ರಕ್ತದಾನಕ್ಕೆ ಪ್ರೇರಣೆಯಾದ ಪೇದೆ: ಸ್ನೇಹ ಮೈತ್ರಿ ಬ್ಲಡ್ ಆರ್ಮಿ ಗ್ರೂಪ್ನಿಂದ ಕೊರೊನಾ ನಡುವೆಯೂ ರಕ್ತದಾನ ಶಿಬಿರಗಳು
ಸ್ನೇಹಮೈತ್ರಿ ಬ್ಲಡ್ ಆರ್ಮಿ ಗ್ರುಪ್ ನಂತಹ ಕೆಲವೊಂದು ಸಂಘಟನೆಗಳು ನಿರಂತರವಾಗಿ ರಕ್ತದಾನದ ಕೆಲಸ ಮಾಡಿಸುತ್ತಿದ್ದು, ಹಾವೇರಿ ಜಿಲ್ಲಾಸ್ಪತ್ರೆಯಲ್ಲಿರುವ ಬ್ಲಡ್ ಬ್ಯಾಂಕ್, ವಿಶ್ವಧಾರಾ ಬ್ಲಡ್ ಬ್ಯಾಂಕ್ ಸೇರಿದಂತೆ ಕೆಲವೊಂದು ಸಂಘಟನೆಗಳು ಆಗಾಗ ರಕ್ತದಾನದ ಶಿಬಿರ ನಡೆಸುವ ಮೂಲಕ ಯುವಕರನ್ನು ರಕ್ತದಾನಕ್ಕೆ ಪ್ರೇರೆಪಿಸುತ್ತಿದ್ದಾರೆ.
ಹಾವೇರಿ: ರಕ್ತದಾನ ಶ್ರೇಷ್ಠದಾನವಾಗಿದ್ದು, ಒಂದು ಜೀವದ ದಾನ ಎನ್ನುವ ಮಾತು ಕೂಡ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೊರೊನಾದ ಭಯಕ್ಕೆ ಒಳಗಾದ ಜನತೆ ತಮ್ಮ ಕುಟುಂಬದ ಸದಸ್ಯರಿಗೂ ರಕ್ತ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಸದ್ಯ ಕೊರೊನಾ ಆತಂಕ ಸ್ವಲ್ಪಮಟ್ಟಿಗೆ ದೂರವಾಗಿದ್ದು, ಮತ್ತೆ ರಕ್ತದಾನದ ಶಿಬಿರಗಳು ಶುರುವಾಗಿವೆ.
ರಕ್ತದಾನದ ಬಗ್ಗೆ ಮೂಢನಂಬಿಕೆ : ರಕ್ತದಾನ ಮಾಡುವುದರಿಂದ ಮನುಷ್ಯ ಆರೋಗ್ಯವಂತನಾಗಿ ಇರುತ್ತಾನೆ. ಅದರೆ ಅದೆಷ್ಟೋ ಜನರಿಗೆ ರಕ್ತದಾನದ ಬಗ್ಗೆ ಮೂಢನಂಬಿಕೆಗಳಿವೆ. ಕೊರೊನಾ ಸಮಯದಲ್ಲಂತೂ ರಕ್ತ ಕೊಟ್ಟರೆ ಕೊರೊನಾ ಪರೀಕ್ಷೆ ಮಾಡುತ್ತಾರೆ ಎಂಬ ಭಯವೂ ಇತ್ತು! ಇನ್ನು ರಕ್ತ ಕೊಟ್ಟರೆ ತೆಳ್ಳಗಾಗುತ್ತೇವೆ, ಒಬ್ಬನೆ ಮಗ, ಕೃಷಿ ಮಾಡುತ್ತೇವೆ, ರಕ್ತದಾನ ಮಾಡಿದರೆ ಮನೆಯ ದೇವರು ಒಪ್ಪುವುದಿಲ್ಲ, ಶಾಲೆ ಹತ್ತೋಲ್ಲ, ರಕ್ತದಾನ ಮಾಡಿದ ಮೇಲೆ ಏನಾದರೂ ಆದರೆ ಹೇಗೆ? ಎನ್ನುವಂತಹ ಹಲವಾರು ಆತಂಕ, ಮೂಢನಂಬಿಕೆಗಳಿಂದ ರಕ್ತದಾನ ಮಾಡಲು ಬಹಳಷ್ಟು ಜನ ರಲ್ತ ಕೊಡಲು ಹಿಂಜರಿಯುತ್ಥಾರೆ.
ಕೊರೊನಾ ಸಮಯದಲ್ಲೂ ರಕ್ತ ಕೊಡಿಸಿದರು : ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಅಕ್ಕಿಆಲೂರು ಗ್ರಾಮದ ಸ್ನೇಹಮೈತ್ರಿ ಬ್ಲಡ್ ಆರ್ಮಿ ಗ್ರುಪ್ ಸೇರಿದಂತೆ ಮೂರ್ನಾಲ್ಕು ಜನರ ತಂಡ ಕೊರೊನಾ ಸಮಯದಲ್ಲೂ ಸಂಕಷ್ಟದಲ್ಲಿರುವ ಜನರಿಗೆ ರಕ್ತದಾನ ಮಾಡಿಸುವ ಮೂಲಕ ಅನೇಕ ಜನರ ಜೀವ ಉಳಿಸಿದ್ದಾರೆ.
ಸ್ನೇಹ ಮೈತ್ರಿ ಬ್ಲಡ್ ಆರ್ಮಿ ಗ್ರುಪ್ನ ಮುಖ್ಯಸ್ಥನಾಗಿರುವ ಆಡೂರು ಠಾಣೆ ಪೊಲೀಸ್ ಕಾನಸ್ಟೇಬಲ್ ಕೊರೊನಾ ಸಮಯದಲ್ಲೂ 13 ಹಳ್ಳಿಗಳಲ್ಲಿ ಕ್ಯಾಂಪ್ ಮಾಡಿದ್ದು, 627 ಜನರಿಂದ ರಕ್ತದಾನ ಮಾಡಿಸಿದ್ದಾರೆ. ಕೊರೊನಾ ಲಾಕ್ ಡೌನ್ ಸಮಯದಲ್ಲಿ ರಕ್ತದ ಅವಶ್ಯಕತೆ ಇದ್ದ ಸ್ಥಳಗಳಿಗೆ ರಕ್ತದಾನಿಗಳನ್ನು ತಮ್ಮ ಬೈಕ್ ಮತ್ತು ಕಾರಿನಲ್ಲಿ ಕರೆದುಕೊಂಡು ಹೋಗಿ ಸ್ನೇಹ ಮೈತ್ರಿ ಬ್ಲಡ್ ಆರ್ಮಿ ಗ್ರುಪ್ ಮುಖ್ಯಸ್ಥ ಕರಿಬಸಪ್ಪ ರಕ್ತದಾನ ಮಾಡಿಸಿದ್ದಾರೆ.
ಕೊರೊನಾ ನಂತರ ರಕ್ತದಾನಿಗಳ ಸಂಖ್ಯೆಯಲ್ಲಿ ಹೆಚ್ಚಳ : ಪ್ರತಿನಿತ್ಯ ಹಾವೇರಿ ಜಿಲ್ಲೆಯಲ್ಲಿ ಅದೆಷ್ಟೋ ಜನರು ರಕ್ತದ ಕೊರತೆಯಿಂದ ಬಳಲುತ್ತಿರುತ್ತಾರೆ. ವಿಶೇಷವಾಗಿ ಹೆರಿಗೆಯಾದ ಬಾಣಂತಿ ಮಹಿಳೆಯರು ಮತ್ತು ಅಪಘಾತದಲ್ಲಿ ಗಾಯಗೊಂಡವರಿಗೆ ರಕ್ತದ ಅವಶ್ಯಕತೆ ತುಂಬಾ ಇರುತ್ತದೆ. ಆದರೆ ಅಪಘಾತದಲ್ಲಿ ಗಾಯಗೊಂಡವರು, ಬಾಣಂತಿ ಮಹಿಳೆಯರ ಸಂಬಂಧಿಕರು ಸಾಕಷ್ಟು ಜನರಿದ್ದರೂ ರಕ್ತದಾನ ಅಂದಾಕ್ಷಣ ಮಾರುದೂರು ಸರಿಯುತ್ತಾರೆ.
ಇಂತಹ ಸಂದರ್ಭದಲ್ಲೂ ಸ್ನೇಹಮೈತ್ರಿ ಬ್ಲಡ್ ಆರ್ಮಿ ಗ್ರುಪ್ ನಂತಹ ಕೆಲವೊಂದು ಸಂಘಟನೆಗಳು ನಿರಂತರವಾಗಿ ರಕ್ತದಾನದ ಕೆಲಸ ಮಾಡಿಸುತ್ತಿದ್ದು, ಹಾವೇರಿ ಜಿಲ್ಲಾಸ್ಪತ್ರೆಯಲ್ಲಿರುವ ಬ್ಲಡ್ ಬ್ಯಾಂಕ್, ವಿಶ್ವಧಾರಾ ಬ್ಲಡ್ ಬ್ಯಾಂಕ್ ಸೇರಿದಂತೆ ಕೆಲವೊಂದು ಸಂಘಟನೆಗಳು ಆಗಾಗ ರಕ್ತದಾನದ ಶಿಬಿರ ನಡೆಸುವ ಮೂಲಕ ಯುವಕರನ್ನು ರಕ್ತದಾನಕ್ಕೆ ಪ್ರೇರೆಪಿಸುತ್ತಿದ್ದಾರೆ. ಸದ್ಯ ಯಾವುದೇ ಅಂಜಿಕೆ ಅಳುಕಿಲ್ಲದೆ ಜನರು ರಕ್ತದಾನ ಮಾಡುತ್ತಿದ್ದಾರೆ ಎನ್ನುವುದು ಖುಷಿಯ ವಿಚಾರ.
ಕೊರೋನಾ ಬರುವ ಮುಂಚೆ ಜನರು ರಕ್ತದಾನಕ್ಕೆ ಕುಂಟು ನೆಪ ಮತ್ತು ಮೂಢನಂಬಿಕೆಗಳನ್ನು ಹೇಳಿ ಹಿಂದೇಟು ಹಾಕುತ್ತಿದ್ದರು. ಕೊರೋನಾ ಬಂದ ನಂತರವಂತೂ ಕೆಲವರು ತಮ್ಮ ಕುಟುಂಬದವರಿಗೂ ರಕ್ತದಾನ ಮಾಡಲು ಹಿಂದೇಟು ಹಾಕಿದ್ದು, ಜನರು ಮಾನವೀಯತೆ ಮರೆತಿದ್ದಾರೆಂದು ಅನಿಸುವಷ್ಟು ನೋವಾಗಿದೆ. ಆದರೂ ಕೆಲವರು ಕೊರೊನಾ ಕಾಲದಲ್ಲೂ ರಕ್ತದಾನ ಮಾಡಿ ಅದೆಷ್ಟೋ ಜೀವಗಳಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೊರೊನಾ ಸಮಯದಲ್ಲಿ ರಕ್ತದಾನಕ್ಕಾಗಿ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು. ರಕ್ತದಾನಿಗಳೇ ನಿಜವಾದ ಬಂಧು ಬಳಗ ಎಂದು ಸ್ನೇಹಮೈತ್ರಿ ಬ್ಲಡ್ ಆರ್ಮಿ ಗ್ರುಪ್ ಮುಖ್ಯಸ್ಥ ಹಾಗೂ ಪೊಲೀಸ್ ಕಾನಸ್ಟೇಬಲ್ ಕರಬಸಪ್ಪ ಗೊಂದಿ ಹೇಳಿದ್ದಾರೆ.
6 ಬಾರಿ ರಕ್ತದಾನ ಮಾಡುವ ಕರ್ತವ್ಯ ನನ್ನದಾಯಿತು. 72ನೇ ಗಣರಾಜ್ಯೋತ್ಸವದ ಅಂಗವಾಗಿ ಹಾನಗಲ್ ತಾಲೂಕಿನ ವರ್ದಿ ಗ್ರಾಮದಲ್ಲಿ ರಕ್ತದಾನ ಕ್ಯಾಂಪ್ ಆಯೋಜಿಸಲಾಗಿತ್ತು. ರಕ್ತ ಸೈನಿಕ ಕರಬಸಪ್ಪ ಗೊಂದಿಯವರ ನೇತೃತ್ವದ ಸ್ನೇಹ ಮೈತ್ರಿ ಬ್ಲಡ್ ಆರ್ಮಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಕ್ತ ನಿಧಿ ಕೇಂದ್ರ, ಜಿಲ್ಲಾ ಆಸ್ಪತ್ರೆಯವರ ಆಶ್ರಯದಲ್ಲಿ ಆಯೋಜಿಸಿದ್ದ ಕ್ಯಾಂಪ್ನಲ್ಲಿ ರಕ್ತದಾನ ಮಾಡಿದ್ದೇನೆ. ಆರೋಗ್ಯವಂತ ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ರಕ್ತದ ಕೊರತೆ ನೀಗಿಸುವ ಕೆಲಸ ಮಾಡಬೇಕಿದೆ ಎಂದು ರಕ್ತದಾನಿ ನಾಮದೇವ ಕಾಗದಗಾರ ಹೇಳಿದ್ದಾರೆ.
ಕೊರೊನಾದಿಂದಾಗಿ ರಕ್ತ ಶಿಬಿರಗಳೇ ನಡೀತಿಲ್ಲ, ಎದುರಾಗಿದೆ ರಕ್ತ ಸಮಸ್ಯೆ..