Tata Housing Flash Sale: ಟಾಟಾ ಹೌಸಿಂಗ್​ನಿಂದ ಮೂರು ದಿನಗಳ ಫ್ಲ್ಯಾಷ್ ಸೇಲ್; 2 ಲಕ್ಷದಿಂದ 21 ಲಕ್ಷ ರೂ. ಉಳಿತಾಯಕ್ಕೆ ಅವಕಾಶ

Tata Housing Flash Sale: ಟಾಟಾ ಹೌಸಿಂಗ್​ನಿಂದ ಮೂರು ದಿನಗಳ ಫ್ಲ್ಯಾಷ್ ಸೇಲ್; 2 ಲಕ್ಷದಿಂದ 21 ಲಕ್ಷ ರೂ. ಉಳಿತಾಯಕ್ಕೆ ಅವಕಾಶ
ಪ್ರಾತಿನಿಧಿಕ ಚಿತ್ರ

ಟಾಟಾ ಹೌಸಿಂಗ್​ನಿಂದ ಮಾರ್ಚ್​ 12ರಿಂದ 15ರ ಮಧ್ಯೆ 3 ದಿನಗಳ ಫ್ಲ್ಯಾಷ್ ಸೇಲ್ ಶುರು ಮಾಡಲಾಗಿದೆ. ಇದರಲ್ಲಿ 20 ಲಕ್ಷ ರೂಪಾಯಿಯಿಂದ 6 ಕೋಟಿ ತನಕದ ಆಸ್ತಿ ಮಾರಾಟಕ್ಕೆ ಇದ್ದು, 2 ಲಕ್ಷ ರೂಪಾಯಿಯಿಂದ 21 ಲಕ್ಷದ ತನಕ ಉಳಿತಾಯ ಮಾಡಬಹುದಾಗಿದೆ.

Srinivas Mata

|

Mar 10, 2021 | 6:59 PM


ಮನೆ ಖರೀದಿ ಮಾಡಬೇಕು ಎಂದಿರುವವರಿಗಾಗಿ ಟಾಟಾ ಹೌಸಿಂಗ್​ನಿಂದ ದೇಶದಾದ್ಯಂತ ಬುಧವಾರ ಫ್ಲ್ಯಾಷ್ ಸೇಲ್ ಘೋಷಣೆ ಮಾಡಲಾಗಿದೆ. ಈ ಫೈನಲ್ ರಷ್ ಮಾರಾಟದಲ್ಲಿ ದೇಶಾದ್ಯಂತ ಇರುವ 15 ಪ್ರಾಜೆಕ್ಟ್​ಗಳ 150 ಯೂನಿಟ್​ಗಳು ರಿಯಾಯಿತಿ ದರದಲ್ಲಿ ದೊರೆಯಲಿವೆ. ಅಂದ ಹಾಗೆ ಈ ಮಾರಾಟವು ಮಾರ್ಚ್ 12ನೇ ತಾರೀಕಿನಿಂದ ಆರಂಭವಾಗಲಿದ್ದು, ಮಾರ್ಚ್ 15ನೇ ತಾರೀಕಿನ ತನಕ ಮುಂದುವರಿಯಲಿದೆ. 20 ಲಕ್ಷ ರೂಪಾಯಿಯಿಂದ ಶುರುವಾಗುವ ಪ್ರಾಜೆಕ್ಟ್ ಮೌಲ್ಯವು 6 ಕೋಟಿ ರೂಪಾಯಿ ತನಕ ಈ ಮೂರು ದಿನದಲ್ಲಿ ಮಾರಾಟಕ್ಕೆ ಇದೆ ಎಂದು ಕಂಪೆನಿ ಹೇಳಿದೆ. ಖರೀದಿ ಮಾಡಬೇಕು ಎಂದಿರುವವರು 2 ಲಕ್ಷ ರೂಪಾಯಿಯಿಂದ 21 ಲಕ್ಷ ರೂಪಾಯಿ ತನಕ ಈ ಫ್ಲ್ಯಾಷ್ ಸೇಲ್​ನಲ್ಲಿ ಉಳಿತಾಯ ಮಾಡಬಹುದು ಎಂದು ಟಾಟಾ ಹೌಸಿಂಗ್ ಹೇಳಿದೆ.

ಮೊನ್ನೆ ಸೋಮವಾರದಂದು (ಮಾರ್ಚ್ 8, 2021) ಕರ್ನಾಟಕ ಬಜೆಟ್​ನಲ್ಲಿ 35ರಿಂದ 45 ಲಕ್ಷ ರೂಪಾಯಿಯೊಳಗಿನ ಆಸ್ತಿ ಮೌಲ್ಯದ ನೋಂದಣಿ ಶುಲ್ಕವನ್ನು ಶೇ 5ರಿಂದ ಶೇ 3ಕ್ಕೆ ಇಳಿಸಲಾಗಿದೆ. ಇದರಿಂದ 70 ಸಾವಿರದಿಂದ 90 ಸಾವಿರ ರೂಪಾಯಿ ಉಳಿತಾಯ ಆಗಲಿದೆ. ಟಾಟಾ ಹೌಸಿಂಗ್ ನಡೆ ಬಗ್ಗೆ Housing.com, Makhaan.com ಮತ್ತು Proptyghar.com ಸಮೂಹ ಸಿಇಒ ಧ್ರುವ್ ಅಗರ್​ವಾಲ್ ಮಾತನಾಡಿ, 35ರಿಂದ 45 ಲಕ್ಷ ರೂಪಾಯಿಯೊಳಗಿನ ವಿಭಾಗಕ್ಕೆ ಬರುವ ಮನೆಗಳ ಮುದ್ರಾಂಕ ಶುಲ್ಕವನ್ನು ಕರ್ನಾಟಕ ಸರ್ಕಾರವು ಶೇ 3ಕ್ಕೆ ಇಳಿಸಿದೆ. ಇದು ಸ್ವಾಗತಾರ್ಹ ನಡೆ. ಆದರೆ ಮಹಾರಾಷ್ಟ್ರದಂತೆ ಅಲ್ಲದೆ ಕರ್ನಾಟಕದಲ್ಲಿ ಕೈಗೆಟುಕುವ ಹೌಸಿಂಗ್ ಸೆಗ್ಮೆಂಟ್​ಗೆ ಮಾತ್ರ ಮುದ್ರಾಂಕ ಶುಲ್ಕ ಕಡಿತಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇದರಿಂದ ನಿರ್ದಿಷ್ಟವಾಗಿ ಈ ವಿಭಾಗಕ್ಕೆ ಮಾತ್ರ ಸಹಾಯ ಆಗಲಿದೆ ಎಂದು ಹೇಳಿದ್ದಾರೆ.

2020ರ ಮೇ ತಿಂಗಳಲ್ಲಿ 21ರಿಂದ 35 ಲಕ್ಷ ರೂಪಾಯಿ ಮೌಲ್ಯದ ಆಸ್ತಿಗಳ ಮುದ್ರಾಂಕ ಶುಲ್ಕವನ್ನು ಕರ್ನಾಟಕ ಸರ್ಕಾರವು ಶೇ 5ರಿಂದ 3ಕ್ಕೆ ಇಳಿಸಿತ್ತು. ಮಹಾರಾಷ್ಟ್ರ ಸರ್ಕಾರವು ಕಳೆದ ಸೋಮವಾರ ಶೇ 1ರಷ್ಟು ಮುದ್ರಾಂಕ ಶುಲ್ಕದ ವಿನಾಯಿತಿ ಘೋಷಣೆ ಮಾಡಿದೆ. ಮನೆಯನ್ನು ಮಹಿಳೆಯ ಹೆಸರಿಗೆ ವರ್ಗಾವಣೆ ಅಥವಾ ಮಾರಾಟ ಮಾಡಿದಲ್ಲಿ ಮುದ್ರಾಂಕ ಶುಲ್ಕದಲ್ಲಿ ರಿಬೇಟ್ ದೊರೆಯುತ್ತದೆ. ಇನ್ನು ಮನೆ ಖರೀದಿ ಮಾಡಬೇಕು ಎಂದಿರುವವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್​ಡಿಎಫ್​ಸಿ ಸೇರಿದಂತೆ ಇತರ ಬ್ಯಾಂಕ್​ಗಳು ಬಡ್ಡಿ ದರವನ್ನು ಕಡಿಮೆ ಮಾಡಿವೆ.

ಇದನ್ನೂ ಓದಿ: Karnataka Budget 2021: ಕೈಗೆಟುಕುವ ದರದ ಫ್ಲ್ಯಾಟ್ ಖರೀದಿಗೆ 70 ಸಾವಿರದಿಂದ 90 ಸಾವಿರ ರೂ. ಉಳಿತಾಯ


Follow us on

Related Stories

Most Read Stories

Click on your DTH Provider to Add TV9 Kannada