ಗ್ಯಾಸ್ಟ್ರಿಕ್​ ಹೇಳಿಕೊಳ್ಳಲಾಗದ ಸಂಕಟ; ತೊಂದರೆಗೆ ಇಲ್ಲಿದೆ ಪರಿಹಾರ!

| Updated By: ಆಯೇಷಾ ಬಾನು

Updated on: Mar 17, 2021 | 6:48 AM

ಹೇಳಿಕೊಳ್ಳಲು ನಾಚಿಕೆ, ಹೇಳದೇ ಇದ್ದರೆ ಸಂಕಟ ಎಂಬಂತಹ ಪರಿಸ್ಥಿತಿ ಎದುರಾಗುವುದು ಗ್ಯಾಸ್​ ಟ್ರಬಲ್​ ಅಥವಾ ಗ್ಯಾಸ್ಟ್ರಿಕ್​ನಿಂದ. ಹಾಗಿದ್ದಲ್ಲಿ ಇದಕ್ಕೆ ಪರಿಹಾರ ಮದ್ದು ಏನು? ನಿಜವಾಗಿಯೂ ಗ್ಯಾಸ್ಟ್ರಿಕ್​ ಟ್ರಬಲ್​ ಅಂದರೆ ಏನು? ಎಂಬುದರ ಕುರಿತು ತಿಳಿಯೋಣ.

ಗ್ಯಾಸ್ಟ್ರಿಕ್​ ಹೇಳಿಕೊಳ್ಳಲಾಗದ ಸಂಕಟ; ತೊಂದರೆಗೆ ಇಲ್ಲಿದೆ ಪರಿಹಾರ!
ಪ್ರಾತಿನಿಧಿಕ ಚಿತ್ರ
Follow us on

ಗ್ಯಾಸ್ ಟ್ರಬಲ್ ಅಥವಾ ಗ್ಯಾಸ್ಟ್ರಿಕ್​ ಎಂಬುದು ಎಲ್ಲರಿಗೆ ಚಿರಪರಿಚಿತ. ಎಲ್ಲರೂ ಗ್ಯಾಸ್​ ಟ್ರಬಲ್​ ಬಾಧೆಯಿಂದ ಬಳಲಿಯೇ ಇರುತ್ತೇವೆ. ಹೇಳಿಕೊಳ್ಳಲು ನಾಚಿಕೆ, ಹೇಳದೇ ಇದ್ದರೆ ಸಂಕಟ ಎಂಬಂತಹ ಪರಿಸ್ಥಿತಿ ಎದುರಾಗುವುದು ಗ್ಯಾಸ್​ ಟ್ರಬಲ್​ ಅಥವಾ ಗ್ಯಾಸ್ಟ್ರಿಕ್​ನಿಂದ. ಹಾಗಿದ್ದಲ್ಲಿ ಇದಕ್ಕೆ ಪರಿಹಾರ ಮದ್ದು ಏನು? ನಿಜವಾಗಿಯೂ ಗ್ಯಾಸ್ಟ್ರಿಕ್​ ಟ್ರಬಲ್​ ಅಂದರೆ ಏನು? ಎಂಬುದರ ಕುರಿತು ತಿಳಿಯೋಣ.

ನಾವು ಊಟ ಮಾಡುವಾಗ, ಕುಡಿಯುವಾಗ ಅಥವಾ ಉಗುಳುವಾಗ ನಮ್ಮ ದೇಹದ ಒಳಗೆ ಗಾಳಿಯು ಪ್ರವೇಶಿಸುತ್ತದೆ. ಅಥವಾ ಹೊರಗೆ ಹೋಗುತ್ತದೆ. ದೇಹದಲ್ಲಿ ಪ್ರವೇಶಿಸಿದ ಗಾಳಿ ಹೊಟ್ಟೆಯಲ್ಲಿ ಸಂಗ್ರಹವಾಗುತ್ತದೆ. ಹೊಟ್ಟೆಗೆ ಹೋದ ಆಹಾರ ಜೀರ್ಣವಾಗದಿದ್ದಾಗ, ಗ್ಯಾಸ್ಟ್ರಿಕ್​ ಉಂಟಾಗುತ್ತದೆ. ಸಣ್ಣ ಕರುಳಿನಲ್ಲಿ ಸರಿಯಾಗಿ ಜೀರ್ಣವಾಗದ ಆಹಾರ ದೊಡ್ಡ ಕರುಳಿನಲ್ಲಿ ಅನಿಲವನ್ನು(ಗ್ಯಾಸ್​) ಉತ್ಪತ್ತಿ ಮಾಡುತ್ತದೆ.

ಸಾಮಾನ್ಯವಾಗಿ ದೇಹದಲ್ಲಿ ನಾರಿನ ಪದಾರ್ಥಗಳು ಗ್ಯಾಸ್​ ಉತ್ಪತ್ತಿ ಮಾಡುತ್ತವೆ. ಎಲೆಕೋಸು, ಹೂಕೋಸು, ಗೆಡ್ಡೆಗೆಣಸು, ದ್ವಿದಳ ಧಾನ್ಯಗಳು, ಹಾಲು, ತುಪ್ಪ, ಎಣ್ಣೆ ಈ ರೀತಿಯ ಪದಾರ್ಥಗಳನ್ನು ಅತಿಯಾಗಿ ಸೇವಿಸಬಾರದು. ದೇಹದಲ್ಲಿ ಜೀರ್ಣಕ್ರಿಯೆಗೆ ತೊಂದರೆ ಉಂಟು ಮಾಡುವ ಪದಾರ್ಥಗಳು ಇವಾಗಿವೆ. ಜೀರ್ಣಕ್ರಿಯೆ ಸರಿಯಾಗಿ ಆಗದಿದ್ದಲ್ಲಿ ಗ್ಯಾಸ್ಟ್ರಿಕ್​ ತೊಂದರೆ ಉಂಟಾಗುತ್ತದೆ.

ಗ್ಯಾಸ್ಟ್ರಿಕ್​ನಿಂದ ಬಳಲುತ್ತಿರುವವರು ಗಮನಿಸಲೇಬೇಕಾದ ಅಂಶಗಳು
* ಗ್ಯಾಸ್​ ಉತ್ಪತ್ತಿ ಮಾಡುವ ಆಹಾರ ಪದಾರ್ಥವನ್ನು ಕಡಿಮೆ ಸೇವಿಸುವುದು.
* ಸಮಯಕ್ಕೆ ಸರಿಯಾಗಿ ಪ್ರತಿನಿತ್ಯ ಆಹಾರ ಸೇವಿಸುವುದು.
* ಊಟ ಮಾಡುವಾಗ ಆಹಾರವನ್ನು ಚೆನ್ನಾಗಿ ಅಗೆದು ನುಂಗಬೇಕು ಮತ್ತು ನಿಧಾನವಾಗಿ ಊಟ ಮಾಡಬೇಕು.
* ಧೂಮಪಾನದಿಂದ ದೂರವಿರಿ. ಧೂಮಪಾನವು ಜೀರ್ಣಾಂಗ ವ್ಯವಸ್ಥೆಗೆ ಹಾನಿಗೊಳಿಸುತ್ತದೆ.
* ದ್ವಿದಳ ಧಾನ್ಯವನ್ನು ಸರಿಯಾಗಿ ನೀರಿನಲ್ಲಿ ನೆನೆಸಿ ನಂತರ ಸಿಪ್ಪೆ ಸುಲಿದು ಸೇವಿಸಬೇಕು. ಇದರಿಂದ ಗ್ಯಾಸ್​ ಉತ್ಪತ್ತಿ ಮಾಡುವ ಪ್ರಮಾಣವನ್ನು ಕಡಿಮೆ ಮಾಡಬಹುದು.
* ಪ್ರತಿ ನಿತ್ಯ ವ್ಯಾಯಾಮದಲ್ಲಿ ತೊಡಗಿಕೊಳ್ಳಿ. ಆಹಾರ ಸೇವಿಸಿದ ತಕ್ಷಣ ಮಲಗುವುದು ಅಥವಾ ಕುಳಿತುಕೊಳ್ಳುವುದರಿಂದ ಆಹಾರ ಅಷ್ಟು ಸುಲಭವಾಗಿ ಜೀರ್ಣವಾಗುವುದಿಲ್ಲ. ಇದರಿಂದ ಗ್ಯಾಸ್ಟ್ರಿಕ್​ ತೊಂದರೆ ಉಂಟಾಗುತ್ತದೆ. ಹಾಗಾಗಿ ಪ್ರತಿನಿತ್ಯ ಕೆಲಸದಲ್ಲಿ ತೊಡಗಿಕೊಂಡಿರುವುದು ಉತ್ತಮ.
* ಹೆಚ್ಚು ಮಸಾಲೆ ಪದಾರ್ಥದಿಂದ ದೂರವಿರಿ. ಇದರಿಂದ ಆರೋಗ್ಯವೂ ಚೆನ್ನಾಗಿರುವುದರ ಜೊತೆಗೆ ಗ್ಯಾಸ್ಟ್ರಿಕ್​ ಸಮಸ್ಯೆಯನ್ನು ತಪ್ಪಿಸಬಹುದು.
* ಹೆಚ್ಚು ಚಹ ಕಾಫಿಯನ್ನು ಕುಡಿಯಬೇಡಿ.
* ಮದ್ಯಪಾನ ಸೇವಿಸದಿರಿ.

ಗ್ಯಾಸ್ಟ್ರಿಕ್​ ಪರಿಹಾರಕ್ಕೆ ಮನೆಮದ್ದು
ಓಮಕಾಳು: ಸಾಮಾನ್ಯವಾಗಿ ಅಡುಗೆಯಲ್ಲಿ ಓಮಕಾಳನ್ನು ಬಳಸುತ್ತೇವೆ. ಪದಾರ್ಥದಲ್ಲಿ ರುಚಿ ಸವಿಯಲು ಓಮಕಾಳನ್ನು ಬಳಸುತ್ತೇವೆ. ಹಾಗೆಯೇ ಗ್ಯಾಸ್ಟ್ರಿಕ್​ ಸಮಸ್ಯೆ ಪರಿಹಾರವಾಗಿಯೂ ಓಮಕಾಳನ್ನು ಬಳಸಲಾಗುತ್ತದೆ. ಒಂದು ಲೋಟ ನೀರಿಗೆ ಅರ್ಧ ಚಮಚ ಓಮಕಾಳನ್ನು ಹಾಕಿ, ಒಂದೆರಡು ಪುದೀನಾ ಎಲೆ ಹಾಗಿ ಚೆನ್ನಾಗಿ ಕುದಿಸಿ. ನಂತರ ಸಿದ್ಧಗೊಂಡ ಕಷಾಯವನ್ನು ಸೇವಿಸುವುದರಿಂದ ಗ್ಯಾಸ್ಟ್ರಿಕ್​ ಕಡಿಮೆ ಮಾಡಿಕೊಳ್ಳಬಹುದು.

ಜೀರಿಗೆ: ಜೀರಿಗೆ ಲಾಲಾರಸದ ಉತ್ಪಾದನೆಗೆ ಸಹಾಯ ಮಾಡುತ್ತದೆ. ಹಾಗೂ ಜೀರಿಗೆ, ಜೀರ್ಣಕ್ರಿಯೆಗೆ ಅನುಕೂಲವಾಗುತ್ತದೆ. ಹೊಟ್ಟೆ ನೋವು, ಎದೆ ಉರಿಯಂತಹ ಸಮಸ್ಯೆಗೆ ಜೀರಿಗೆಯನ್ನು ಸೇವಿಸುತ್ತಾರೆ.

ಇಂಗು: ಗ್ಯಾಸ್​ ಉತ್ಪಾದನೆ ಮಾಡುವ ಬ್ಯಾಕ್ಟೀರಿಯಾಗಳನ್ನು ಇಂಗು ನಾಶಪಡಿಸುತ್ತದೆ. ಹಾಗಾಗಿ ಬೆಚ್ಚಗಿನ ನೀರಿನಲ್ಲಿ ಚೂರೇ ಚೂರು ಇಂಗಿನಕಾಳನ್ನು ಹಾಕಿ, ನೀರನ್ನು ಕುಡಿಯುವುದರಿಂದ ಗ್ಯಾಸ್​ ಉತ್ಪಾದನೆ ಕಡಿಮೆ ಮಾಡಬಹುದು.

ಶುಂಠಿ: ಸಾಮಾನ್ಯವಾಗಿ ಅಡುಗೆಯಲ್ಲಿ ಹೆಚ್ಚು ಶುಂಠಿಯನ್ನು ಬಳಸುತ್ತಾರೆ. ಶುಂಠಿ ಆರೋಗ್ಯಕ್ಕೆ ಉತ್ತಮವೂ ಹೌದು. ತಲೆ ನೋವು ಕಾಣಿಸಿಕೊಂಡಾಗ ಶುಂಠಿಯನ್ನು ತೇಯ್ದು(ಪೇಸ್ಟ್​) ಹಣೆಗೆ ಹಚ್ಚಿಕೊಳ್ಳುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಹಾಗೆಯೇ ಗ್ಯಾಸ್ಟ್ರಿಕ್​ ಸಮಸ್ಯೆಗೂ ಶುಂಠಿ ಒಳ್ಳೆಯ ಮದ್ದಾಗಿದ್ದು, ಶುಂಠಿ ಚೂರನ್ನು ನೀರಿನಲ್ಲಿ ಹಾಕಿ ಅದನ್ನು ಕುಡಿಯುವುದರಿಂದ ಗ್ಯಾಸ್​​ ಟ್ರಬಲ್​ನಿಂದ ಪರಿಹಾರ ಕಂಡುಕೊಳ್ಳಬಹುದು. ಇಲ್ಲವೇ, ಶುಂಠಿ ಚೂರಿಗೆ ಸ್ವಲ್ಪ ಉಪ್ಪು ಜೊತೆಗೆ ಲಿಂಬು ರಸ ಸೇವಿಸುವುದರಿಂದ ಹೊಟ್ಟೆನೋವು, ಗ್ಯಾಸ್ಟ್​ ಟ್ರಬಲ್​ಗೆ ಪರಿಹಾರ ಕಂಡುಕೊಳ್ಳಬಹುದು.

ಇದನ್ನೂ ಓದಿ: ಹೊಟ್ಟೆ ಕೆಟ್ಟರೆ ಎಷ್ಟು ಕಷ್ಟ! ಕರುಳಿನ ಆರೋಗ್ಯ ಚೆನ್ನಾಗಿರಲು ಈ ನಿಯಮಗಳನ್ನು ಪಾಲಿಸಿ..

ಇದನ್ನೂ ಓದಿ: ತುಳಸಿ ಎಲೆಗಳನ್ನು ಪ್ರತಿದಿನ ಸೇವಿಸಿದರೆ ಆರೋಗ್ಯ ಸ್ಥಿತಿ ಸ್ಥಿರವಾಗಿ ಇರುತ್ತದೆ; ಅದು ಹೇಗೆ?