ನವಜಾತ ಶಿಶುವಿಗೆ ಬ್ಲ್ಯಾಕ್ ಫಂಗಸ್​: ಆಪರೇಷನ್ ಮಾಡಿ ಮಗುವಿನ ಜೀವ ಉಳಿಸಿದ ವೈದ್ಯರು

ನವಜಾತ ಶಿಶುವಿಗೆ ಬ್ಲ್ಯಾಕ್ ಫಂಗಸ್​: ಆಪರೇಷನ್ ಮಾಡಿ ಮಗುವಿನ ಜೀವ ಉಳಿಸಿದ ವೈದ್ಯರು
ನವಜಾತ ಶಿಶುವಿನ ಶಸ್ತ್ರಚಿಕಿತ್ಸೆ ಮಾಡುತ್ತಿರುವ ಆಗ್ರಾ ವೈದ್ಯರು

ಆಗ್ರಾದ ಸರೋಜಿನಿ ನಾಯ್ಡು ಮೆಡಿಕಲ್ ಕಾಲೇಜಿನ ವೈದ್ಯರು ಬ್ಲ್ಯಾಕ್​ ಫಂಗಸ್ ಲಕ್ಷಣಗಳು ಕಾಣಿಸಿಕೊಂಡಿದ್ದ ನವಜಾತ ಶಿಶುವಿನ ಶಸ್ತ್ರಚಿಕಿತ್ಸೆಯನ್ನು ಸೋಮವಾರ ಯಶಸ್ವಿಯಾಗಿ ಮಾಡಿ, ಮಗುವಿನ ಜೀವ ಉಳಿಸಿದ್ದಾರೆ.

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Jun 07, 2021 | 11:26 PM

ಆಗ್ರಾ: ನಗರದ ಸರೋಜಿನಿ ನಾಯ್ಡು ಮೆಡಿಕಲ್ ಕಾಲೇಜಿನ ವೈದ್ಯರು ಬ್ಲ್ಯಾಕ್​ ಫಂಗಸ್ ಲಕ್ಷಣಗಳು ಕಾಣಿಸಿಕೊಂಡಿದ್ದ ನವಜಾತ ಶಿಶುವಿನ ಶಸ್ತ್ರಚಿಕಿತ್ಸೆಯನ್ನು ಸೋಮವಾರ ಯಶಸ್ವಿಯಾಗಿ ಮಾಡಿ, ಮಗುವಿನ ಜೀವ ಉಳಿಸಿದ್ದಾರೆ. 14 ದಿನಗಳ ಹೆಣ್ಣುಮಗುವಿನ ಎಡ ಕೆನ್ನೆಯ ಮೇಲೆ ಕಪ್ಪು ಮಚ್ಚೆ ಮತ್ತು ಕೀವು ಕಾಣಿಸಿಕೊಂಡಿತ್ತು. ಶನಿವಾರ ಸಂಜೆ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಸೋಂಕನ್ನು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದುಹಾಕಲಾಯಿತು ಎಂದು ಕಿವಿ ಮೂಗು ಮತ್ತು ಗಂಟಲು ರೋಗಗಳ ವಿಭಾಗದ ಮುಖ್ಯಸ್ಥ ಡಾ.ಅಖಿಲೇಶ್ ಪ್ರತಾಪ್ ಸಿಂಗ್ ತಿಳಿಸಿದರು.

ಮಗುವನ್ನು ಆಸ್ಪತ್ರೆಗೆ ದಾಖಲಿಸಿದಾಗ ಅದಕ್ಕೆ ಕಿಡ್ನಿ ಮತ್ತು ಹೃದಯದ ಸಮಸ್ಯೆ ಕಾಣಿಸಿಕೊಂಡಿತ್ತು. ತೂಕವೂ ಕಡಿಮೆಯಿತ್ತು. ಆದರೆ ಕೊವಿಡ್-19ರ ಲಕ್ಷಣಗಳು ಇರಲಿಲ್ಲ ಎಂದು ಅವರು ತಿಳಿಸಿದರು. ಮಗು ಈಗ ಪ್ರಾಣಾಪಾಯದಿಂದ ಪಾರಾಗಿದೆ. ಚಿಕ್ಕಮಕ್ಕಳ ಐಸಿಯುಗೆ ಮಗುವನ್ನು ದಾಖಲಿಸಲಾಗಿದೆ. ಅಲ್ಲಿ ಮಗುವನ್ನು ನಿಗಾದಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದರು.

ಈವರೆಗೆ ಸರೋಜಿನಿ ನಾಯ್ಡು ಆಸ್ಪತ್ರೆಯಲ್ಲಿ ಬ್ಲ್ಯಾಕ್​ ಫಂಗಸ್​ನಿಂದ ಒಂದು ಸಾವು ಸಂಭವಿಸಿದೆ. ಇತರ ನಾಲ್ವರು ಶಂಕಿತ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಪ್ರಸ್ತುತ ಬ್ಲ್ಯಾಕ್​ ಫಂಗಸ್​ ಸೋಂಕಿನಿಂದ ಬಳಲುತ್ತಿರುವ 32 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಮಕ್ಕಳಲ್ಲಿ ಬ್ಲ್ಯಾಕ್ ಫಂಗಸ್ ದೇಶಾದ್ಯಂತ ಬ್ಲ್ಯಾಕ್ ಫಂಗಸ್​ ಪ್ರಕರಣಗಳು ಹೆಚ್ಚುತ್ತಿವೆ. ಗುಜರಾತ್​​ನಲ್ಲಿ 15ವರ್ಷದ ಬಾಲಕನೊಬ್ಬನಲ್ಲಿ ಈ ಕಪ್ಪು ಶಿಲೀಂದ್ರ ಕಾಣಿಸಿಕೊಂಡಿದೆ. ಮಕ್ಕಳಲ್ಲಿ ಬ್ಲ್ಯಾಕ್ ಫಂಗಸ್​ ಕಾಣಿಸಿಕೊಂಡ ಮೊದಲ ಪ್ರಕರಣ ಇದು ಎಂದು ಅಹ್ಮದಾಬಾದ್​ನ ಮಕ್ಕಳ ವೈದ್ಯ ಡಾ. ಅಭಿಷೇಕ್ ಬನ್ಸಾಲ್​ ಮೇ 22ರಂದು ತಿಳಿಸಿದ್ದರು. ಈ ಬಾಲಕ ಏಪ್ರಿಲ್​ 14ರಂದು ಕೊವಿಡ್ ಸೋಂಕಿನಿಂದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದ. ನಂತರ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಸುಮಾರು 10 ದಿನ ಐಸಿಯುನಲ್ಲಿದ್ದು, ಆಕ್ಸಿಜನ್​, ರೆಮ್​ಡಿಸಿವಿರ್ ಮೂಲಕ ಆತನಿಗೆ ಚಿಕಿತ್ಸೆ ನೀಡಲಾಗಿದೆ. ಅದಾದ ಬಳಿಕ ಏಪ್ರಿಲ್​ 24ರಂದು ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆಗಿದ್ದ. ಆಸ್ಪತ್ರೆಯಿಂದ ಬಂದು ಹಲವು ದಿನಗಳವರೆಗೆ ಆರೋಗ್ಯವಾಗಿಯೇ ಇದ್ದ ಹುಡುಗನಲ್ಲಿ ಮತ್ತೆ ಹಲ್ಲುನೋವು, ಬಾಯಿಯಲ್ಲಿ ಹುಣ್ಣು ಕಾಣಿಸಿಕೊಂಡಿತು. ಮತ್ತೆ ಆಸ್ಪತ್ರೆಗೆ ದಾಖಲಾದ ಆತನನ್ನು ಪರೀಕ್ಷಿಸಿದಾಗ ಮ್ಯೂಕೋರ್ಮೈಕೋಸಿಸ್​ ಇರುವುದು ದೃಢಪಟ್ಟಿತು ಎಂದು ಡಾ. ಬನ್ಸಾಲ್​ ಮಾಹಿತಿ ನೀಡಿದ್ದಾರೆ.

ಈ ಬಾಲಕನ ಬಾಯಿಯ ಬಲಭಾಗದ ಅರ್ಧದಷ್ಟು ಪೆಲೇಟ್​​ ಮತ್ತು ಮೇಲಿನ ಹಲ್ಲನ್ನು ತೆಗೆದುಹಾಕಲಾಗಿದೆ. ಸೈನಸ್​​ನ್ನು ಸ್ವಚ್ಛಗೊಳಿಸಲಾಗಿದೆ. ಸದ್ಯ ಆತನ ಸ್ಥಿತಿ ಸ್ಥಿರವಾಗಿದೆ. ಇನ್ನು ಮೂರು-ನಾಲ್ಕು ದಿನಗಳಲ್ಲಿ ಡಿಸ್​ಚಾರ್ಜ್ ಮಾಡಲಾಗುವುದು ಎಂದು ತಿಳಿಸಿದ್ದಾರೆ.

(Doctors in Agra successfully operate on newborn infected with black fungus)

ಇದನ್ನೂ ಓದಿ: ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್‌ಗೆ ಔಷಧ ಕೊರತೆ ಇಲ್ಲ ಎಂದ ಆರೋಗ್ಯ ಸಚಿವರು; ಶಿವಮೊಗ್ಗದಲ್ಲಿ ಔಷಧ ಕೊರತೆ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು!

ಇದನ್ನೂ ಓದಿ: ಬ್ಲ್ಯಾಕ್​ ಫಂಗಸ್​ ಚಿಕಿತ್ಸೆಗೆ ಅಗತ್ಯವಿರುವಷ್ಟು ಔಷಧ ಪೂರೈಕೆ ಆಗದಿದ್ದರೆ ಸಾವಿನ ಪ್ರಮಾಣ ಹೆಚ್ಚಳವಾಗಲಿದೆ: ಕಳವಳ ವ್ಯಕ್ತಪಡಿಸಿದ ವೈದ್ಯರು

Follow us on

Related Stories

Most Read Stories

Click on your DTH Provider to Add TV9 Kannada