ಮಧ್ಯಪ್ರದೇಶದ ಉಮಾರಿಯ ಅರಣ್ಯ ಪ್ರದೇಶದ ಹೆದ್ದಾರಿಯಲ್ಲಿ ವಾಹನ ಹರಿದು ಹುಲಿ ಸಾವು
ಅಧಿಕೃತ ಮೂಲಗಳ ಪ್ರಕಾರ 2020ರಲ್ಲಿ ಭಾರತದಲ್ಲಿ ಒಂದು ನೂರಕ್ಕೂ ಹೆಚ್ಚು ಹುಲಿಗಳು ಬೇರೆ ಬೇರೆ ಕಾರಣಗಳಿಂದ ಸತ್ತಿವೆ. ತಾವು ವಾಸ ಮಾಡುವ ಪ್ರದೇಶದ ವ್ಯಾಪ್ತಿಗೆ ಸಂಬಂಧಿಸಿದಂತೆ ಹುಲಿಗಳ ನಡುವೆ ನಡೆಯುವ ಕಾಳಗ, ಬೇಟೆ, ಶುಕ್ರವಾರ ಬೆಳಗ್ಗೆ ಉಮಾರಿಯ ಅರಣ್ಯ ಪ್ರದೇಶದಲ್ಲಿ ಸಂಭವಿಸಿರುವ ಹಾಗೆ ರಸ್ತೆ ಅಪಘಾತಗಳಿಗೆ ಸಿಕ್ಕು ಮತ್ತು ನೈಸರ್ಗಿಕ ಕಾರಣಗಳಿಂದ ಹುಲಿಗಳು ಸಾಯುತ್ತಿವೆ.
ಉಮಾರಿಯ, ಮಧ್ಯಪ್ರದೇಶ: ಹುಲಿಗಳ ಸಂತತಿ ಹೆಚ್ಚುತ್ತಿರುವ ಬಗ್ಗೆ ಭಾರತೀಯರೆಲ್ಲ ಸಂತೋಷಪಡುತ್ತಿರುವಾಗಲೇ ಈ ಪ್ರಾಣಿಗಳು ಅಪಘಾತಗಳಿಗೆ ಬಲಿಯಾಗುತ್ತಿರುವ ವಿಷಾದಕರ ಘಟನೆಗಳು ಸಹ ನಡೆಯುತ್ತಿವೆ. ಮಧ್ಯಪ್ರದೇಶದ ಉಮಾರಿಯ ಅರಣ್ಯ ವಿಭಾಗ ಅಧಿಕಾರಿಯೊಬ್ಬರು ತಿಳಿಸಿರುವ ಹಾಗೆ ಗುನ್ಘುಟ್ಟಿ ಅರಣ್ಯವಲಯದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದ ವಾಹನವೊಂದರ ಅಡಿಗೆ ಸಿಕ್ಕ ಹುಲಿಯೊಂದು ಸ್ಥಳದಲ್ಲೇ ಮೃತಪಟ್ಟಿದೆ. ಅಧಿಕಾರಿ ನೀಡಿರುವ ಮಾಹಿತಿ ಪ್ರಕಾರ ದುರ್ಘಟನೆಯು ಉಮಾರಿಯಾ ಜಿಲ್ಲಾ ಕೇಂದ್ರದಿಂದ ಸುಮಾರು 35 ಕಿಲೋಮೀಟರ್ಗಳಷ್ಟು ದೂರ ರಾಷ್ಟ್ರೀಯ ಹೆದ್ದಾರಿ 43ರಲ್ಲಿ ಜರುಗಿದೆ.
‘ಬೆಳಗಿನ ಜಾವ ಸುಮಾರು 3 ಗಂಟೆಗೆ ಯಾವುದೋ ಒಂದು ಹಗುರ ವಾಹನ ಹುಲಿಯ ಮೇಲೆ ಹಾದು ಹೋಗಿದೆ. ನತದೃಷ್ಟ ಹುಲಿಯ ದೇಹ ಛಿದ್ರಗೊಂಡು ರಕ್ತವೇನೂ ಅಪಘಾತ ನಡೆದ ಸ್ಥಳದಲ್ಲಿ ಹರಿದಿರಲಿಲ್ಲ,’ ಎಂದು ಉಮಾರಿಯಾ ವಿಭಾಗದ ಅರಣ್ಯಾಧಿಕಾರಿ ಮೋಹಿತ್ ಸೂದ್ ಅವರು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.
ಹುಲಿಯ ದೇಹವನ್ನು ವಿಧಿ ವಿಜ್ಞಾನ ಪರಿಕ್ಷೆಗೆ ಕಳಿಸಲಾಗಿದೆ ಎಂದು ಹೇಳಿರುವ ಸೂದ್ ಅವರು, ಹುಲಿಯು ಬಂಧಾವ್ಘರ್ ಹುಲಿ ಸಂರಕ್ಷಣಗೆ ಸೇರಿದ್ದಲ್ಲ ಎಂದಿದ್ದಾರೆ.
‘ಹುಲಿಯು ಬೇರೆ ಪ್ರದೇಶಕ್ಕೆ ಸೇರಿದ್ದು, ಖಂಡಿತವಾಗಿಯೂ ಬಂಧಾವಘರ್ ಹುಲಿ ಸಂರಕ್ಷಣೆಗೆ ಸೇರಿದ್ದಲ್ಲ’ ಎಂದು ಸೂದ್ ಹೇಳಿದ್ದಾರೆ.
‘ಈ ಅರಣ್ಯ ಪ್ರದೇಶದಲ್ಲಿ ಡ್ರೈವರ್ಗಳು ಜಾಗರೂಕರತೆಯಿಂದ ವಾಹನ ಚಲಾಯಿಸುಬೇಕೆಂದು ಸೂಚಿಸುವ ಸೈನ್ ಬೋರ್ಡ್ಗಳನ್ನು ನೆಟ್ಟರೆ ಮುಂದೆ ಇಂಥ ಅನಾಹುತಗಳು ನಡೆಯದಂತೆ ತಡೆಯಬಹುದು ಅಂತ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನಾನು ತಿಳಿಸಿದ್ದೇನೆ. ಅಪಘಾತಕ್ಕೆ ಹುಲಿಯೊಂದು ಬಲಿಯಾಗಿರುವ ವಿಷಯ ನಿಜಕ್ಕೂ ದುಃಖಕರ,’ ಎಂದು ಸೂದ್ ಹೇಳಿದ್ದಾರೆ
‘ಹಾಗೆಯೇ, ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್ ಎಚ್ ಎ ಐ) ರಾಷ್ಟ್ರೀಯ ಹೆದ್ದಾರಿ 43ರಲ್ಲಿ ಗತಿ ನಿರೋಧಕಗಳನ್ನು ನಿರ್ಮಿಸುವಂತೆ ಮನವಿ ಮಾಡಿದ್ದೇವೆ,’ ಎಂದು ಅವರು ಹೇಳಿದ್ದಾರೆ. ವನ್ಯ ಪ್ರಾಣಿಗಳಿ ಅಫಘಾತಗಳಿಗೆ ಈಡಾಗುವುದನ್ನು ತಡೆಯಲು ಬೇರೆ ಕ್ರಮಗಳ ಬಗ್ಗೆಯೂ ಯೋಚಿಸಲಾಗುವುದೆಂದು ಅಧಿಕಾರಿ ಹೇಳಿದ್ದಾರೆ.
ಅಧಿಕೃತ ಮೂಲಗಳ ಪ್ರಕಾರ 2020ರಲ್ಲಿ ಭಾರತದಲ್ಲಿ ಒಂದು ನೂರಕ್ಕೂ ಹೆಚ್ಚು ಹುಲಿಗಳು ಬೇರೆ ಬೇರೆ ಕಾರಣಗಳಿಂದ ಸತ್ತಿವೆ. ತಾವು ವಾಸ ಮಾಡುವ ಪ್ರದೇಶದ ವ್ಯಾಪ್ತಿಗೆ ಸಂಬಂಧಿಸಿದಂತೆ ಹುಲಿಗಳ ನಡುವೆ ನಡೆಯುವ ಕಾಳಗ, ಬೇಟೆ, ಶುಕ್ರವಾರ ಬೆಳಗ್ಗೆ ಉಮಾರಿಯ ಅರಣ್ಯ ಪ್ರದೇಶದಲ್ಲಿ ಸಂಭವಿಸಿರುವ ಹಾಗೆ ರಸ್ತೆ ಅಪಘಾತಗಳಿಗೆ ಸಿಕ್ಕು ಮತ್ತು ನೈಸರ್ಗಿಕ ಕಾರಣಗಳಿಂದ ಹುಲಿಗಳು ಸಾಯುತ್ತಿವೆ. ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯಿಂದ, ದೇಶದ ನಾನಾ ಭಾಗಗಳಲ್ಲಿರುವ ಹುಲಿಗಳ ಮಾಹಿತಿ ಮತ್ತು ಅವುಗಳ ಯೋಗಕ್ಷೆಮದ ಕಡೆ ಗಮನ ನೀಡಲು ರಚಿಸಲ್ಪಟ್ಟಿರುವ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ ಟಿ ಸಿ ಎ) ನೀಡಿರುವ ಮಾಹಿತಿ ಪ್ರಕಾರ ಕಳೆದ ವರ್ಷ 106 ಹುಲಿಗಳು ಮರಣಕ್ಕೀಡಾಗಿವೆ. ಹಾಗೆಯೇ, ಹುಲಿ ಬೇಟೆ ಮತ್ತು ಅವುಗಳ ಅಕ್ರಮ ವ್ಯಾಪಾರವನ್ನು ತಡೆಯಲು ಶ್ರಮಿಸುತ್ತಿರುವ ಭಾರತದ ವನ್ಯಜೀವಿ ಸಂರಕ್ಷಣೆ ಸೊಸೈಟಿ ಎನ್ನುವ ಎನ್ಜಿಒ ನೀಡಿರುವ ಮಾಹಿತಿ ಅನ್ವಯ 2020 ರಲ್ಲಿ 109 ಹುಲಿಗಳು ವಿವಿಧ ಕಾರಣಗಳಿಂದ ಸತ್ತಿವೆ.
ಇದನ್ನೂ ಓದಿ: Tiger Attack | ಕೊಡಗಿನಲ್ಲಿ ಹುಲಿ ದಾಳಿಗೆ ಇಬ್ಬರು ಬಲಿ, ಕಾರ್ಯಾಚರಣೆಗೆ ಸಾಕಾನೆಗಳನ್ನು ಕರೆಸಿದ ಅರಣ್ಯ ಇಲಾಖೆ