Deepavali 2023: ಮನೆ ಮನ ಬೆಳಗಿಸುವ ಬೆಳಕಿನ ಹಬ್ಬ ದೀಪಾವಳಿ
ಹಿಂದೂಧರ್ಮಗಳಲ್ಲಿ ಬರುವ ದೀಪಾವಳಿ ಹಬ್ಬವು ದೇಶದಾದ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ದೀಪಾವಳಿ ಹಬ್ಬವನ್ನು "ಬೆಳಕಿನ ಹಬ್ಬ " ಎಂದು ಕರೆಯುತ್ತಾರೆ. ಕತ್ತಲೆಯಿಂದ ಬೆಳಕಿನ ವಿಜಯವನ್ನು ಸಾರಿಸುವ ಹಬ್ಬ ದುಷ್ಟ ಶಕ್ತಿಯನ್ನು ಸಂಹರಿಸುವುದು ಸೂಚಿಸುವುದಾಗಿದೆ. ಇನ್ನಷ್ಟು ವಿವರ ಇಲ್ಲಿದೆ.
ಭಾರತವು ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿರುವ ದೇಶವಾಗಿದ್ದು, ಅನೇಕ ರೀತಿಯ ಜಾತಿ, ಜನಾಂಗ, ಧರ್ಮದವರು ನೆಲೆಯಾಗಿದ್ದಾರೆ. ಎಲ್ಲಾ ಧರ್ಮದ ಹಬ್ಬಗಳನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಿಂದೂಧರ್ಮಗಳಲ್ಲಿ ಬರುವ ದೀಪಾವಳಿ ಹಬ್ಬವು ದೇಶದಾದ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ದೀಪಾವಳಿ ಹಬ್ಬವನ್ನು “ಬೆಳಕಿನ ಹಬ್ಬ ” ಎಂದು ಕರೆಯುತ್ತಾರೆ. ಕತ್ತಲೆಯಿಂದ ಬೆಳಕಿನ ವಿಜಯವನ್ನು ಸಾರಿಸುವ ಹಬ್ಬ ದುಷ್ಟ ಶಕ್ತಿಯನ್ನು ಸಂಹರಿಸುವುದು ಸೂಚಿಸುವುದಾಗಿದೆ. ದಂತಕಥೆಯ ಪ್ರಕಾರ ಕಾರ್ತಿಕ ಅಮಾವಾಸ್ಯೆಯಂದು ದೀಪಾವಳಿ ಹಬ್ಬ ಬರಲಿದ್ದು, ಈ ವರ್ಷ ನವಂಬರ್ 13 ರಂದು ಆಚರಿಸಲಾಗುತ್ತದೆ. ಪ್ರಾಚೀನ ಕಾಲದ ಸಂಸ್ಕೃತ ಗ್ರಂಥಗಳಾದ ಸ್ಕಂದ ಪುರಾಣ ಮತ್ತು ಪದ್ಮ ಪುರಾಣಗಳಲ್ಲಿ ದೀಪಾವಳಿ ಹಬ್ಬದ ಉಲ್ಲೇಖವಿದೆ ಎನ್ನಲಾಗಿದೆ.
ದೀಪಾವಳಿ ಹಬ್ಬವು ಪುರಾಣ ಕಥೆಯನ್ನಾಧಾರಿಸಿದೆ ಎನ್ನಲಾಗಿದೆ. ದೀಪಾವಳಿ ಹಬ್ಬದ ಮೂರನೇ ದಿನದಂದು ಬಲೀಂದ್ರ ಭೂಲೋಕಕ್ಕೆ ಆಗಮಿಸುತ್ತಾನೆ ಅನ್ನುವ ಮಾತಿದೆ. ಅದಕ್ಕೆ ಪೂರಕವಾದ ಕಥೆ ಇಲ್ಲಿದೆ.
ನರಸಿಂಹನ ಅವತಾರದಲ್ಲಿ ಶ್ರೀ ವಿಷ್ಣುವಿನಿಂದ ಸಂಹರನಾದ ಹಿರಣ್ಯ ಕಶ್ಯಪುವಿನ ಪುತ್ರ ಪ್ರಹ್ಲಾದ ಈತನ ಮೊಮ್ಮಗ ಬಲೀಂದ್ರ, ಅಸುರ ಕಾಲದಲ್ಲಿ ಹುಟ್ಟಿದ ಮಹಾಬಲಿ (ಬಲೀಂದ್ರ) ನು ವಿಷ್ಣುವಿನ ಭಕ್ತನಾಗಿರುತ್ತಾನೆ. ದೇವಾನುದೇವತೆಗಳನ್ನು ಸೋಲಿಸಿ ಮೂರು ಲೋಕಗಳನ್ನು ಆಳುತ್ತಾನೆ. ಈ ಸಂದರ್ಭದಲ್ಲಿ ವಿಷ್ಣು ಬಲೀಂದ್ರ ಚಕ್ರವರ್ತಿಯು ತನ್ನ ಪ್ರಜೆಗಳಿಗೆಲ್ಲರಿಗೂ ಒಳ್ಳೆಯದನ್ನು ಮಾಡುತ್ತಾನೆ. ಆತನು ರಾಜನಾಗಲು ಎಲ್ಲಾ ಅರ್ಹತೆಗಳನ್ನು ಪಡೆಯುತ್ತಾನೆ. ಮೂರು ಲೋಕಗಳನ್ನು ಜಯಿಸಿದ ಬಲೀಂದ್ರ ಮಹಾಯಾಗವನ್ನು ಮಾಡುತ್ತಾನೆ. ಯಾಗದಲ್ಲಿ ಕೇಳಿದ ವಸ್ತುಗಳೆಲ್ಲವನ್ನು ದಾನ ಮಾಡುತ್ತಾನೆ.ಈ ಸಂದರ್ಭದಲ್ಲಿ ಬಲೀಂದ್ರನ ಭಕ್ತಿಯನ್ನು ಪರೀಕ್ಷಿಸಲು ಪುಟ್ಟ ಬಾಲಕ ವಾಮನನ ಅವತಾರದಲ್ಲಿ ಬಲಿ ಚಕ್ರವರ್ತಿಯ ಯಾಗಕ್ಕೆ ವಿಷ್ಣು ದೇವರು ಬರುತ್ತಾರೆ. ಈ ಸಮಯದಲ್ಲಿ ಚಕ್ರವರ್ತಿಯು ವಾಮನನ ಬಳಿ ನೀನು ಕೇಳಿದೆಲ್ಲವನ್ನು ಕೊಡುತ್ತೇನೆ, ನಿನಗೇನು ಬೇಕು ಎಂದು ಕೇಳಿದಾಗ, ಬಾಲಕ ವಾಮನನು ನನಗೆ ಮೂರು ಹೆಜ್ಜೆ ಜಾಗವನ್ನು ನೀಡು ಎಂದು ಕೇಳುತ್ತಾನೆ.
ಬಲಿ ಚಕ್ರವರ್ತಿಯು ವಾಮನನ ಆಸೆಯಂತೆ ಮೂರು ಹೆಜ್ಜೆಗಳನ್ನಿಡಲು ಒಪ್ಪುತ್ತಾನೆ. ಆ ಸಮಯದಲ್ಲಿ ವಾಮನನ ಅವತಾರದಲ್ಲಿ ಮಹಾವಿಷ್ಣು ಎಂದು ತಿಳಿದ ಶುಕ್ರಚಾರ್ಯರು ದಾನವನ್ನು ಜಲಸಾಕ್ಷಿಯಾಗಿ ನೀಡುವುದರಿಂದ ಬಲೀಂದ್ರನ ಕಮಂಡಲದೊಳಗೆ ಕಪ್ಪೆಯ ರೂಪದಲ್ಲಿ ಸೇರಿ ನೀರು ಹೊರಬರದಂತೆ ಶುಕ್ರಚಾರ್ಯರು ತಡೆ ಗೋಡೆಯಾಗಿ ನಿಂತರು . ಆಗ ವಾಮನನು ಕಮಂಡಲದಿಂದ ನೀರು ಬರುವ ಕಡೆ ತಿರುಗಿದಾಗ, ಶುಕ್ರಚಾರ್ಯರ ಕಣ್ಣಿಗೆ ಚುಚ್ಚುತ್ತಾರೆ, ಆಗ ಶುಕ್ರಚಾರ್ಯರು ಒಂದು ಕಣ್ಣನ್ನು ಕಳೆದುಕೊಳ್ಳುತ್ತಾರೆ.
ವಾಮನನು ಸ್ವರ್ಗಲೋಕಗಳನ್ನು ಮೀರಿ ಎತ್ತರಕ್ಕೆ ಬೆಳೆಯುತ್ತಾರೆ. ಮೊದಲ ಹೆಜ್ಜೆಯಿಂದ ಭೂಮಿಯನ್ನು ಅಳೆದು ತೆಗೆದುಕೊಳ್ಳುತ್ತಾರೆ. ಎರಡನೇ ಹೆಜ್ಜೆಯಿಂದ ಸ್ವರ್ಗವನ್ನು ಅಳೆದು ಪಡೆಯುತ್ತಾರೆ. ಮೂರನೇ ಹೆಜ್ಜೆ ಎಲ್ಲಿ ಇಡುವುದೆಂದು ವಾಮನ ಕೇಳಿದಾಗ ಬಲೀಂದ್ರ ಚಕ್ರವರ್ತಿಯು ಉಳಿದೊಂದು ಹೆಜ್ಜೆಯನ್ನು ತನ್ನ ಶಿರದ ಮೇಲಿಡುವಂತೆ ವಾಮನನ್ನು ಬೇಡಿಕೊಳ್ಳುತ್ತಾನೆ. ಹಾಗಾಗಿ ಮೂರನೇ ಹೆಜ್ಜೆಯನ್ನು ಬಲಿಚಕ್ರವರ್ತಿಯ ಶಿರದ ಮೇಲಿಡುತ್ತಿದ್ದಂತೆ ಬಲೀಂದ್ರನನ್ನು ವಾಮನ ಪಾತಾಳಕ್ಕೆ ತಳ್ಳಲ್ಪಡುತ್ತಾನೆ. ಬಲಿಚಕ್ರವರ್ತಿಯ ಭಕ್ತಿ ಮತ್ತು ನಿಷ್ಠೆಗೆ ಮೆಚ್ಚಿದ ವಿಷ್ಣು ಪಾತಾಳವನ್ನು ಆಳುವಂತೆ ಆಶೀರ್ವದಿಸುತ್ತಾನೆ.
ವಿಷ್ಣುವಿನ ಭಕ್ತನಾದ ಬಲೀಂದ್ರನಿಗೆ ಆಶ್ವಯುಜ ಮಾಸದಲ್ಲಿ ಭೂಮಿಗೆ ಬಂದು ಪೂಜೆ ಸ್ವೀಕರಿಸುವ ವರವನ್ನು ನೀಡಲಾಯಿತು. ಹಾಗಾಗಿ ಮೂರು ದಿನಗಳ ದೀಪಾವಳಿ ಆಚರಣೆಯಲ್ಲಿ ಮೂರನೇ ದಿನ ಬಲೀಂದ್ರ ಪೂಜೆಯನ್ನು ನಡೆಸಲಾಗುತ್ತದೆ.ಈ ರೀತಿಯಾಗಿ ದೀಪಾವಳಿಯ ಸಮಯದಲ್ಲಿ ಬಲೀಂದ್ರ ಚಕ್ರವರ್ತಿ ಪೂಜೆಗೆ ಕಾರಣ ಎನ್ನಲಾಗಿದೆ.
ಪೂರ್ವ ತಯಾರಿ :
ದೀಪಾವಳಿ ಹಬ್ಬದ ಎಂದರೆ ಎಲ್ಲರಲ್ಲೂ ಸಂತಸ, ಸಡಗರ ಹಬ್ಬ ಬರುವ ಒಂದು ತಿಂಗಳ ಮುಂಚಿತವಾಗಿಯೇ ಪೂರ್ವ ತಯಾರಿಗಳನ್ನು ಮಾಡಿಕೊಳ್ಳುತ್ತಾರೆ. ದೇವರಿಗೆ ಬೇಕಾದ ಸಾಮಾಗ್ರಿಗಳು, ಮನೆ ಸ್ವಚ್ಛತೆ, ಹೊಸ ಬಟ್ಟೆಗಳನ್ನು ಖರೀದಿಸುವುದು, ರಂಗೋಲಿ, ಹಬ್ಬದೂಟ ಹೀಗೆ ಅನೇಕ ರೀತಿಯ ಪೂರ್ವ ತಯಾರಿಗಳನ್ನು ನಡೆಸುತ್ತಾರೆ.
ಮೂರು ದಿನದ ಹಬ್ಬ ಆಚರಣೆ:
ದೀಪಾವಳಿ ಹಬ್ಬವನ್ನು ಮೂರು ದಿನಗಳವರೆಗೆ ಅಥವಾ ಇನ್ನೂ ಕೆಲವರು ಐದು ದಿನಗಳವರೆಗೆ ಆಚರಿಸುತ್ತಾರೆ. ದೀಪಾಗಳ ಹಬ್ಬವನ್ನು ಕ್ರಮಬದ್ದವಾಗಿ ಆಚರಣೆಯನ್ನು ಮಾಡುತ್ತಾರೆ. ಮೊದಲನೇ ದಿನವಾದ ನರಕ ಚತುರ್ದಶಿಯ ದಿನ ಎಣ್ಣೆ ಸ್ನಾನ ಮಾಡುವುದಾಗಿದೆ. ನರಕಸುರನು ದೇವಾನು ದೇವತೆಗಳ ಜೊತೆ ದಾಳಿ ನಡೆಸುತ್ತಾನೆ. ಇದರಿಂದ ಭಯ ಭೀತರಾದ ದೇವತೆಗಳು ಕೃಷ್ಣನ ಸಹಾಯ ಹಸ್ತವನ್ನು ಚಾಚುತ್ತಾರೆ. ಇದರಿಂದ ಕೋಪಗೊಂಡ ಕೃಷ್ಣನು ನರಕಸುರನ ವಧೆಯನ್ನು ಮಾಡುತ್ತಾನೆ. ಈ ಸಮಯದಲ್ಲಿ ನರಕಸುರನು ಮರಣದ ಮೊದಲು ಕೃಷ್ಣನ ಬಳಿ ವರವನ್ನು ಕೇಳುತ್ತಾನೆ. ಲೋಕಾದಾದ್ಯಂತ ನನ್ನನ್ನು ಪೂಜಿಸಬೇಕೆಂದು. ಆಗ ಶ್ರೀ ಕೃಷ್ಣನು ಚತುರ್ಥಿ ದಿನ ಎಣ್ಣೆ ಸ್ನಾನ ಮಾಡಿ ದೀಪ ಹಚ್ಚಿ ನಿನ್ನನ್ನು ಪೂಜಿಸಲಿ ಎಂದು ವರವನ್ನು ನೀಡುತ್ತಾನೆ. ಅಂದಿನಿಂದ ನರಕಚತುರ್ದಶಿ ಎಂದು ಪೂಜೆಯನ್ನು ಮಾಡಲಾಗುತ್ತದೆ.
ಆದ್ದರಿಂದ ಎಣ್ಣೆ ಸ್ನಾನದ ಹಿಂದಿನ ದಿನ ಸ್ನಾನದ ಬಿಂದಿಗೆಯನ್ನು ಹಾಗೂ ಒಲೆಯನ್ನು ಶುದ್ದಿಕರಿಸಿ, ಬಿಂದಿಗೆಗೆ ನೀರನ್ನು ತುಂಬಿಸಿ, ಅರಶಿಣ, ಕುಂಕುಮ ಮತ್ತು ಹೂವನ್ನು ಇಡಬೇಕು . ಮಾರನೇ ದಿನ ಮೈಗೆಲ್ಲಾ ಎಣ್ಣೆ ಹಚ್ಚಿ ಸ್ನಾನ ಮಾಡುವುದಾಗಿದೆ. ನಂತರ ಫಲಾರವಾಗಿ ಅವಲಕ್ಕಿ ತಿನ್ನುವುದು ಕ್ರಮವಾಗಿದೆ.
ಅಭ್ಯಂಜನ ಸ್ನಾನದ ಉದ್ದೇಶ:
ಅಭ್ಯಂಜನ ಸ್ನಾನದ ಉದ್ದೇಶವೇನೆಂದರೆ ಅಶ್ವಯುಜ ಮಾಸದ ಮೂರು ದಿವಸಗಳ ಕಾಲ ಬಲಿ ಚಕ್ರವರ್ತಿ ಭೂಲೋಕಕ್ಕೆ ಬರುತ್ತಾನೆ ಎಂಬ ನಂಬಿಕೆ ಇದೆ. ಈ ನಂಬಿಕೆಯಿಂದಾಗಿ ಜನರು ಅಭ್ಯಂಜನ ಸ್ನಾನ ಮಾಡುವುದು ಸಂಪ್ರದಾಯವಾಗಿದೆ. ಎಣ್ಣೆ ಸ್ನಾನ ಮಾಡುವಾಗ ಸಪ್ತ ಚಿರಂಜೀವಿಗಳ ಅಶ್ವತ್ಥಾಮ, ಬಲೀಂದ್ರ, ವೇದವ್ಯಾಸ, ಹನುಮಂತ, ವಿಭಿಷಣ, ಕೃಪಾಚಾರ್ಯ ಮತ್ತು ಪರಶುರಾಮ ಹೆಸರು ಹೇಳುವುದು ಮುಖ್ಯವಾಗಿದೆ. ಮನೆಯ ಮಕ್ಕಳ ಮತ್ತು ಕುಟುಂಬ ಸದಸ್ಯರ ಆರೋಗ್ಯ ಆಯಸ್ಸು ಉತ್ತಮವಾಗಿರುವ ಕಾರಣಕ್ಕಾಗಿ ಎಣ್ಣೆ ಸ್ನಾನದ ಸಮಯದಲ್ಲಿ ಚಿರಂಜೀವಿಗಳ ಹೆಸರು ಇರುವ ಶ್ಲೋಕವನ್ನು (ಅಶ್ವಥಾಮಾ ಬಲಿರ್ವ್ಯಾಸೋ ಹನೂಮಾಂಚ ವಿಭೀಷಣಃ ಕೃಪಃ ಪರುಶುರಾಮಶ್ಚ ಸಪ್ತೈತೆ ಚಿರಜೀವಿನಃ )ಹೇಳಲಾಗುತ್ತದೆ. ನಂತರ ಮಡಿಯಿಂದ ಕುಲದೇವತೆಗಳನ್ನು ಪ್ರಾರ್ಥನೆ ಮಾಡಬೇಕು. ಭೂಲೋಕದ ಸಂಚಾರಕ್ಕೆ ಬಂದಿರುವ ಬಲೀಂದ್ರನನ್ನು ಮೊದಲನೇ ದಿನ ಆಹ್ವಾನಿಸಬೇಕು.
ತುಳುನಾಡಿನಲ್ಲಿ ಎಣ್ಣೆ ಸ್ನಾನದ ವಿಧಾನ:
- ಮೊದಲ ದಿನ ಒಲೆಯನ್ನು ಶುದ್ಧಿಕರಿಸಿ, ಅರಶಿಣ, ಕುಂಕುಮ ಹಚ್ಚಿ, ಹೂವನ್ನು ಇಟ್ಟು, ಬಿಂದಿಗೆಗೆ ನೀರು ತುಂಬಿಸಿಡಬೇಕು. ನಂತರ ಮಾರನೇ ದಿನ ನೀರು ಕಾದ ನಂತರ ಮೈಗೆಲ್ಲಾ ಎಣ್ಣೆ ಹಚ್ಚಿದ ನಂತರ ಸ್ನಾನ ಮಾಡುವುದಾಗಿದೆ. ಇದರಲ್ಲಿ ಯಾರು ಮೊದಲು ಸ್ನಾನಕ್ಕೆ ಹೋಗುವರೋ ಅವ್ರು ಸ್ನಾನ ಮಾಡುವ ಮುಂಚಿತವಾಗಿ ನೀರಿನ ಬಿಂದಿಗೆಗೆ ಒಂದು ರೂಪಾಯಿ ಅಥವಾ ಐದು ರೂಪಾಯಿ ಹೀಗೆ ಇಷ್ಟ ಬಂದಷ್ಟು ಚಿಲ್ಲರೆಯನ್ನು ಹಾಕಬೇಕು. ಯಾರು ಎಲ್ಲರಿಗಿಂತ ಕೊನೆಗೆ ಸ್ನಾನ ಮಾಡಿ ಬರುವರೋ ಅವ್ರು ಆ ಚಿಲ್ಲರೆಯನ್ನು ತರಬೇಕು. ನಂತರ ಆ ದಿನ ಫಲಹಾರವಾಗಿ ಅವಲಕ್ಕಿಯನ್ನು ತಿನ್ನುವುದು ಆ ದಿನದ ಆಚರಣೆಯಾಗಿದೆ.
- ಎರಡನೇ ದಿನದಂದು ಅಂದರೆ ಅಮಾವಾಸ್ಯೆಯ ದಿನದಂದು ಒಂದು ವರ್ಷದ ಒಳಗಾಗಿ ಮರಣ ಹೊಂದಿದ ಮಹಿಳೆಯನ್ನು ಈ ದಿನ ಸ್ಮರಿಸುವುದಾಗಿದೆ. ಬಾಳೆ ಎಲೆ ಹಾಕಿ ಅದರಲ್ಲಿ 5 ಅಥವಾ 7 ಹೀಗೆ ಬೆಸ ಸಂಖ್ಯೆಯಲ್ಲಿ ಭೋಜನವನ್ನು ತಯಾರಿಸಿ ಆ ದಿನ ಮರಣ ಹೊಂದಿದವರಿಗೆ ಬಳಸುವ ಕ್ರಮವಿದೆ.
- ಮೂರನೇ ದಿನದಂದು ಬಲಿಪಾಡ್ಯಮಿ, ಲಕ್ಷ್ಮೀ ಪೂಜೆ, ಆಯುಧ ಪೂಜೆ, ಅಂಗಡಿ ಪೂಜೆ, ಗಾಡಿ ಪೂಜೆ ಹಾಗೂ ಗೋ ಪೂಜೆಯನ್ನು ಮಾಡಲಾಗುತ್ತದೆ. ಅಂತೆಯೇ ಬಲಿಪಾಡ್ಯಮಿ ದಿನ ಒಂದು ವರ್ಷದ ಒಳಗಾಗಿ ಮರಣ ಹೊಂದಿದ ಹುಡುಗನನ್ನು ಸ್ಮರಿಸಲಾಗುತ್ತದೆ.
ಬಲೀಂದ್ರ ಪೂಜಾ ವಿಧಾನ:
ದೀಪಾವಳಿಯ ಮೂರನೇ ದಿನ ಪಾಡ್ಯದಂದು ಗೋಮಯದಿಂದ ಬಲಿಚಕ್ರವರ್ತಿಯ ಬಲಿ ಕೋಟೆಯನ್ನು ಕಟ್ಟಲಾಗುತ್ತದೆ. ತುಳಸಿಕಟ್ಟೆಯ ಬಳಿ ಗೋಮಯದಿಂದ ಏಳುಸುತ್ತಿನ ಕೋಟೆಯನ್ನು ಕಟ್ಟಿ, ಈ ಕೋಟೆಯ ಮುಂದೆ ಗಣಪತಿಯನ್ನು ಕಾವಲಾಗಿ ನಿಲ್ಲಿಸಲಾಗುತ್ತದೆ. ಮನೆ ಬಾಗಿಲಿನ ಹೊಸ್ತಿಲಿಗೆ ಯಾವುದೇ ದುಷ್ಟ ಶಕ್ತಿಗಳು ಬಾರದಂತೆ ಸಗಣಿಯಿಂದ ಮಾಡಿದ ಸಣ್ಣ ಗೊಂಬೆಗಳನ್ನು ಇಡಲಾಗುತ್ತದೆ. ಸಂಜೆ ಗೋಧೋಳಿ ಲಗ್ನದಲ್ಲಿ ಮನೆಯ ಸದಸ್ಯೆರೆಲ್ಲಾ ಬಲೀಂದ್ರ ಪೂಜೆಯನ್ನು ಮಾಡುತ್ತಾರೆ.
ತುಳುನಾಡಿನಲ್ಲಿ ಬಲೀಂದ್ರ ಪೂಜೆಯ ವಿಶೇಷತೆ:
ವರ್ಷಕ್ಕೊಮ್ಮೆ ಬರುವ ಬಲಿಯನ್ನು ಕರೆಯುವ ಆಚರಣೆಯೇ ‘ಬಲೀಂದ್ರ ಲೆಪ್ಪು ‘ ಎನ್ನಲಾಗುತ್ತದೆ. ಕತ್ತಲಾಗುತ್ತಿದ್ದಂತೆ ಅಂಗಳದ ಸುತ್ತ ತೆಂಗಿನ ಗರಟೆಗೆ ಎಣ್ಣೆ ಹಾಕಿ ದೀಪವನ್ನು ಬೆಳಗಿಸಲಾಗುತ್ತದೆ. ಮನೆಯ ಗಂಡಸರು ಗದ್ದೆಯ ಬದಿ ಬಿದಿರಿನ ಕೋಲಿಗೆ ಬಟ್ಟೆಯನ್ನು ಸುತ್ತಿ, ಎಣ್ಣೆಯನ್ನು ಹಚ್ಚಿದ ದೊಂದಿಯನ್ನು ಉರಿಸಲಾಗುತ್ತದೆ. ನಂತರ ಬಲೆಕಿ ಮರದ ಬಳಿ ತೆಂಗಿನಕಾಯಿ, ಅವಲಕ್ಕಿಯನ್ನು ಇಡಲಾಗುತ್ತದೆ.ನಂತರ ಜೋರಾಗಿ ಬಲೀಂದ್ರ ಕೂ… ಕೂ… ಕೂ… ಎಂದು ಮೂರು ಬಾರಿ ಬಲೀಂದ್ರನನ್ನು ಕರೆಯುತ್ತಾರೆ. ನಂತರ ಗೋವಿನ ಹಟ್ಟಿಗೆ ತೆರಳಿ ಗೋವಿಗೆ ಮತ್ತು ಬೇಸಾಯಕ್ಕೆ ಬಳಸುವ ಪರಿಕರಗಳಿಗೆ ಪೂಜೆಯನ್ನು ಮಾಡುತ್ತಾರೆ. ನಂತರ ಗೋವಿಗೆ ಅಕ್ಕಿಯಲ್ಲಿ ತಯಾರಿಸಿದ ದೋಸೆ ಅಥವಾ ಗಟ್ಟಿಯನ್ನು ನೀಡಲಾಗುತ್ತದೆ.
ಹೀಗೆ ಅನೇಕ ಕಡೆಗಳಲ್ಲಿ ಅವರ ಊರಿನ ಅಥವಾ ಜನಾಂಗದ ಶೈಲಿಯಲ್ಲಿ ಸಂಪ್ರದಾಯದಂತೆ ವಿಜೃಂಭಣೆಯಿಂದ ಆಚರಿಸುತ್ತಾರೆ. ಉತ್ತರಕನ್ನಡದಲ್ಲಿ, ತುಳುನಾಡಿನಲ್ಲಿ ವಿವಿಧ ರೀತಿಯ ಶೈಲಿಯನ್ನು ಹೊಂದಿದೆ ಎಂದು ಹೇಳಲಾಗಿದೆ.
ದೀಪಾವಳಿ ಬಂತೆಂದರೆ ಸಾಕು ಪಟಾಕಿಗಳನ್ನು ಸಿಡಿಸಿ ಹಬ್ಬವನ್ನು ಆಚರಿಸುತ್ತಿದ್ದರು. ಮಾಲೆ ಪಟಾಕಿ, ಲಕ್ಷ್ಮೀ ಪಟಾಕಿ, ಬಾಂಬ್ ಹೀಗೆ ಅನೇಕ ರೀತಿಯ ಜೋರಾಗಿ ಶಬ್ದವುಳ್ಳ ಪಟಾಕಿ ಸಿಡಿಸುತ್ತಿದ್ದರು. ಇದರಿಂದಾಗಿ ಶಬ್ದ ಮಾಲಿನ್ಯ, ವಾಯುಮಾಲಿನ್ಯಕ್ಕೆ ಕಾರಣವಾಗಿತ್ತು. ಒಟ್ಟಾಗಿ ಹೇಳಬೇಕಂದ್ರೆ ಪರಿಸರ ಮಾಲಿನ್ಯವಾಗುತ್ತದೆ ಎನ್ನಬಹುದು. ಅಷ್ಟೇ ಅಲ್ಲದೆ ಪಟಾಕಿಯ ಶಬ್ದದಿಂದಾಗಿ ವೃದ್ದರಿಗೆ, ಮಕ್ಕಳಿಗೆ ಮತ್ತು ಹೃದಯ ಸಂಬಂದಿ ಖಾಯಿಲೆವುಳ್ಳವರಿಗೆ ಸಮಸ್ಯೆ ಉಂಟಾಗುತ್ತದೆ. ಪಟಾಕಿಯನ್ನು ಸಿಡಿಸಿ ಕೈ, ಕಾಲಿಗೆ ಪೆಟ್ಟು ಮಾಡಿಕೊಂಡ ಸಂಖ್ಯೆಯು ಹೆಚ್ಚಾಗಿದೆ. ಈ ಕಾರಣದಿಂದಾಗಿ ಸರ್ಕಾರವು ಕಟ್ಟು ನಿಟ್ಟಾದ ನಿರ್ಧಾರವನ್ನು ತೆಗೆದುಕೊಂಡಿದೆ. ಪರಿಸರ ಸ್ನೇಹಿಯಾದ ಪಟಾಕಿಯನ್ನು ಉಪಯೋಗಿಸಿ ಅಥವಾ ದೀಪಾವಳಿ ಹಬ್ಬವನ್ನು ದೀಪ ಬೆಳಗಿಸುವ ಮೂಲಕ ಆಚರಿಸಬೇಕೆಂದು ಸರ್ಕಾರ ತೀರ್ಮಾನ ಮಾಡಿದೆ.
ಶಿವರಾಜ್ ಕುಮಾರ್ ನಟನೆಯ ನಂಜುಂಡಿ ಸಿನಿಮಾದ ಪದವಾದ ದೀಪದಿಂದ ದೀಪವ ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲು ಬೇಧವಿಲ್ಲ ಬೆಂಕಿಗೆ,ದ್ವೇಷವಿಲ್ಲ ಬೆಳಕಿಗೆ ಅನ್ನುವ ಹಾಡು ಮಹತ್ತರವಾದ ಅರ್ಥವನ್ನು ನೀಡುತ್ತದೆ.
ನಾವು ಹಚ್ಚುವ ದೀಪ ಮತ್ತೊಬ್ಬರ ಬದುಕಿಗೆ ಬೆಳಕಾಗಿರಬೇಕು . ಬೆಂಕಿಗೆ ಮತ್ತು ಬೆಳಕಿಗೆ ಯಾವುದೇ ರೀತಿಯಲ್ಲಿ ಭೇದ, ಅಸೂಯೆ, ದ್ವೇಷ ಕಾಣಿಸುವುದಿಲ್ಲ. ಅದರಂತೆಯೇ ಈ ದೀಪಗಳ ಹಬ್ಬದಂದು ಈ ರೀತಿಯ ಕೆಟ್ಟ ಭಾವನೆಯನ್ನು ಸಂಹಾರ ಮಾಡಿ ಎಲ್ಲರ ಮನಸಲ್ಲೂ ಪ್ರೀತಿ, ಹಾಗೂ ಸಮಾನವಾದ ಭಾವನೆ ಬೆರೆಯಲು ದೀಪವಾಳಿ ಹಬ್ಬ ಸಾಕ್ಷಿ ಯಾಗಿದೆ. ಬೆಳಕಿನ ಹಬ್ಬವಾದ ದೀಪಾವಳಿಯನ್ನು ದೀಪ ಬೆಳಗಿಸುವ ಮೂಲಕ ಆಚರಿಸೋಣ, ಈ ದೀಪ ಎಲ್ಲರ ಮನದಲ್ಲಿ, ಮನೆಗಳಲ್ಲಿ ಸದಾ ಬೆಳಗಲಿ ಎಂದು ಆಶಿಸುತ್ತಾ ದೀಪಾವಳಿ ಹಬ್ಬದ ಶುಭಾಶಯಗಳು.
ಲೇಖನ: ಧರ್ಮಶ್ರೀ ಧರ್ಮಸ್ಥಳ, ವಿವೇಕಾನಂದ ಕಾಲೇಜು ಪುತ್ತೂರು
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: