ಕೊರೊನಾ ಸೋಂಕಿನಿಂದ ಗುಣಮುಖರಾದ ಮೇಲೆ ನಿಮ್ಮ ಟೂತ್​ಬ್ರಷ್​, ಟಂಗ್​ ಕ್ಲೀನರ್​ ಬದಲಿಸಲು ಮರೀಲೇಬೇಡಿ; ಇಲ್ದಿದ್ರೆ ಅಪಾಯ ತಪ್ಪಿದ್ದಲ್ಲ

ಕೊರೊನಾ ಒಂದು ಸಲ ಬಂದು ಹೋಯಿತು ಎಂದಿಲ್ಲ. ಮತ್ತೊಮ್ಮೆ ಸೋಂಕು ತಗುಲುವ ಸಾಧ್ಯತೆ ಈ ಎರಡನೇ ಅಲೆಯಲ್ಲಿ ತುಸು ಜಾಸ್ತಿಯೇ ಇದೆ. ಹಾಗಾಗಿ ನೀವು ಸೋಂಕಿತರಾಗಿ ಬಳಸಿದ್ದ ಬಟ್ಟೆ, ಬೆಡ್​ಶೀಟ್​ಗಳನ್ನೆಲ್ಲ ಗುಣಮುಖರಾದ ಕೂಡಲೇ ಹಾಗೇ ಬಳಸಬಾರದು

ಕೊರೊನಾ ಸೋಂಕಿನಿಂದ ಗುಣಮುಖರಾದ ಮೇಲೆ ನಿಮ್ಮ ಟೂತ್​ಬ್ರಷ್​, ಟಂಗ್​ ಕ್ಲೀನರ್​ ಬದಲಿಸಲು ಮರೀಲೇಬೇಡಿ; ಇಲ್ದಿದ್ರೆ ಅಪಾಯ ತಪ್ಪಿದ್ದಲ್ಲ
ಪ್ರಾತಿನಿಧಿಕ ಚಿತ್ರ

ಕೊರೊನಾ ವೈರಸ್​ ಸಾಂಕ್ರಾಮಿಕದ ಎರಡನೇ ಅಲೆ ತುಂಬ ಮಾರಣಾಂತಿಕವಾಗಿ ಪರಿಣಮಿಸಿದೆ. ಹಾಗಾಗಿ ಪ್ರತಿಯೊಬ್ಬರೂ ಎಷ್ಟು ಸಾಧ್ಯವೋ ಅಷ್ಟು ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಿ ಎಂದು ಜಗತ್ತಿನಾದ್ಯಂತ ಆರೋಗ್ಯ ತಜ್ಞರು ಸಲಹೆ ನೀಡುತ್ತಿದ್ದಾರೆ. ಹಾಗೇ, ಕೊರೊನಾ ಬಾರದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಏನೇನೆಲ್ಲ ಮಾಡಬಹುದು ಎಂಬುದನ್ನೂ ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ(WHO)ಯೂ ಕೂಡ ಒಂದಷ್ಟು ನಿಯಮಗಳನ್ನು ತಿಳಿಸಿದ್ದು, ಅದನ್ನು ಚಾಚೂತಪ್ಪದೆ ಪಾಲಿಸುವಂತೆ ಹೇಳಿದೆ. ಈಗಂತೂ ಕೊರೊನಾ ಬಂದ ಮೇಲೆ ಚಿಕಿತ್ಸೆ ಪಡೆಯಲು ಕಷ್ಟಪಡುವುದಕ್ಕಿಂತ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸುವುದೇ ಉತ್ತಮ ಎಂಬುದು ಜನಸಾಮಾನ್ಯರಿಗೂ ಅರ್ಥವಾಗುತ್ತಿದೆ.

ಕೊರೊನಾ ಒಂದು ಸಲ ಬಂದು ಹೋಯಿತು ಎಂದಿಲ್ಲ. ಮತ್ತೊಮ್ಮೆ ಸೋಂಕು ತಗುಲುವ ಸಾಧ್ಯತೆ ಈ ಎರಡನೇ ಅಲೆಯಲ್ಲಿ ತುಸು ಜಾಸ್ತಿಯೇ ಇದೆ. ಹಾಗಾಗಿ ನೀವು ಸೋಂಕಿತರಾಗಿ ಬಳಸಿದ್ದ ಬಟ್ಟೆ, ಬೆಡ್​ಶೀಟ್​ಗಳನ್ನೆಲ್ಲ ಗುಣಮುಖರಾದ ಕೂಡಲೇ ಹಾಗೇ ಬಳಸಬಾರದು. ಬಿಸಿನೀರಿನಲ್ಲಿ ಸ್ವಚ್ಛವಾಗಿ ತೊಳೆದು ಬಳಸಬೇಕು. ಈ ವಿಚಾರವೆಲ್ಲ ಗೊತ್ತಿದ್ದಿದ್ದೇ ಆದರೂ ಇನ್ನೊಂದು ಮುಖ್ಯ ವಿಚಾರ ಇದೆ. ಅದು ನಿಮ್ಮ ಟೂತ್​ ಬ್ರಷ್ ಮತ್ತು ಟಂಗ್​ ಕ್ಲೀನರ್​ (ನಾಲಿಗೆ ಸ್ವಚ್ಛ ಮಾಡುವ ಸಾಧನ)​. ಕೊರೊನಾ ಸೋಂಕಿಗೆ ಒಳಗಾಗಿದ್ದಾಗ ಬಳಸಿದ ಹಲ್ಲುಜ್ಜುವ ಬ್ರಷ್​​ನ್ನು ಗುಣಮುಖರಾದ ಮೇಲೆ ಬಳಸಬೇಡಿ. ಕೂಡಲೇ ಬದಲಿಸಿ ಎನ್ನುತ್ತಾರೆ ಆರೋಗ್ಯ ತಜ್ಞರು.

ಕೊವಿಡ್ 19 ಸೋಂಕು ದೇಹದೊಳಗೆ ಪ್ರವೇಶಿಸುವುದು ಬಾಯಿ, ಮೂಗಿನ ಮೂಲಕ. ಹಾಗಾಗಿ ಬಾಯಿಯ ಸ್ವಚ್ಛತೆಯ ಬಗ್ಗೆಯೂ ಗಮನಕೊಡಬೇಕು. ಹಲ್ಲುಜ್ಜುವ ಬ್ರಷ್​​ನ್ನು ಪ್ರತಿ ಮೂರು ತಿಂಗಳೊಳಗೆ ಒಮ್ಮೆ ಬದಲಿಸಬೇಕು. ಅದರಲ್ಲೂ ಕೊರೊನಾ ಸೋಂಕಿಗೆ ಒಳಗಾಗಿ, ಚೇತರಿಸಿಕೊಂಡಮೇಲೆ ಯಾವಕಾರಣಕ್ಕೂ ಅದೇ ಬ್ರಷ್​​ನಲ್ಲಿ ಹಲ್ಲುಜ್ಜಬಾರದು. ಟಂಗ್​ ಕ್ಲೀನರ್​ ಕೂಡ ಅಷ್ಟೇ ಸೋಂಕಿಗೆ ಒಳಗಾಗಿದ್ದ ಸಮಯದಲ್ಲಿ ಬಳಕೆ ಮಾಡಿದ್ದನ್ನು ಮತ್ತೆ ಗುಣಮುಖರಾದ ಮೇಲೆ ಮಾಡಬಾರದು ಎಂಬುದು ದಂತವೈದ್ಯರ ಸಲಹೆ.

ಮನೆಮಂದಿಗೆಲ್ಲ ಅಪಾಯ
ಒಂದು ಮನೆಯ ಸ್ನಾನಗೃಹದಲ್ಲಿ ಎಲ್ಲರ ಟೂತ್​ಬ್ರಷ್​ಗಳೂ ಒಟ್ಟಿಗೆ ಇರುವುದು ಸಾಮಾನ್ಯ. ಅವರಲ್ಲಿ ಒಬ್ಬ ಸೋಂಕಿಗೆ ಒಳಗಾಗಿ ಐಸೋಲೇಟ್ ಆಗುತ್ತಾನೆ ಎಂದುಕೊಂಡರೆ, ಆತನಿಗೆ ಅಗತ್ಯವಿರುವ ಸಾಮಗ್ರಿಗಳೂ ಪ್ರತ್ಯೇಕ ಆಗುತ್ತವೆ. ಆದರೆ ಗುಣಮುಖನಾಗಿ ಎಲ್ಲರೊಂದಿಗೆ ಬೆರೆಯಲು ಶುರುಮಾಡಿದ ಮೇಲೆ, ಅದೇ ಸ್ನಾನಗೃಹ ಬಳಸಲು ಶುರು ಮಾಡಿದ ಮೇಲೆ ಅದೇ ಟೂತ್ ಬ್ರಷ್​, ಟಂಗ್​ಕ್ಲೀನರ್​ ತಂದರು ಉಳಿದವರ ಬ್ರಷ್​ ಜತೆಗೇ ಇಡುವುದರಿಂದ ಮನೆಯ ಇತರ ಸದಸ್ಯರೂ ಸೋಂಕಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಅಷ್ಟೇ ಅಲ್ಲ, ಆ ವ್ಯಕ್ತಿಯೂ ಸಹ ಇನ್ನೊಮ್ಮೆ ಕೊರೊನಾ ಸೋಂಕಿಗೆ ತುತ್ತಾಗಬಹುದು ಎಂದು ಸ್ಪಷ್ಟವಾಗಿ ವಿವರಿಸುತ್ತಾರೆ ವೈದ್ಯರು. ಯಾಕೆಂದರೆ ಈ ಬಾಯಿ ಸ್ವಚ್ಛ ಮಾಡುವ ಸಾಧನಗಳಲ್ಲಿ ಬ್ಯಾಕ್ಟೀರಿಯಾ, ವೈರಸ್​ಗಳು ಬೆಳೆಯುವುದು ಜಾಸ್ತಿ. ಹಾಗಾಗಿ ಒಮ್ಮೆ ಹಲ್ಲುಜ್ಜಿ ಆದ ಮೇಲೆ ಅವುಗಳನ್ನೂ ಸಹ ಸ್ವಚ್ಛವಾಗಿ ತೊಳೆದೇ ಇಟ್ಟುಕೊಳ್ಳಬೇಕು. ಇನ್ನು ಬಾಯಿಯ ಸ್ವಚ್ಛತೆ ವಿಷಯಕ್ಕೆ ಬಂದರೆ, ಹೂಬಿಸಿ ನೀರಿನಿಂದ ಬಾಯಿ ಮುಕ್ಕಳಿಸುವುದು ಒಳ್ಳೆಯದು. ಮೌತ್ ವಾಶ್​ ಲಿಕ್ವಿಡ್​ಗಳಿದ್ದರೆ ಅದನ್ನೂ ಬಳಸಬಹುದು ಎನ್ನುತ್ತಾರೆ ದಂತವೈದ್ಯರು.

ಇನ್ನು ಕೊರೊನಾ ಅಲ್ಲದೆ ಸಾಮಾನ್ಯ ಜ್ವರ, ಶೀತ, ಕೆಮ್ಮು ಉಂಟಾಗಿ ಗುಣಮುಖರಾದ ಮೇಲೆ ಕೂಡ ಟೂತ್​ಬ್ರಷ್ ಬದಲಿಸುವುದು ತುಂಬ ಒಳ್ಳೆಯದು ಎಂದು ಡಬ್ಲ್ಯೂಎಚ್​ಒ ತಿಳಿಸಿದೆ.

ಇದನ್ನೂ ಓದಿ: Kichcha Sudeep: ಬಿಗ್​ ಬಾಸ್​ ಸ್ಪರ್ಧಿ ಸೋನು ಪಾಟೀಲ್​ ತಾಯಿಯ ಚಿಕಿತ್ಸೆಗೆ ಲಕ್ಷಾಂತರ ರೂ. ನೀಡಿದ ಕಿಚ್ಚ ಸುದೀಪ್​

Coronavirus: ಗಾಳಿಯ ಮೂಲಕ ಕೊವಿಡ್-19 ಹರಡುವುದು ಹೇಗೆ? ತಜ್ಞರು ಏನಂತಾರೆ?