
ಸಿಗರೇಟ್ (Smoking) ಸೇದುವುದು ಆರೋಗ್ಯಕ್ಕೆ ಹಾನಿಕಾರಕ ಎಂದು ಗೊತ್ತಿದ್ದರೂ, ಅದನ್ನು ಬಿಡುವುದು ಅನೇಕರಿಗೆ ಸುಲಭವಾಗುವುದಿಲ್ಲ. ಹಲವರು ಸಿಗರೇಟ್ ಬಿಡಬೇಕೆಂದಯ ಅನೇಕ ಬಾರಿ ಪ್ರಯತ್ನಿಸಿದರೂ ಮತ್ತೆ ಅದನ್ನೇ ಸೇದಲು ಆರಂಭಿಸುತ್ತಾರೆ. ಆದರೆ ಇದಕ್ಕಾಗಿ ನಿರಾಶರಾಗುವ ಅಗತ್ಯವಿಲ್ಲ. ಸರಿಯಾದ ವಿಧಾನ, ದೃಢ ನಿರ್ಧಾರ ಮತ್ತು ಸ್ವಲ್ಪ ತಯಾರಿ ಇದ್ದರೆ ಈ ಅಭ್ಯಾಸದಿಂದ ನಿಧಾನವಾಗಿ ಹೊರಬರಬಹುದು ಎಂದು ತಜ್ಞರ ಸಲಹೆಯನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.
ಸಿಗರೇಟ್ ತ್ಯಜಿಸಲು ನಿರ್ಧರಿಸಿದರೆ, ಮೊದಲು ಒಂದು ದಿನಾಂಕವನ್ನು ನಿಗದಿಪಡಿಸಿಕೊಳ್ಳಿ. ಆ ದಿನದ ನಂತರ ಸಿಗರೇಟ್ ಸೇದುವುದಿಲ್ಲ ಎಂದು ದೃಢವಾಗಿ ನಿರ್ಧರಿಸಿ. ನಿಮ್ಮ ಕುಟುಂಬದವರು ಮತ್ತು ಆಪ್ತ ಸ್ನೇಹಿತರಿಗೆ ಈ ನಿರ್ಧಾರದ ಬಗ್ಗೆ ತಿಳಿಸಿ. ಅವರು ನಿಮ್ಮನ್ನು ಪ್ರೋತ್ಸಾಹಿಸುವುದರಿಂದ ಸಿಗರೇಟ್ ಬಿಡುವ ಪ್ರಯತ್ನದಲ್ಲಿ ಬೆಂಬಲ ಸಿಗಬಹುದು.
ಇದರ ಜೊತೆಗೆ ನಿಮಗೆ ಯಾವ ಸಂದರ್ಭಗಳಲ್ಲಿ ಸಿಗರೇಟ್ ಸೇದುವ ಬಯಕೆ ಹೆಚ್ಚಾಗುತ್ತದೆ ಎಂಬುದನ್ನೂ ಗಮನಿಸಿ. ಕೆಲವರಿಗೆ ಚಹಾ ಅಥವಾ ಕಾಫಿ ಕುಡಿಯುವಾಗ, ಒತ್ತಡದಲ್ಲಿದ್ದಾಗ ಅಥವಾ ಸ್ನೇಹಿತರೊಂದಿಗೆ ಕುಳಿತಾಗ ಸಿಗರೇಟ್ ಸೇದುವ ಬಯಕೆ ಹೆಚ್ಚಾಗಬಹುದು. ಇಂತಹ ಸಂದರ್ಭಗಳನ್ನು ಮೊದಲೇ ಗುರುತಿಸಿಕೊಂಡರೆ ಅದನ್ನು ನಿಯಂತ್ರಿಸಲು ಸುಲಭವಾಗುತ್ತದೆ.
ಸಿಗರೇಟ್ ಸೇದಬೇಕು ಎಂಬ ಬಯಕೆ ಬಂದ ತಕ್ಷಣ ಸಿಗರೇಟ್ ತೆಗೆದುಕೊಳ್ಳುವ ಬದಲು 4D ವಿಧಾನವನ್ನು ಪ್ರಯತ್ನಿಸಬಹುದು. ಈ ವಿಧಾನದಲ್ಲಿ ನಾಲ್ಕು ಸರಳ ಹಂತಗಳಿವೆ.
ಮೊದಲನೆಯದು ‘ವಿಳಂಬಿಸಿ’ (Delay). ಸಿಗರೇಟ್ ಸೇದಬೇಕು ಎನಿಸಿದ ತಕ್ಷಣ ಸೇದದೆ ಕೆಲವು ನಿಮಿಷ ಕಾಯಿರಿ. ಬಯಕೆ ಸ್ವಲ್ಪ ಸಮಯದ ಬಳಿಕ ಕಡಿಮೆಯಾಗಬಹುದು.
ಮನೆಯಲ್ಲಿ ಒಬ್ಬರೇ ಇರುವಾಗ ಹೃದಯಾಘಾತವಾದರೆ ಏನು ಮಾಡಬೇಕು?
ಎರಡನೆಯದು ‘ಆಳವಾಗಿ ಉಸಿರಾಡಿ’ (Deep Breathing). ನಿಧಾನವಾಗಿ ಆಳವಾದ ಉಸಿರನ್ನು ತೆಗೆದುಕೊಂಡು ಬಿಡಿ. ಇದರಿಂದ ಮನಸ್ಸನ್ನು ಶಾಂತಗೊಳಿಸಲು ಮತ್ತು ಸಿಗರೇಟ್ ಸೇದುವ ಬಯಕೆಯನ್ನು ಬೇರೆಡೆಗೆ ತಿರುಗಿಸಲು ಸಹಾಯವಾಗಬಹುದು.
ಮೂರನೆಯದು ‘ನೀರು ಕುಡಿಯಿರಿ’ (Drink Water). ಸಿಗರೇಟ್ ಸೇದಬೇಕು ಎನಿಸಿದಾಗ ನೀರು ಕುಡಿಯಿರಿ. ಇದು ಬಾಯಿಗೆ ಬೇರೆ ಚಟುವಟಿಕೆ ನೀಡುವುದರ ಜೊತೆಗೆ ಬಯಕೆಯನ್ನು ನಿಯಂತ್ರಿಸಲು ಸಹಾಯ ಮಾಡಬಹುದು.
ನಾಲ್ಕನೆಯದು ‘ಬೇರೆ ಏನಾದರೂ ಮಾಡಿ’ (Do Something Else). ಸ್ವಲ್ಪ ನಡೆಯಿರಿ, ಸ್ನೇಹಿತರಿಗೆ ಕರೆ ಮಾಡಿ ಮಾತನಾಡಿ, ಸಂಗೀತ ಕೇಳಿ ಅಥವಾ ಬೇರೆ ಯಾವುದಾದರೂ ಕೆಲಸದಲ್ಲಿ ನಿಮ್ಮ ಗಮನವನ್ನು ತೊಡಗಿಸಿಕೊಳ್ಳಿ. ಹೀಗೆ ಗಮನವನ್ನು ಬೇರೆಡೆಗೆ ತಿರುಗಿಸುವುದರಿಂದ ಸಿಗರೇಟ್ ಸೇದುವ ಬಯಕೆಯನ್ನು ಎದುರಿಸಲು ಸಹಾಯವಾಗಬಹುದು.
ಪ್ರತಿದಿನ ಸ್ವಲ್ಪ ವ್ಯಾಯಾಮ, ಯೋಗ ಅಥವಾ ವೇಗವಾಗಿ ನಡೆಯುವುದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಬಿಡುವಿನ ಸಮಯದಲ್ಲಿ ಪುಸ್ತಕ ಓದುವುದು, ಸಂಗೀತ ಕೇಳುವುದು ಅಥವಾ ಹೊಸ ಹವ್ಯಾಸವನ್ನು ರೂಢಿಸಿಕೊಳ್ಳುವುದರಿಂದಲೂ ಸಿಗರೇಟ್ ಬಗ್ಗೆ ಯೋಚಿಸುವ ಸಮಯ ಕಡಿಮೆಯಾಗಬಹುದು.
ನಿಮ್ಮ ದಿನಚರಿಯಲ್ಲಿ ಆರೋಗ್ಯಕರ ಚಟುವಟಿಕೆಗಳನ್ನು ಹೆಚ್ಚಿಸಿಕೊಳ್ಳುವುದು ಸಿಗರೇಟ್ ತ್ಯಜಿಸುವ ಪ್ರಯತ್ನಕ್ಕೆ ಸಹಾಯಕವಾಗಬಹುದು. ಮುಖ್ಯವಾಗಿ, ಸಿಗರೇಟ್ ಸೇದುವ ಅಭ್ಯಾಸವಿದ್ದ ಸಮಯದಲ್ಲಿ ಬೇರೆ ಕೆಲಸವನ್ನು ಮಾಡುವಂತಹ ಹೊಸ ದಿನಚರಿಯನ್ನು ರೂಪಿಸಿಕೊಳ್ಳುವುದು ಉಪಯುಕ್ತ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ