ಆಕಾಶದಲ್ಲೇ ತಪ್ಪಿದ ಮಹಾ ದುರಂತ: ಝೆಲೆನ್ಸ್ಕಿ ವಿಮಾನಕ್ಕೆ ಅಪ್ಪಳಿಸಬೇಕಿದ್ದ ಡ್ರೋನ್ ಕೊನೆ ಕ್ಷಣದಲ್ಲಿ ಮಿಸ್
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ರಷ್ಯಾದ ಡ್ರೋನ್ ಅಪ್ಪಳಿಸುವುದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಮೊಲ್ಡೊವಾದಿಂದ ಓಸ್ಲೋಗೆ ತೆರಳುವಾಗ ಈ ಆತಂಕಕಾರಿ ಘಟನೆ ಸಂಭವಿಸಿದೆ ಎಂದು ನಾರ್ವೆ ಪ್ರಧಾನಿ ತಿಳಿಸಿದ್ದಾರೆ. ರಷ್ಯಾದ ಗೆರಾನ್ ಡ್ರೋನ್ ಮೊಲ್ಡೊವಾದಲ್ಲಿ ಪತನಗೊಂಡು ಸ್ಫೋಟಗೊಂಡಿರುವುದು ದೃಢಪಟ್ಟಿದೆ. ಘಟನೆಯ ನಂತರ ಮೊಲ್ಡೊವಾ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿ, ಹಲವು ವಿಮಾನಗಳು ವಿಳಂಬವಾದವು. ಝೆಲೆನ್ಸ್ಕಿ ಸುರಕ್ಷಿತವಾಗಿ ತಲುಪಿದ್ದಾರೆ.

ಓಸ್ಲೋ, ಸೆಪ್ಟೆಂಬರ್ 10: ರಷ್ಯಾ-ಉಕ್ರೇನ್ ನಡುವಿನ ಭೀಕರ ಯುದ್ಧದ ಮಧ್ಯೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರಯಾಣಿಸುತ್ತಿದ್ದ ವಿಮಾನಕ್ಕೆ ಡ್ರೋನ್ ಡಿಕ್ಕಿ ಹೊಡೆಯುವುದನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದೆ ಎಂದು ನಾರ್ವೆ ಪ್ರಧಾನಿ ಜೋನಾಸ್ ಗಹರ್ ಸ್ಟೋರ್ ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದಾರೆ. ಮೊಲ್ಡೊವಾದಿಂದ ನಾರ್ವೆಯ ಓಸ್ಲೋಗೆ ತೆರಳುತ್ತಿದ್ದ ವೇಳೆ ಈ ಆತಂಕಕಾರಿ ಘಟನೆ ಸಂಭವಿಸಿದ್ದು, ರಷ್ಯಾದ ‘ಗೆರಾನ್’ ಮಾದರಿಯ ಡ್ರೋನ್ ಪತನಗೊಂಡು ಸ್ಫೋಟಗೊಂಡಿರುವುದು ಮೊಲ್ಡೊವಾದಲ್ಲಿ ದೃಢಪಟ್ಟಿದೆ.
ನಾರ್ವೆ ಪ್ರಧಾನಿ ಹೇಳಿಕೆ: ನಾರ್ವೆಯ ದಿವಂಗತ ಕಿಂಗ್ ಹೆರಾಲ್ಡ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಝೆಲೆನ್ಸ್ಕಿ ಮೊಲ್ಡೊವಾದಿಂದ ಓಸ್ಲೋಗೆ ತೆರಳುತ್ತಿದ್ದರು. ಸಾರ್ವಜನಿಕ ವಾಹಿನಿ ಎನ್ಆರ್ಕೆ ಜೊತೆ ಮಾತನಾಡಿದ ನಾರ್ವೆ ಪ್ರಧಾನಿ ಜೋನಾಸ್ ಗಹರ್ ಸ್ಟೋರ್, “ಮೊಲ್ಡೊವಾದಿಂದ ಟೇಕಾಫ್ ಆಗುವ ವೇಳೆ ಅವರ ವಿಮಾನಕ್ಕೆ ಡ್ರೋನ್ ಡಿಕ್ಕಿ ಹೊಡೆಯುವ ದೊಡ್ಡ ಅಪಾಯವಿತ್ತು. ಯುದ್ಧದ ನಡುವೆ ಝೆಲೆನ್ಸ್ಕಿ ಎದುರಿಸುತ್ತಿರುವ ನಿತ್ಯದ ಭೀಕರ ವಾಸ್ತವವಿದು” ಎಂದಿದ್ದಾರೆ.
ವಾಯುಪ್ರದೇಶ ಬಂದ್ ಹಾಗೂ ವಿಮಾನ ವಿಳಂಬ: ಮಂಗಳವಾರ ಮಧ್ಯಾಹ್ನ ಸುಮಾರು 4.30 ರ ವೇಳೆಗೆ ರಷ್ಯಾದ ಡ್ರೋನ್ ದೇಶದ ವಾಯುಪ್ರದೇಶ ಪ್ರವೇಶಿಸಿದ ತಕ್ಷಣ ಮೊಲ್ಡೊವಾ ಸರ್ಕಾರ ತುರ್ತಾಗಿ ವಾಯುಪ್ರದೇಶವನ್ನು ಮುಚ್ಚಿತು. ಇದರಿಂದಾಗಿ ಝೆಲೆನ್ಸ್ಕಿಯವರ ವಿಶೇಷ ವಿಮಾನ ಸೇರಿದಂತೆ 3 ನಿರ್ಗಮನ ಹಾಗೂ 4 ಆಗಮನ ವಿಮಾನಗಳ ಹಾರಾಟ ವಿಳಂಬವಾಯಿತು.
ಮತ್ತಷ್ಟು ಓದಿ: ಉಕ್ರೇನ್ ನೆಲದಲ್ಲೇ ನಿಂತು ಪಾಶ್ಚಿಮಾತ್ಯರಿಗೆ ಜೈಶಂಕರ್ ಪಾಠ: ರಷ್ಯಾ ತೈಲ ಖರೀದಿ ನಿಲ್ಲಿಸಿದರೆ ಯುದ್ಧ ಮುಗಿಯುವುದಿಲ್ಲ
ಚಿಸಿನೌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು 160 ಕಿಲೋಮೀಟರ್ ದೂರದಲ್ಲಿ ಡ್ರೋನ್ ನೆಲಕ್ಕೆ ಅಪ್ಪಳಿಸಿ ಭಾರೀ ಪ್ರಮಾಣದಲ್ಲಿ ಸ್ಫೋಟಗೊಂಡಿದೆ ಎಂದು ಮೊಲ್ಡೊವಾ ಪೊಲೀಸರು ತಿಳಿಸಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದ ಸ್ಫೋಟಕ ತಜ್ಞರಿಗೆ ರಷ್ಯಾ ವ್ಯಾಪಕವಾಗಿ ಬಳಸುವ ಇರಾನ್ ಮೂಲದ ‘ಗೆರಾನ್’ ಕಾಮಿಕೇಜ್ ಮಾದರಿಯ ಡ್ರೋನ್ ತುಣುಕುಗಳು ಪತ್ತೆಯಾಗಿದ್ದು, ನೆಲದಲ್ಲಿ ದೊಡ್ಡ ಕುಳಿ ಬಿದ್ದಿದೆ.
ಪೋಸ್ಟ್
Вчора Росіяни показали клас. Вчора вони могли збити літак із Зеленським.#Зеленський вилітав із Кишинева до Осло.
Росіяни пустили дрон, який прилетів в аеропорт Кишинева точно в момент зльоту урядового Українського літака.
Дрон не вдарив по літаку Зеленського, росіяни лише… pic.twitter.com/e6S0Rwe2Is
— Wenden (@WendenGall) September 9, 2026
ಉಕ್ರೇನ್ ಕಡೆಯಿಂದ ‘ಉತ್ಪ್ರೇಕ್ಷೆ’ ಹೇಳಿಕೆ: ಝೆಲೆನ್ಸ್ಕಿ ಅವರ ವಿಮಾನಕ್ಕೆ ನೇರವಾಗಿ ಡಿಕ್ಕಿ ಹೊಡೆಯುವ ಹಂತಕ್ಕೆ ಡ್ರೋನ್ ಬಂದಿತ್ತು ಎಂಬ ನಾರ್ವೆ ಪ್ರಧಾನಿ ಹೇಳಿಕೆಯನ್ನು ಉಕ್ರೇನ್ ಅಧ್ಯಕ್ಷೀಯ ಮೂಲಗಳು ಸ್ವಲ್ಪ ‘ಉತ್ಪ್ರೇಕ್ಷಿತ’ ಎಂದು ಬಣ್ಣಿಸಿವೆ. ರಷ್ಯಾದ ಡ್ರೋನ್‌ಗಳು ಮೊಲ್ಡೊವಾ ಹಾಗೂ ರೊಮೇನಿಯಾ ವಾಯುಪ್ರದೇಶಕ್ಕೆ ನುಗ್ಗಿದ್ದರಿಂದ ಭದ್ರತಾ ಕಾರಣಕ್ಕೆ ವಿಮಾನ ವಿಳಂಬವಾಗಿತ್ತೇ ಹೊರತು, ನೇರ ಗುರಿಯಾಗಿಸಿರಲಿಲ್ಲ ಎಂದು ಅವು ಸ್ಪಷ್ಟಪಡಿಸಿವೆ.
ನೆರೆ ರಾಷ್ಟ್ರಗಳಲ್ಲಿ ನಿರಂತರ ಭೀತಿ: 2022ರಲ್ಲಿ ರಷ್ಯಾ-ಉಕ್ರೇನ್ ಯುದ್ಧ ಆರಂಭವಾದ ಬಳಿಕ, ಉಕ್ರೇನ್ ಗಡಿಗೆ ಹೊಂದಿಕೊಂಡಿರುವ ಮೊಲ್ಡೊವಾ ಮತ್ತು ರೊಮೇನಿಯಾ (ನ್ಯಾಟೋ ಸದಸ್ಯ ರಾಷ್ಟ್ರ) ಗಡಿಗಳಲ್ಲಿ ರಷ್ಯಾದ ಹತ್ತಾರು ಡ್ರೋನ್‌ಗಳು ಮತ್ತು ಕ್ಷಿಪಣಿ ಅವಶೇಷಗಳು ಪತನಗೊಂಡು ಭದ್ರತಾ ಆತಂಕ ಸೃಷ್ಟಿಸುತ್ತಲೇ ಇವೆ.
ಸುರಕ್ಷಿತವಾಗಿ ತಲುಪಿದ ಝೆಲೆನ್ಸ್ಕಿ: ಎಲ್ಲಾ ಆತಂಕಗಳ ನಡುವೆಯೂ ವಾಯುಪ್ರದೇಶದ ನಿರ್ಬಂಧ ತೆರವಾದ ಬಳಿಕ ಝೆಲೆನ್ಸ್ಕಿ ಅವರ ವಿಮಾನ ನಾರ್ವೆ ರಾಜಧಾನಿ ಓಸ್ಲೋಗೆ ಸುರಕ್ಷಿತವಾಗಿ ತಲುಪಿದ್ದು, ಅವರು ರಾಜಮನೆತನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
Published On - 9:17 am, Thu, 10 September 26




