಣವೇನು?

ಇನ್ನು ಮೋಡ ಕವಿದ ವಾತಾವರಣ ಸೃಷ್ಟಿಯಾಗಿದ್ದರಿಂದ ಮಳೆ ಬರುವ ಆತಂಕದಲ್ಲಿ ರೈತರಿದ್ದಾರೆ. ಮಳೆ ಬಂದ್ರೆ ಕಟಾವಿಗೆ ಬಂದಿರುವ ಭತ್ತ ಹಾಳಾಗುತ್ತೆ ಅಂತ ರೈತರು ಅಂದುಕೊಂಡಿದ್ದಾರೆ. ಇದೆ ಕಾರಣಕ್ಕೆ ಆತುರ ಬಿದ್ದು ರೈತರು ಭತ್ತವನ್ನ ಕಟಾವ್ ಮಾಡಿಸುತ್ತಿದ್ದಾರೆ. ಇನ್ನು ಕಳೆದ ವಾರ ಅಕಾಲಿಕ ಮಳೆ ಬಂದಿರುವ ಕಾರಣಕ್ಕೆ ಸಾವಿರಾರು ಹೆಕ್ಟೇರ್ ಭತ್ತದ ಬೆಳೆ ನೆಲಕ್ಕುರಳಿ ಹಾಳಾಗಿ ಹೋಗಿದೆ.

ಭತ್ತ ನೆಲಕ್ಕುರಳಿ ತೆನೆಯಲ್ಲಿಯೇ ಭತ್ತ ಸಸಿಯಾಗಿತ್ತು. ಮತ್ತೆ ಮಳೆ ಬಂದ್ರು ಇರೋ ಬೆಳೆ ಕೂಡ ಹಾಳಾಗುತ್ತೆ ಅಂತ ರೈತರು ಸಾಧ್ಯವಾದಷ್ಟು ಬೇಗ ಮುಗಿಯಲಿ ಅಂತ ಕಟಾವ್ ಮಾಡಿಸುತ್ತಿದ್ದಾರೆ. ಇದೆ ಕಾರಣಕ್ಕೆ ಮಷೀನ್ ಮಾಲೀಕರು ಬಾಡಿಗೆ ದುಪ್ಪಟ್ಟು ಮಾಡಿದ್ದಾರೆ. ಅರ್ಜೆಂಟ್ ಅಂತ ರೈತರು ಬಂದ್ರೆ ಗಂಟೆಗೆ ಮೂರು ಸಾವಿರ ಬಾಡಿಗೆಯನ್ನ ಪಡೆಯುತ್ತಿದ್ದಾರೆ. ಇನ್ನು ಮಳೆಗೆ ನೆಲಕುರಳಿರುವ ಬೆಳೆಯನ್ನ ಕಟಾವ್ ಮಾಡಲು ಸಮಯ ಹೆಚ್ಚು ಹಿಡಿಯುತ್ತೆ. ಒಂದು ಎಕರೆ ನೆಲಕುರಳಿದ ಭತ್ತ ಕಟಾವ್ ಮಾಡಬೇಕು ಅಂದ್ರೆ ಸುಮಾರು ಮೂರು ಗಂಟೆ ಸಮಯ ತಗಲುತ್ತಿದೆ. ಹೀಗಾಗಿ ರೈತರು ಎಕರೆ ಭತ್ತ ಕಟಾವ್ ಮಾಡಿಸಬೇಕು ಅಂದ್ರೆ ಏಳು ಸಾವಿರ ರೂ. ಖರ್ಚು ಮಾಡುವಂತಾಗಿದೆ ಅಂತಾರೆ ರೈತರು.

ಒಟ್ನಲ್ಲಿ ಬರಗಾಲದಲ್ಲೂ ಕಷ್ಟಪಟ್ಟು ಬಂಗಾರದಂತ ಬೆಳೆ ಬೆಳೆದಿರುವ ರೈತರಿಗೆ ಬೆಲೆ ಏರಿಕೆ ಶಾಕ್ ಆಗಿದೆ. ಭತ್ತ ಕಟಾವ್ ಮಾಡಿವ ಮಷೀನ್ ಗಳ ಬಾಡಿಗೆ ಒಂದೆ ವರ್ಷದಲ್ಲಿ ನೂರಾರು ಹೆಚ್ಚಾಗಿದ್ದರಿಂದ ರೈತರಿಗೆ ಹೆಚ್ಚು ಭಾರವಾಗಿದೆ. ಹೀಗಾಗಿ ಜಿಲ್ಲಾಡಳಿತ ಮಧ್ಯೆ ಪ್ರವೇಶ ಮಾಡಿ ಸೂಕ್ತ‌ ಬಾಡಿಗೆಯನ್ನ ನಿಗದಿ ಮಾಡಬೇಕಾಗಿದೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ