ಹೊಟ್ಟೆ ಆರೋಗ್ಯ ಚೆನ್ನಾಗಿರುವುದು ಎಷ್ಟು ಮುಖ್ಯ ಎಂದು ವಿವರಿಸಿ ಹೇಳಬೇಕಾದ್ದಿಲ್ಲ. ಒಂದು ಬಾರಿ ಹೊಟ್ಟೆ ಕೆಟ್ಟು ಹೋಗಿ ಅದರಿಂದಾಗುವ ಸಮಸ್ಯೆ ಅನುಭವಿಸಿದರೆ ಸಾಕು. ಇನ್ನೊಮ್ಮೆ ಇಂಥಾ ಸಮಸ್ಯೆ ಉಂಟಾಗುವುದು ಬೇಡಪ್ಪಾ ಎಂದು ಅನಿಸಿ ಬಿಡುತ್ತದೆ. ಜಠರಕ್ಕೆ ಅಥವಾ ಕರುಳಿಗೆ ನೆಮ್ಮದಿ ಕೊಡುವುದು ಎಷ್ಟು ಅಗತ್ಯ ಎಂದೂ ತಿಳಿಯುತ್ತದೆ. ಆಹಾರ ಸೇವನೆ ಸರಿಯಾದ ರೀತಿ ಆಗದೇ ಇದ್ದರೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಬರುತ್ತವೆ. ಮುಂದುವರಿದು ವಾಂತಿ, ಬೇಧಿ, ತಲೆನೋವು ಕೂಡ ಜತೆಯಾಗಬಹುದು. ಅಥವಾ ನಾವು ಅತಿ ಒತ್ತಡ, ಬೇಸರ ಮತ್ತು ನೋವು ಅನುಭವಿಸುತ್ತಿದ್ದರೆ ಅದರಿಂದಲೂ ಹೊಟ್ಟೆ ನೋವು ಬರಬಹುದು. ಹಾಗಾಗಿ, ಜಠರ ಮತ್ತು ಕರುಳನ್ನೂ ಸೇರಿಸಿ ಹೊಟ್ಟೆಯ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಅವಶ್ಯಕ.
ಅಮೆರಿಕಾದ ವೈದ್ಯ ಡಾ. ಮಾರ್ಕ್ ಹೈಮನ್ ಕರುಳಿನ ಆರೋಗ್ಯ ಕಾಪಾಡಿಕೊಳ್ಳುವುದು ಎಷ್ಟು ಅವಶ್ಯಕ ಎಂದು ಇನ್ಸ್ಟಾಗ್ರಾಂ ಪೋಸ್ಟ್ ಮೂಲಕ ಇತ್ತೀಚೆಗೆ ತಿಳಿಸಿದ್ದರು. ಕರುಳಿನ ಆರೋಗ್ಯ ರಕ್ಷಿಸಿಕೊಂಡರೆ ಹೃದಯ ಅಥವಾ ಮಧುಮೇಹಕ್ಕೆ ಸಂಬಂಧಿಸಿದ ಖಾಯಿಲೆಗಳಿಂದ ದೂರವಿರಬಹುದು ಎಂದೂ ಹೇಳಿದ್ದರು.
ಹೊಟ್ಟೆ ಅಥವಾ ಕರುಳಿನ ಆರೋಗ್ಯ ಕಾಪಾಡಿಕೊಳ್ಳಲು ಐದು ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ
ಹಸಿ ಹಣ್ಣು, ತರಕಾರಿ ಹೆಚ್ಚು ಸೇವಿಸಿ
ಹೊಟ್ಟೆಯ ಆರೋಗ್ಯ ಕಾಪಾಡಿಕೊಳ್ಳಲು ಇದು ಅತ್ಯಂತ ಸರಳ ಹಾಗೂ ಸುಲಭ ಮಾರ್ಗವಾಗಿದೆ. ಸಂಸ್ಕರಿಸಿದ ಆಹಾರಕ್ಕಿಂತ, ಆದಷ್ಟು ಹಸಿ ತರಕಾರಿ ಮತ್ತು ಹಣ್ಣುಗಳನ್ನು ಸೇವಿಸುವುದು ಆರೋಗ್ಯಕರ.
ಫೈಬರ್-ಯುಕ್ತ ಆಹಾರಗಳನ್ನು ಸ್ವೀಕರಿಸಿ
ಫೈಬರ್-ಯುಕ್ತ ಆಹಾರ ಸೇವಿಸುವುದು ಹೊಟ್ಟೆಯ ಆರೋಗ್ಯ ಕಾಪಾಡಿಕೊಳ್ಳಲು ಇರುವ ಮತ್ತೊಂದು ಉತ್ತಮ ಮಾರ್ಗ. ಹಣ್ಣು, ಸೊಪ್ಪು ತರಕಾರಿಗಳು ಮತ್ತು ಕಾಳುಗಳನ್ನು ಹೆಚ್ಚಾಗಿ ತಿನ್ನಬಹುದು. ಮೈದಾ ಬದಲು ಗೋಧಿ ಸೇವಿಸುವುದು. ಹಣ್ಣುಗಳನ್ನು ಜ್ಯೂಸ್ ಮಾಡದೆ, ಹಾಗೆಯೇ ಸೇವಿಸುವುದು ಒಳ್ಳೆಯದು.
ನಿಮ್ಮ ತಟ್ಟೆಯಲ್ಲಿ ಶೇ. 75ರಷ್ಟು ಹಣ್ಣು, ತರಕಾರಿಗಳಿರಲಿ
ದಾಳಿಂಬೆ, ಕ್ರಾನ್ಬೆರ್ರಿಯಂಥಾ ಹಣ್ಣುಗಳು ನಿಮ್ಮ ಊಟದ ತಟ್ಟೆಯಲ್ಲಿರಲಿ. ಸಸ್ಯಜನ್ಯ ಆಹಾರವನ್ನೇ ಹೆಚ್ಚು ಸೇವಿಸಿ. ನಿಮಗೆ ಹಿತ ಎನಿಸುವ ಆಹಾರವನ್ನೇ ತೆಗೆದುಕೊಳ್ಳಿ. ಒತ್ತಾಯಕ್ಕಾಗಿ ಯಾವುದೇ ಆಹಾರ ಸ್ವೀಕರಿಸುವುದು ಒಳ್ಳೆಯದಲ್ಲ. ಶೇ. 75ರಷ್ಟು ಆಹಾರ ವಸ್ತುಗಳು ಹಣ್ಣು, ತರಕಾರಿಯೇ ಆಗಿರಲಿ.
ಚೆನ್ನಾಗಿ ನಿದ್ರೆ ಮಾಡಿ
ನೀವು ಸರಿಯಾಗಿ ನಿದ್ದೆ ಮಾಡದಿದ್ದರೆ ಅಥವಾ ಒತ್ತಡದಲ್ಲಿ ಬದುಕಿದರೆ ಅದು ನಿಮ್ಮ ಕರುಳಿನ ಅಥವಾ ಹೊಟ್ಟೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿಯೇ, ಓರ್ವ ವ್ಯಕ್ತಿ ದಿನಕ್ಕೆ 7 ರಿಂದ 8 ಗಂಟೆ ನಿದ್ರಿಸುವುದು ಅವಶ್ಯಕ. ಜತೆಗೆ, ಒತ್ತಡ ನಿವಾರಣೆಗೆ ನಿಮಗೆ ಹಿತ ಎನಿಸುವ ಚಟುವಟಿಕೆಗಳನ್ನು ಮಾಡುತ್ತಿರಿ. ಯೋಗ ಮಾಡುವುದು, ಧ್ಯಾನಕ್ಕೆ ಕೂರುವುದರಿಂದ ಮನಸ್ಸು ಹತೋಟಿಯಲ್ಲಿದ್ದು, ಒತ್ತಡ ನಿವಾರಣೆಯಾಗುತ್ತದೆ.
ನಿಯಮಿತವಾಗಿ ವ್ಯಾಯಾಮ ಮಾಡಿ
ಡಾ. ಹೈಮನ್ ಹೇಳುವಂತೆ ನಿಗದಿತ ಆಹಾರ ಸೇವಿಸುವುದರ ಜತೆಗೆ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಹೊಟ್ಟೆ ಆರೋಗ್ಯ ಚೆನ್ನಾಗಿರುತ್ತದೆ. ನಮಗೆ ಅಗತ್ಯವಾದ ಬ್ಯಾಕ್ಟೀರಿಯಾ ಉತ್ಪಾದನೆಯೂ ಹೆಚ್ಚುತ್ತದೆ. ಬ್ಯುಟಿರೇಟ್ ಎಂಬ ಆ್ಯಸಿಡ್ ಉತ್ಪಾದನೆ ಆಗಿ ಜೀರ್ಣಕ್ರಿಯೆಯನ್ನು ಸುಲಭವಾಗಿಸುತ್ತದೆ. ಹೀಗೆ ಒಳ್ಳೆ ಆಹಾರದ ಜತೆಗೆ ವ್ಯಾಯಾಮವೂ ಮುಖ್ಯ.
ಇದನ್ನೂ ಓದಿ: ಪೇಪರ್ ಕಪ್ನಲ್ಲಿ ಟೀ-ಕಾಫಿ ಕುಡಿಯೋ ಅಭ್ಯಾಸವನ್ನು ಇಂದೇ ಬಿಟ್ಟುಬಿಡಿ ಪ್ಲೀಸ್; ಇದು ನಿಮ್ಮ ಒಳಿತಿಗೆ
ಬೇಸಿಗೆಯಲ್ಲಿ ದೇಹದ ಉಷ್ಣಾಂಶ ದೂರ ಮಾಡುವ ಕಾಮಕಸ್ತೂರಿ ಬೀಜಗಳ ಬಳಕೆ ಹೇಗೆ?
Published On - 7:09 am, Mon, 15 March 21