Explainer | ಕುಸಿತದ ಹಾದಿಯಲ್ಲಿ ಷೇರುಪೇಟೆ: ಆರ್ಥಿಕತೆಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುತ್ತವೆ ಈ 5 ಅಂಶಗಳು

52,500 ಅಂಶಗಳನ್ನು ದಾಟಿದ್ದ ಮುಂಬೈ ಪೇಟೆ ಮತ್ತು 15,400 ಅಂಶಗಳನ್ನು ದಾಟಿದ್ದ ನಿಫ್ಟಿ ಇದೀಗ ಒಂದೇ ಸಮನೆ ಕುಸಿಯುತ್ತಿರುವುದು ಅಂಥ ಆಶಾದಾಯಕ ಬೆಳವಣಿಗೆ ಅಲ್ಲ. ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿರುವವರು ಎಚ್ಚರಿಕೆಯಿಂದ ಇರಬೇಕು ಎಂಬ ಸಲಹೆ ಹೂಡಿಕೆ ತಜ್ಞರದ್ದು.

Explainer | ಕುಸಿತದ ಹಾದಿಯಲ್ಲಿ ಷೇರುಪೇಟೆ: ಆರ್ಥಿಕತೆಯಲ್ಲಿ ಎಲ್ಲವೂ ಸರಿಯಿಲ್ಲ ಎನ್ನುತ್ತವೆ ಈ 5 ಅಂಶಗಳು
ಸಾಂದರ್ಭಿಕ ಚಿತ್ರ
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: ರಾಜೇಶ್ ದುಗ್ಗುಮನೆ

Updated on:Mar 15, 2021 | 5:22 PM

ಭಾರತದ ಪ್ರಮುಖ ಷೇರು ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್​ – ಮುಂಬೈ ಷೇರುಪೇಟೆ (Bombay Stock Exchange – BSE) ಮತ್ತು ನಿಫ್ಟಿ – ರಾಷ್ಟ್ರೀಯ ಷೇರು ಸಂವೇದಿ ಸೂಚ್ಯಂಕಗಳು (National Stock Exchange – NSE) ಸೋಮವಾರ (ಮಾರ್ಚ್ 15) ಗಮನಾರ್ಹ ಪ್ರಮಾಣದಲ್ಲಿ ಕುಸಿದಿವೆ. ಕಳೆದ ದಿನದ ವಹಿವಾಟಿಗೆ ಹೋಲಿಸಿದರೆ ಸೆನ್ಸೆಕ್ಸ್ 397 ಅಂಶಗಳನ್ನು ಕಳೆದುಕೊಂಡು (ಶೇ -0.78) 50,395.08ರಲ್ಲಿ ಮತ್ತು ನಿಫ್ಟಿ 101.45 ಅಂಶಗಳನ್ನು ಕಳೆದುಕೊಂಡು (ಶೇ -0.67) 14,929.50ರಲ್ಲಿ ದಿನದ ವಹಿವಾಟು ಮುಗಿಸಿದೆ. ದಿನದ ವಹಿವಾಟಿನ ಒಂದು ಹಂತದಲ್ಲಿ ಬಿಎಸ್​ಇ 50,000 ಅಂಶಗಳು ಮತ್ತು ನಿಫ್ಟಿ 14,800 ಅಂಶಗಳ ಗಡಿಯ ಒಳಗೆ ಕುಸಿದಿತ್ತು.

ಇಂದು ಬೆಳಿಗ್ಗೆ 11.50ರಲ್ಲಿ ಸೆನ್ಸೆಕ್ಸ್ 874 ಅಂಶಗಳನ್ನು (ಶೇ 1.72) ಕಳೆದುಕೊಂಡು 49,918ಕ್ಕೆ ಬಂದಿತ್ತು. ಇದೇ ಹೊತ್ತಿಗೆ ನಿಫ್ಟಿ 245 ಅಂಶಗಳನ್ನು ಕಳೆದುಕೊಂಡು 14,785 (ಶೇ 1.63) ಅಂಶಗಳಿಗೆ ಕುಸಿದಿತ್ತು. ಬಿಎಸ್​ಇಯ ಮಿಡ್​ಕ್ಯಾಪ್, ಸ್ಮಾಲ್​ಕ್ಯಾಪ್​ ಸೂಚ್ಯಂಕಗಳೂ ಕ್ರಮವಾಗಿ ಶೇ 1.71 ಮತ್ತು ಶೇ 1.03ರ ಕುಸಿತ ಕಂಡಿದ್ದವು. ಕಳೆದ ವರ್ಷ ಅಂದರೆ 2020ರ ಮಾರ್ಚ್ 9ರಂದು ​ಒಂದೇ ದಿನ ಸೆನ್ಸೆಕ್ಸ್ 1,941.67 ಅಂಶಗಳನ್ನು (ಶೇ 5.17) ಕಳೆದುಕೊಂಡಿತ್ತು. ನಿಫ್ಟಿ 538 ಅಂಶಗಳನ್ನು (ಶೇ 4.9) ಕಳೆದುಕೊಂಡಿತ್ತು. ಇದು ಈವರೆಗಿನ ಒಂದು ದಿನದ ಗರಿಷ್ಠ ಮಟ್ಟದ ಕುಸಿತ ಎಂದು ದಾಖಲೆಯಾಗಿದೆ.

ಇದಾದ ನಂತರ ದೇಶದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಎಂಬ ವಿಶ್ಲೇಷಣೆ ಮತ್ತು ಕೋವಿಡ್ ಆಂತಕದ ನಡುವೆಯೂ ಷೇರುಪೇಟೆ ಸ್ಥಿರತೆ, ಏರಿಕೆ ಕಾಪಾಡಿಕೊಂಡಿತ್ತು. ಆದರೆ ಈಗ ಮಾರುಕಟ್ಟೆ ನಿಧಾನವಾಗಿ ಕರಗುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. 52,500 ಅಂಶಗಳನ್ನು ದಾಟಿದ್ದ ಮುಂಬೈ ಪೇಟೆ ಮತ್ತು 15,400 ಅಂಶಗಳನ್ನು ದಾಟಿದ್ದ ನಿಫ್ಟಿ ಇದೀಗ ಒಂದೇ ಸಮನೆ ಕುಸಿಯುತ್ತಿರುವುದು ಅಂಥ ಆಶಾದಾಯಕ ಬೆಳವಣಿಗೆ ಅಲ್ಲ. ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿರುವವರು ಎಚ್ಚರಿಕೆಯಿಂದ ಇರಬೇಕು ಎಂಬ ಸಂದೇಶಗಳನ್ನು ಷೇರು ವಹಿವಾಟು ನಡೆಸಲು ಅವಕಾಶ ಮಾಡಿಕೊಡಲು ಮಧ್ಯವರ್ತಿ ಸಂಸ್ಥೆಗಳು (ಬ್ರೋಕರೇಜ್​ ಫರ್ಮ್​) ನೀಡುತ್ತಿವೆ.

ಮಾರುಕಟ್ಟೆ ಕುಸಿತದ ಕಾರಣಗಳನ್ನು ಹುಡುಕಾಡಿದರೆ ಮೊದಲು ಕಣ್ಣಿಗೆ ಬೀಳುವುದು ಅಂತರರಾಷ್ಟ್ರೀಯ ಆರ್ಥಿಕ ವಿದ್ಯಮಾನಗಳು. ‘ಜಾಗತಿಕ ಮತ್ತು ದೇಶೀಯ ಆರ್ಥಿಕತೆ ಗೊಂದಲದಲ್ಲಿದೆ. ಡಾಲರ್ ಸಂವೇದಿ ಸೂಚ್ಯಂಕ 9.16ಕ್ಕೆ ಬಂದು ಹೂಡಿಕೆ ಹೆಚ್ಚಾಗುವ ಆಶಾಭಾವನೆ ಮೂಡಿಸಿದೆ. ಆದರೆ 10 ವರ್ಷದ ಬಾಂಡ್​ ಯೀಲ್ಡ್​ 1.64ಕ್ಕೆ ಮುಟ್ಟಿದೆ. ಇದು ಆತಂಕದ ವಿಷಯ. ಹಣದುಬ್ಬರ ಹೆಚ್ಚಾಗುತ್ತಿರುವುದು, ದಿನಬಳಕೆ ವಸ್ತುಗಳ ಬೆಲೆ ಹೆಚ್ಚುತ್ತಿರುವುದು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತಿವೆ. ಕಡಿಮೆ ಬಡ್ಡಿದರದ ಅವಧಿಯೂ ಮುಗಿಯುತ್ತಾ ಬಂದಂತೆ ಇದೆ. ಹೆಚ್ಚಾಗುತ್ತಿರುವ ಕೋವಿಡ್ ಪ್ರಕರಣಗಳ ಸಂಖ್ಯೆಯೂ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ ಇವೆಲ್ಲವೂ ಮಾರುಕಟ್ಟೆ ಕುಸಿಯಬಹುದು ಎನ್ನಲು ಕಾರಣಗಳಾಗುತ್ತವೆ’ ಎನ್ನುತ್ತಾರೆ ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್​ನ ಹೂಡಿಕೆ ತಜ್ಞ ವಿ.ಕೆ.ವಿಜಯ್​ಕುಮಾರ್.

‘ಲಾಕ್​ಡೌನ್ ತೆರವಾದ ನಂತರ ಭಾರತ ಮತ್ತು ವಿಶ್ವದ ಆರ್ಥಿಕತೆ ಚೇತರಿಸಿಕೊಳ್ಳುತ್ತಿರುವ ಕಾರಣ ಕೆಲ ಕಂಪನಿಗಳ ಷೇರುಮೌಲ್ಯ ಸುಧಾರಿಸಬಹುದು ಎಂಬ ಲೆಕ್ಕಾಚಾರವಿದೆ. ಆದರೆ ಭಾರತದ ಷೇರುಪೇಟೆ ಈಗ ಯೋಗ್ಯಮೌಲ್ಯಕ್ಕೆ (ಕರೆಕ್ಷನ್) ಮರಳಬಹುದು. ಈ ಹಂತದಲ್ಲಿ ಹೂಡಿಕೆದಾರರು ಮತ್ತು ವಹಿವಾಟುದಾರರು ಅತ್ಯಂತ ಎಚ್ಚರದಿಂದ ಮುಂದಿನ ಹೆಜ್ಜೆ ಇಡಬೇಕು’ ಎಂದು ಸಲಹೆ ಮಾಡುತ್ತಾರೆ ಅವರು.

ಇದನ್ನೂ ಓದಿ: Stock Market: ಷೇರು ಮಾರುಕಟ್ಟೆ ಬೆಳವಣಿಗೆಯಿಂದ ಜನ ಸಾಮಾನ್ಯರಿಗೇನು ಲಾಭ?

ಸಾಂದರ್ಭಿಕ ಚಿತ್ರ

ಭಾರತದ ಷೇರುಪೇಟೆ ಕುಸಿಯಲು ಕಾರಣವಾಗಿರಬಹುದಾದ ಐದು ಅಂಶಗಳ ವಿವರಣೆ ಇಲ್ಲಿದೆ..

1) ಸಾಲಪತ್ರಗಳ ಪಕ್ವತೆಯ ಮೇಲಿನ ಗಳಿಕೆ ಹೆಚ್ಚಳ ಭಾರತದಲ್ಲಿ ದೀರ್ಘಾವಧಿ ಸಾಲಪತ್ರಗಳ (ಬಾಂಡ್​ಗಳ) ಪಕ್ವತೆಯ ಮೇಲಿನ ಗಳಿಕೆ ಶೇ 6.20ಗೆ ಮುಟ್ಟಿದೆ. ಬಡ್ಡಿದರ ಇಳಿಕೆ ಪರ್ವ ಆರಂಭವಾದ ನಂತರ ಇದೇ ಮೊದಲ ಬಾರಿಗೆ ಬಾಂಡ್​ಗಳ ಪಕ್ವತೆಯ ಗಳಿಕೆ ಈ ಮಟ್ಟಕ್ಕೆ ಹೆಚ್ಚಾಗಿದೆ. ಬಾಂಡ್​ಗಳ ಗಳಿಕೆ ಹೆಚ್ಚಾದರೆ ಕಂಪನಿಗಳು ಬಂಡವಾಳ ಸಂಗ್ರಹಕ್ಕಾಗಿ ಮಾಡುವ ವೆಚ್ಚ ಹೆಚ್ಚಾಗುತ್ತದೆ. ಇದು ಅವುಗಳ ಷೇರು ಮೌಲ್ಯದ ಕುಸಿತಕ್ಕೆ ಕಾರಣವಾಗಬಹುದು. ಬಾಂಡ್​ ಗಳಿಕೆಯನ್ನು ರಿಸರ್ವ್​ ಬ್ಯಾಂಕ್​ ಇದೇ ಮಟ್ಟದಲ್ಲಿ ಕಾಯ್ದುಕೊಂಡರೆ ಉದ್ಯಮಗಳಿಗೆ ಸಿಗುತ್ತಿರುವ ಹಣಕಾಸಿನ ಅನುಕೂಲಗಳೂ ಕಡಿಮೆಯಾಗಬಹುದು. ಬಡ್ಡಿದರಗಳೂ ಹೆಚ್ಚಾಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ, ಯಾವುದೇ ಸಂದರ್ಭದಲ್ಲಿ ಬಾಂಡ್ ಗಳಿಕೆ ಹೆಚ್ಚಾದರೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರೂ (Foreign Institutional Investors – FII) ಸೇರಿದಂತೆ ಎಲ್ಲ ವರ್ಗಗಳ ಹೂಡಿಕೆದಾರರು ಷೇರುಪೇಟೆಯಿಂದ ಹಣ ಹಿಂಪಡೆದು, ಬಾಂಡ್​ಗಳ ಮೇಲೆ ಹೂಡಲು ಇಷ್ಟಪಡುತ್ತಾರೆ. ಸಹಜವಾಗಿಯೇ ಷೇರುಪೇಟೆಯ ಮೌಲ್ಯ ಕಡಿಮೆಯಾಗುತ್ತದೆ ಎನ್ನುತ್ತಾರೆ ಮೈ ವೆಲ್ತ್​ ಗ್ರೋತ್​ನ ಹರ್ಷದ್ ಚೇತನ್​ವಾಲಾ.

2) ಹಣದುಬ್ಬರದ ಆತಂಕ ಬಾಂಡ್​ಗಳ ಪಕ್ವತೆಯ ಮೇಲಿನ ಗಳಿಕೆ ಹೆಚ್ಚಾಗುತ್ತಿರುವುದು ಮತ್ತು ವಿವಿಧ ದೇಶಗಳಲ್ಲಿ ಸರ್ಕಾರ ಮತ್ತು ಕೇಂದ್ರೀಯ ಬ್ಯಾಂಕ್​ಗಳ ಕ್ರಮಗಳಿಂದ ನಗದು ಚಲಾವಣೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಾಗಿರುವುದರಿಂದ ಹಣದುಬ್ಬರವೂ ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದು ಎಂಬ ಲೆಕ್ಕಾಚಾರ ಚಾಲ್ತಿಯಲ್ಲಿದೆ. ಅಮೆರಿಕದ ಬಾಂಡ್​ಗಳ ಪಕ್ವತೆಯ ಗಳಿಕೆ ಶೇ 1.53ರಲ್ಲಿಯೇ ಉಳಿದುಕೊಂಡಿರುವುದು ಷೇರುಪೇಟೆಗೆ ಹಣದುಬ್ಬರದ ಬಗ್ಗೆ ಇರುವ ಭಯದ ದ್ಯೋತಕ. ಭಾರತದಲ್ಲಿ ವಿಪರೀತ ಸಡಿಲ ಹಣಕಾಸು ನೀತಿಗಳು ಮತ್ತು ಕೋವಿಡ್ ಸಂದರ್ಭದಲ್ಲಿ ಘೋಷಣೆ ಮಾಡಿದ 1.9 ಲಕ್ಷ ಕೋಟಿಯಷ್ಟು ನೆರವು ಸಹ ಹಣದುಬ್ಬರ ಹೆಚ್ಚಾಗಲು ಕಾರಣ. ಇದು ಷೇರುಪೇಟೆಯ ಆತಂಕ ಮತ್ತು ಕಾಳಜಿ ಎನ್ನುತ್ತಾರೆ ವಿಜಯ್​ಕುಮಾರ್.

ಫೆಬ್ರುವರಿ 2021ರಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣ (Consumer Price Index – CPI) ಶೇ 5.03ಕ್ಕೆ ಏರಿಕೆಯಾಗಿದೆ. ಕೇವಲ ಒಂದು ತಿಂಗಳ ಹಿಂದೆ, ಅಂದರೆ ಜನವರಿಯಲ್ಲಿ ಇದು ಶೇ 4.1 ಇತ್ತು. ಮಾರುಕಟ್ಟೆ ನಗದು ಚಲಾವಣೆ ಹೆಚ್ಚಾಗಿರುವುದರ ಜೊತೆಗೆ ನಗದು ನಿಯಂತ್ರಣಕ್ಕೆ ಹಣಕಾಸು ನೀತಿಗಳಲ್ಲಿ ಆರ್​ಬಿಐ ಪರಿಣಾಮಕಾರಿ ಕ್ರಮಗಳನ್ನೂ ಘೋಷಿಸದ ಪರಿಣಾಮಗಳು ಇದೀಗ ಅನುಭವಕ್ಕೆ ಬರುತ್ತಿವೆ. ‘ಆರ್ಥಿಕ ಪುನಶ್ಚೇತನಕ್ಕೆ ಕೇಂದ್ರ-ರಾಜ್ಯ ಸರ್ಕಾರಗಳು ಮುಂದಿನಗಳಲ್ಲಿ ತೆಗೆದುಕೊಳ್ಳುವ ಕೆಲ ಕ್ರಮಗಳಿಂದಾಗಿ ಹಣದುಬ್ಬರ ಮತ್ತಷ್ಟು ಹೆಚ್ಚಬಹುದು’ ಎಂದು ಅಭಿಪ್ರಾಯಪಡುತ್ತಾರೆ ಅಕ್ಯೂಟ್ ರೇಟಿಂಗ್ಸ್​ನ ಮುಖ್ಯ ವಿಶ್ಲೇಷಕ ಸುಮನ್ ಚೌಧರಿ.

3) ಕೈಗಾರಿಕಾ ಉತ್ಪಾದನೆ ಕುಸಿತ ಕೈಗಾರಿಕಾ ಉತ್ಪಾದನಾ ಸೂಚ್ಯಂಕ (Index of Industrial Production – IIP) ಜನವರಿ ತಿಂಗಳಲ್ಲಿ ಶೇ 1.6ರಷ್ಟು ಕುಸಿತ ಕಂಡಿತ್ತು. ಆದರೆ ಡಿಸೆಂಬರ್ 2020ರಲ್ಲಿ ಇದು ಶೇ 1.6ರ ಏರಿಕೆ ದಾಖಲಿಸಿತ್ತು. ಒಂದೆಡೆ ಏರುತ್ತಿರುವ ಹಣದುಬ್ಬರ ಮತ್ತು ಕುಸಿಯುತ್ತಿರುವ ಉತ್ಪಾದನೆಯು ಮಾರುಕಟ್ಟೆಯಲ್ಲಿ ಆತಂಕ ಕವಿಯುವಂತೆ ಮಾಡಿದೆ. ‘ಡಿಸೆಂಬರ್ ತಿಂಗಳಲ್ಲಿ ಪ್ರಗತಿ ದಾಖಲಿಸಿದ್ದ ಕೈಗಾರಿಕಾ ಉತ್ಪಾದನೆ ಜನವರಿಯಲ್ಲಿ ಕುಸಿತ ಕಂಡಿದೆ. ಉತ್ಪಾದನೆ ಮತ್ತು ಗಣಿ ವಲಯಗಳಲ್ಲಿ ಕುಸಿತ ಇದಕ್ಕೆ ಮುಖ್ಯಕಾರಣ. ದೇಶದ ಕೆಲಭಾಗಗಳಲ್ಲಿ ಸರ್ಕಾರ ಆರ್ಥಿಕತೆಗೆ ಉತ್ತೇಜನ ನೀಡಲು ಹಲವು ಕ್ರಮಗಳನ್ನು ಘೋಷಿಸಿದ್ದರೂ ಉತ್ಪಾದನೆ ಕುಸಿದಿರುವುದು ವಿಪರ್ಯಾಸ. ಮುಂದಿನ ತಿಂಗಳು ನಡೆಯಲಿರುವ ರಿಸರ್ವ್​ ಬ್ಯಾಂಕ್​ನ ಹಣಕಾಸು ನೀತಿ ಮಂಡಳಿಯ (Monetary Policy Committee – MPC) ಸಭೆಯಲ್ಲಿ ಈ ವಿಚಾರ ಮುಖ್ಯವಾಗಿ ಚರ್ಚೆಗೆ ಬರಬಹುದು. ಅದರ ತೀರ್ಮಾನಗಳ ಮೇಲೆಯೂ ಪರಿಣಾಮ ಬೀರಬಹುದು’ ಎಂದು ನಿಶ್ ಭಟ್ ಅಭಿಪ್ರಾಯಪಡುತ್ತಾರೆ.

4) ಕೋವಿಡ್ ಪ್ರಕರಣಗಳ ಏರಿಕೆ ದೇಶದ ಕೆಲ ಪ್ರದೇಶಗಳಲ್ಲಿ ಕೋವಿಡ್​ ಪ್ರಕರಣಗಳು ಮತ್ತೆ ವರದಿಯಾಗುತ್ತಿವೆ. ಕೋವಿಡ್ ನಿಯಂತ್ರಣಕ್ಕೆ ಅಲ್ಲಲ್ಲಿ ಲಾಕ್​ಡೌನ್ ಸಹ ಹೇರಲಾಗಿದೆ. ಇದು ಮಾರುಕಟ್ಟೆಯಲ್ಲಿ ವಹಿವಾಟುದಾರರ ಮನಃಸ್ಥಿತಿಯ ಮೇಲೆ ಪರಿಣಾಮ ಬೀರುತ್ತಿದೆ. ಮಾರ್ಚ್ 14ರಂದು ಭಾರತದಲ್ಲಿ 25,320 ಹೊಸ ಕೋವಿಡ್-19 ಸೋಂಕು ಪ್ರಕರಣಗಳು ಕಾಣಿಸಿಕೊಂಡಿತ್ತು. ಇದು ಕಳೆದ 84 ದಿನಗಳಲ್ಲಿಯೇ ಗರಿಷ್ಠ ಮಟ್ಟ ಎನಿಸಿಕೊಂಡಿತ್ತು. ಈವರೆಗೆ ದೇಶದಲ್ಲಿ ಒಟ್ಟು 1,13,59,048 ಮಂದಿಗೆ ಸೋಂಕು ಕಾಣಿಸಿಕೊಂಡಿದೆ ಎಂದು ಆರೋಗ್ಯ ಇಲಾಖೆಯ ಮಾಹಿತಿ ತಿಳಿಸುತ್ತದೆ. ಕೋವಿಡ್ ಆತಂಕವೂ ಮಾರುಕಟ್ಟೆ ಕುಸಿತಕ್ಕೆ ಕಾರಣ ಇರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

5) ತಾಂತ್ರಿಕ ಅಂಶಗಳು (Technicals) ಹೂಡಿಕೆದಾರರು ಆರ್ಥಿಕ-ಸಾಮಾಜಿಕ ಪರಿಸ್ಥಿತಿ ಬಗ್ಗೆ ಯೋಚಿಸಿದರೆ, ಅಲ್ಪಾವಧಿ ವಹಿವಾಟು ನಡೆಸುವವರು ತಾಂತ್ರಿಕ ಅಂಶಗಳನ್ನೇ ಆಧರಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ನಿಫ್ಟಿಗೆ 14,850 ಎನ್ನುವುದು ಅತಿಮುಖ್ಯ ಸಪೋರ್ಟ್​. ಅದರಿಂದ ಕೆಳಗಿರುವ ನಿಫ್ಟಿ ಮುಂದಿನ ದಿನಗಳಲ್ಲಿ 14,500ಕ್ಕೆ ಇಳಿಯಬಹುದು ಎನ್ನುವುದು ಇದೀಗ ಚಾಲ್ತಿಯಲ್ಲಿರುವ ಜನಪ್ರಿಯ ವಿಶ್ಲೇಷಣೆ. ಒಂದು ವೇಳೆ ನಿಫ್ಟಿ ಮತ್ತೆ 15,250 ಅಂಶ ದಾಟಿದರೆ, ಮಾರುಕಟ್ಟೆಯಲ್ಲಿ ಮತ್ತೆ ಸ್ಥಿರತೆ-ಪ್ರಗತಿ ಮರಳಬಹುದು ಎನ್ನುತ್ತಾರೆ ಎಲ್​ಕೆಪಿ ಸೆಕ್ಯುರಿಟಿಸ್​ನ ತಾಂತ್ರಿಕ ವಿಶ್ಲೇಷಕ ರೋಹಿತ್ ಸಿಂಗ್ರೆ.

ಮಾರುಕಟ್ಟೆಯಲ್ಲಿ ಸ್ಥಿರತೆಯಿಲ್ಲ ಎಂಬ ಅಂಶವನ್ನು ಗಮನದಲ್ಲಿರಿಸಿಕೊಂಡೇ ವಹಿವಾಟು ನಡೆಸುವವರು ಮುಂದಿನ ನಿರ್ಧಾರ ತೆಗೆದುಕೊಳ್ಳಬಹುದು. ಷೇರುಪೇಟೆ ಮತ್ತಷ್ಟು ಕುಸಿಯಬಹುದು ಎನ್ನುವುದಕ್ಕೆ ಎಷ್ಟು ಕಾರಣಗಳಿವೆಯೋ, ಮತ್ತಷ್ಟು ಏರಬಹುದು ಎನ್ನಲೂ ಅಷ್ಟೇ ತರ್ಕಗಳು ಇವೆ. ಸೂಕ್ತ ಅಧ್ಯಯನ ಮತ್ತು ಸಲಹೆ ಮಾತ್ರ ಈಗಿನ ಮಾರುಕಟ್ಟೆ ಹೊಯ್ದಾಟದಲ್ಲಿ ನಿಮ್ಮ ಹೂಡಿಕೆಗಳನ್ನು ಕಾಪಾಡಬಲ್ಲದು.

ಇದನ್ನೂ ಓದಿ: ಭಾರತದ ಷೇರು ಮಾರ್ಕೆಟ್​ನ ಈ 8 ಕಂಪೆನಿಗಳ ಮೌಲ್ಯ ಒಂದೇ ವಾರದಲ್ಲಿ 1.94 ಲಕ್ಷ ಕೋಟಿ ರೂ. ಹೆಚ್ಚಳ

ಇದನ್ನೂ ಓದಿ: ಷೇರು ಮಾರ್ಕೆಟ್​ನಲ್ಲಿ ಹಣ ಮಾಡುವುದು ಹೇಗೆ ಎಂಬುದಕ್ಕೆ ಇಲ್ಲಿವೆ 10 ಸಿಂಪಲ್ ಟಿಪ್ಸ್

Published On - 5:18 pm, Mon, 15 March 21