Chanakya Niti: ಜೀವನದಲ್ಲಿ ಆರ್ಥಿಕ ಸಂಕಷ್ಟ ಎದುರಾಗಬಾರದೆಂದರೆ ಈ ಅಭ್ಯಾಸಗಳನ್ನು ಬೆಳೆಸಿಕೊಳ್ಳಿ
ಕೇವಲ ಹಣ ಸಂಪಾದಿಸಿದರೆ ಸಾಕಾಗುವುದಿಲ್ಲ, ಅದನ್ನು ಸರಿಯಾಗಿ ನಿರ್ವಹಿಸುವುದು ಸಹ ಮುಖ್ಯವಾಗಿದೆ. ಉಳಿತಾಯ, ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವುದು ಮತ್ತು ಸಮಯವನ್ನು ನಿರ್ವಹಿಸುವಂತಹ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದರಿಂದ ಆರ್ಥಿಕ ಸಂಕಷ್ಟವನ್ನೂ ತಪ್ಪಿಸಬಹುದು, ಬಡತನದ ಬೇಗೆಯಿಂದಾ ಪಾರಾಗಬಹುದು ಎಂದು ಆಚಾರ್ಯ ಚಾಣಕ್ಯರು ಸಲಹೆ ನೀಡಿದ್ದಾರೆ. ಚಾಣಕ್ಯರು ಹೇಳಿರುವಂತೆ ಆರ್ಥಿಕ ಸಂಕಷ್ಟದಿಂದ ಪಾರಾಗಲು ಯಾವೆಲ್ಲಾ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ನೋಡೋಣ ಬನ್ನಿ.

ಆಚಾರ್ಯ ಚಾಣಕ್ಯರು (Acharya Chanakya) ನಮ್ಮ ಜೀವನ ಸರಿಯಾದ ದಿಕ್ಕಿನಲ್ಲಿ ಸಾಗಲು ಹಲವು ಮಾರ್ಗದರ್ಶನಗಳನ್ನು ನೀಡಿದ್ದಾರೆ. ಅವರು ಕೇವಲ ಯಶಸ್ಸಿಗೆ ಮಾತ್ರವಲ್ಲದೆ ಆರ್ಥಿಕ ಬಲಕ್ಕೆ, ಶ್ರೀಮಂತಿಕೆ ಗಳಿಸಲು, ಬಡತನದಿಂದ ಪಾರಾಗಲು ಸಾಕಷ್ಟು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಅದರಲ್ಲೂ ಇಂದಿನ ದುಬಾರಿ ದುನಿಯಾದಲ್ಲಿ ನಮಗೆ ಆರ್ಥಿಕ ಸಂಕಷ್ಟಗಳು ಎದುರಾಗುತ್ತಲೇ ಇರುತ್ತವೆ. ಈ ಆರ್ಥಿಕ ಸಂಕಷ್ಟಗಳಿಂದ ಪಾರಾಗುವುದು ಹೇಗೆ, ಆರ್ಥಿಕ ಸಂಕಷ್ಟಗಳು ಬಾರದಂತೆ ನೋಡಿಕೊಳ್ಳಲು ಯಾವ ಅಭ್ಯಾಸಗಳನ್ನು ಬೆಸೆಸಿಕೊಳ್ಳಬೇಕು ಎಂಬುದನ್ನು ಸಹ ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ವಿವರಿಸಿದ್ದಾರೆ. ನಿಮಗೂ ಕೂಡ ಪದೇ ಪದೇ ಆರ್ಥಿಕ ಸಂಕಷ್ಟ ಎದುರಾಗುತ್ತಿದೆಯೇ? ಈ ಒಂದು ಸಮಸ್ಯೆಯಿಂದ ಮುಕ್ತಿ ಪಡೆಯಲು ಯಾವ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿದುಕೊಳ್ಳಿ.
ಆರ್ಥಿಕ ಸಂಕಷ್ಟದಿಂದ ಪಾರಾಗಲು ನೀವು ಬೆಳೆಸಿಕೊಳ್ಳಬೇಕಾದ ಅಭ್ಯಾಸಗಳು:
ಉಳಿತಾಯದ ಅಭ್ಯಾಸ ಬೆಳೆಸಿಕೊಳ್ಳಿ: ಪ್ರತಿಯೊಬ್ಬರೂ ತಮ್ಮ ಆದಾಯದ ಒಂದು ಭಾಗವನ್ನು ಉಳಿಸಬೇಕು. ಉಳಿತಾಯವು ಭವಿಷ್ಯದ ತೊಂದರೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ ಮತ್ತು ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಅಲ್ಲದೆ ಉಳಿತಾಯ ಮಾಡುವುದರಿಂದ ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಸಂಕಷ್ಟದಿಂದಲೂ ಪಾರಾಗಬಹುದು.
ಹಣವನ್ನು ಗೌರವಿಸುವ ಅಭ್ಯಾಸ ಬೆಳೆಸಿಕೊಳ್ಳಿ: ಚಾಣಕ್ಯರ ಪ್ರಕಾರ, ಸಂಪತ್ತನ್ನು ಯಾರು ಗೌರವಿಸುತ್ತಾರೆಯೋ ಅವರ ಬಳಿ ಸದಾ ಸಂಪತ್ತು ನೆಲೆಸುತ್ತದೆ. ಯಾವ ಕಾರಣಕ್ಕೂ ದುಂದು ವೆಚ್ಚ ಮಾಡಬಾರದು. ಹಣವನ್ನು ಗೌರವದಿಂದ ಬಳಸಬೇಕು. ದುಂದುಗಾರಿಕೆ, ಆಡಂಬರ ಮತ್ತು ಅಜಾಗರೂಕತೆಯನ್ನು ತಪ್ಪಿಸಿ, ವಿವೇಕಯುತವಾಗಿ ಖರ್ಚು ಮಾಡಿದರೆ ಮಾತ್ರ ನೀವು ಆರ್ಥಿಕವಾಗಿ ಸದೃಢವಾಗಲು ಸಾಧ್ಯ.
ನಿಮ್ಮ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳಿ: ಕೇವಲ ಒಂದು ಆದಾಯವನ್ನು ಅವಲಂಬಿಸಬೇಡಿ. ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳಿ. ಹೊಸ ಕೌಶಲ್ಯಗಳನ್ನು ಕಲಿಯುವ ಮೂಲಕ ಅಥವಾ ಹೆಚ್ಚುವರಿ ಕೆಲಸವನ್ನು ತೆಗೆದುಕೊಳ್ಳುವ ಮೂಲಕ ಹೆಚ್ಚುವರಿ ಆದಾಯದ ಮೂಲಗಳನ್ನು ಅಭಿವೃದ್ಧಿಪಡಿಸುವುದರಿಂದ ನೀವು ಆರ್ಥಿಕವಾಗಿ ಸಬಲರಾಗಬಹುದು ಎನ್ನುತ್ತಾರೆ ಚಾಣಕ್ಯ.
ಸಕಾರಾತ್ಮಕ ಚಿಂತನೆಯನ್ನು ಬೆಳೆಸಿಕೊಳ್ಳಿ: ಆರ್ಥಿಕ ಸಮಸ್ಯೆಗಳನ್ನು ತಪ್ಪಿಸಲು ಸಕಾರಾತ್ಮಕ ಚಿಂತನೆಯು ನಿರ್ಣಾಯಕವಾಗಿದೆ ಎನ್ನುತ್ತಾರೆ ಚಾಣಕ್ಯ. ನಕಾರಾತ್ಮಕ ಆಲೋಚನೆಗಳು ವ್ಯಕ್ತಿಯ ಪ್ರಗತಿಗೆ ಅಡ್ಡಿಯಾಗುತ್ತವೆ, ಅದೇ ಸಕಾರಾತ್ಮಕ ಮನೋಭಾವವು ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ಸವಾಲುಗಳನ್ನು ಅವಕಾಶಗಳಾಗಿ ನೋಡಿ.
ಸಮಯದ ಸರಿಯಾದ ಬಳಕೆ: ಚಾಣಕ್ಯನ ಪ್ರಕಾರ ಸಮಯ ಮತ್ತು ಹಣ ಎರಡೂ ಅಮೂಲ್ಯ. ನಿಷ್ಪ್ರಯೋಜಕ ವಿಷಯಗಳಿಗೆ ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಬೇಕು. ಸಮಯವನ್ನು ಗೌರವಿಸುವವರು ಮಾತ್ರ ಜೀವನದಲ್ಲಿ ಪ್ರಗತಿ ಹೊಂದುತ್ತಾರೆ. ಅಲ್ಲದೆ ಸಮಯವನ್ನು ಬುದ್ಧಿವಂತಿಕೆಯಿಂದ ಬಳಸಿದರೆ ಮಾತ್ರ ಯಶಸ್ಸು ನಿಮ್ಮದಾಗುತ್ತದೆ.
ಇದನ್ನೂ ಓದಿ: ಈ ಕೆಲಸಗಳ ಮಾಡೋ ಮುನ್ನ ನೂರು ಬಾರಿ ಯೋಚಿಸಿ, ಇಲ್ಲಾಂದ್ರೆ ಪಶ್ಚಾತಾಪ ಪಡಬೇಕಾಗುತ್ತದೆ
ಕೆಟ್ಟ ಸಹವಾಸದಿಂದ ದೂರವಿರಿ: ಕೆಟ್ಟ ಸಹವಾಸವು ವ್ಯಕ್ತಿಗೆ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಾನಿಯನ್ನುಂಟುಮಾಡಬಹುದು. ಆದ್ದರಿಂದ, ಯಾವಾಗಲೂ ಕಠಿಣ ಪರಿಶ್ರಮಿ, ಸಕಾರಾತ್ಮಕ ಮತ್ತು ಗುರಿ-ಆಧಾರಿತ ಜನರಿಂದ ನಿಮ್ಮನ್ನು ಸುತ್ತುವರೆದಿರಿ ಎನ್ನುತ್ತಾರೆ ಚಾಣಕ್ಯ.
ಸಣ್ಣ ಖರ್ಚುಗಳ ಬಗ್ಗೆ ನಿಗಾ ಇರಿಸಿ: ಸಣ್ಣ ಖರ್ಚುಗಳು ಕ್ರಮೇಣ ಗಣನೀಯ ಖರ್ಚುಗಳಾಗಿ ಬದಲಾಗಬಹುದು. ಪ್ರತಿಯೊಂದು ಖರ್ಚಿನ ಬಗ್ಗೆ ನಿಗಾ ಇಡುವುದು ಮತ್ತು ಅನಗತ್ಯ ಖರ್ಚುಗಳನ್ನು ತಪ್ಪಿಸುವುದು ಆರ್ಥಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ.
ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ: ಹೂಡಿಕೆ ಮಾಡುವ ಮೊದಲು ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುವುದು ಮುಖ್ಯ. ಆತುರದ ನಿರ್ಧಾರಗಳು ನಷ್ಟಕ್ಕೆ, ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಬಹುದು, ಆದ್ದರಿಂದ ಸುರಕ್ಷಿತವಾಗಿ ಮತ್ತು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




