ಬೆಂಗಳೂರಿನಲ್ಲಿ 2 ನಿವೇಶನ ಮಾರಿ ಯಡಿಯೂರು ದೇಗುಲಕ್ಕೆ ಚಿನ್ನದ ರಥ ಕೊಟ್ಟ ಭಕ್ತ!
ತುಮಕೂರು: ಕುಣಿಗಲ್ ತಾಲೂಕಿನ ಯಡಿಯೂರಿನ ಶ್ರೀಸಿದ್ಧಲಿಂಗೇಶ್ವರ ದೇವಾಲಯಕ್ಕೆ ಭಕ್ತರೊಬ್ಬರು ಹರಕೆ ತೀರಿಸುವ ಸಲುವಾಗಿ 9 ಅಡಿ ಎತ್ತರದ ಚಿನ್ನದ ರಥವನ್ನ ದಾನವಾಗಿ ಅರ್ಪಿಸುವ ಮೂಲಕ ಭಕ್ತಿಯನ್ನ ಸಮರ್ಪಿಸಿದ್ದಾರೆ. ಹೌದು, ಬೆಂಗಳೂರು ಮೂಲದ ಶಿವಣ್ಣ ಎಂಬುವರು ತನ್ನ ಎರಡು ನಿವೇಶನಗಳನ್ನು ಮಾರಿ ಅದರಲ್ಲಿ ಬಂದ ಹಣದಲ್ಲಿ ಸಿದ್ಧಲಿಂಗೇಶ್ವರ ದೇವಾಲಯಕ್ಕೆ ಚಿನ್ನದ ತೇರನ್ನು ದಾನವಾಗಿ ನೀಡಿದ್ದಾರೆ. 19 ಕೆಜಿ ಚಿನ್ನದಲ್ಲಿ 9 ಅಡಿ ಎತ್ತರ, 4.5 ಅಡಿ ಸುತ್ತಳತೆಯಲ್ಲಿ ಚಿನ್ನದ ರಥವನ್ನ ತಯಾರಿಸಲಾಗುತ್ತಿದೆ. ಚಿನ್ನದ ರಥವನ್ನು ಬೆಂಗಳೂರಿನ ಕೃಷ್ಣಯ್ಯ ಶೆಟ್ಟಿ […]
ತುಮಕೂರು: ಕುಣಿಗಲ್ ತಾಲೂಕಿನ ಯಡಿಯೂರಿನ ಶ್ರೀಸಿದ್ಧಲಿಂಗೇಶ್ವರ ದೇವಾಲಯಕ್ಕೆ ಭಕ್ತರೊಬ್ಬರು ಹರಕೆ ತೀರಿಸುವ ಸಲುವಾಗಿ 9 ಅಡಿ ಎತ್ತರದ ಚಿನ್ನದ ರಥವನ್ನ ದಾನವಾಗಿ ಅರ್ಪಿಸುವ ಮೂಲಕ ಭಕ್ತಿಯನ್ನ ಸಮರ್ಪಿಸಿದ್ದಾರೆ. ಹೌದು, ಬೆಂಗಳೂರು ಮೂಲದ ಶಿವಣ್ಣ ಎಂಬುವರು ತನ್ನ ಎರಡು ನಿವೇಶನಗಳನ್ನು ಮಾರಿ ಅದರಲ್ಲಿ ಬಂದ ಹಣದಲ್ಲಿ ಸಿದ್ಧಲಿಂಗೇಶ್ವರ ದೇವಾಲಯಕ್ಕೆ ಚಿನ್ನದ ತೇರನ್ನು ದಾನವಾಗಿ ನೀಡಿದ್ದಾರೆ.
19 ಕೆಜಿ ಚಿನ್ನದಲ್ಲಿ 9 ಅಡಿ ಎತ್ತರ, 4.5 ಅಡಿ ಸುತ್ತಳತೆಯಲ್ಲಿ ಚಿನ್ನದ ರಥವನ್ನ ತಯಾರಿಸಲಾಗುತ್ತಿದೆ. ಚಿನ್ನದ ರಥವನ್ನು ಬೆಂಗಳೂರಿನ ಕೃಷ್ಣಯ್ಯ ಶೆಟ್ಟಿ ಎಂಬ ಚಿನ್ನದ ವ್ಯಾಪಾರಿಗಳು ತಯಾರಿಸಿದ್ದಾರೆ.
20 ಕೆಜಿ ಚಿನ್ನ ಬಳಸಿ ರಥ ತಯಾರು: ಚಿನ್ನದ ರಥ ನಿರ್ಮಾಣ ಕೆಲಸವು ಈಗಾಗಲೇ ಸಂಪೂರ್ಣವಾಗಿ ಮುಗಿದಿದ್ದು ಸೋಮವಾರ ಅದನ್ನು ಜೋಡಿಸುವ ಕಾರ್ಯ ಅಂತ್ಯಗೊಳ್ಳಲಿದೆ. ಚಿನ್ನದ ರಥ ನಿರ್ಮಾಣಕ್ಕೆ ಶಿವಣ್ಣ ಕುಟುಂಬದವರು ಕೂಡಿಟ್ಟ ಚಿನ್ನದ ಜೊತೆಗೆ 5 ಕೋಟಿ ಹಣ ನೀಡಿದ್ದು 20 ಕೆಜಿ ಚಿನ್ನ ಬಳಸಿ ತಯಾರಿಸಿರುವ ಈ ತೇರಿಗೆ ಇಂದಿನ ಮಾರುಕಟ್ಟೆ ಬೆಲೆ ಅಂದಾಜು 10 ಕೋಟಿ ಎನ್ನಲಾಗಿದೆ.
ಎಡೆಯೂರು ಹೋಬಳಿ ತೆವಡನಹಳ್ಳಿ ಎಂಬ ಗ್ರಾಮದಲ್ಲಿ ಜನಿಸಿದ ಶಿವಣ್ಣ ಎಡೆಯೂರು ಸಿದ್ಧಲಿಂಗೇಶ್ವರರ ಪರಮ ಭಕ್ತ. ಕಿತ್ತು ತಿನ್ನುವ ಬಡತನದಿಂದ ಬೇಸತ್ತು ಸಿದ್ಧಲಿಂಗೇಶ್ವರರ ಸೂಚನೆಯಂತೆ ಕಾಲ್ನಡಿಗೆಯಲ್ಲಿ ಬೆಂಗಳೂರು ಮಹಾನಗರವನ್ನು ತಲುಪಿ ಕೂಲಿ ಮಾಡಿ ನಂತರ ಬಸ್ ಕಂಡಕ್ಟರ್ ಕೆಲಸ ನಿರ್ವಹಿಸಿ ಗುತ್ತಿಗೆ ಆರಂಭಿಸಿದರು.
ಸಿದ್ಧಲಿಂಗೇಶ್ವರನಿಗೆ ರಥ ಕಾಣಿಕೆ: ಈ ರೀತಿ ಹಲವಾರು ಕೆಲಸಗಳನ್ನು ಮಾಡಿ ನಂತರ ರುದ್ರಾಂಬ ಎಂಬ ಯುವತಿಯನ್ನು ಮದುವೆಯಾಗಿ ಸುಂದರ ಜೀವನ ನಡೆಸುತ್ತಿದ್ದಾರೆ. ಈಗ ಮಕ್ಕಳು, ಮೊಮ್ಮಕ್ಕಳ ಜೊತೆಯಲ್ಲಿ ಬೆಂಗಳೂರಿನಲ್ಲಿ ಜೀವನ ಸಾಗಿಸುತ್ತಿದ್ದು, ಎಲ್ಲ ಕೊಟ್ಟ ಭಗವಂತನಿಗೆ ನಾನು ಏನಾದರೂ ಕೊಡಬೇಕು ಎಂಬ ಸದುದ್ದೇಶದಿಂದ ಹಿಂದಿನಿಂದಲೂ ಚಿನ್ನವನ್ನ ಶೇಖರಿಸುತ್ತಾ ಬಂದಿದ್ದಾರೆ. ಸಾಲದ್ದಕ್ಕೆ ಬೆಂಗಳೂರಿನಲ್ಲಿದ್ದ 2 ನಿವೇಶನಗಳನ್ನು ಮಾರಿ ಬಂದ ಹಣದಿಂದ ಚಿನ್ನದ ತೇರನ್ನು ಮಾಡಿಸಿ ಸಿದ್ಧಲಿಂಗೇಶ್ವರನಿಗೆ ಕಾಣಿಕೆಯಾಗಿ ನೀಡಿದ್ದಾರೆ.
ಭಗವಂತನಲ್ಲಿ ನಾನು ಬೇಡಿದ್ದ ಎಲ್ಲವನ್ನು ಸಿದ್ಧಲಿಂಗೇಶ್ವರರು ನನಗೆ ನೀಡಿದ್ದಾರೆ. ಅಂತಹ ಸಂದರ್ಭದಲ್ಲಿ ಅವರ ಭಾಗವನ್ನು ಸಿದ್ಧಲಿಂಗೇಶ್ವರನಿಗೆ ಅರ್ಪಿಸುತ್ತಿದ್ದೇನೆ ಎನ್ನುತ್ತಾರೆ ಶಿವಣ್ಣ.
ಭಕ್ತರಾದ ಶಿವಣ್ಣ ಅವರು ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ ದೇವಾಲಯಕ್ಕೆ ದಾನವಾಗಿ ನೀಡುತ್ತಿರುವ ಚಿನ್ನದ ರಥವನ್ನು ಪಡೆಯಲು ಕಾರ್ಯನಿರ್ವಹಣಾಧಿಕಾರಿ ಶ್ರೀಲಕ್ಷ್ಮೀ ಅವರು ಸಕಲ ಸಿದ್ಧತೆಯನ್ನು ದೇವಾಲಯದಲ್ಲಿ ಮಾಡಿಕೊಂಡಿದ್ದಾರೆ. ಅದಕ್ಕೆ ಅವಶ್ಯಕತೆ ಇರುವ ಜಾಗ ಮತ್ತು ಭದ್ರತೆಯ ಬಗ್ಗೆ ಸೂಕ್ತ ಕ್ರಮ ವಹಿಸುತ್ತಿದ್ದಾರೆ.
ದಾನಿಗಳು ನೀಡುತ್ತಿರುವ ಚಿನ್ನದ ತೇರನ್ನು ಪಡೆಯುವಲ್ಲಿ ಸರ್ಕಾರದ ವತಿಯಿಂದ ಬೇಕಾದ ಎಲ್ಲಾ ನಿಯಮಗಳನ್ನು ಪಾಲಿಸಿ ಪಡೆಯುತ್ತಿದ್ದೇವೆ. ಜೂನ್ 3ರ ನಂತರ ಸಾಮಾಜಿಕ ಅಂತರ ಪಾಲಿಸಿ ಸಾರ್ವಜನಿಕರಿಗೆ ನೋಡಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಎಡೆಯೂರು ಸಿದ್ದಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಶ್ರೀ ಲಕ್ಷ್ಮಿ ತಿಳಿಸಿದ್ದಾರೆ.
Published On - 2:01 pm, Thu, 4 June 20