ಸಿಎಂ BSY ಸಿಟ್ಟಾಗಿದ್ದೇಕೆ? ಅಧಿಕಾರಿಗಳು ಥಂಡಾ ಹೊಡೆದಿದ್ದೇಕೆ? ಇಲ್ಲಿದೆ ನೋಡಿ ಅಸಲಿ ಸಿಕ್ರೇಟ್

  • TV9 Web Team
  • Published On - 14:51 PM, 12 Jul 2020
ಸಿಎಂ BSY ಸಿಟ್ಟಾಗಿದ್ದೇಕೆ? ಅಧಿಕಾರಿಗಳು ಥಂಡಾ ಹೊಡೆದಿದ್ದೇಕೆ? ಇಲ್ಲಿದೆ ನೋಡಿ ಅಸಲಿ ಸಿಕ್ರೇಟ್
ಸಿಎಂ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಈಗ ಭಾರೀ ಕೋಪಗೊಂಡಿದ್ದಾರೆ. ಇಂದು ಅವರ ಅಧಿಕೃತ ಕಚೇರಿ ಕಾವೇರಿಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಕೊರೊನಾ ಸಂಕಷ್ಟದಲ್ಲಿ ರೋಗಿಗಳಿಗೆ ಅಂಬುಲೆನ್ಸ್, ಬೆಡ್ ಕೊರತೆ ಮತ್ತು ಸಕಾಲದಲ್ಲಿ ಚಿಕಿತ್ಸೆ ಸಿಗದೆ ಸಾಯುತ್ತಿರುವ ಕುರಿತು ಪ್ರಸ್ತಾಪಿಸಿದ ಬಿಎಸ್ವೈ, ಅಧಿಕಾರಿಗಳೆ ಏನು ಮಾಡುತ್ತಿದ್ದಿರಿ? ದಿನ ನಿತ್ಯವೂ ಸೋಂಕಿತರು ಚಿಕಿತ್ಸೆ, ಅಂಬುಲೆನ್ಸ್ ಮತ್ತು ಬೆಡ್ ಸಿಗದೆ ಸಾಯುತ್ತಿದ್ದಾರೆ. ಏಳಿ ಎದ್ದೇಳಿ ಕೆಲಸ ಮಾಡಿ ಎಂದು ಛಾಟಿ ಏಟು ಬಿಸಿದ್ದಾರೆ.

ಈಗಾಗಲೇ ಅಂಬುಲೆನ್ಸ್ ಖರೀದಿ ಮಾಡಲು ಸರ್ಕಾರ ಸೂಚನೆ ಕೊಟ್ಟಿದೆ ಅಲ್ವಾ? ಹೀಗಿದ್ದೂ ಅಂಬುಲೆನ್ಸ್ ಸಮಸ್ಯೆ ಯಾಕೆ ಆಗ್ತಿದೆ? ಯಾಕೆ ಇನ್ನೂ ಖರೀದಿ ಆಗಿಲ್ವಾ? ಮಾಧ್ಯಮಗಳಲ್ಲಿ ಕೋವಿಡ್ ರೋಗಿಗಳಿಗೆ ಇನ್ನೂ ಬೆಡ್ ಸಿಗ್ತಿಲ್ಲ ಅನ್ನೋ ವರದಿ ಬರ್ತಿವೆ. ಹಾಗಾದ್ರೆ ಖಾಸಗಿ ಆಸ್ಪತ್ರೆಗಳ ಬೆಡ್ ಎಲ್ಲಿ ಹೋಯ್ತು? ಇನ್ನೂ ಕೂಡಾ ಬೆಡ್ ಗಳ ಕೇಂದ್ರಿಕೃತ ವ್ಯವಸ್ಥೆ ಆಗಲಿಲ್ವಾ? ಎಂದು ಅಧಿಕಾರಿಗಳನ್ನ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ವೈದ್ಯಕೀಯ ಉಪಕರಣ ಖರೀದಿಸುವ ಮುನ್ನ ಎಚ್ಚರವಹಿಸಿ. ದುಬಾರಿ ಬೆಲೆ ಕೊಟ್ಟು ಯಾಕೆ ಖರೀದಿ ಮಾಡುತ್ತಿದ್ದೀರಾ? ಇದನ್ನೇ ವಿರೋಧ ಪಕ್ಷಗಳು ಪ್ರಶ್ನೆ ಮಾಡುತ್ತಿದ್ದಾರೆ. ಖರ್ಚು ಜಾಸ್ತಿಯಾಗ್ತಿದೆ ಆದ್ರೆ ಸಮಸ್ಯೆಗಳು ನಿಲ್ಲುತ್ತಿಲ್ಲ. ಸಮಸ್ಯೆ ಪರಿಹಾರ ಆಗದೆ ಇದ್ದರೆ ದುಡ್ಡು ಎಲ್ಲೋಗ್ತಿದೆ ಮತ್ತೆ? ಎಂದು ಆಕ್ರೋಶಗೊಂಡ ಸಿಎಂ ಅಧಿಕಾರಿಗಳನ್ನ ಪ್ರಶ್ನಿಸಿದ್ದಾರೆ.

ಎಲ್ಲವನ್ನೂ ನಾನೇ ಹೇಳಬೇಕಾ? ಇಂತಿಂಥ ವ್ಯವಸ್ಥೆ ಮಾಡಿದ್ದೇವೆ ಎಂದು ನೀವೇ ಬಂದು ಹೇಳಲು ಆಗಲ್ವಾ? ಎರಡು ದಿನದಲ್ಲಿ ಬೆಡ್, ಆಂಬ್ಯುಲೆನ್ಸ್ ಸಮಸ್ಯೆ ಬಗೆಹರಿಸಿ ಎಂದು ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಖಡಕ್ ಆಗಿ ತಾಕೀತು ಮಾಡಿದ್ದಾರೆ.

ಸಿಎಂ ಬಿಎಸ್ವೈ ಕೋಪ ಕಂಡು ಥಂಡಾ ಹೊಡೆದ ಅಧಿಕಾರಿಗಳು, ಸ್ವಲ್ವ ಸಮಸ್ಯೆ ಆಗಿದ್ದು ನಿಜ ಸರ್, ಎರಡು ದಿನದಲ್ಲಿ ಎಲ್ಲಾ ವ್ಯವಸ್ಥೆ ಮಾಡುತ್ತೇವೆ, ಒಂದೇ ಒಂದು ಆಂಬ್ಯುಲೆನ್ಸ್ ಕೂಡಾ ಇಲ್ಲ ಎಂಬ ಸುದ್ದಿ ನಿಮ್ಮ ಗಮನಕ್ಕೆ ಬರದಂತೆ ನೋಡಿಕೊಳ್ಳುತ್ತೇವೆ ಎಂದು ಬಿಎಸ್ವೈಗೆ ಸಮಜಾಯಿಷಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.