
ಯಾದಗಿರಿ, ಆಗಸ್ಟ್ 23: ವಿದ್ಯುತ್ ಕಂಬಕ್ಕೆ ಬೊಲೆರೊ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೂವರು ದುರ್ಮರಣ ಹೊಂದಿರುವ ಘಟನೆ ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಮಡ್ನಾಳ ಬಳಿ ನಡೆದಿದೆ. ಬೊಲೆರೊ ವಾಹನದಲ್ಲಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಭಾಗ್ಯಶ್ರೀ(35), ಸತ್ಯಮ್ಮ(30) ಮತ್ತು ಹೊನ್ನಿಂಗಮ್ಮ(18) ಮೃತ ದುರ್ದೈವಿಗಳಾಗಿದ್ದಾರೆ. ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬೊಲೆರೋ ಡಿಕ್ಕಿಯಾಗಿದೆ ಎನ್ನಲಾಗಿದ್ದು, 8 ಕೂಲಿ ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಎಸ್ಜಿ ರಸ್ತೆ ಬಳಿ ಶಾರ್ಟ್ ಸರ್ಕ್ಯೂಟ್‌ನಿಂದ ಕಾರೊಂದು ಹೊತ್ತಿ ಉರಿದಿರುವ ಘಟನೆ ನಡೆದಿದೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದು, ಕಾರು ವಿರೂಪಾಕ್ಷಿ ದೋನೆವಾಡಿ ಎಂಬುವವರಿಗೆ ಸೇರಿದ್ದು ಎಂಬ ಮಾಹಿತಿ ಲಭಿಸಿದೆ. ಸಂಕೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಶೈಕ್ಷಣಿಕ ವರ್ಷ ಆರಂಭವಾಗಿ 2.5 ತಿಂಗಳು ಕಳೆದರೂ ಸಿಗದ ಶೂ-ಸಾಕ್ಸ್: ಬರಿಗಾಲಲ್ಲೇ ಶಾಲೆಗೆ ಹೋಗುತ್ತಿರುವ ವಿದ್ಯಾರ್ಥಿಗಳು
ಚಲಿಸುತ್ತಿದ್ದ ರೈಲು ಹತ್ತುವಾಗ ಆಯತಪ್ಪಿ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ರೈಲು ನಿಲ್ದಾಣದಲ್ಲಿ ನಡೆದಿದೆ. ಕೆ.ಮುದ್ದನಹಳ್ಳಿಯ 47 ವರ್ಷದ ನಾಗರಾಜ್ ಸ್ಥಳದಲ್ಲೇ ಮೃತಪಟ್ಟಿದ್ದು, ಅರಸೀಕೆರೆಯಿಂದ ಮೈಸೂರಿಗೆ ತೆರಳುತ್ತಿದ್ದ ರೈಲಿಗೆ ಸಿಲುಕಿ ಅವರು ಮೃತಪಟ್ಟಿದ್ದಾರೆ. ಅರಸೀಕೆರೆ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Published On - 12:38 pm, Sun, 23 August 26