ಕಿತ್ತು ತಿನ್ನುತ್ತಿದೆ ಕಾಯಿಲೆ ಮತ್ತು ಬಡತನ; ಈತನಿಗೆ ಆಸರೆ ಯಾರು ಆಗುತ್ತಾರೆ?
21 ವರ್ಷದ ಯುವಕ ಪ್ರತಿ ಕ್ಷಣವೂ ಬ್ರೇನ್ ಟ್ಯೂಮರ್ ಕಾಯಿಲೆಯ ನೋವಿನಿಂದ ನರಕ ಯಾತನೆ ಅನುಭವಿಸುತ್ತಿದ್ದಾರೆ.

ಬಾಗಲಕೋಟೆ: ಕೈಯಲ್ಲಿ ಆಸ್ಪತ್ರೆಗೆ ಸಂಬಂಧಿಸಿದ ದಾಖಲಾತಿಗಳು. ಮಗನ ಜೊತೆ ಕುಳಿತುಕೊಂಡು ತಾಯಿಯ ಕಣ್ಣೀರು. ಮಗನಿಗೆ ಬಂದ ಪರಿಸ್ಥಿತಿ ನೆನೆದು ಗೋಳಾಟ. ಈ ದೃಶ್ಯಗಳು ಕಂಡುಬಂದಿದ್ದು ಜಿಲ್ಲೆಯ ರಬಕವಿಬನಹಟ್ಟಿ ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ.
ತಾಯಿ ಹಾಗೂ ಮಕ್ಕಳಿಗೆ ಬಡತನವೇ ಶಾಪವಾಗಿದೆ. ಬೆಳೆದು ನಿಂತ ಹರೆಯದ ಮಗನ ಪರಿಸ್ಥಿತಿ ನೆನೆದು ಒಂದೇ ಸಮನೆ ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಇದಕ್ಕೆ ಕಾರಣ ಮಗನಿಗೆ ಬಂದ ಬ್ರೇನ್ ಟ್ಯೂಮರ್ ಕಾಯಿಲೆ. ಆತನ ಹೆಸರು ಓಂಕಾರ ಬಸ್ಮೆ. 21 ವರ್ಷದ ಯುವಕ. ಪ್ರತಿ ಕ್ಷಣವೂ ಬ್ರೇನ್ ಟ್ಯೂಮರ್ ಕಾಯಿಲೆಯ ನೋವಿನಿಂದ ನರಕ ಯಾತನೆ ಅನುಭವಿಸುತ್ತಿದ್ದಾರೆ.
ಮೊದಲು ಫಿಟ್ಸ್ ರೀತಿ ಕಾಯಿಲೆ ಕಾಣಿಸಿಕೊಂಡಿದೆ. ನಂತರ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡಾಗ ಬ್ರೇನ್ ಟ್ಯೂಮರ್ ಇರುವುದು ಗೊತ್ತಾಗಿದೆ. ಇದರಿಂದ ಯುವಕ ಓಂಕಾರನಿಗೆ ಬಿಸಿಲಲ್ಲಿ ಓಡಾಡುವುದಕ್ಕೆ ಆಗುವುದಿಲ್ಲ. ಹೆಚ್ಚು ಹೊತ್ತು ನಿಲ್ಲುವುದಕ್ಕೆ ಆಗುವುದಿಲ್ಲ. ಇನ್ನು ಎಡಗೈ ಕೂಡ ಸ್ವಾಧೀನ ಕಳೆದುಕೊಂಡಿದೆ. ಇಷ್ಟು ದಿನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ ಕುಟುಂಬ ಸಲುಹುತ್ತಿದ್ದ ಓಂಕಾರ, ಈಗ ಕಾಯಿಲೆಯಿಂದ ಸಾಕಷ್ಟು ಬಳಲುತ್ತಿದ್ದಾರೆ.
ನೊಂದ ಯುವಕ ಓದಿ ದೊಡ್ಡ ವ್ಯಕ್ತಿಯಾಗಬೇಕೆಂದು ಕೊಂಡವನಿಗೆ ಬಡತನ ಅಡ್ಡ ಗೋಡೆಯಾಗಿದೆ. ಎಸ್ಎಸ್ಎಲ್ಸಿ ಎಕ್ಸ್ಟರ್ನಲ್ ಪರೀಕ್ಷೆ ಕಟ್ಟಿ ಉತ್ತೀರ್ಣನಾಗಬೇಕೆಂದುಕೊಂಡಿದ್ದೆ. ಆದರೆ ಈ ಕಾಯಿಲೆ ವಕ್ಕರಿಸಿದೆ. ನಾನು ನಮ್ಮ ತಂದೆ ತಾಯಿಯನ್ನು ಸಲುಹಬೇಕಿತ್ತು. ಅವರೇ ನನ್ನ ಸಲುಹುವಂತಾಗಿದ್ದು ನನ್ನಿಂದ ಎಲ್ಲರಿಗೂ ಭಾರವಾಗುತ್ತಿದೆ ಎಂದು ಯುವಕ ಓಂಕಾರ ನೊಂದುಕೊಳ್ಳುತ್ತಾರೆ.
ತಂದೆ ತಾಯಿ ಇಬ್ಬರೂ ಕೂಲಿ ಮಾಡಿ ಬದುಕುವಂತವರು. ಅಲ್ಲೋ ಇಲ್ಲೋ ಸಿಕ್ಕ ಕೂಲಿ ಕೆಲಸ ಮಾಡಿ ಕುಟುಂಬ ಸಲುಹುತ್ತಿದ್ದಂತವರು. ಆದರೆ ಈ ವೇಳೆ ಲಾಕ್ಡೌನ್ ಜಾರಿಯಾಗಿ ಸರಿಯಾಗಿ ಕೆಲಸ ಸಿಗದೆ ಈ ಬಡ ದಂಪತಿಗಳು ಇನ್ನಿಲ್ಲದ ಕಷ್ಟಪಟ್ಟಿದ್ದಾರೆ. ಮಗನಿಗೆ ಇದೆ ವೇಳೆ ಬ್ರೇನ್ ಟ್ಯೂಮರ್ ಕೂಡ ಕಾಣಿಸಿಕೊಂಡು ಕುಟುಂಬಕ್ಕೆ ಭಾರಿ ಆಘಾತ ತಂದೊಡ್ಡಿದೆ. ಮೊದಲೇ ಕೂಲಿ ಮಾಡುವ ಕುಟುಂಬಕ್ಕೆ ಈ ಸುದ್ದಿ ಬರ ಸಿಡಿಲು ಬಡಿದಂತಾಗಿದೆ.
ಇಲ್ಲಿವರೆಗೂ ಮಗನಿಗಾಗಿ ಕೆಲ ಸರಕಾರಿ ಸ್ಕೀಮ್ ಹಾಗೂ ಕೆಲವರ ಸಹಾಯ ಪಡೆದು ಚಿಕಿತ್ಸೆ ಕೊಡಿಸುತ್ತಾ ಬಂದಿದ್ದಾರೆ. ಇದುವರೆಗೆ ಒಟ್ಟು 6 ರಿಂದ 7 ಲಕ್ಷ ಖರ್ಚು ಮಾಡಿ ಆಪರೇಷನ್ ಮಾಡಿಸಿದ್ದಾರೆ. ಈಗ ಇನ್ನೊಂದು ಆಪರೇಷನ್ ಮಾಡಬೇಕಾಗಿದ್ದು, ಅದಕ್ಕಾಗಿ ಇನ್ನೂ ಎರಡು ಲಕ್ಷದಷ್ಟು ಹಣ ಬೇಕಾಗಿದೆ. ಆದರೆ ಈಗಾಗಲೇ ಇದ್ದ ಹಣ ಖಾಲಿಯಾಗಿದ್ದು, ಈ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.
ಕಣ್ಣೆದುರೆ ಮಗನ ಸಾವನ್ನು ನೋಡೋಕಾಗುವುದಿಲ್ಲ. ನಮಗೆ ಯಾರಾದರೂ ದಾನಿಗಳು ಸಹಾಯ ಮಾಡಿ ನನ್ನ ಮಗನ ಬದುಕಿಸಿ ಎಂದು ಹೆತ್ತ ತಾಯಿ ಕಣ್ಣೀರು ಹಾಕಿ ಸಹಾಯಕ್ಕಾಗಿ ಮೊರೆ ಇಡುತ್ತಿದ್ದಾರೆ. ಮನೆ ಒಂದನ್ನು ಬಿಟ್ಟು, ಗೇಣು ಆಸ್ತಿಯಿಲ್ಲ. ಕೈ ದುಡಿಮೆ ಬಿಟ್ಟು ಬೇರೆ ಯಾವುದೇ ಆಸರೆಯಿಲ್ಲ. ಇನ್ನು ಚಿಕ್ಕ ಮಗ ಅಲ್ಲಲ್ಲಿ ಸಣ್ಣ ಪುಟ್ಟ ಅಂಗಡಿಯಲ್ಲಿ ದುಡಿಯುತ್ತಿದ್ದಾರೆ. ಯುವಕನ ತಂದೆ ಸಣ್ಣ ಪುಟ್ಟ ಕೂಲಿ ಮಾಡುತ್ತಿದ್ದು ಹಣಕಾಸಿನ ತೊಂದರೆ ಇವರನ್ನು ಕಾಡುತ್ತಿದೆ. ಸದ್ಯ ದಾನಿಗಳು ಈ ಕುಟುಂಬಕ್ಕೆ ಆಸರೆಯಾಗಬೇಕಾಗಿದೆ.
ಕುಟುಂಬಸ್ಥರ ದೂರವಾಣಿ ಸಂಖ್ಯೆ: 90198 88209
ಹೊತ್ತು ಗೊತ್ತಿಲ್ಲದೆ ನಿದ್ದೆ ಮಾಡುವುದು ಒಳ್ಳೆಯದಲ್ಲ; ಮಲಗುವ ವಿಧಾನವನ್ನು ಹೀಗೆ ರೂಪಿಸಿಕೊಳ್ಳಿ